ಪ್ರತಿಷ್ಠೆಯ, ನಿರ್ಣಾಯಕ ಉಪ ಕದನದ ಅಬ್ಬರದ ಪ್ರಚಾರಕ್ಕೆ ತೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.3- ಕಳೆದ 15 ದಿನಗಳಿಂದ ನಡೆಯುತ್ತಿದ್ದ ಉಪಚುನಾವಣಾ ಕಣದ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬಿದ್ದಿದೆ.ರಾಜ್ಯದ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ನಾಯಕರು ಅಭ್ಯರ್ಥಿಗಳ ಪರವಾಗಿ ಅಂತಿಮ ಕ್ಷಣದಲ್ಲಿ ಅಬ್ಬರಿಸಿ ಬೊಬ್ಬಿರಿದರು. ಇನ್ನೇನಿದ್ದರೂ ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಬೇಕು. ಡಿ.5 ರಂದು ಬೆಳಗ್ಗೆ 7 ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ರಾಜಕೀಯ ನಾಯಕರು ಇಂದು ಸಂಜೆಯವರೆಗೆ ಮತ ಪ್ರಚಾರ ಮುಂದುವರಸಿದ್ದರು.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ನಿವಾಸದಲ್ಲಿ ಕುಳಿತು 15 ಕ್ಷೇತ್ರಗಳ ಚುನಾವಣಾ ಪ್ರಚಾರದ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಪಡೆದುಕೊಂಡರೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಕ್ಷೇತ್ರದ ಉಸ್ತುವಾರಿಗಳಿಂದ ಚುನಾವಣಾ ಪ್ರಚಾರದ ಬಗ್ಗೆ ಮಾಹಿತಿ ಕಲೆಹಾಕಿದರು. ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ಬಗ್ಗೆ ಹದ್ದಿನ ಕಣ್ಣಿಡಬೇಕು ಮತ್ತು ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವುದಾಗಿ ವೇಣುಗೋಪಾಲ್ ಎಚ್ಚರಿಕೆ ನೀಡಿದರು.

ಪ್ರತಿಪಕ್ಛ್ಷದ ನಾಯಕ ಸಿದ್ದರಾಮಯ್ಯ ಕೆ.ಆರ್.ಪೇಟೆ ಮತ್ತು ಹುಣಸೂರಿನಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿ ಗಿರೀಶ್ ಕೆ.ನಾಶಿ ಪರವಾಗಿ ರೋಡ್‍ಶೋ ನಡೆಸಿ ಮತಯಾಚನೆ ಮಾಡಿದರು.

ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್ ಪರವಾಗಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ರೋಡ್‍ಶೋದಲ್ಲಿ ಪಾಲ್ಗೊಂಡು ಮತಯಾಚಿಸಿದರು. ಅತ್ತ ಬೆಳಗಾವಿಯ 3 ಕ್ಷೇತ್ರಗಳಾದ ಅಥಣಿ, ಕಾಗವಾಡ, ಗೋಕಾಕದಲ್ಲೂ ಕಾಂಗ್ರೆಸ್, ಜೆಡಿಎಸ್,ಬಿಜೆಪಿ ಅಭ್ಯರ್ಥಿಗಳ ಪರ ನಾಯಕರ ಪ್ರಚಾರ ಜೋರಾಗಿತ್ತು. ಕೊನೆ ಕ್ಷಣದವರಗೂ ಪರಸ್ಪರ ಆರೋಪ-ಪ್ರತ್ಯಾರೋಪಗಳು ಕೇಳಿ ಬಂದವು.

ಕೆಲವೆಡೆ ಅಭ್ಯರ್ಥಿಗಳು ತಮ್ಮ ಪ್ರಚಾರದ ವೈಖರಿಯನ್ನು ಬದಲಿಸಿಕೊಂಡಿದ್ದರು. ಪಾದಯಾತ್ರೆ ಮೂಲಕ ಪ್ರಚಾರ ನಡೆಸಿದರೆ, ಮತ್ತೆ ಕೆಲವೆಡೆ ಮತದಾರರ ಮನೆಗಳಿಗೆ ತೆರಳುವ ಬದಲು ಕ್ಷೇತ್ರದ ಸ್ಥಳೀಯ ನಾಯಕರು ಮತ್ತು ಮುಖಂಡರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದುದು ಕಂಡುಬಂತು. ಇನ್ನು ಹಲವು ಅಭ್ಯರ್ಥಿಗಳು ಮಠಾಧೀಶರ ಭೇಟಿ ಮಾಡಿ ಆಶೀರ್ವಾದ ಮಾಡುವಂತೆ ಮನವಿ ಮಾಡಿದರು.

