ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಬಿಡುಗಡೆ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.24- ತೀವ್ರ ಹಣಾಹಣಿಗೆ ಸಾಕ್ಷಿಯಾಗಲಿರುವ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಇಂದು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ. ಮಸ್ಕಿಯಿಂದ ಮಾಜಿ ಶಾಸಕ ಪ್ರತಾಪ್‍ಗೌಡ ಪಾಟೀಲ್, ಬಸವ ಕಲ್ಯಾಣದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ, ಮಾಜಿ ಶಾಸಕ ಖೂಬಾ, ಸೂರ್ಯವಂಶಿ ನಾಗಮಾರಪಲ್ಲಿ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸಚಿವ ಜಗದೀಶ್ ಶೆಟ್ಟರ್, ಮಾಜಿ ಸಚಿವ ದಿ.ಸುರೇಶ್ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಇಲ್ಲವೆ ಅವರ ಪತ್ನಿ ಹೆಸರನ್ನು ಅಂತಿಮಗೊಳಿಸುವ ಸಂಭವವಿದೆ.

ಸಂಜೆ ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಗೆ ರಾಜ್ಯ ಬಿಜೆಪಿ ಘಟಕ ಅಭ್ಯರ್ಥಿಗಳ ಹೆಸರನ್ನು ಶಿಫಾರಸು ಮಾಡಲಿದ್ದು, ಒಂದೆರಡು ದಿನಗಳಲ್ಲಿ ಮೂರೂ ಕ್ಷೇತ್ರಗಳಿಗೆ ಹೆಸರು ಅಂತಿಮಗೊಳ್ಳುವ ನಿರೀಕ್ಷೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾಜ್ಯಘಟಕ ಶಿಫಾರಸು ಮಾಡಿದ ಹೆಸರುಗಳನ್ನೇ ಅಂತಿಮಗೊಳಿಸಬೇಕೆಂಬ ನಿಯಮ ಇಲ್ಲದ ಕಾರಣ ಕೊನೆ ಕ್ಷಣದಲ್ಲಿ ಬಸವ ಕಲ್ಯಾಣ ಮತ್ತು ಬೆಳಗಾವಿಗೆ ಅಚ್ಚರಿಯ ಹೆಸರುಗಳು ಪ್ರಕಟವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಮಸ್ಕಿಯಿಂದ ಪ್ರತಾಪ್‍ಗೌಡ ಪಾಟೀಲ್‍ಗೆ ಟಿಕೆಟ್ ಕೊಡುತ್ತೇವೆಂದು ಮೊದಲೇ ಆಶ್ವಾಸನೆ ಕೊಟ್ಟಿದ್ದರಿಂದ ಈ ಕ್ಷೇತ್ರದ ಬಿಕ್ಕಟ್ಟು ನಿವಾರಣೆಯಾಗಿದೆ. ಆದರೆ, ಬಸವಕಲ್ಯಾಣ ಮತ್ತು ಬೆಳಗಾವಿಯಿಂದ ಯಾರನ್ನು ಕಣಕ್ಕಿಳಿಸಬೇಕೆಂಬುದು ಪಕ್ಷದ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಅನುಕಂಪದ ಲಾಭ ಪಡೆಯಲು ಕಾಂಗ್ರೆಸ್ ಮಾಜಿ ಶಾಸಕ ದಿ.ನಾರಾಯಣರಾವ್ ಅವರ ಪತ್ನಿಗೆ ಟಿಕೆಟ್ ಘೋಷಿಸಿದೆ.

ಹೀಗಾಗಿ ಬಿಜೆಪಿಗೆ ಈ ಕ್ಷೇತ್ರದಿಂದ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸುವ ಅನಿವಾರ್ಯತೆ ಎದುರಾಗಿದೆ. ಮೊನ್ನೆ ನಡೆದ ಕೋರ್ ಕಮಿಟಿ ಸಭೆಯಲ್ಲಿ ಬಸವ ಕಲ್ಯಾಣದಿಂದ ಪಕ್ಷದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಕಣಕ್ಕಿಳಿಸಲು ಗಂಭೀರ ಚಿಂತನೆ ನಡೆಸಿದೆ. ಕ್ಷೇತ್ರದಲ್ಲಿ 40 ಸಾವಿರ ಮರಾಠ ಸಮುದಾಯ ಹಾಗೂ ಲಿಂಗಾಯತ ಮತಗಳು ಅಧಿಕ ಸಂಖ್ಯೆಯಲ್ಲಿರುವುದರಿಂದ ವಿಜಯೇಂದ್ರ ಅಭ್ಯರ್ಥಿಯಾದರೆ ಗೆಲುವು ಸುಲಭವಾಗುತ್ತದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ.

ಪಕ್ಷದ ಘಟಕ ಶಿಫಾರಸು ಮಾಡುವ ಹೆಸರಿನಲ್ಲಿ ವಿಜಯೇಂದ್ರ ಹೆಸರು ಸೇರ್ಪಡೆಯಾದರೂ ಅಚ್ಚರಿ ಪಡಬೇಕಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇದಕ್ಕೆ ವ್ಯತಿರಿಕ್ತ ಎಂಬಂತೆ ಸಿಎಂ ಯಡಿಯೂರಪ್ಪನವರು ತಮ್ಮ ಪುತ್ರ ಕಣಕ್ಕಿಳಿಯುವುದಿಲ್ಲ ಎಂದು ಹೇಳಿರುವುದು ಕುತೂಹಲ ಮೂಡಿಸಿದೆ. ಬೆಳಗಾವಿಯಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಇಲ್ಲವೆ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅಭ್ಯರ್ಥಿಯಾಗುವ ಸಾಧ್ಯತೆ ಇದೆ.

ಬಿಜೆಪಿಯ ಭದ್ರಕೋಟೆಯಾಗಿರುವ ಈ ಕ್ಷೇತ್ರವನ್ನು ಉಳಿಸಿಕೊಳ್ಳಲು ಪಕ್ಷವು ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕಾಗಿದೆ. ಸುರೇಶ್ ಅಂಗಡಿ ನಿಧನದಿಂದ ಉಂಟಾಗಿರುವ ಅನುಕಂಪದ ಅಲೆ ಪಡೆಯಲು ಅವರ ಪತ್ನಿ ಹಾಗೂ ಪುತ್ರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆಯೂ ಕೇಳಿಬಂದಿದೆ. ಇದರ ನಡುವೆ ಹಾಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೆಸರು ಕೂಡ ಚಾಲ್ತಿಯಲ್ಲಿದೆ.

ಆದರೆ, ನಾನು ಕಣಕ್ಕಿಳಿಯುವುದಿಲ್ಲ ಎಂದು ಶೆಟ್ಟರ್ ಹೇಳಿರುವುದರಿಂದ ಈ ಕ್ಷೇತ್ರಕ್ಕೆ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಅಂತಿಮವಾಗಿ ಇಂದು ಪಕ್ಷದ ಘಟಕ ಶಿಫಾರಸು ಮಾಡುವ ಹೆಸರುಗಳು ಚುನಾವಣಾ ಸಮಿತಿ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಎಲ್ಲವೂ ಅವಲಂಬಿತವಾಗಿದೆ.

Facebook Comments