ಶಕ್ತಿ ಪ್ರದರ್ಶಿಸಿ ಅಖಾಡಕ್ಕಿಳಿದ ಅಭ್ಯರ್ಥಿಗಳು, ನಾಮಪತ್ರ ಸಲ್ಲಿಕೆ ಭರಾಟೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.18- ರಾಜ್ಯ ಸರ್ಕಾರಕ್ಕೆ ಅಳಿವು ಉಳಿವಿನ ಪ್ರಶ್ನೆಯಾಗಿರುವ ಹಾಗೂ ಪ್ರತಿಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ 15 ಕ್ಷೇತ್ರಗಳ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿತ್ತು. ಕಾಂಗ್ರೆಸ್, ಜೆಡಿಎಸ್ ಪಕ್ಷಗಳಲ್ಲಿ ಮುಗಿಯದ ಬಂಡಾಯದ ನಡುವೆಯೂ ಕಾರ್ಯಕರ್ತರ ಶಕ್ತಿ ಪ್ರದರ್ಶನ, ಭಾರೀ ಮೆರವಣಿಗೆ, ಬೆಂಬಲಿಗರ ಜೈಕಾರದ ಘೋಷಣೆಗಳ ನಡುವೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ತಮ್ಮ ನಾಯಕರೊಂದಿಗೆ ತೆರಳಿ ಇಂದು ನಾಮಪತ್ರ ಸಲ್ಲಿಸಿದರು. ಇತ್ತ ಬಂಡಾಯಗಾರರನ್ನು ಮನವೋಲಿಸುವ ಕಸರತ್ತು ಕೊನೆಯ ಕ್ಷಣದವರೆಗೂ ಮುಂದುವರೆದಿತ್ತು.

ಡಿಸೆಂಬರ್ 5ರಂದು ನಡೆಯುವ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು ಸಂಜೆ ಮೂರು ಗಂಟೆ ಕಡೆಯ ಕಾಲಾವಕಾಶವಾಗಿತ್ತು. ಹಾಗಾಗಿ ಮೂರು ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರು ಸರದಿ ಸಾಲಿನಲ್ಲಿ ಬಂದು ನಾಮಪತ್ರ ಸಲ್ಲಿಸಿದ್ದರು. ಮುಂಜಾಗೃತಾ ಕ್ರಮವಾಗಿ ನಾಮಪತ್ರ ಸ್ವೀಕರಿಸುವ ಕಚೇರಿಯ ಸುತ್ತ ಮುತ್ತಾ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.

ಜಿದ್ದಾಜಿದ್ದಿನ ಕುರುಕ್ಷೇತ್ರವಾಗಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ನಾಮಪತ್ರ ಸಲ್ಲಿಸುವಾಗ ಖುದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಭಾಗವಹಿಸಿದ್ದರು.  ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಶಾಸಕ ಡಾ.ಕೆ.ಸುಧಾಕರ್ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂ.ಆಂಜಿನಪ್ಪ, ಜೆಡಿಎಸ್‍ನ ಕೆ.ಪಿ.ಬಚ್ಚೇಗೌಡ ಅವರು ಇಂದು ತಮ್ಮ ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದರು.

ಮೈಸೂರು ಜಿಲ್ಲೆ ಹುಣಸೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾದ ಮಾಜಿ ಸಚಿವ ಎಚ್.ವಿಶ್ವನಾಥ್ ಇಂದು ನಾಮಪತ್ರ ಸಲ್ಲಿಸಿದ್ದಾರೆ. ಸಂಸದರಾದ ವಿ.ಶ್ರೀನಿವಾಸ್, ಪ್ರತಾಪ್ ಸಿಂಹ, ಶಾಸಕರಾದ ನಾಗೇಂದ್ರ, ಎಸ್.ಎ.ರಾಮದಾಸ್ ಸೇರಿದಂತೆ ಅನೇಕ ಮುಖಂಡರು ಈ ವೇಳೆ ಹಾಜರಿದ್ದರು. ರಾಜಧಾನಿ ಬೆಂಗಳೂರು ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳು ಇಂದು ಉಮೇದುವಾರಿಕೆ ಸಲ್ಲಿಸುವ ಮೂಲಕ ಉಪಚುನಾವಣೆಗೆ ವಿದ್ಯುಕ್ತವಾಗಿ ರಣಕಹಳೆ ಮೊಳಗಿಸಿದ್ದಾರೆ.

