ಮತದಾನ ಮುಗೀತು, ಶುರುವಾಯ್ತು ‘ಕೌಂಟ್’ಡೌನ್, ಏನಾಗಲಿದೆ ಅನರ್ಹರ ಭವಿಷ್ಯ…?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.5- ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು ಮತದಾನ ನಡೆದಿದ್ದು ಡಿ.9ರಂದು ಮತ ಎಣಿಕೆ ನಡೆಯಲಿದ್ದು, ಅಂದು ಸಂಜೆ ವೇಳೆಗೆ ಫಲಿತಾಂಶ ಹೊರಬೀಳಲಿದೆ.

ಇಂದು ಸಂಜೆ ಮತದಾನ ಮುಕ್ತಾಯವಾದ ನಂತರ ಮತಯಂತ್ರಗಳನ್ನು ಮತ ಎಣಿಕೆ ಕೇಂದ್ರಗಳ ಸ್ಟ್ರಾಂಗ್‍ರೂಮ್‍ಗಳಲ್ಲಿ ದಾಸ್ತಾನು ಮಾಡಲಾಗಿದೆ . 15 ಕ್ಷೇತ್ರಗಳ ಮತ ಎಣಿಕೆಗೆ ಚುನಾವಣಾ ಆಯೋಗ 11 ಮತ ಎಣಿಕಾ ಕೇಂದ್ರಗಳನ್ನು ತೆರೆದಿದೆ.

ಮತ ಎಣಿಕೆ ಕೇಂದ್ರಗಳು: ಯಶವಂತಪುರ- ಮೈಸೂರು ರಸ್ತೆಯ ಆರ್‍ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ, ಮಹಾಲಕ್ಷ್ಮಿಲೇಔಟ್ ಮತ್ತು ಕೆ.ಆರ್.ಪುರಂ ಕ್ಷೇತ್ರಗಳ ಮತ ಎಣಿಕೆಯು ವಿಠಲ್ ಮಲ್ಯ ರಸ್ತೆಯ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್‍ನಲ್ಲಿ, ಶಿವಾಜಿನಗರ-ಮೌಂಟ್ ಕಾರ್ಮೆಲ್ ಮಹಿಳಾ ಪಿಯು ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.

ಬೆಳಗಾವಿ ಜಿಲ್ಲೆಯ ಅಥಣಿ, ಕಾಗವಾಡ ಹಾಗೂ ಗೋಕಾಕ್ ಕ್ಷೇತ್ರಗಳ ಮತ ಎಣಿಕೆಯು ತಿಲಕವಾಡಿಯ ವಾಸುದೇವ್ ಸೀತಾರಾಮ್ ಘೋಟ್ಗೆ ವಿದ್ಯಾಭವನ್ ಮತ್ತು ರಾಣಿ ಪಾರ್ವತಿದೇವಿ ಕಾಲೇಜಿನಲ್ಲಿ ನಡೆಯುವುದು.

ಯಲ್ಲಾಪುರ ಕ್ಷೇತ್ರದ ಮತ ಎಣಿಕೆಯು ಸಿರ್ಸಿಯ ದಿ ಮಾರ್ಡನ್ ಎಜುಕೇಷನ್ ಸೊಸೈಟಿಯ ವಾಣಿಜ್ಯ ಕಾಲೇಜಿನಲ್ಲಿ ನಡೆದರೆ, ಹಿರೇಕೆರೂರು ಹಾಗೂ ರಾಣೆಬೆನ್ನೂರು ಕ್ಷೇತ್ರಗಳ ಮತ ಎಣಿಕೆ ಹಾವೇರಿಯ ಸರ್ಕಾರಿ ಇಂಜನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದೆ.

ವಿಜಯನಗರ ಕ್ಷೇತ್ರದ ಮತ ಎಣಿಕೆಯು ಬಳ್ಳಾರಿಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದರೆ, ಚಿಕ್ಕಬಳ್ಳಾಪುರ ಕ್ಷೇತ್ರದ ಮತ ಎಣಿಕೆ ಚಿಕ್ಕಬಳ್ಳಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಲಿದೆ.

ಹೊಸಕೋಟೆ ವಿಧಾನಸಭಾ ಕ್ಷೇತ್ರದ ಮತ ಎಣಿಕೆಯು ದೇವನಹಳ್ಳಿಯ ಆಕಾಶ್ ಇಂಟರ್‍ನ್ಯಾಷನಲ್ ಶಾಲೆಯಲ್ಲಿ ನಡೆದರೆ, ಕೆ.ಆರ್.ಪೇಟೆ ಕ್ಷೇತ್ರದ ಮತ ಎಣಿಕೆಯು ಕೆ.ಆರ್.ಪೇಟೆಯ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆಯಲಿದೆ. ಹುಣಸೂರು ಕ್ಷೇತ್ರದ ಮತ ಎಣಿಕೆಯು ಹುಣಸೂರಿನ ದಿ ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ.

Facebook Comments