BIG BREAKING : ಸಾರಿಗೆ ನೌಕರರ ಸಂಘರ್ಷ ಸಮಾಪ್ತಿ, ಸಂಜೆಯಿಂದಲೇ ರಸ್ತೆಗಿಳಿಯಲಿವೆ ಬಸ್ಸುಗಳು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.14- ಸಾರಿಗೆ ನೌಕರರು ಮುಷ್ಕರವನ್ನು ಕೊನೆಗೂ ವಾಪಸ್ ಪಡೆಯುವ ಮೂಲಕ ಐದು ದಿನಗಳ ಮುಷ್ಕರ ಅಂತ್ಯಗೊಂಡಿದೆ.  ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡುವುದು, 6ನೇ ವೇತನ ಆಯೋಗ ಪರಿಷ್ಕರಣೆ, ಬೇಡಿಕೆಗಳ ಈಡೇರಿಕೆಗೆ ಸರ್ಕಾರಕ್ಕೆ ಮೂರು ತಿಂಗಳ ಗಡುವು ನೀಡಿ ಪ್ರತಿಭಟನೆಯನ್ನು ಹಿಂಪಡೆದಿರುವ ನೌಕರರು, ಬೇಡಿಕೆ ಈಡೇರದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕೆಎಸ್‍ಆರ್‍ಟಿಸಿಯ ನಾಲ್ಕು ನಿಗಮ ಹಾಗೂ ಬಿಎಂಟಿಸಿ ನೌಕರರು ಕಳೆದ ಐದು ದಿನಗಳಿಂದ 10 ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಸುತ್ತಿದ್ದ ಮುಷ್ಕರದ ಸಂಬಂಧ 9 ಬೇಡಿಕೆಗಳನ್ನು ಈಡೇರಿಸಿತ್ತು. ಇಂದು ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಸರ್ಕಾರದ ಲಿಖಿತ ಭರವಸೆಯೊಂದಿಗೆ ಪ್ರತಿಭಟನೆ ನಿರತ ಸ್ಥಳಕ್ಕೆ ಆಗಮಿಸಿ ಪ್ರತಿಭಟನೆ ನೇತೃತ್ವದ ವಹಿಸಿದ್ದ ಸಾರಿಗೆ ನೌಕರರ ಚಂದು, ರೈತ ಸಂಘ ಮುಖಂಡರಾದ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಮನವಿ ಮಾಡಿದರು.

9 ಬೇಡಿಕೆಗಳಲ್ಲಿ 6ನೇ ವೇತನ ಆಯೋಗದ ಪರಿಷ್ಕರಣೆ ಸಂಬಂಧ ಸರ್ಕಾರ ಸರಿಯಾದ ಸ್ಪಷ್ಟನೆ ನೀಡಿಲ್ಲ. ಸಾರಿಗೆ ಸಚಿವರೇ ಸ್ಥಳಕ್ಕೆ ಆಗಮಿಸಿ ಸ್ಪಷ್ಟನೆ ನೀಡಬೇಕೆಂದು ಮತ್ತೆ ಪ್ರತಿಭಟನಾನಿರತರು ಆಗ್ರಹಿಸಿದರು.  ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕಾದ ನಮ್ಮ ಪ್ರಮುಖ ಬೇಡಿಕೆಯನ್ನು ಸರ್ಕಾರ ಪರಿಗಣಿಸಿಲ್ಲ. ಹೀಗಾಗಿ ಮುಷ್ಕರವನ್ನು ಮುಂದುವರೆಸುವ ನಿರ್ಧಾರಕ್ಕೆ ಬಂದರು.

ನಿನ್ನೆ ಪ್ರತಿಭಟನಾನಿರತ ಮುಖಂಡರು, ಸಚಿವರೊಂದಿಗೆ ಸಭೆ ನಡೆದು ಹಲವು ನಾಟಕೀಯ ಬೆಳೆವಣಿಗೆಗಳು ನಡೆದಿದ್ದವು. ಇಂದು ಬೆಳಗ್ಗೆ ಇದೇ ರೀತಿಯ ಬೆಳವಣಿಗೆಗಳು ನಡೆದಿದ್ದವು. ಮುಷ್ಕರ ವಾಪಸ್ ಪಡೆಯಲಾಗುತ್ತದೆಯೋ ಇಲ್ಲವೋ ಎಂಬ ಅನುಮಾನ ವ್ಯಕ್ತವಾಗಿತ್ತು.ಇತ್ತ ಸರಿಯಾಗಿ ಬಸ್‍ಗಳಿಲ್ಲದೆ ಜನರು ಪರದಾಡುತ್ತಿದ್ದರು. ಸರ್ಕಾರ ಸಾರ್ವಜನಿಕರಿಗಾಗಿ ಪೆÇಲೀಸ್ ಭದ್ರತೆಯಲ್ಲಿ ಸಾರಿಗೆ ಭದ್ರತೆ ವ್ಯವಸ್ಥೆ ಕಲ್ಪಿಸುವ ಜೊತೆಗೆ ಪರ್ಯಾಯ ವ್ಯವಸ್ಥೆಯನ್ನೂ ಮಾಡಿತ್ತು.

ಪ್ರತಿಭಟನಾನಿರತರ ವಿರುದ್ಧ ಜನಾಕ್ರೋಶ ಕೂಡ ಹೆಚ್ಚಾಗಿತ್ತು. ಈ ನಡುವೆ ರೈತ ಸಂಘದ ಮುಖಂಡ ಹಾಗೂ ಸಾರಿಗೆ ನೌಕರರ ಒಕ್ಕೂಟದ ಗೌರವ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದರು.  ಸಂಜೆ 4 ವೇಳೆಗೆ ಮುಷ್ಕರ ವಾಪಸ್ ಪಡೆಯುವ ನಿರ್ಧಾರಕ್ಕೆ ಬರಲಾಯಿತು. ನಂತರ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಅವರು ಮುಷ್ಕರ ವಾಪಸ್ ಪಡೆಯುತ್ತಿರುವುದಾಗಿ ಘೋಷಿಸಿ ಸಾರ್ವಜನಿಕರಾದ ತೊಂದರೆಗೆ ಕ್ಷಮೆಯಾಚಿಸುವುದಾಗಿ ಹೇಳಿದರು.

ಅಲ್ಲದೆ ಮುಷ್ಕರದ ಸಂದರ್ಭದಲ್ಲಿ ಸರ್ಕಾರ ನೌಕರರ ವಿರುದ್ಧ ದಾಖಲಿಸಿರುವ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯಬೇಕು ಎಂದರು.  ಸರ್ಕಾರ ನೀಡಿರುವ ಭರವಸೆಗಳ ಈಡೇರಿಕೆ ಆಗುವವರೆಗೂ ಹೋರಾಡುವುದಾಗಿ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

Facebook Comments