ಪ್ರಸ್ತುತ ಉಪಚುನಾವಣೆಯಲ್ಲಿ ಜಾತಿ ಅಂಶ ಪ್ರಬಲವಾಗಿ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಕ್ಷೇತ್ರದಲ್ಲೂ ಆ ಕ್ಷೇತ್ರಗಳ ಮತ ಬ್ಯಾಂಕ್ ಆಗಿರುವ ಜಾತಿ ಜನಾಂಗದ ಮುಖಂಡರು, ಪ್ರಭಾವಿ ನಾಯಕರನ್ನು ಅಭ್ಯರ್ಥಿಗಳು ಭೇಟಿಯಾಗಿ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ. ಕಡೇ ಕ್ಷಣದ ಕಸರತ್ತುಗಳಲ್ಲಿ ತೊಡಗಿದ್ದಾರೆ.  ಮತ್ತೊಂದೆಡೆ ಅಭ್ಯರ್ಥಿಗಳ ಬೆಂಬಲಿಗರು ಮನೆ ಮನೆಗೆ ತೆರಳಿ ಮತಚೀಟಿ, ಮತಗಟ್ಟೆಗಳ ವಿವರಗಳನ್ನು ನೀಡುತ್ತಾ ತಪ್ಪದೆ ಮತದಾನ ಮಾಡುವಂತೆ ಮನವಿ ಮಾಡುವ ಮೂಲಕ ತಮ್ಮ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಕೋರಿ ಪ್ರಚಾರದಲ್ಲಿ ತೊಡಗಿದ್ದಾರೆ.

ಪ್ರಸ್ತುತ ಉಪಚುನಾವಣೆಯಲ್ಲಿ ಹಣದ ಹೊಳೆ ಹರಿಯುತ್ತಿದೆ. ಮತದಾರರಿಗೆ ಹಣ, ಉಡುಗೊರೆಗಳನ್ನು ತಲುಪಿಸಲಾಗುತ್ತಿದೆ. ಚುನಾವಣಾ ಆಯೋಗ ಚಾಪೆ ಕೆಳಗೆ ನುಸುಳಿದರೆ, ಅಭ್ಯರ್ಥಿಗಳು ರಂಗೋಲಿ ಕೆಳಗೆ ನುಸುಳುತ್ತಿದ್ದಾರೆ. ಮತದಾರರನ್ನು ತಮ್ಮೆಡೆಗೆ ಸೆಳೆಯಲು ಸೀರೆ, ಕುಕ್ಕರ್, ಹಣ ಮುಂತಾದವುಗಳನ್ನು ನೀಡುತ್ತಿದ್ದಾರೆ.  ವಾರ್ಡ್ ಮಟ್ಟದಿಂದ ಬೂತ್ ಮಟ್ಟದವರೆಗೆ ತಮ್ಮ ನಂಬಿಕಸ್ಥ ಕಾರ್ಯಕರ್ತರ ಮೂಲಕ ಮತಕ್ಕಿಷ್ಟು ಎಂದು ಹಣ ಹಂಚಿಕÉಯಾಗುತ್ತಿರುವುದು ಕಂಡುಬಂದಿದೆ.

ತಂತ್ರ-ಪ್ರತಿತಂತ್ರ: ಉಪಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಸೆಣಸಾಟ ನಡೆಸಿರುವ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳು ಕೊನೆ ಕ್ಷಣದಲ್ಲೂ ಹಲವು ತಂತ್ರ-ಪ್ರತಿತಂತ್ರಗಳನ್ನು ಹೆಣೆಯುತ್ತಿದ್ದಾರೆ. ಹಲವರನ್ನು ಆಮಿಷಗಳ ಮೂಲಕ ತಮ್ಮತ್ತ ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಮತ ಬ್ಯಾಂಕ್ ಹೊಂದಿರುವವರನ್ನು ಯಾವ ರೂಪದಲ್ಲಾದರೂ ತಮ್ಮ ಕಡೆ ಸೆಳೆಯುವ ಪ್ರಯತ್ನದಲ್ಲಿ ತೊಡಗಿದ್ದಾರೆ.

ಮಹಾಲಕ್ಷಿಲೇಔಟ್, ಯಶವಂತಪುರ, ಕೆ.ಆರ್.ಪುರ, ಹೊಸಕೋಟೆ ಮುಂತಾದೆಡೆ ಕಾಂಗ್ರೆಸ್‍ನ ಹಲವು ಸ್ಥಳೀಯ ನಾಯಕರು ತಮ್ಮ ಬೆಂಬಲಿಗರೊಂದಿಗೆ ಕೊನೆ ಕ್ಷಣದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದು ಕಂಡುಬಂತು. ಅದೇ ರೀತಿ ಗೋಕಾಕ್, ಯಲ್ಲಾಪುರದಲ್ಲೂ ಕಾಂಗ್ರೆಸ್‍ನ ನೂರಾರು ಕಾರ್ಯಕರ್ತರನ್ನು ಬಿಜೆಪಿಯವರು ತಮ್ಮತ್ತ ಸೆಳೆದರು.

ಒಟ್ಟಾರೆ ಯಾರು ಎಲ್ಲಿಗೆ ಹೋದರೂ, ಏನೇ ಆಮಿಷವೊಡ್ಡಿದರೂ ಡಿಸೆಂಬರ್ 5 ರಂದು ನಡೆಯಲಿರುವ ಚುನಾವಣೆಯಲ್ಲಿ ಯಾರು, ಯಾರಿಗೆ ಮತ ಚಲಾಯಿಸಿದ್ದಾರೆ ಎಂಬುದು ಡಿ.9ರಂದು ಗೊತ್ತಾಗಲಿದೆ.

Facebook Comments