ಚಿಂಚೋಳಿ-ಕುಂದಗೋಳ ಗೆಲ್ಲಲು ಕೊನೆಕ್ಷಣದ ಕಸರತ್ತು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ 16- ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆ ಎಂದೇ ಬಿಂಬಿತವಾಗಿರುವ ಕುಂದಗೋಳ-ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ ತೆರೆ ಬೀಳಲಿದೆ.

ಕೊನೆ ಕ್ಷಣದಲ್ಲಿ ಮತದಾರರನ್ನು ಓಲೈಸಿಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಜಾತಿ ಸಮಾವೇಶ, ಮುಖಂಡರ ಮನವೊಲಿಕೆ, ಗುಪ್ತಸಭೆಗಳು ಸೇರಿದಂತೆ ಉಪಸಮರದಲ್ಲಿ ಗೆಲ್ಲಲು ಎಲ್ಲ ಕಾರ್ಯತಂತ್ರಗಳನ್ನು ಬಳಸುತ್ತಿದ್ದಾರೆ.

ನಾಳೆ ಸಂಜೆ 5 ಗಂಟೆಗೆ ಬಹಿರಂಗ ಪ್ರಚಾರ ಕೊನೆಗೊಳ್ಳಲಿದ್ದು, ಶನಿವಾರ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಬಹುದು. ಕ್ಷೇತ್ರದಲ್ಲಿ ಮತದಾನದ ಹಕ್ಕು ಹೊಂದಿಲ್ಲದವರು ನಾಳೆ 5 ಗಂಟೆಯೊಳಗೆ ಕ್ಷೇತ್ರ ಬಿಟ್ಟು ಹೊರಡುವಂತೆ ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಹೀಗಾಗಿ ನಾಳೆ ಪ್ರಮುಖ ಮೂರು ಪಕ್ಷಗಳ ಮುಖಂಡರು ಸಂಜೆ 5 ಗಂಟೆಯೊಳಗೆ ಕ್ಷೇತ್ರ ಬಿಟ್ಟು ಹೊರಡಬೇಕು.

ಕಡೆಯ ಕ್ಷಣದ ಕಸರತ್ತು:ಬಹಿರಂಗ ಪ್ರಚಾರಕ್ಕೆ ಎರಡು ದಿನ ಇರುವುದರಿಂದ ಬಿಜೆಪಿ ಮತ್ತು ದೋಸ್ತಿ ಪಕ್ಷಗಳ ಮುಖಂಡರು ಎರಡೂ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.

ಧಾರವಾಡ ಜಿಲ್ಲೆ ಕುಂದಗೋಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಪರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‍ನ ಪ್ರಮುಖರು ಕ್ಷೇತ್ರದ ನಾನಾ ಕಡೆ ಇಂದು ಭರ್ಜರಿ ಪ್ರಚಾರ ನಡೆಸಿದ್ದಾರೆ.

ಪ್ರತಿ ಗ್ರಾಮ ಪಂಚಾಯ್ತಿಗೆ ಓರ್ವ ಶಾಸಕ, ಹೋಬಳಿ ಗೊಬ್ಬ ಉಸ್ತುವಾರಿ ಸಚಿವರ ಮೂಲಕ ಮತ ಬೇಟೆ ನಡೆಸಿದೆ. ಕ್ಷೇತ್ರದಲ್ಲಿ ಕಳೆದ ಎರಡು ವಾರದಿಂದ ಬೀಡು ಬಿಟ್ಟಿರುವ ಉಸ್ತುವಾರಿ ಡಿ.ಕೆ.ಶಿವಕುಮಾರ್ ಶತಾಯಗತಾಯ ಕಾಂಗ್ರೆಸ್ ಗೆಲ್ಲಿಸಲು ತಮ್ಮ ಎಲ್ಲ ಶಕ್ತಿಯನ್ನು ಧಾರೆ ಎರೆಯುತ್ತಿದ್ದಾರೆ.

ಕಾಂಗ್ರೆಸ್‍ಗೆ ಠಕ್ಕರ್ ಕೊಡಲು ಬಿಜೆಪಿ ಕೂಡ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದೆ. ಚಿಂಚೋಳಿಯಲ್ಲಿ ಪ್ರಚಾರ ನಡೆಸಬೇಕಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಇಂದು ಇದ್ದಕ್ಕಿದ್ದಂತೆ ಕುಂದಗೋಳಕ್ಕೆ ಆಗಮಿಸಿ ವೀರಶೈವ ಲಿಂಗಾಯಿತ ಸಮುದಾಯದ ಮುಖಂಡರೊಂದಿಗೆ ರಹಸ್ಯ ಸಭೆ ನಡೆಸಿದ್ದಾರೆ.

