ಮೂರು ಕ್ಷೇತ್ರಗಳ ಉಪಚುನಾವಣೆ, ಬಹಿರಂಗ ಪ್ರಚಾರ ಅಂತ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.15- ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಜಿದ್ದಾಜಿದ್ದಿನ ಕಣವಾಗಿರುವ ಮೂರು ಕ್ಷೇತ್ರಗಳ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದಿತು. ಶನಿವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆಯಲಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಅಭ್ಯರ್ಥಿಗಳ ಭವಿಷ್ಯವನ್ನು ಮತ ಯಂತ್ರಗಳಲ್ಲಿ ಬರೆಯಲಿದ್ದಾನೆ.

ಬೆಳಗಾವಿ ಲೋಕಸಭೆ, ಮಸ್ಕಿ ಹಾಗೂ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೊನೆ ದಿನವಾದ ಇಂದು ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಸುಡುವ ಬಿಸಿಲನ್ನೂ ಲೆಕ್ಕಿಸದೆ ಮತಯಾಚನೆ ಮಾಡಿದರು. ಬಹಿರಂಗ ಸಮಾವೇಶ, ರೋಡ್ ಶೋ, ಮನೆಮನೆಗೆ ತೆರಳುವುದು, ಜಾತಿವಾರು ಸಮಾವೇಶ ಹೀಗೆ ನಾನಾ ರೀತಿಯಲ್ಲಿ ಮತದಾರರ ಮನವೊಲಿಕೆಗೆ ಇನ್ನಿಲ್ಲದ ಕಸರತ್ತು ನಡೆಸಿದರು.

ಪ್ರತಿಷ್ಠೆಯ ಕಣವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳ ಸುರೇಶ್ ಅಂಗಡಿ ಪರವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಸಚಿವರಾದ ಜಗದೀಶ್ ಶೆಟ್ಟರ್, ಮುರುಗೇಶ್ ನಿರಾಣಿ, ಸಂಸದರು, ಶಾಸಕರು ಸೇರಿದಂತೆ ಮತ್ತಿತರರು ಕ್ಷೇತ್ರದೆಲ್ಲೆಡೆ ಭರ್ಜರಿ ಪ್ರಚಾರ ನಡೆಸಿದರು.

ಬೆಳಗಾವಿ ದಕ್ಷಿಣ, ಗ್ರಾಮಾಂತರ, ಗೋಕಾಕ್, ಅರಬಾವಿ, ಹುಕ್ಕೇರಿ, ಬೆಳಗಾವಿ ನಗರ ಸೇರಿದಂತೆ ಮತ್ತಿತರ ಕಡೆ ಬೆಳಗಿನಿಂದಲೇ ರೋಡ್ ಶೋ, ಬಹಿರಂಗ ಸಮಾವೇಶ ನಡೆಸಿ ಈ ಬಾರಿ ಮಂಗಳಾ ಸುರೇಶ್ ಅಂಗಡಿ ಅವರನ್ನು ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಇನ್ನೊಂದೆಡೆ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಪರವಾಗಿ ಶಾಸಕರು, ಪಕ್ಷದ ಮುಖಂಡರು ಕ್ಷೇತ್ರದಲ್ಲಿ ಬಿಜೆಪಿಯ ಸೇರಿಗೆ ಸವ್ವಾಸೇರು ಎಂಬಂತೆ ಬಿರುಸಿನ ಪ್ರಚಾರ ನಡೆಸಿ ಮತಯಾಚನೆ ಮಾಡಿದ್ದಾರೆ. ತೀವ್ರ ಹಣಾಹಣಿಯಿಂದ ಕೂಡಿರುವ ರಾಯಚೂರು ಜಿಲ್ಲೆ, ಮಸ್ಕಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್, ಬಿಜೆಪಿ ಇಂದು ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ನಡೆಸಿದರು.

ಬಿಜೆಪಿ ಅಭ್ಯರ್ಥಿ ಪ್ರತಾಪ್‍ಗೌಡ ಪಾಟೀಲ್‍ಗೆ ಕೋವಿಡ್ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರ ಪರವಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕ ಪ್ರೀತಮ್‍ಗೌಡ, ಪಕ್ಷದ ಪ್ರಧಾನ ಕಾರ್ಯದರ್ಶಿ ತಮ್ಮೇಶ್‍ಗೌಡ ಸೇರಿದಂತೆ ಮತ್ತಿತರರು ಪಟ್ಟಣದಲ್ಲಿ ಭರ್ಜರಿ ರೋಡ್ ಶೋ ನಡೆಸಿ ಬಿಜೆಪಿ ಗಲ್ಲಿಸಬೇಕೆಂದು ಮನವಿ ಮಾಡಿದರು.

ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರುವಿಹಾಳ್ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಆರ್.ಕೆ.ಧ್ರುವನಾರಾಯಣ್ ಸೇರಿದಂತೆ ಹಲವು ಮುಖಂಡರು ಶಕ್ತಿ ಪ್ರದರ್ಶನ ನಡೆಸಿದರು. ಬಸವಣ್ಣನ ನಾಡು ಬಸವ ಕಲ್ಯಾಣದಲ್ಲಿ ಮೂರೂ ಪಕ್ಷಗಳು ಇಂದು ಜಿದ್ದಾಜಿದ್ದಿನ ಪ್ರಚಾರ ನಡೆಸಿವೆ. ಬಿಜೆಪಿ ಅಭ್ಯರ್ಥಿ ಶರಣ ಸಾಲಗಾರ್ ಪರವಾಗಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವರಾದ ವಿ.ಸೋಮಣ್ಣ, ಪ್ರಭು ಚೌಹಾಣ್ ಸೇರಿದಂತೆ ಹಲವರು ಪಕ್ಷದ ಪರವಾಗಿ ಮತ ಯಾಚನೆ ಮಾಡಿದ್ದಾರೆ.

ಶರಣು ಸಾಲಗಾರ್ ಗೆಲ್ಲಿಸಿದರೆ ಕ್ಷೇತ್ರ ಅಭಿವೃದ್ಧಿಯಾಗಲಿದ್ದು, ಈ ಬಾರಿ ಕಮಲವನ್ನು ಕೈ ಹಿಡಿಯಬೇಕೆಂದು ಮನವಿ ಮಾಡಿದರು. ಬಿಜೆಪಿಗೆ ಪ್ರತಿಯಾಗಿ ಕಾಂಗ್ರೆಸ್ ಕೂಡ ಭರ್ಜರಿ ಪ್ರಚಾರ ನಡೆಸಿದೆ. ಮತ್ತೊಂದೆಡೆ ಜೆಡಿಎಸ್ ಎರಡು ರಾಷ್ಟ್ರೀಯ ಪಕ್ಷಗಳಿಗೆ ಸಡ್ಡು ಹೊಡೆಯುವ ರೀತಿಯಲ್ಲಿ ಪ್ರಚಾರ ಮಾಡಿದೆ. ಶನಿವಾರ ಮತದಾನ ನಡೆಯಲಿದ್ದು, ಮೇ 2ರಂದು ಮತ ಎಣಿಕೆ ನಡೆಯಲಿದೆ.

Facebook Comments