ಉಪಸಮರಕ್ಕೆ ರೆಡಿಯಾಯ್ತು ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.22-15 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಉಪಚುನಾವಣೆಗೆ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದು, ಇನ್ನೆರಡು ಮೂರು ದಿನಗಳೊಳಗಾಗಿ ಹಿರಿಯ ನಾಯಕರ ಸಭೆಯಲ್ಲಿ ಅಭ್ಯರ್ಥಿಗಳನ್ನು ಅಖೈರುಗೊಳಿಸಲಾಗುತ್ತದೆ.

ಉಪಚುನಾವಣಾ ಕಣದಲ್ಲಿ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲು ಮಾಜಿ ಸಚಿವ ಆರ್.ವಿ.ದೇಶಾಪಾಂಡೆ ಅವರ ಪುತ್ರ ಪ್ರಶಾಂತ್ ದೇಶಪಾಂಡೆ, ಶಾಸಕ ಭೈರತಿ ಸುರೇಶ್ ಅವರ ಪತ್ನಿ ಪದ್ಮಾವತಿ, ಕೇಂದ್ರ ಮಾಜಿ ಸಚಿವ ರೆಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಅಲಿಖಾನ್, ಮಾಜಿ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರ ಪುತ್ರ ಪ್ರಕಾಶ್ ಸೇರಿದಂತೆ ಘಟಾನುಘಟಿಗಳ ಕುಟುಂಬ ಸದಸ್ಯರು ಲಾಬಿ ಮಾಡುತ್ತಿದ್ದಾರೆ.

ಜೆಡಿಎಸ್‍ನ 3, ಕಾಂಗ್ರೆಸ್‍ನ 14 ಮಂದಿ ಶಾಸಕರ ರಾಜೀನಾಮೆಯಿಂದಾಗಿ ಸಮ್ಮಿಶ್ರ ಸರ್ಕಾರ ಪತನಗೊಂಡಿತ್ತು. ಅದರಲ್ಲಿ ಮಸ್ಕಿ ಮತ್ತು ರಾಜರಾಜೇಶ್ವರಿ ನಗರ ಹೊರತು ಪಡಿಸಿ ಉಳಿದ 15 ಕ್ಷೇತ್ರಗಳಿಗೆ ನಿನ್ನೆ ಉಪಚುನಾವಣೆ ಘೋಷಣೆ ಮಾಡಲಾಗಿದೆ. ಗೋಕಾಕ್‍ನಲ್ಲಿ ಲಖನ್ ಜಾರಕಿಹೊಳಿ, ಹುಣಸೂರಿಗೆ ಮಂಜುನಾಥ್, ಹೊಸಪೇಟೆಗೆ ಸೂರ್ಯನಾರಾಯಣರೆಡ್ಡಿ, ಕಾಗವಾಡಕ್ಕೆ ಪ್ರಕಾಶ್ ಹುಕ್ಕೇರಿ, ಅಥಣಿಗೆ ಎ.ಬಿ.ಪಾಟೀಲ್ ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬಂದಿವೆ.

ಶಿವಾಜಿನಗರ, ಮಹಾಲಕ್ಷ್ಮಿಲೇಔಟ್ , ಕೆ.ಆರ್.ಪುರ, ಚಿಕ್ಕಬಳ್ಳಾಪುರ ಕ್ಷೇತ್ರಗಳ ಟಿಕೆಟ್‍ಗೆ ಭಾರೀ ಬೇಡಿಕೆ ಉಂಟಾಗಿದ್ದು, ಆಕಾಂಕ್ಷಿಗಳ ಲಾಬಿ ಜೋರಾಗಿದೆ.
ಎಂ.ಟಿ.ಬಿ.ನಾಗರಾಜ್ ಅವರಿಂದ ತೆರವಾಗಿರುವ ಹೊಸಕೋಟೆಯಲ್ಲಿ ತಮ್ಮ ಪತ್ನಿ ಪದ್ಮಾವತಿಗೆ ಅವಕಾಶ ಕೊಡಬೇಕೆಂದು ಭೈರತಿ ಸುರೇಶ್ ಲಾಬಿ ನಡೆಸುತ್ತಿದ್ದರೆ, ಮಾಜಿ ಸಚಿವ ಚಿಕ್ಕನಗೌಡ ಅವರ ಮಗ ನಾರಾಯಣಗೌಡ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಭೈರತಿ ಬಸವರಾಜ್ ಅವರ ರಾಜೀನಾಮೆಯಿಂದ ತೆರವಾಗಿರುವ ಕೆ.ಆರ್.ಪುರಂ ಕ್ಷೇತ್ರಕ್ಕೆ ಮಾಜಿ ಶಾಸಕ ರಾಜಣ್ಣ ಅವರ ಪುತ್ರ ಕೇಶವರಾಜ್, ವಿಧಾನಪರಿಷತ್ ಸದಸ್ಯ ಎಂ.ನಾರಾಯಣಸ್ವಾಮಿ, ಕಾಂಗ್ರೆಸ್ ಕಾನೂನು ಘಟಕದ ಅಧ್ಯಕ್ಷ ಧನಂಜಯ ಹಾಗೂ ಯಶವಂತಪುರ ಕ್ಷೇತ್ರದಲ್ಲಿ ಎಸ್.ಟಿ.ಸೋಮಶೇಖರ್ ಅವರ ರಾಜೀನಾಮೆಯಿಂದ ತೆರವಾಗಿರುವ ಯಶವಂತಪುರ ಕ್ಷೇತ್ರಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಜ್‍ಕುಮಾರ್, ಮಾಜಿ ಶಾಸಕ ಬಾಲಕೃಷ್ಣ ಆಕಾಂಕ್ಷಿಗಳಾಗಿದ್ದಾರೆ.

