ಚುಪಚುನಾವಣೆ ಅಬ್ಬರದ ಪ್ರಚಾರ ಅಂತ್ಯ, ಬಹಿರಂಗ ಪ್ರಚಾರಕ್ಕೆ ಇಂದು ತೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.27- ತೀವ್ರ ಕುತೂಹಲ ಕೆರಳಿಸಿರುವ ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಬಹಿರಂಗ ಪ್ರಚಾರಕ್ಕೆ ಇಂದು ಸಂಜೆ ತೆರೆ ಬೀಳಲಿದ್ದು, ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರು ಕೊನೆ ದಿನದ ಪ್ರಚಾರವನ್ನು ನಡೆಸಿದರು.  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ಪಕ್ಷಗಳ ನಾಯಕರು, ಮುಖಂಡರು, ಕಾರ್ಯಕರ್ತರು ಕೊನೆ ದಿನದ ಪ್ರಚಾರ ನಡೆಸಿದರು.

ಚುನಾವಣಾ ರ್ಯಾಲಿ, ಬಹಿರಂಗ ಸಮಾವೇಶದ ಮೂಲಕ ಮತಯಾಚನೆ ಮಾಡಿ ಆರೋಪ-ಪ್ರತ್ಯಾರೋಪಗಳ ಸುರಿಮಳೆಗೈದರು. ಅ.30ರಂದು ಬೆಳಗ್ಗೆ 7 ರಿಂದ ಸಂಜೆ 7 ಗಂಟೆವರೆಗೂ ಮತದಾನ ನಡೆಯಲಿದ್ದು, ಮತದಾನ ಮಾಡುವ ಸಮಯ ಮುಕ್ತಾಯವಾಗುವ 72 ಗಂಟೆಗಳ ಮುಂಚಿತವಾಗಿ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಆನಂತರ ಮನೆ ಮನೆ ಪ್ರಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ.

ಚುನಾವಣಾ ಪ್ರಚಾರಕ್ಕಾಗಿ ಎರಡೂ ಕ್ಷೇತ್ರಗಳಲ್ಲಿ ಬೀಡುಬಿಟ್ಟು ಅಬ್ಬರದ ಪ್ರಚಾರ ಕೈಗೊಂಡಿದ್ದ ನಾಯಕರು ಇಂದು ಸಂಜೆಯಾಗುತ್ತಿದ್ದಂತೆ ಕ್ಷೇತ್ರ ಬಿಟ್ಟು ತೆರಳಲಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿಯ ಹಲವು ನಾಯಕರು ತಮ್ಮ ಪಕ್ಷದ ಅಭ್ಯರ್ಥಿ ಶಿವರಾಜ್ ಶರಣಪ್ಪ ಸಜ್ಜನರ್ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ಸಿಂಧಗಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಅಂಗಡಿ ನಾಜಿಯಾ ಪರವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ನಾಯಕರು ಬಹಿರಂಗ ಸಭೆ, ರ್ಯಾಲಿಗಳಲ್ಲಿ ಪಾಲ್ಗೊಂಡು ಮತಯಾಚನೆ ನಡೆಸಿದರು.

ಅದೇ ರೀತಿ ಕಾಂಗ್ರೆಸ್ ಪಕ್ಷದ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರು ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮತಯಾಚನೆ ನಡೆಸಿದರು. ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು 19 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಸಿಂಧಗಿ ಕ್ಷೇತ್ರದಲ್ಲಿ ಕಾಂಗ್ರೆಸ್‍ನಿಂದ ಅಶೋಕ ಮಲ್ಲಪ್ಪ ಮನಗೂಳಿ, ಜೆಡಿಎಸ್‍ನಿಂದ ಅಂಗಡಿ ನಾಜಿಯಾ, ಬಿಜೆಪಿಯಿಂದ ಬೂಸನೂರ ರಮೇಶ ಬಾಳಪ್ಪ ಸ್ರ್ಪಸಿದ್ದು, ಈ ಕ್ಷೇತ್ರದಲ್ಲಿ ಒಟ್ಟು ಆರು ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ. ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‍ನಿಂದ ನಿಯಾಜ್ ಶೇಖ್, ಬಿಜೆಪಿಯಿಂದ ಶಿವರಾಜ ಶರಣಪ್ಪ ಸಜ್ಜನರ್, ಕಾಂಗ್ರೆಸ್‍ನಿಂದ ಶ್ರೀನಿವಾಸ ಮಾನೆ ಅವರು ಸ್ರ್ಪಧಿಸಿದ್ದು,

ಈ ಕ್ಷೇತ್ರದಲ್ಲಿ ಒಟ್ಟು 13 ಮಂದಿ ಚುನಾವಣಾ ಕಣದಲ್ಲಿದ್ದಾರೆ. ಶನಿವಾರ ಎರಡೂ ಕ್ಷೇತ್ರಗಳಿಗೆ ಮತದಾನ ನಡೆಯಲಿದ್ದು, ಮತದಾರರ ಗುರುತಿನ ಚೀಟಿ ಅಲ್ಲದೆ ಆಧಾರ್ ಕಾರ್ಡ್, ಪಾನ್ ಕಾರ್ಡ್, ನರೇಗಾ ಜಾಬ್‍ಕಾರ್ಡ್, ಪಾಸ್‍ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ವಿವಿಧ ಗುರುತಿನ ಚೀಟಿಗಳನ್ನು ಹಾಜರುಪಡಿಸಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಎರಡೂ ಕ್ಷೇತ್ರಗಳಲ್ಲಿ ನ.2ರಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಲಿದ್ದು, ಅಂದು ಸಂಜೆ ವೇಳೆಗೆ ಫಲಿತಾಂಶ ಹೊರಬೀಳಲಿದೆ.

Facebook Comments