ಉಪಚುನಾವಣೆಯಲ್ಲಿ ಕಾಂಚಾಣದ ಕುಣಿತ, ಮತದಾರರ ಸೆಳೆಯಲು ಕೈ-ಕಮಲ ಭಾರೀ ಆಮಿಷ

ಈ ಸುದ್ದಿಯನ್ನು ಶೇರ್ ಮಾಡಿ

ಹುಬ್ಬಳ್ಳಿ, ಮೇ 15- ಉಪಚುನಾವಣೆ ಕಣದಲ್ಲಿ ಕುರುಡು ಕಾಂಚಾಣದ ಸದ್ದು ಜೋರಾಗಿದೆ. ಬಹಿರಂಗ ಪ್ರಚಾರ ಅಂತ್ಯಕ್ಕೆ ಇನ್ನೆರಡು ದಿನಗಳು ಬಾಕಿ ಇರುವ ಬೆನ್ನಲ್ಲೇ ಅಬ್ಬರದ ಪ್ರಚಾರ ನಡೆಸುತ್ತಿರುವ ಕಾಂಗ್ರೆಸ್, ಬಿಜೆಪಿ ಪಕ್ಷದವರು ಮತದಾರರ ಮನವೊಲಿಸಲು ವಿವಿಧ ಆಮಿಷಗಳನ್ನು ಒಡ್ಡುತ್ತಿದ್ದಾರೆ.

ಚುನಾವಣಾ ಆಯೋಗದ ಹದ್ದಿನ ಕಣ್ಣಿನ ನಡುವೆಯೇ ಹಣ ಹೊಳೆಯಂತೆ ಹರಿಯುತ್ತಿದೆ. ಮತದಾರರನ್ನು ತಮ್ಮತ್ತ ಸೆಳೆಯಲು ನಗ, ಬಂಗಾರದ ನಾಣ್ಯ ಸೇರಿದಂತೆ ವಿವಿಧ ಉಡುಗೊರೆಗಳನ್ನು ನೀಡುತ್ತಿದ್ದಾರೆ. ಬರಗಾಲದಿಂದ ಜನ ತತ್ತರಿಸಿದ್ದಾರೆ.

ಜನ-ಜಾನುವಾರುಗಳು ನೀರಿಲ್ಲದೆ ಪರಿತಪಿಸುತ್ತಿವೆ. ಅನಿರೀಕ್ಷಿತವಾಗಿ ಎದುರಾದ ಉಪಚುನಾವಣೆ ಗೆಲ್ಲಲು ಕಾಂಗ್ರೆಸ್, ಬಿಜೆಪಿ ಉಭಯ ಪಕ್ಷಗಳು ಹರಸಾಹಸ ನಡೆಸುತ್ತಿವೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷಕ್ಕೆ ಸರ್ಕಾರ ಉಳಿಸಿಕೊಳ್ಳುವ ಪ್ರಯತ್ನವಾದರೆ ಬಿಜೆಪಿ ಹೊಸ ಸರ್ಕಾರ ರಚನೆ ಮಾಡುವ ಕನಸಿನಲ್ಲಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಶತಾಯಗತಾಯ ಗೆಲ್ಲಲೇ ಬೇಕೆಂಬ ಹಿನ್ನೆಲೆಯಲ್ಲಿ ಭಾರೀ ಸಮಾವೇಶಗಳು, ಅದ್ಧೂರಿ ರ‍್ಯಾಲಿಗಳು ಮತದಾರರನ್ನು ಸೆಳೆಯಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ.

ಕುಂದಗೋಳ ಉಪಚುನಾವಣೆಯಲ್ಲಂತೂ ಸಾಕಷ್ಟು ಪ್ರಮಾಣದಲ್ಲಿ ಅಕ್ರಮ ಹಣ ಹರಿದಾಡುತ್ತಿವೆ. ಎರಡೂ ಪಕ್ಷಗಳವರು ಹುಬ್ಬಳ್ಳಿಯನ್ನು ಕೇಂದ್ರ ಕಾರ್ಯಸ್ಥಾನವನ್ನಾಗಿ ಮಾಡಿಕೊಂಡು ಪಕ್ಷದ ಕಾರ್ಯಕರ್ತರಿಗೆ, ಬೂತ್ ಮಟ್ಟದ ಮುಖಂಡರಿಗೆ ಹಣ ಮತ್ತಿತರ ವಸ್ತುಗಳನ್ನು ಹಂಚುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ರಾಜಕೀಯ ಯಾವ ಮಟ್ಟಕ್ಕೆ ಹೋಗಿದೆ ಎಂದರೆ, ನಿನ್ನೆಯವರೆಗೆ ಒಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದವರು ಇಂದು ತಮ್ಮ ಪಕ್ಷಕ್ಕೆ ಬಂದು ಹಾರ ಹಾಕಿಸಿಕೊಳ್ಳುವುದೂ ಒಂದು ಪ್ರತಿಷ್ಠೆಯಾಗಿದೆ.

