ಉಪ ಚುನಾವಣೆ : ತಾರಾ ಪ್ರಚಾರಕ್ಕೆ ಜೆಡಿಎಸ್ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.14: ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಜೆಡಿಎಸ್ ಪಕ್ಷದ ಪರ ಪ್ರಚಾರಕ್ಕಾಗಿ 20 ಮಂದಿ ತಾರಾ ಪ್ರಚಾರಕರನ್ನು ನಿಯೋಜಿಸಿದೆ. ಎರಡು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ತಾರಾ ಪ್ರಚಾರಕರಾಗಿ 20 ಮಂದಿ ನಾಯಕರು ಮತ್ತು ಮುಖಂಡರು ಪ್ರಚಾರ ಕೈಗೊಳ್ಳಲಿದ್ದಾರೆ.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರು ಈಗಾಗಲೇ ಸಿಂಧಗಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಅಂಗಡಿ ನಾಜೀಯಾ ಪರವಾಗಿ ಪ್ರಚಾರ ಕೈಗೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಅಕ್ಟೋಬರ್ 16ರಿಂದ ಚುನಾವಣಾ ಪ್ರಚಾರ ಆರಂಭಿಸಲಿದ್ದು ಎರಡೂ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಲಿದ್ದಾರೆ.

ಹಾನಗಲ್ ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಖ್ ಪರವಾಗಿ ಪ್ರಚಾರ ನಡೆಸಲಿದ್ದಾರೆ. ಮೊದಲಿಗೆ ಸಿಂಧಗಿ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಯ ಪರವಾಗಿ ಕುಮಾರಸ್ವಾಮಿ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಜೆಡಿಎಸ್ ರಾಜ್ಯಾಧ್ಯಕ್ಷರಾದ ಹೆಚ್.ಕೆ. ಕುಮಾರಸ್ವಾಮಿ ಅವರು ಅ.16ರಿಂದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದು, ಈ ಎರಡೂ ಕ್ಷೇತ್ರದಲ್ಲಿ ಒಂದು ವಾರಕ್ಕೂ ಹೆಚ್ಚು ಕಾಲ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಲಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ನಾಯಕರೊಂದಿಗೆ ಸ್ಥಳೀಯ ಮುಖಂಡರು, ಕಾರ್ಯಕರ್ತರೊಂದಿಗೆ ಪಾಲ್ಗೊಂಡು ಬಹಿರಂಗ ಸಭೆ ರ್ಯಾಲಿಗಳಲ್ಲಿ ಪಾಲ್ಗೊಂಡು ಮತಯಾಚನೆ ಮಾಡಲಿದ್ದಾರೆ.

ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಹ್ಮದ್ ಜಫ್ರುಲ್ಲಾ ಖಾನ್, ಮಾಜಿ ಸಚಿವರಾದ ಎಚ್.ಡಿ. ರೇವಣ್ಣ, ಬಂಡೆಪ್ಪ ಖಾಶೇಂಪೂರ, ವೆಂಕಟರಾವ್ ನಾಡಗೌಡ, ಸಂಸದ ಪ್ರಜ್ವಲ್ ರೇವಣ್ಣ, ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕರಾದ ಡಾ. ಕೆ. ಅನ್ನದಾನಿ, ಡಾ. ದೇವಾನಂದ್ ಚವ್ಹಾಣ್, ಬಿ.ಎಂ. ಫಾರೂಖ್, ರಾಜ ವೆಂಕಟಪ್ಪ ನಾಯಕ ಮುಖಂಡರಾದ ಎನ್.ಎಚ್. ಕೋನರೆಡ್ಡಿ, ಬಿಜಿ ಪಾಟೀಲ್, ಮಲ್ಲಿಕಾರ್ಜುನ ಯಂಡಿಗೇರಿ, ನಾಜೀರ್ ಹುಸೇನ್ ಹುಸ್ತಾದ್, ಸಯ್ಯದ್ ಮೋಹಿದ್ ಅಲ್ತಾಫ್, ರಾಜುಗೌಡ ಪಾಟೀಲ್ ಹಾಗೂ ಬಿ.ಡಿ. ಪಾಟೀಲ್ ಇಂಡಿ ಇವರನ್ನು ಚುನಾವಣಾ ತಾರಾ ಪ್ರಚಾರಕನ್ನಾಗಿ ಬಳಸಿಕೊಳ್ಳಲಾಗುತ್ತಿದೆ.

ದಸರಾ ಕಳೆಯುತ್ತಿದ್ದಂತೆ ಜೆಡಿಎಸ್ ನಾಯಕರು ಚುನಾವಣಾ ಕಣದಲ್ಲಿ ಬೀಡು ಬಿಟ್ಟು ಪಕ್ಷದ ಪರವಾಗಿ ನಿರಂತರ ಪ್ರಚಾರ ಕೈಗೊಳ್ಳಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿದೆ.

Facebook Comments