ಗಣಿ ಉದ್ಯಮಿಯ ಸುಪಾರಿ ಕೊಲೆ, ಐವರು ಹಂತಕರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.19- ಆಸ್ತಿಗಾಗಿ ಮಗ ಹಾಗೂ ತಮ್ಮನೇ ಸಂಚು ರೂಪಿಸಿ ಸುಪಾರಿ ಕೊಟ್ಟು ಬಳ್ಳಾರಿ ಮೂಲದ ಗಣಿ ಉದ್ಯಮಿಯನ್ನು ಭೀಕರವಾಗಿ ಕೊಲೆ ಮಾಡಿಸಿದ್ದ ಹೈ ಪ್ರೊಫೈಲ್ ಪ್ರಕರಣ ಪತ್ತೆಯಾಗಿದೆ.

ನಗರದ ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯ ಗುಬ್ಬಲಾಳ ಮುಖ್ಯರಸ್ತೆ, ರಾಯಲ್‍ಫಾಮ್ಸ್ ಬಡಾವಣೆಯಲ್ಲಿ ವಾಸವಾಗಿದ್ದ ಸಿಂಗನಮಲ್ಲಮಾಧವ ಅವರನ್ನು ಸುಫಾರಿ ಕೊಟ್ಟು ನಾಲ್ಕು ತಿಂಗಳ ಹಿಂದೆ ಕೊಲೆ ಮಾಡಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಗೋವಾ ರಾಜ್ಯದ ಮಡಂಗಾವ್ ನಗರ ನಿವಾಸಿ ಹಾಗೂ ಸಣ್ಣಪುಟ್ಟ ರಿಯಲ್ ಎಸ್ಟೇಟ್ ಕೆಲಸ ಮಾಡುತ್ತಿದ್ದ ರಿಯಾಜ್ ಅಬ್ದುಲ್ಲಾ ಶೇಖ್ ಅಲಿಯಾಸ್ ಗೋವಾ ರಿಯಾಜ್(40), ಬೆಂಗಳೂರು ಯಲಹಂಕ ಕೋಗಿಲು ಕ್ರಾಸ್ ನಿವಾಸಿ ಮೊಬೈಲ್ ಸರ್ವೀಸ್ ಕೆಲಸ ಮಾಡುತ್ತಿದ್ದ ಶಹಭಾಜ್(23), ಗೋವಾದ ಮಡಂಗಾವ್‍ನ್ ಕಾರ್ಪೆಂಟರ್ ಶಾರೂಖ್ ಮನ್ಸೂರ್(24), ಯಶವಂತಪುರದ ಬಿ.ಕೆ.ನಗರ ನಿವಾಸಿ ಆಟೋ ಡ್ರೈವರ್ ಆದಿಲ್(28),

ಶಾಮಣ್ಣಗಾರ್ಡನ್ ನಿವಾಸಿ ಕಾರ್ಪೆಂಟರ್ ಸಲ್ಮಾನ್(24) ಅವರುಗಳನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ಸುಫಾರಿ ನೀಡಿದಂತಹ ಮೃತ ಸಿಂಗನಮಲ್ಲ ಮಾಧವರವರ ಕಿರಿಯ ಪುತ್ರ ಹರಿಕೃಷ್ಣ, ಸೋದರ ಶಿವರಾಮ್ ಪ್ರಸಾದ್ ಅವರುಗಳು ತಲೆಮರೆಸಿಕೊಂಡಿದ್ದು,  ಅವರಿರುವ ಸ್ಥಳ ಪತ್ತೆಯಾಗಿದೆ ಶೀಘ್ರವೇ ಅವರನ್ನು ಬಂಧಿಸುತ್ತೇವೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‍ರಾವ್ ತಿಳಿಸಿದ್ದಾರೆ.

ಮೃತ ಮಾಧವ ಅವರು ಬಳ್ಳಾರಿಯವರಾಗಿದ್ದು, 2003-04ರಲ್ಲಿ ಬಳ್ಳಾರಿಯಲ್ಲಿ ಸ್ಟೀಲ್ ಮತ್ತು ಅಲೈ ಎಂಬ ಕಂಪನಿ ಸ್ಥಾಪಿಸಿ ಸಾಕಷ್ಟು ಆಸ್ತಿ ಸಂಪಾದನೆ ಮಾಡಿದ್ದರು. ಸುಮಾರು 2000 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆದಿತ್ತು. 100 ಕೋಟಿ ರೂ. ಮೌಲ್ಯಕ್ಕೂ ಹೆಚ್ಚಿನ ಆಸ್ತಿ ಸಂಪಾದನೆ ಮಾಡಿದ್ದಾರೆ.