ಯಡಿಯೂರಪ್ಪನವರಿಗೆ ಪಕ್ಷದ ಉಪಾಧ್ಯಕ್ಷ ಹಾಗೂ ಶಾಸಕ ಶ್ರೀರಾಮುಲು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಪ್ರಹ್ಲಾದ್ ಜೋಶಿ ಸೇರಿದಂತೆ ಅನೇಕರು ಸಾಥ್ ನೀಡಿದರು. ಕುಂದಗೋಳದಲ್ಲಿ ಇಂದು ಉಭಯ ಪಕ್ಷಗಳ ನಾಯಕರು ಬಹಿರಂಗ ಸಮಾವೇಶ ನಡೆಸಿದ್ದರಿಂದ ಕ್ಷೇತ್ರದಲ್ಲಿ ರಣೋತ್ಸಾಹ ಇಮ್ಮಡಿಗೊಂಡಿತು.

ಚಿಂಚೋಳಿಯಲ್ಲೂ ಭರ್ಜರಿ ಪ್ರಚಾರ:ಕಲಬುರಗಿ ಜಿಲ್ಲೆ ಚಿಂಚೋಳಿ ಮೀಸಲು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ದೋಸ್ತಿ ಪಕ್ಷಗಳ ಪ್ರಮುಖರು ಇಂದು ಕೂಡ ಬೆಳಗಿನಿಂದಲೇ ಮತ ಬೇಟೆ ನಡೆಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಸುಭಾಷ್ ರಾಥೋಡ್ ಪರವಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಗೃಹ ಸಚಿವ ಎಂ.ಬಿ.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಅನೇಕರು ಬೆಳಗಿನಿಂದಲೇ ವಿವಿಧ ಗ್ರಾಮ ಮತ್ತು ಹೋಬಳಿ ಮಟ್ಟದಲ್ಲಿ ಪ್ರಚಾರ ನಡೆಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದರು

ಇತ್ತ ಬಿಜೆಪಿ ಕೂಡ ತನ್ನ ಅಭ್ಯರ್ಥಿ ಡಾ.ಅವಿನಾಶ್ ಜಾಧವ್ ಪರವಾಗಿ ಎಲ್ಲೆಡೆ ಬಿರುಸಿನ ಪ್ರಚಾರ ನಡೆಸಿದೆ. ಮಾಜಿ ಸಚಿವ ವಿ.ಸೋಮಣ್ಣ, ವಿಧಾನಪರಿಷತ್ ಸದಸ್ಯ ರವಿಕುಮಾರ್, ಡಾ.ಉಮೇಶ್ ಜಾಧವ್ ಸೇರಿದಂತೆ ಅನೇಕರು ಸುಡುವ ಬಿಸಿಲನ್ನೂ ಲೆಕ್ಕಿಸದೆ ಮತ ಯಾಚನೆ ಮಾಡುತ್ತಿದ್ದ ದೃಶ್ಯ ಕಂಡುಬಂದಿತು.

ಎರಡು ಕ್ಷೇತ್ರಗಳನ್ನು ಗೆದ್ದು ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳುವ ಅನಿವಾರ್ಯತೆ ದೋಸ್ತಿ ಪಕ್ಷಗಳಿಗಿದೆ. ಚಿಂಚೋಳಿ ಮತ್ತು ಕುಂದಗೋಳದಲ್ಲಿ ತನ್ನ ಪಕ್ಷದ ಅಭ್ಯರ್ಥಿಗಳು ಗೆದ್ದರೆ ಸರ್ಕಾರ ರಚನೆ ಹಾದಿ ಇನ್ನಷ್ಟು ಸುಗಮವಾಗಲಿದೆ ಎಂಬ ವಿಶ್ವಾಸ ಬಿಜೆಪಿಯದು.

ಹೀಗಾಗಿ ಕಾಲಿಗೆ ಚಕ್ರ ಕಟ್ಟಿಕೊಟ್ಟವರಂತೆ ಯಡಿಯೂರಪ್ಪ ಪ್ರಚಾರ ನಡೆಸಿದ್ದಾರೆ. ಮತದಾರರ ಮನದಾಳದಲ್ಲಿ ಏನಿದೆ ಎಂಬುದು 23ರ ಫಲಿತಾಂಶದಲ್ಲಿ ಹೊರಬೀಳಲಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