ಬೆಂಗಳೂರಿನ ನಾಲ್ಕು ಕ್ಷೇತ್ರಗಳ ಉಪಚುನಾವಣೆಗೆ 2896 ಪೊಲೀಸರ ಕಣ್ಗಾವಲು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು :  ನಗರದಲ್ಲಿ ಇದೇ ಡಿ.5 ರಂದು ನಡೆಯಲಿರುವ 4 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ 2896 ಮಂದಿ ಪೊಲೀಸ್ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ಬಂದೋಬಸ್ತ್ ನಿಯೋಜಿಸಲಾಗಿದ್ದು ಜತೆಗೆ ಕೇಂದ್ರ ಪಡೆಗಳಾದ ಸಿಆರ್‍ಪಿಎಫ್/ಎಸ್‍ಎಪಿ 10 ಕಂಪೆನಿಗಳನ್ನು ಚುನಾವಣಾ ಕರ್ತವ್ಯಕ್ಕೆ ಬಳಸಿಕೊಳ್ಳಲಾಗಿದೆ.

ಕೆ.ಆರ್.ಪುರಂ, ಯಶವಂತಪುರ, ಮಹಾಲಕ್ಷ್ಮಿ ಲೇ ಔಟ್ ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಗೆ 7 ಡಿಸಿಪಿಗಳು , 14 ಎಸಿಪಿ, 30 ಇನ್ಸ್‍ಪೆಕ್ಟರ್‍ಗಳು, 68 ಸಬ್ ಇನ್ಸ್‍ಪೆಕ್ಟರ್ , 160 ಎಎಸ್‍ಐ, 1666 ಕಾನ್ಸ್‍ಸ್ಟೇಬಲ್‍ಗಳು ಹಾಗೂ 951 ಗೃಹ ರಕ್ಷಕ ದಳದ ಸಿಬ್ಬಂದಿ ಸೇರಿದಂತೆ 2896 ಪೊಲೀಸರು ಬಂದೋಬಸ್ತ್ ಕರ್ತವ್ಯದಲ್ಲಿ ತೊಡಗಲಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ಪತ್ರಿಕಾಗೋಷ್ಠಿಯಲ್ಲಿಂದು ವಿವರಣೆ ನೀಡಿದರು.

ಇದರ ಜತೆಗೆ 10 ಸಿಆರ್‍ಪಿಎಫ್/ಎಸ್‍ಎಪಿ, 3 ಕೆಎಸ್‍ಆರ್‍ಪಿ, 40 ಸಿಎಆರ್, 4 ಆರ್‍ಐವಿ ಹಾಗೂ 3 ಕ್ಷಿಪ್ರ ಕಾರ್ಯಾಚರಣೆ ತುಕಡಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಅವರು ವಿವರಿಸಿದರು. 28 ಪೊಲೀಸ್ ಠಾಣೆಗಳ ವ್ಯಾಪ್ತಿಯ 4 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದ್ದು , ಮತದಾನಕ್ಕಾಗಿ ಒಟ್ಟು 1064 ಮತ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
ಇದರಲ್ಲಿ 826 ಸಾಮಾನ್ಯ ಮತಗಟ್ಟೆಗಳಿದ್ದು , 238 ಕೇಂದ್ರಗಳನ್ನು ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದ್ದು, ಸೂಕ್ಷ್ಮ ಮತಗಟ್ಟೆಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಡಲಿದ್ದಾರೆ ಎಂದು ಭಾಸ್ಕರರಾವ್ ಹೇಳಿದರು.

ನೀತಿ ಸಂಹಿತೆ ಉಲ್ಲಂಘಿಸಿರುವ ಹಾಗೂ ಅಬಕಾರಿ ಕಾಯ್ದೆಯನ್ವಯ ಇದುವರೆಗೂ 27 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದ್ದು , 15,92,855 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಆಯುಕ್ತರು ಹೇಳಿದರು. ನಾಲ್ಕು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 2331 ಶಸ್ತ್ರಾಸ್ತ್ರಗಳಿಗೆ ಪರವಾನಗಿ ಪಡೆಯಲಾಗಿದ್ದು , 2028 ಅಸ್ತ್ರಗಳನ್ನು ವಶಕ್ಕೆ ಪಡೆದುಕೊಂಡಿದ್ದು , 291 ಅಸ್ತ್ರಗಳಿಗೆ ವಿನಾಯಿತಿ ನೀಡಲಾಗಿದೆ ಎಂದು ಅವರು ವಿವರಣೆ ನೀಡಿದರು.

ಮದ್ಯ ನಿಷೇಧ: ನಾಲ್ಕು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಿನ್ನೆಲೆಯಲ್ಲಿ ಆಯಾಯ ಕ್ಷೇತ್ರಗಳಲ್ಲಿ ನಾಳೆ ಸಂಜೆ 6 ರಿಂದ ಡಿ.5ರ ಸಂಜೆ 6ರವರೆಗೆ ಮದ್ಯಪಾನ ನಿಷೇಧ ಮಾಡಲಾಗಿದೆ ಎಂದು ಆಯುಕ್ತ ಭಾಸ್ಕರರಾವ್ ತಿಳಿಸಿದರು.

Facebook Comments