ಅದಕ್ಕೆ ಎಷ್ಟು ಖರ್ಚಾದರೂ ಸರಿ. ಅದು ಸಾಧ್ಯವಾಗುವುದಿಲ್ಲ ಎಂದು ಕಂಡುಬಂದರೆ ಧಮಕಿ ಅಸ್ತ್ರವೂ ಪ್ರಯೋಗವಾಗುತ್ತಿದೆ ಎನ್ನುವುದಕ್ಕೆ ಹಲವು ಉದಾಹರಣೆಗಳು ಸಿಕ್ಕಿವೆ. ಜನರನ್ನು ಒಲಿಸಿಕೊಳ್ಳುವ ಕಾರ್ಯದ ಮಧ್ಯೆ ಕುಂದಗೋಳದಲ್ಲಿಯ ಎಲ್ಲ ಪ್ರತಿಮೆಗಳಿಗೂ ಮಾಲೆಗಳು ಬೀಳುತ್ತಿವೆ. ಎಲ್ಲ ಸಮುದಾಯದವರನ್ನೂ ಸಮಾಧಾನಪಡಿಸುವ ಪ್ರಯತ್ನಗಳೂ ನಡೆದಿವೆ.

ಕುಂದಗೋಳ ಕ್ಷೇತ್ರದಲ್ಲಿ ಚುನಾವಣೆ ನಡೆಯುತ್ತಿದ್ದರೆ ನಿತ್ಯವೂ ಸಭೈಗಳು ನಡೆಯುತ್ತಿರುವುದು ಮಾತ್ರ ಹುಬ್ಬಳ್ಳಿಯ ಹೋಟೆಲ್‍ಗಳಲ್ಲಿ ಎನ್ನುವುದು ಕುತೂಹಲದ ಸಂಗತಿಯೇ. ಎದುರು ಪಕ್ಷದವರೂ ಇದಕ್ಕಿಂತ ಭಿನ್ನವೇನಲ್ಲ. ಸಂಜೆ ಸಭೈ ನಡೆಸುವಾಗ ಚಹಾದೊಂದಿಗೆ ಕಾಂಚಾಣದ ವ್ಯವಸ್ಥೆಯೂ ಆಗುತ್ತದೆ.

ಅಂಥ ಸಮಯದಲ್ಲೇ ಮಹಿಳೆಯರಿಗೆ ಹಂಚಲು ಚಿನ್ನದ ಬಣ್ಣ ಲೇಪಿತ ಅರಿಷಿಣ-ಕುಂಕುಮ ಪಾತ್ರೆ, ಇತ್ಯಾದಿಗಳ ಹಂಚಿಕೆಯೂ ಆಗುತ್ತದೆ ಎನ್ನಲಾಗಿದೆ. ಅಧಿಕಾರಿಗಳ ತಂಡ ನಡೆಸಿದ ದಾಳಿಯಲ್ಲಿ ಸಿಕ್ಕ ವಸ್ತುಗಳು ಸ್ವಲ್ಪವೇ ಇರಬಹುದು.

ಒಟ್ಟಾರೆ ಉಪಕದನದಲ್ಲಿ ಝಣ ಝಣ ಕಾಂಚಾಣ ಸದ್ದು ಜೋರಾಗಿಯೇ ಕೇಳಿಬರುತ್ತಿದೆ. ವಿವಿಧೆಡೆ ಐಟಿ ಅಧಿಕಾರಿಗಳು, ಚುನಾವಣಾಧಿಕಾರಿಗಳು ದಾಳಿ ನಡೆಸಿದ್ದರೂ ಕೂಡ ಹಣ ಹಂಚಿಕೆ ನಿರಂತರವಾಗಿದೆ. ಆಯೋಗ ಚಾಪೆ ಕೆಳಗೆ ನುಸುಳಿದರೆ, ರಾಜಕೀಯ ಮುಖಂಡರು, ಕಾರ್ಯಕರ್ತರು ರಂಗೋಲಿ ಕೆಳಗೆ ತೂರುತ್ತಿದ್ದಾರೆ.

Facebook Comments