ಪ್ರತಿಷ್ಠೆಯ ಕಣವಾಗಿರುವ ಕೆ.ಆರ್.ಪುರಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಭೈರತಿ ಬಸವರಾಜ್ ಬೃಹತ್ ಮೆರವಣಿಗೆಯಲ್ಲಿ ನಾಮಪತ್ರ ಸಲ್ಲಿಸಿದರು. ಅವರೊಂದಿಗೆ ಸಚಿವರಾದ ಆರ್.ಅಶೋಕ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ, ಬಿಬಿಎಂಪಿ ಸದಸ್ಯರು ಸಾಥ್ ನೀಡಿದರು. ಕಾಂಗ್ರೆಸ್‍ನಿಂದ ವಿಧಾನಪರಿಷತ್ ಸದಸ್ಯ ನಾರಾಯಣ ಸ್ವಾಮಿ ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ಕೆ.ಜೆ.ಜಾರ್ಜ್ ಮತ್ತಿತರಿದ್ದರು. ಜೆಡಿಎಸ್‍ನಿಂದ ಸಿ.ಕೃಷ್ಣಮೂರ್ತಿ ನಾಮಪತ್ರ ಸಲ್ಲಿಸಿದರು.

ಬೆಂಗಳೂರಿನ ಹೃದಯ ಭಾಗದಲ್ಲಿರುವ ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಎಂ.ಶರವಣ ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದರು. ಸಚಿವ ಎಸ್.ಸುರೇಶ್‍ಕುಮಾರ್, ಬಿಬಿಎಂಪಿ ಮೇಯರ್ ಗೌತಮ್ ಕುಮಾರ್, ಮುಖಂಡರಾದ ನಿರ್ಮಲ್‍ಕುಮಾರ್ ಸುರಾನ ಮತ್ತಿತರರು ಹಾಜರಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ನಾಮಪತ್ರ ಸಲ್ಲಿಸುವ ವೇಳೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಮತ್ತಿತರರು ಹಾಜರಿದ್ದರು. ಜೆಡಿಎಸ್‍ನಿಂದ ತನ್ವೀರ್ ಅಹಮದ್ ಅವರುಗಳು ನಾಮಪತ್ರ ಸಲ್ಲಿಸಿದ್ದಾರೆ.

ಮಹಾಲಕ್ಷ್ಮಿಲೇಔಟ್‍ನಿಂದ ಬಿಜೆಪಿ ಅಭ್ಯರ್ಥಿ ಕೆ.ಗೋಪಾಲಯ್ಯ ನಾಮಪತ್ರ ಸಲ್ಲಿಸಿದ್ದಾರೆ. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಚಿವರಾದ ಸುರೇಶ್‍ಕುಮಾರ್, ಸೋಮಣ್ಣ, ಪ್ರಮುಖರಾದ ಸುಬ್ಬ ನರಸಿಂಹ, ಎಂ.ನಾಗರಾಜ್, ಎಸ್.ಹರೀಶ್, ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ಸೇರಿದಂತೆ ಮತ್ತಿತರರು ಹಾಜರಿದ್ದರು. ಕಾಂಗ್ರೆಸ್‍ನಿಂದ ಬಿಬಿಎಂಪಿ ಸದಸ್ಯರೂ ಆಗಿರುವ ಎಂ.ಶಿವರಾಜು ನಾಮಪತ್ರ ಸಲ್ಲಿಸಿಕೆ ವೇಳೆ ಮಾಜಿ ಸಚಿವರಾದ ರಾಮಲಿಂಗಾ ರೆಡ್ಡಿ, ಎಚ್.ಎಂ.ರೇವಣ್ಣ ಮತ್ತಿತರರು ಭಾಗವಹಿಸಿದ್ದರು. ಜೆಡಿಎಸ್ ಅಭ್ಯರ್ಥಿಯಾಗಿ ಗಿರೀಶ್ ಕೆ.ನಾಶಿ ನಾಮಪತ್ರ ಸಲ್ಲಿಸುವ ವೇಳೆ ಮಾಜಿ ಪ್ರಧಾನಿಗಳಾದ ಎಚ್.ಡಿ.ದೇವೇಗೌಡ ಹಾಗೂ ಮತ್ತಿತರ ಮುಖಂಡರು ಹಾಜರಿದ್ದರು.

ಯಶವಂತಪುರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಎಸ್.ಟಿ.ಸೋಮಶೇಖರ್ ನಾಮಪತ್ರ ಸಲ್ಲಿಸಿದರು, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದೆ ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್, ಚಿತ್ರನಟ ಜಗ್ಗೇಶ್, ಶಾಸಕ ಎಂ.ಕೃಷ್ಣಪ್ಪ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಪಾಳ್ಯ ನಾಗರಾಜ್ ನಾಮಪತ್ರ ಸಲ್ಲಿಸುವಾಗ ಮಾಜಿ ಸಚಿವರಾದ ಎಂ.ಕೃಷ್ಣಪ್ಪ ಮತ್ತಿತರ ಮುಖಂಡರು ಹಾಜರಿದ್ದರು.

