ಬೆಳಗಾವಿ, ಬಸವಕಲ್ಯಾಣ, ಮಸ್ಕಿಯಲ್ಲಿ ಬಿರುಸಿನ ಮತದಾನ

ಈ ಸುದ್ದಿಯನ್ನು ಶೇರ್ ಮಾಡಿ

ಮತದಾನ ಪ್ರಮಾಣ :

Voting ಬೆಳಗಾವಿ  ಬಸವಕಲ್ಯಾಣ ಮಸ್ಕಿ
9 ಗಂಟೆ 05.54 % 07.46 % 11.23 %
11 ಗಂಟೆ 12.29 % 19.48 % 19.30 %
1 ಗಂಟೆ 22.49 % 29.00 % 32.51 %
3 ಗಂಟೆ 35.55 % 37.73 % 52.56 %

ಬೆಳಗಾವಿ/ರಾಯಚೂರು, ಏ.17- ಅಲ್ಲಲ್ಲಿ ಮಾತಿನ ಚಕಮಕಿ… ಮತದಾನ ಬಹಿಷ್ಕಾರ… ಸಣ್ಣಪುಟ್ಟ ಗಲಾಟೆ… ಕೊರೊನಾ ಆತಂಕದ ನಡುವೆಯೂ ಬೆಳಗಾವಿ ಲೋಕಸಭೆ ಹಾಗೂ ಮಸ್ಕಿ, ಬಸವ ಕಲ್ಯಾಣ ವಿಧಾನಸಭೆ ಉಪಚುನಾವಣೆಗೆ ನಡೆದ ಮತದಾನ ಭರ್ಜರಿಯಾಗಿತ್ತು. ಇಂದು ಬೆಳಗ್ಗೆ 7 ರಿಂದ ಸಂಜೆ 6 ಗಂಟೆವರೆಗೆ ನಡೆದ ಮತದಾನದಲ್ಲಿ ಬೆಳಗ್ಗೆ ಮತದಾರರು ಉತ್ಸಾಹದಿಂದ ಮತಗಟ್ಟೆಗಳಿಗೆ ಬಂದು ಮತದಾನ ಮಾಡಿದರು. ಮಧ್ಯಾಹ್ನ ಬಿಸಿಲಿನ ಪರಿಣಾಮ ಮತದಾನ ಮಂದವಾಗಿ ಸಾಗಿದರೆ, ಮಧ್ಯಾಹ್ನದ ನಂತರ ಮತ್ತೆ ಮತದಾನ ಬಿರುಸು ಪಡೆಯಿತು.

ಪ್ರವಾಹ ಪೀಡಿತ ರಾಜ್ಯಗಳ ಗ್ರಾಮಗಳನ್ನು ಸ್ಥಳಾಂತರಕ್ಕೆ ಒತ್ತಾಯಿಸಿ ರಾಮದುರ್ಗ ತಾಲ್ಲೂಕಿನ ಹಿರೇತಡಗಿ, ಚಿಕ್ಕತಡಗಿ ಗ್ರಾಮಸ್ಥರು ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ನೆರೆ ಪ್ರವಾಹಕ್ಕೆ ಒಳಗಾಗಿ ಸಾಕಷ್ಟು ತೊಂದರೆಗೀಡಾದರೂ ಯಾವ ರಾಜಕಾರಣಿಗಳೂ ನಮ್ಮ ಬೇಡಿಕೆ ಈಡೇರಿಸಿಲ್ಲ. ಈ ಗ್ರಾಮಗಳನ್ನು ಸ್ಥಳಾಂತರ ಮಾಡುವವರೆಗೆ ನಾವು ಮತದಾನ ಮಾಡುವುದಿಲ್ಲ ಎಂದು ಪಟ್ಟುಹಿಡಿದ ಘಟನೆ ನಡೆಯಿತು.

ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಸ್ಥಳಕ್ಕೆ ಆಗಮಿಸಿ ಜನರ ಮನವೊಲಿಕೆಗೆ ಯತ್ನಿಸಿದರು. ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ತಮ್ಮ ಕುಟುಂಬ ಸದಸ್ಯರೊಂದಿಗೆ ನಗರದ ವಿಶ್ವೇಶ್ವರಯ್ಯ ಸರ್ಕಾರಿ ಶಾಲೆಯಲ್ಲಿರುವ ಮತಗಟ್ಟೆಗೆ ಬಂದು ಮತ ಚಲಾಯಿಸಿದರು. ಬೆಳಗಾವಿ, ದಕ್ಷಿಣ ಬಿಜೆಪಿ ಶಾಸಕ ಅಭಯ್ ಪಾಟೀಲ್ ತಮ್ಮ ಪತ್ನಿಯೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಗೋಕಾಕ್‍ನಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪತ್ನಿ ಜಯಶ್ರೀ ಜಾರಕಿಹೊಳಿ ನ್ಯೂ ಇಂಗ್ಲಿಷ್ ಶಾಲೆಯಲ್ಲಿ ಮತ ಚಲಾಯಿಸಿದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಸದ್ಯ ಅವರು ಹೋಮ್ ಐಸೋಲೇಷನ್‍ನಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಅಂಚೆ ಮತದಾನ ಮಾಡಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಕೊರೊನಾಕ್ಕೆ ತುತ್ತಾದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತಿತರ ಗಣ್ಯರು ಮಧ್ಯಾಹ್ನದ ನಂತರ ಸುರಕ್ಷತೆಯಡಿ ಆಗಮಿಸಿ ಮತ ಚಲಾಯಿಸಿದರು. ಜಿಲ್ಲಾಧಿಕಾರಿ ಡಾ.ಕೆ.ಹರೀಶ್‍ಕುಮಾರ್, ಪೊಲೀಸ್ ಕಮೀಷನರ್ ಡಾ.ಕೆ.ತ್ಯಾಗರಾಜನ್ ಮತದಾನದ ಪ್ರಕ್ರಿಯೆ ಪರಿಶೀಲನೆ ನಡೆಸಿದರು.

ಮಸ್ಕಿ ಉಪಚುನಾವಣೆ ಕ್ಷೇತ್ರ ವ್ಯಾಪ್ತಿಯ ಸಿಂದನೂರು ತಾಲ್ಲೂಕಿನ ತುರುವಿಹಾಳ ಪಟ್ಟಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವನಗೌಡ ತುರುವಿಹಾಳ ಮತದಾನ ಮಾಡಿದರು. ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾಲಾ.ಬಿ, ಬಿಜೆಪಿಯ ಶರಣು ಸಲಗಾರ್, ಜೆಡಿಎಸ್ ಸಯ್ಯದ್ ಖಾದ್ರಿ, ಸ್ವತಂತ್ರ ಅಭ್ಯರ್ಥಿ ಮಲ್ಲಿಕಾರ್ಜುನ ಕೂಬ ತಮ್ಮ ಕುಟುಂಬದವರೊಂದಿಗೆ ಆಗಮಿಸಿದ ಮತ ಚಲಾಯಿಸಿದರು.

ಬೆಳಗಾವಿಯಲ್ಲಿ ಮಧ್ಯಾಹ್ನ 1 ಗಂಟೆ ವೇಳೆಗೆ ಶೇ.22.49ರಷ್ಟು ಮತದಾನವಾಗಿದ್ದರೆ, ಗೋಕಾಕ್ ಕ್ಷೇತ್ರದಲ್ಲಿ ಶೇ.19.17ರಷ್ಟು ಮತದಾನ ದಾಖಲಾಗಿತ್ತು. ಅರಬಾವಿ ಶೇ.21.47, ಬೆಳಗಾವಿ ದಕ್ಷಿಣ ಶೇ.20.28, ಬೆಳಗಾವಿ ಗ್ರಾಮೀಣ ಶೇ.33.27, ಸವದತ್ತಿ 21.81, ರಾಮದುರ್ಗ ಶೇ.18.78ರಷ್ಟು ಮತದಾನವಾಗಿದೆ.

ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲೂ ಬಿರುಸಿನಿಂದ ಮತದಾನ ನಡೆದಿದ್ದು, ಮತದಾರರು ಬೆಳಗ್ಗೆಯೇ ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದರು. ಮಸ್ಕಿ ಕ್ಷೇತ್ರದಲ್ಲೂ ಮತದಾನ ಬಿರುಸು ಪಡೆದಿತ್ತು. ಬಸವ ಕಲ್ಯಾಣದಲ್ಲಿ 10 ಗಂಟೆ ವೇಳೆಗೆ ಮತದಾನದ ಪ್ರಮಾಣ ಶೇ.10ರಷ್ಟಿದ್ದರೆ ಮಸ್ಕಿಯಲ್ಲಿ ಮತದಾನದ ಪ್ರಮಾಣ ಶೇ.15ರಷ್ಟಾಗಿತ್ತು.

ಉತ್ತರ ಕರ್ನಾಟಕ ಭಾಗದಲ್ಲಿ ಬಿಸಿಲಿನ ಪ್ರಮಾಣ ಹೆಚ್ಚಾಗಿರುವುದರಿಂದ ಬೆಳಗ್ಗೆ 12 ಗಂಟೆವರೆಗೆ ಮತಗಟ್ಟೆಗಳಿಗೆ ಮತದಾರರು ಹೆಚ್ಚಾಗಿ ಆಗಮಿಸಿ ಮತ ಚಲಾಯಿಸಿದರು. 12 ಗಂಟೆಯಿಂದ 2 ಗಂಟೆವರೆಗೆ ಮತದಾನದ ಪ್ರಮಾಣ ಕಡಿಮೆ ಇತ್ತು ಮತ್ತು 3 ಗಂಟೆ ಮೇಲೆ ಮತದಾನದ ಪ್ರಮಾಣ ಏರಿಕೆಯಾಗಿದೆ. ಮಸ್ಕಿ ಕ್ಷೇತ್ರದಲ್ಲಿ ಬಿರುಸಿನ ಮತದಾನ ನಡೆದರೆ ಬೆಳಗಾವಿ ಲೋಕಸಭಾ, ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲೂ ಕೂಡ ಮತದಾರರು ಬಿರುಸಿನಿಂದ ಮತ ಚಲಾಯಿಸುತ್ತಿದ್ದುದು ಕಂಡುಬಂತು.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮತಗಟ್ಟೆಯ ಸುತ್ತ ಪೆÇಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ಸ್ಥಳೀಯ ರಾಜಕೀಯ ಮುಖಂಡರಿಗೆ ಕೊರೊನಾ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಕೆಲವರು ಇಂದು ಮತಗಟ್ಟೆಗಳ ಸಮೀಪ ಸುಳಿಯಲಿಲ್ಲ. ಅವರ ಬೆಂಬಲಿಗರು ಮತಗಟ್ಟೆಗಳ ಸಮೀಪ ಆಗಮಿಸಿ ತಮ್ಮ ಬೆಂಬಲಿಗರ ಪರವಾಗಿ ಮತ ಯಾಚಿಸುವಂತೆ ಮನವಿ ಮಾಡುತ್ತಿದ್ದುದು ಕಂಡುಬಂತು.