ಇವರ ಮೊದಲ ಮಗ ಯಾವುದೇ ವಿಷಯದಲ್ಲಿ ಆಸಕ್ತಿ ತೋರಿಸದೆ ನಿರ್ಲಿಪ್ತನಾಗಿದ್ದಾನೆ. 2ನೇ ಮಗ ಮಾನಸಿಕ ಅಸ್ವಸ್ಥ. ಹೀಗಾಗಿ 3ನೇ ಮಗ ಹರಿಕೃಷ್ಣ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ.

ಕಂಪನಿಯ ಒಡೆತನವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದ. ಆದರೆ ಮಾಧವ್ ಗಟ್ಟಿ ಕುಳವಾಗಿದ್ದು, ಯಾವುದಕ್ಕೂ ಜಗ್ಗುತಿರಲಿಲ್ಲ. ಮಾಧವನ ಸ್ನೇಹಿತರಿಗೆ ಬಳ್ಳಾರಿಯಲ್ಲಿ ಅಪಘಾತ ಮಾಡಿಸಲಾಗಿದೆ. ಇತರ ಸ್ನೇಹಿತರ ಮೇಲೆ ಆ್ಯಸಿಡ್ ದಾಳಿ ಕೂಡ ಮಾಡಿಸಲಾಗಿದೆ. ಏನೆಲ್ಲ ಪ್ರಯತ್ನಗಳನ್ನು ಮಾಡಿದರೂ ಮಾಧವ ಆಸ್ತಿ ಬಿಟ್ಟುಕೊಟ್ಟಿರಲಿಲ್ಲ.

ಇದರಿಂದ ಸಿಟ್ಟಾಗಿದ್ದ ಹರಿಕೃಷ್ಣ ಮತ್ತು ತಮ್ಮ ಶಿವರಾಮ್ ಪ್ರಸಾದ್ ಅವರು ಮಾಧವನನ್ನು ಕೊಲೆ ಮಾಡಲು ಎರಡು ತಂಡಗಳಿಗೆ ಸುಫಾರಿ ಕೊಟ್ಟಿದ್ದರು. ಆ ಎರಡೂ ತಂಡಗಳಿಂದ ಕೊಲೆ ಮಾಡುವಲ್ಲಿ ವಿಳಂಬವಾಗಿತ್ತು. ಹೀಗಾಗಿ 3ನೇ ತಂಡದ ಮುಖ್ಯಸ್ಥ ರಿಯಾಜ್‍ಗೆ 25 ಲಕ್ಷ ರೂ. ಮೊತ್ತದ ಸುಫಾರಿ ನೀಡಿದ್ದರು. ತಂಡದಲ್ಲಿದ್ದ 5 ಆರೋಪಿಗಳು ತಲಾ 5 ಲಕ್ಷ ಹಂಚಿಕೊಳ್ಳುವ ಮಾತುಕತೆಯಾಗಿತ್ತು.

ಏಳುವರೆ ಲಕ್ಷ ರೂ. ಮುಂಗಡ ಕೂಡ ಪಾವತಿಯಾಗಿತ್ತು. ಮಾಧವನ ಚಲನವಲನಗಳ ಮೇಲೆ ನಿಗಾವಹಿಸಿದ್ದ ಆರೋಪಿಗಳು ಫೆ.14ರಂದು ಮಧ್ಯಾಹ್ನ 1.30ರ ಸುಮಾರಿಗೆ ರಾಯಲ್ ಫಾಮ್ರ್ಸ್ ಲೇಔಟ್ ಗೇಟ್ ರಸ್ತೆಯಲ್ಲಿ ಮನೆಗೆ ನಡೆದುಕೊಂಡು ಹೋಗುವಾಗ ಹರಿತವಾದ ಆಯುಧದಿಂದ ಕತ್ತು ಕೊಯ್ದು ಕೊಲೆ ಮಾಡಿದರು.

ಮಾಧವ ಸಾವನ್ನಪ್ಪಿದ್ದಾನೆ ಎಂದು ಖಚಿತಪಡಿಸಿಕೊಂಡ ನಂತರ ಆರೋಪಿ ರಿಯಾಜ್ ಎಲ್ಲಾ ಆರೋಪಿಗಳು ತಲೆಮರೆಸಿಕೊಳ್ಳುವಂತೆ ಸಲಹೆ ಮಾಡಿದ್ದು.