ಜೆಡಿಎಸ್ ಅಭ್ಯರ್ಥಿಯಾಗಿ ಟಿ.ಎನ್.ಜವರಾಯಿಗೌಡ ನಾಮಪತ್ರ ಸಲ್ಲಿಸಿದರು, ಇದಕ್ಕೂ ಮುನ್ನಾ ನಡೆದ ಬೃಹತ್ ರ್ಯಾಲಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಸಚಿವರಾದ ಸಾ.ರಾ.ಮಹೇಶ್ ಪಕ್ಷದ ಮುಖಂಡರಾದ ಶ್ರೀಕಾಂತ್, ಹನುಮಂತರಾಯಪ್ಪ ಮತ್ತಿತರಿದ್ದರು.

ಹಿರೇಕೆರೂರಿನಲ್ಲಿ ಬಿಜೆಪಿಯಿಂದ ಮಾಜಿ ಶಾಸಕ ಬಿ.ಸಿ.ಪಾಟೀಲ್, ಕಾಂಗ್ರೆಸ್‍ನಿಂದ ಬಿ.ಎಚ್.ಬನ್ನಿಕೋಡ್ ನಾಮಪತ್ರ ಸಲ್ಲಿಸಿದ್ದಾರೆ. ರಾಣೆಬೆನ್ನೂರಿನಿಂದ ಬಿಜೆಪಿಯ ಅರುಣ್‍ಕುಮಾರ್ ಪೂಜಾರ್, ಕಾಂಗ್ರೆಸ್‍ನಿಂದ ಕೆ.ಬಿ.ಕೋಳಿವಾಡ, ಜೆಡಿಎಸ್‍ನಿಂದ ಮಲ್ಲಿಕಾರ್ಜುನ ಹಲಗೇರಿ, ಕಾಗವಾಡದಲ್ಲಿ ಬಿಜೆಪಿಯಿಂದ ಶ್ರೀಮಂತ್ ಪಾಟೀಲ್, ಕಾಂಗ್ರೆಸ್‍ನಿಂದ ಭರಮಗೌಡ ಕಾಗೆ, ಅಥಣಿಯಿಂದ ಬಿಜೆಪಿಯ ಮಹೇಶ್ ಕುಮಟಳ್ಳಿ,

ಕಾಂಗ್ರೆಸ್‍ನ ಜೆ.ಬಿ.ಮಂಗ್ಸೂಳಿ, ಗೋಕಾಕ್‍ನಲ್ಲಿ ಬಿಜೆಪಿಯಿಂದ ರಮೇಶ್ ಜಾರಕಿಹೊಳಿ, ಕಾಂಗ್ರೆಸ್‍ನಿಂದ ಲಖನ್ ಜಾರಕಿಹೊಳಿ, ಜೆಡಿಎಸ್‍ನಿಂದ ಅಶೋಕ ಪೂಜಾರಿ, ವಿಜಯನಗರದಲ್ಲಿ ಬಿಜೆಪಿಯ ಆನಂದ್ ಸಿಂಗ್, ಕಾಂಗ್ರೆಸ್‍ನಿಂದ ವಿ.ವೈ.ಘೋರ್ಪಡೆ, ಜೆಡಿಎಸ್‍ನಿಂದ ಎನ್.ಎಂ.ನಬಿ ನಾಮಪತ್ರ ಸಲ್ಲಿಸಿದ್ದಾರೆ.

ಯಲ್ಲಾಪುರ ಕ್ಷೇತ್ರದಿಂದ ಬಿಜೆಪಿಯ ಶಿವರಾಮ ಹೆಬ್ಬಾರ್, ಕಾಂಗ್ರೆಸ್‍ನಿಂದ ಭೀಮಣ್ಣ ನಾಯ್ಕ್, ಜೆಡಿಎಸ್‍ನಿಂದ ಚೈತ್ರಾಗೌಡ, ಕೆ.ಆರ್.ಪೇಟೆಯಿಂದ ಬಿಜೆಪಿ ನಾರಾಯಣಗೌಡ, ಕಾಂಗ್ರೆಸ್‍ನಿಂದ ಕೆ.ಬಿ.ಚಂದ್ರಶೇಖರ್, ಜೆಡಿಎಸ್‍ನಿಂದ ಬಿ.ಎಲ್.ದೇವರಾಜ್ ಅವರುಗಳು ನಾಮಪತ್ರ ಸಲ್ಲಿಸಿ ಚುನಾವಣಾ ಸ್ಪರ್ಧೆಗೆ ಮುನ್ನುಡಿ ಇಟ್ಟಿದ್ದಾರೆ.

Facebook Comments