ಸಾರಿಗೆ ನೌಕರರ ಪ್ರತಿಭಟನೆ ಲಾಭ ಪಡೆದು ವಸೂಲಿಗಿಳಿದ ಕೆಲವು ಆಟೋ ಚಾಲಕರು..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.11- ಸಾರಿಗೆ ನೌಕರರ ದಿಢೀರ್ ಪ್ರತಿಭಟನೆಯಿಂದ ಇಂದು ನಗರದ ರಸ್ತೆ ತುಂಬೆಲ್ಲಾ ಆಟೋಗಳದ್ದೇ ಕಾರುಬಾರು. ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವಂತೆ ಒತ್ತಾಯಿಸಿ ಇಂದು ಬೆಳಗ್ಗೆಯಿಂದಲೆ ಸೇವೆಯನ್ನು ಸ್ಥಗಿತಗೊಳಿಸಿ ಸಾರಿಗೆ ನೌಕರರು ಪ್ರತಿಭಟನೆ ನಡೆಸಿದ್ದರಿಂದ ಬಸ್‍ಗಳಿಲ್ಲದೆ ಪ್ರಯಾಣಿಕರು ಪರದಾಡುವಂತಾಗಿತ್ತು.

ದೈನಂದಿನ ಕೆಲಸ-ಕಾರ್ಯಗಳಿಗೆ ತೆರಳುವ ಸಾರ್ವಜನಿಕರಿಗೆ ಹಾಗೂ ನೌಕರರಿಗೆ ಭಾರೀ ತೊಂದರೆ ಉಂಟಾಗಿತ್ತು. ಮೊದಲೆ ಕೊರೊನಾದಿಂದ ಬಾಡಿಗೆ ಇಲ್ಲದೆ ಕಂಗಾಲಾಗಿದ್ದ ಆಟೋಚಾಲಕರಿಗೆ ಸಾರಿಗೆ ನೌಕರರ ಪ್ರತಿಭಟನೆ ಬಯಸದೆ ಬಂದ ಭಾಗ್ಯದಂತಾಗಿದೆ. ಇಂದು ಮುಂಜಾನೆ ಕೆಲಸಕ್ಕೆ ತೆರಳಲು ಬಸ್ ನಿಲ್ದಾಣಕ್ಕೆ ಬಂದ ಪ್ರಯಾಣಿಕರು ಗಂಟೆಗಟ್ಟಲೆ ಕಾದರೂ ಬಸ್ ಬಾರದಿದ್ದರಿಂದ ಅನಿವಾರ್ಯವಾಗಿ ಆಟೋಗಳ ಮೊರೆ ಹೋಗಬೇಕಾಯಿತು.

ಇದರ ಲಾಭ ಪಡೆದುಕೊಂಡ ಕೆಲ ಆಟೋ ಹಾಗೂ ಖಾಸಗಿ ವಾಹನ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ಕೇಳಿದ ಪ್ರಸಂಗಗಳು ನಗರದಲ್ಲಿ ನಡೆದಿವೆ. ಇನ್ನು ಕ್ಯಾಬ್‍ಗಳು ಬುಕ್ಕಿಂಗ್ ಮಾಡಿಕೊಳ್ಳುತ್ತಿರಲಿಲ್ಲ. ಏಕೆಂದರೆ, ಬುಕ್ಕಿಂಗ್‍ಗೆ ಹೋದರೆ ಎಷ್ಟು ಹಣ ನಿಗದಿಯಾಗಿರುತ್ತದೆಯೋ ಅಷ್ಟು ಮಾತ್ರ ಹಣ ಪಡೆಯಬೇಕು. ಆದರೆ, ಲೈನ್ ಮೇಲೆ ಹೋದರೆ ಡಬ್ಬಲ್ ಹಣ ಪಡೆಯಬಹುದೆಂದು ಬಹಳಷ್ಟು ಚಾಲಕರು ಆನ್‍ಲೈನ್ ಸೇವೆಗಳನ್ನೇ ಬಂದ್ ಮಾಡಿದ್ದರು.