ಇದು ಹೈ ಪ್ರೊಫೈಲ್ ಕೇಸ್ ಆಗಿದ್ದು, ಪೊಲೀಸರಿಗೆ ಸವಲಾಗಿತ್ತು. ಹರಿಕೃಷ್ಣ ಮತ್ತು ಶಿವರಾಮ್ ಪ್ರಸಾದ್ ಮೇಲೆ ಅನುಮಾನ ಇತ್ತಾದರೂ ಅವರಿಬ್ಬರು ನಾಪತ್ತೆಯಾಗಿದ್ದರು. ಅನಾಮಿಕ ದೂರವಾಣಿ ಕರೆಗಳ ಮಾಹಿತಿ ಆಧರಿಸಿ ತನಿಖೆ ಆರಂಭಿಸಿದ ತಲಘಟ್ಟಪುರ ಠಾಣೆ ಪೊಲೀಸರು ಕೋವಿಡ್ ಸೋಂಕನ್ನು ಲೆಕ್ಕಿಸದೆ ಪಾಂಡಿಚೇರಿ, ಅನಂತಪುರ, ಗೋವಾ, ಪುಣೆ, ಮುಂಬೈ, ಬೆಳಗಾವಿ, ಬಳ್ಳಾರಿ ಮತ್ತಿತರ ಕಡೆ ಸಂಚಾರ ಮಾಡಿ ಕೊಲೆ ಆರೋಪಿಗಳನ್ನು ಬಂಧಿಸಿದ್ದಾರೆ.

ಮೃತಪಟ್ಟ ಮಾಧವ್ ಕೂಡ ಕ್ರಿಮಿನಲ್ ಹಿನ್ನೆಲೆ ಹೊಂದಿದ್ದು, ಆಡಿಟರ್ ಪಟ್ಟಾಭಿರಾಮನ್ ಅವರನ್ನು ಅಪಹರಿಸಿ ಕೊಲೆ ಮಾಡುವ ಪ್ರಯತ್ನ ಮಾಡಿದ್ದ. ಈ ಪ್ರಕರಣ ಶಿವಮೊಗ್ಗದಲ್ಲಿ ವರದಿಯಾಗಿ ನಂತರ ಬೆಂಗಳೂರಿನ ಸುಬ್ರಹ್ಮಣ್ಯಪುರ ಠಾಣೆಗೆ ವರ್ಗಾವಣೆಯಾಗಿತ್ತು.

ಸುಫಾರಿ ನೀಡಿದಂತ ಹರಿಕೃಷ್ಣ ಮತ್ತು ಶಿವರಾಮ್‍ಪ್ರಸಾದ್ ವಿರುದ್ಧ ಎಸ್‍ಜೆಪಾರ್ಕ್, ವಿವೇಕನಗರ, ಜೆ.ಸಿ.ನಗರ, ಸುಬ್ರಹ್ಮಣ್ಯನಗರ, ಬಳ್ಳಾರಿ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಹಲ್ಲೆ, ಅಪಹರಣ, ಕೊಲೆಯತ್ನದಂತಹ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ಆರಂಭದಲ್ಲಿ ಮಾಧವ್ ಕೂಡ ಆರ್ಥಿಕವಾಗಿ ಅಷ್ಟೇನೂ ಸಬಲನಾಗಿರಲಿಲ್ಲ. ಗಣಿಗಾರಿಕೆ ನಂತರ ಶ್ರೀಮಂತನಾಗಿದ್ದ. ಆತನ ರಕ್ತ ಸಂಬಂಧಿಗಳೇ ಕೊಲೆ ಮಾಡಿಸಿದ್ದು, ಈಗ ನೂರಾರು ಕೋಟಿ ರೂ.ಗಳ ಆಸ್ತಿ ವಾರಸುದಾರರಿಲ್ಲದೆ ಅನಾಥವಾಗಿ ಬಿದ್ದಿದೆ.

ಬೆಂಗಳೂರು ದಕ್ಷಿಣ ಉಪವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸಪೆಟ್ ಮಾರ್ಗದರ್ಶನದಲ್ಲಿ ಎಸಿಪಿ ಮಂಜುನಾಥ್ ಬಾಬು, ತಲ್ಲಘಟ್ಟಪುರ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ರಾಮಪ್ಪ ಬಿ.ಗುತ್ತೇದಾರ್, ಸಬ್‍ಇನ್‍ಸ್ಪೆಕ್ಟರ್ ನಾಗೇಶ್ ಸೇರಿದಂತೆ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವಲ್ಲಿ ಶ್ರಮಿಸಿದ್ದಾರೆ. ಇವರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಪೊಲೀಸ್ ಆಯುಕ್ತರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Facebook Comments