ಮುಂಬರುವ ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಎಂದೇ ಪರಿಗಣಿಸಲ್ಪಟ್ಟಿರುವ ಈ ಉಪಚುನಾವಣೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯಾಗಿದೆ. ಕಳೆದ ಒಂದು ತಿಂಗಳಿನಿಂದ ಜಿದ್ದಿಗೆ ಬಿದ್ದವರಂತೆ ನಾಯಕರು ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಿದ್ದಾರೆ. ಬೆಳಗಾವಿಯಲ್ಲಿ ಕಾಂಗ್ರೆಸ್, ಬಿಜೆಪಿ ನಡುವೆ ಪೈಪೊಟಿ ಏರ್ಪಟ್ಟರೆ ಬಸವ ಕಲ್ಯಾಣದಲ್ಲಿ ಬಿಜೆಪಿಗೆ ಬಂಡಾಯದ ಭೀತಿ ಎದುರಾಗಿದೆ. ಅಲ್ಲದೆ, ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಪಕ್ಷೇತರರು ಕಣದಲ್ಲಿದ್ದಾರೆ. ಮಸ್ಕಿ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ 16 ಹುರಿಯಾಳುಗಳು, 14 ಪಕ್ಷೇತರರು ಸೇರಿದಂತೆ ಒಟ್ಟು 30 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 8260 ಸೇವಾ ಮತದಾರರನ್ನೊಳಗೊಂಡಂತೆ ಒಟ್ಟು 22,68,038 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದು, ಇವರಿಗಾಗಿ 2559 ಹೆಚ್ಚುವರಿ 638 ಸೇರಿದಂತೆ ಒಟ್ಟು 3197 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಬೆಳಗಾವಿಯಲ್ಲಿ 12,440, ಮಸ್ಕಿ 2407 ಮತ್ತು ಬಸವ ಕಲ್ಯಾಣ ಕ್ಷೇತ್ರದ 2117 ಅಂಗವಿಕಲರಿಗೆ ಬೇಕಾದ ಮತದಾನಕ್ಕೆ ಸವಲತ್ತುಗಳನ್ನು ಒದಗಿಸಲಾಗಿದೆ.

ನೆರವು ನೀಡಲು 6394 ಸ್ವಯಂಸೇವಕರನ್ನು ನಿಯೋಜನೆ ಮಾಡಲಾಗಿದೆ. ಅಲ್ಲದೆ, ಪ್ರತಿ ಒಂದು ಲಕ್ಷ ಮತದಾರರಿಗೆ 2ರಂತೆ ಬೆಳಗಾವಿ 16, ಮಸ್ಕಿ ಹಾಗೂ ಬಸವ ಕಲ್ಯಾಣ ತಲಾ 2ರಂತೆ ಒಟ್ಟು 20 ಸಖಿ ಮತಗಟ್ಟೆಗಳನ್ನು ತೆರೆಯಲಾಗಿದ್ದು, ಈ ಮತಗಟ್ಟೆಗಳಿಗೆ ಮಹಿಳಾ ಮತದಾರರು ಆಗಮಿಸಿ ಮತ ಚಲಾಯಿಸುತ್ತಿದ್ದುದು ಕಂಡುಬಂತು. ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಕಣದಲ್ಲಿ ಅದೃಷ್ಟದ ಪರೀಕ್ಷೆಗಿಳಿದಿರುವ ಅಭ್ಯರ್ಥಿಗಳ ಭವಿಷ್ಯ ಮತಯಂತ್ರ ಸೇರಿದ್ದು, ಮೇ 2ರಂದು ಮತ ಎಣಿಕೆ ನಡೆದು ಅಂದು ಭವಿಷ್ಯ ನಿರ್ಧಾರವಾಗಲಿದೆ.

ಪ್ರಮುಖ ಅಭ್ಯರ್ಥಿಗಳು:
ಬೆಳಗಾವಿ ಲೋಕಸಭೆ: ಕಾಂಗ್ರೆಸ್- ಸತೀಶ್ ಜಾರಕಿಹೊಳಿ, ಬಿಜೆಪಿ- ಮಂಗಲ ಅಂಗಡಿ
ಬಸವ ಕಲ್ಯಾಣ ವಿಧಾನಸಭೆ: ಕಾಂಗ್ರೆಸ್- ಮಾಲಾ ನಾರಾಯಣರಾವ್, ಬಿಜೆಪಿ- ಶರಣು ಸಲಗಾರ್, ಜೆಡಿಎಸ್- ಸಯ್ಯದ್ ಯಾಸ್ರಿಬ್ ಆಲಿಖಾದ್ರಿ, ಪಕ್ಷೇತರ- ಮಲ್ಲಿಕಾರ್ಜುನ ಖೂಬಾ
ಮಸ್ಕಿ ವಿಧಾನಸಭೆ: ಕಾಂಗ್ರೆಸ್- ಬಸವನಗೌಡ ತುರವಿಹಾಳ್, ಬಿಜೆಪಿ- ಪ್ರತಾಪ್‍ಗೌಡ ಪಾಟೀಲ್

Facebook Comments