ಮಾದಕ ವಸ್ತು ನಿರ್ಮೂಲನೆಗೆ ಬಸ್‍ಗಳ ಶೋಧ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.2- ಮಾದಕ ವಸ್ತುಗಳ ನಿರ್ಮೂಲನೆ ಮಾಡಲು ಪಣ ತೊಟ್ಟಿರುವ ಬೆಂಗಳೂರು ನಗರ ಪೊಲೀಸರು ಪ್ರಮುಖ ಸ್ಥಳಗಳಲ್ಲಿ ಹಾಗೂ ವಾಹನಗಳನ್ನು ಶೋಧ ನಡೆಸಿದ್ದಾರೆ. ಮಾದಕ ವಸ್ತು ಪತ್ತೆಹಚ್ಚಲು ಶ್ವಾನದಳವನ್ನು ಸಹ ಬಳಸಿಕೊಂಡಿದ್ದೇವೆ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್‍ಪಾಟೀಲ್ ತಿಳಿಸಿದ್ದಾರೆ.

ಬಸ್ ನಿಲ್ದಾಣಗಳು, ರೈಲು ನಿಲ್ದಾಣಗಳು ಸೇರಿದಂತೆ ಬೆಂಗಳೂರು ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಗಳಲ್ಲಿ ಬಸ್‍ಗಳ ಶೋಧ ನಡೆಸಿದರು. ಹೊರರಾಜ್ಯಗಳಿಂದ ಬರುವ ಬಸ್‍ಗಳಲ್ಲಿ ಗಾಂಜಾ ಸರಬರಾಜಾಗುತ್ತಿರಬಹುದೆಂಬ ಶಂಕೆ ಹಿನ್ನೆಲೆಯಲ್ಲಿ ಶೋಧ ನಡೆಸಿದ್ದಾರೆ.

ಬಾಂಬೆ, ಹೈದರಾಬಾದ್, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣಗಳಿಂದ ಬರುವ ಎಲ್ಲ ರೀತಿಯ ಬಸ್‍ಗಳನ್ನು ಪೊಲೀಸರು ತೀವ್ರ ತಪಾಸಣೆ ನಡೆಸಿದರು. ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ತುಮಕೂರು ರಸ್ತೆ, ಮಾಗಡಿ ರಸ್ತೆ, ಹೊಸೂರು ರಸ್ತೆ, ಬಳ್ಳಾರಿ ರಸ್ತೆಗಳಲ್ಲಿ ಸಂಚರಿಸುವ ಬಸ್‍ಗಳನ್ನು ಪೊಲೀಸರು ಶೋಧ ಮಾಡಿದರು. ಅಲ್ಲದೆ, ನಗರದ ಮೆಜೆಸ್ಟಿಕ್, ಶಾಂತಿನಗರ ಬಸ್ ನಿಲ್ದಾಣಗಳಲ್ಲಿ ಬಸ್‍ಗಳನ್ನು ತಪಾಸಣೆ ಮಾಡಿದರು.

ರೈಲ್ವೆ ನಿಲ್ದಾಣಗಳಲ್ಲೂ ಶೋಧ ನಡೆಸಿದ್ದು, ತಪಾಸಣೆ ಮುಂದುವರಿದಿದೆ. ಪಾರ್ಸಲ್‍ಗಳ ಪರಿಶೀಲನೆ: ಹೊರರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬೆಂಗಳೂರಿಗೆ ಡ್ರಗ್ ಸರಬರಾಜು ಮಾಡುತ್ತಿದ್ದ ಮಾಹಿತಿ ಮೇರೆಗೆ ಬೆಂಗಳೂರು ನಗರ ಪೊಲೀಸರು, ಇಂದು ಬೆಳಿಗ್ಗೆ ಬಸ್‍ಗಳಲ್ಲಿ ತಪಾಸಣೆ ನಡೆಸಿದರು. ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿದ್ದ ಬಸ್‍ಗಳು ಹಾಗೂ ಖಾಸಗಿ ಬಸ್‍ಗಳಲ್ಲಿ ಬಂದ ಕೊರಿಯರ್ ಹಾಗೂ ಪಾರ್ಸೆಲ್‍ಗಳನ್ನು ಪೊಲೀಸರು ಪರಿಶೀಲಿಸಿದರು.

ಪೆÇಲೀಸ್ ಶ್ವಾನ ದಳ, ಸಿಸಿಬಿ ನಾರ್ಕೋಟಿಕ್ಸ್ ವಿಂಗ್ ಹಾಗೂ ವಿಶೇಷ ಪೊಲೀಸರ ತಂಡ ರಚನೆ ಮಾಡಿ ಹೊರ ರಾಜ್ಯಗಳಿಂದ ಬೆಂಗಳೂರಿಗೆ ಬರುವ ಬಸ್‍ಗಳ ತಪಾಸಣೆ ಮಾಡಲಾಗುತ್ತಿದೆ. ಶ್ವಾನದಳದ ಮೂಲಕವೂ ತಪಾಸಣೆ ಮಾಡಿಸಿದರು. ಸದ್ಯಕ್ಕೆ ಯಾವುದೇ ಪ್ರಕಾರದ ಡ್ರಗ್ ಸಿಕ್ಕಿಲ್ಲ. ಡ್ರಗ್ ಮಾಫಿಯಾ ಮಟ್ಟಹಾಕಲು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದರ ಭಾಗವಾಗಿಯೇ ಹಲವೆಡೆ ದಾಳಿಗಳನ್ನೂ ಮಾಡುತ್ತಿದ್ದಾರೆ. ಡ್ರಗ್ ಸರಬರಾಜು ಹಾಗೂ ಮಾರಾಟದ ಮೇಲೆ ಸಿಸಿಬಿ ಪೊಲೀಸರು ಹೆಚ್ಚಿನ ನಿಗಾ ವಹಿಸಿದ್ದಾರೆ. ಹಗಲಿರುಳು ಬಸ್‍ಗಳನ್ನು ತಡೆದು ತಪಾಸಣೆ ನಡೆಸುತ್ತಿದ್ದಾರೆ. ಮಾದಕ ವಸ್ತು ಮುಕ್ತ ರಾಜ್ಯವನ್ನಾಗಿ ಮಾಡಬೇಕು ಎಂದು ಪಣ ತೊಟ್ಟಿರುವ ಸರ್ಕಾರಕ್ಕೆ ಇದೀಗ ಈ ಪ್ರಕರಣಗಳು ತಲೆನೋವಾಗಿ ಪರಿಣಮಿಸಿದೆ.

Facebook Comments