ಕೆ.ಗೋಪಾಲಯ್ಯ ಅವರ ರಾಜೀನಾಮೆಯಿಂದ ತೆರವಾಗಿರುವ ಮಹಾಲಕ್ಷ್ಮಿಲೇಔಟ್ ಕ್ಷೇತ್ರಕ್ಕೆ ಶಿವರಾಜ್, ಮಂಜುನಾಥ್, ಗಿರೀಶ್ ಕೆ.ನಾಶಿ ಟಿಕೆಟ್‍ಗಾಗಿ ಲಾಬಿ ನಡೆಸಿದ್ದಾರೆ.ಡಾ.ಕೆ.ಸುಧಾಕರ್ ರಾಜೀನಾಮೆಯಿಂದ ತೆರವಾಗಿರುವ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಚಿಂತಾಮಣಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್, ಜಗದೀಶ್‍ರೆಡ್ಡಿ, ಆಂಜನಪ್ಪ ಅವರುಗಳು ಟಿಕೆಟ್ ಪಡೆಯಲು ಲಾಬಿ ನಡೆಸುತ್ತಿದ್ದಾರೆ.

ಜೆಡಿಎಸ್‍ನ ನಾರಾಯಣಗೌಡ ಅವರ ರಾಜೀನಾಮೆಯಿಂದ ತೆರವಾಗಿರುವ ಕೆ.ಆರ್.ಪೇಟೆ ಕ್ಷೇತ್ರಕ್ಕೆ ಕಾಂಗ್ರೆಸ್‍ನ ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್ ಪ್ರಬಲ ಆಕಾಂಕ್ಷಿಯಾಗಿದ್ದು, ತಾಲ್ಲೂಕು ಪಂಚಾಯ್ತಿಯ ಮಾಜಿ ಅಧ್ಯಕ್ಷ ಕಿಕ್ಕೇರಿ ಸುರೇಶ್ ಪೈಪೋಟಿ ನಡೆಸಿದ್ದಾರೆ. ಶಿವರಾಂ ಹೆಬ್ಬಾರ್ ಅವರ ರಾಜೀನಾಮೆಯಿಂದ ತೆರವಾಗಿರುವ ಯಲ್ಲಾಪುರ ಕ್ಷೇತ್ರಕ್ಕೆ ಮಾಜಿ ಶಾಸಕ ಭೀಮಣ್ಣ ನಾಯ್ಕ ಆಕಾಂಕ್ಷಿಯಾಗಿದ್ದು, ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅಥವಾ ಅವರ ಪುತ್ರ ಪ್ರಶಾಂತ್ ದೇಶಪಾಂಡೆ ಕೂಡ ಲಾಬಿ ಮಾಡುತ್ತಿದ್ದಾರೆ. ಪಕ್ಷೇತರ ಶಾಸಕ ಆರ್.ಶಂಕರ್ ಅವರ ಅನರ್ಹತೆಯಿಂದ ತೆರವಾಗಿರುವ ರಾಣೆಬೆನ್ನೂರು ಕ್ಷೇತ್ರಕ್ಕೆ ಕೆ.ಬಿ.ಕೋಳಿವಾಡ ಮತ್ತು ಅವರ ಪುತ್ರ ಪ್ರಕಾಶ್ ಕೋಳಿವಾಡ ಕಣಕ್ಕಿಳಿಸುವ ನಿರೀಕ್ಷೆ ಇದೆ.

ಬಿ.ಸಿ.ಪಾಟೀಲ್ ರಾಜೀನಾಮೆಯಿಂದ ತೆರವಾಗಿರುವ ಹಿರೇಕೆರೂರು ಕ್ಷೇತ್ರಕ್ಕೆ ಯು.ಬಿ.ಬಣಕಾರ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಪ್ರಮುಖವಾಗಿ ಬೆಂಗಳೂರಿನ ಕೇಂದ್ರವಾಗಿರುವ ಶಿವಾಜಿನಗರ ಕ್ಷೇತ್ರಕ್ಕೆ ಆಕಾಂಕ್ಷಿಗಳ ದಂಡು ಹೆಚ್ಚಿದೆ. ಒಂದು ಹಂತದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರ ಪತ್ನಿ ತಬು ಅವರನ್ನೇ ಕಣಕ್ಕಿಳಿಸುವ ಪ್ರಯತ್ನಗಳು ನಡೆದಿದ್ದವು.

ಜೊತೆಯಲ್ಲಿ ಎಸ್.ಎ.ಹುಸೇನ್, ವಿಧಾನಪರಿಷತ್‍ನ ಮಾಜಿ ಸದಸ್ಯ ರಿಜ್ವಾನ್ ಅರ್ಷದ್, ಕೇಂದ್ರ ಮಾಜಿ ಸಚಿವ ರೆಹಮಾನ್ ಖಾನ್ ಅವರ ಪುತ್ರ ಮನ್ಸೂರ್ ಅಲಿಖಾನ್, ಯುವ ಕಾಂಗ್ರೆಸ್‍ನ ಮುಖಂಡ ಬಿ.ಆರ್.ನಾಯ್ಡು ಮತ್ತಿತರರು ಟಿಕೆಟ್‍ಗಾಗಿ ಲಾಬಿ ನಡೆಸುತ್ತಿದ್ದಾರೆ.

Facebook Comments