ವಿಜಯನಗರಕ್ಕೆ ಬರ್ತಿರಾ, ಬರ್ತಿನಿ ಸಾರ್ ಆದ್ರೆ ಮೀಟರ್ ಮೇಲೆ ಡಬ್ಬಲ್ ಆಗುತ್ತೆ… ಮೀಟರ್ ಹಾಕಪ್ಪಾ, ಇಲ್ಲ ಸಾರ್. ಇಷ್ಟ ಇದ್ರೆ ಬನ್ನಿ, ಇಲ್ಲ ಅಂದ್ರೆ ಬಿಡಿ ಎಂದು ಆಟೋ ಚಾಲಕರೊಬ್ಬರು ಪ್ರಯಾಣಿಕರೊಬ್ಬರ ಬಳಿ ಮಾತನಾಡುತ್ತಿದ್ದ ದೃಶ್ಯ ಕೆಂಗೇರಿಯಲ್ಲಿ ಕಂಡುಬಂತು.

ನಿನಗೆ 200ರೂ. ಕೊಟ್ರೆ ನಾನೇನ್ ಮಾಡ್ಲಿ ಹೋಗಯ್ಯಾ, ನಡೆದುಕೊಂಡೇ ಹೋಗ್ತೀನಿ. 200ರೂ. ಇದ್ರೆ ನನ್ನ ಒಂದು ದಿನ ಸಂಸಾರ ಸಾಗುತ್ತೆ. 100ರೂ.ಗೆ 200ರೂಪಾಯಿ ಕೇಳ್ತೀಯಾ, ಏನ್ ಮಾಡೋಕ್ಕೆ ಆಗುತ್ತೆ, ಸಿಕ್ಕಿದ್ದೇ ಚಾನ್ಸ್ ದುಡ್ಡು ಮಾಡಿಕೊಳ್ಳಿ ಅಂತಾ ಮಾಗಡಿ ರಸ್ತೆಯ ಟೋಲ್‍ಗೇಟ್ ಬಳಿ ಗಾರ್ಮೆಂಟ್ಸ್ ನೌಕರರೊಬ್ಬರು ಆಟೋ ಚಾಲಕನ ಹತ್ತಿರ ಮಾತನಾಡುತ್ತಿದ್ದುದು ಕಂಡುಬಂತು.

ಗಾಳಿ ಬಂದಾಗ ತೂರಿಕೋ ಎಂಬಂತೆ ಕೆಲ ಆಟೋ, ಖಾಸಗಿ ವಾಹನಗಳ ಚಾಲಕರು ಪ್ರಯಾಣಿಕರಿಂದ ದುಪ್ಪಟ್ಟು ಹಣ ಪಡೆಯುತ್ತಿದ್ದ ದೃಶ್ಯಗಳು ನಗರದಲ್ಲಿ ಸರ್ವೆ ಸಾಮಾನ್ಯವಾಗಿದ್ದವು. ನಗರದ ರೈಲ್ವೆ ನಿಲ್ದಾಣ, ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರಿನ ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ, ಕೆಂಗೇರಿ, ಶಾಂತಿನಗರ, ಜಯನಗರ, ಯಶವಂತಪುರ ಸೇರಿದಂತೆ ಮತ್ತಿತರ ಪ್ರಮುಖ ರಸ್ತೆಗಳ ಬದಿಯಲ್ಲಿ ಸಾಲು ಸಾಲು ಆಟೋಗಳು ನಿಂತಿದ್ದ ದೃಶ್ಯಗಳು ಕಂಡುಬಂದವು.

ಇನ್ನೂ ಕೆಲವು ಕಡೆ ಟಿಟಿ ಹಾಗೂ ಖಾಸಗಿ ಮಿನಿ ಬಸ್‍ಗಳು ರೋಡಿಗಿಳಿದಿದ್ದು, ಸಾಮಾಜಿಕ ಅಂತರ ಮರೆತು ಹಣದ ಆಸೆಗಾಗಿ ಜನರನ್ನು ತುಂಬಿಕೊಂಡು ತೆರಳುತ್ತಿದ್ದ ದೃಶ್ಯಗಳು ಕೂಡ ನಗರದಲ್ಲಿ ಕಂಡುಬಂದವು.

Facebook Comments