ನಾಮಪತ್ರ ವಾಪಸ್ ಕಸರತ್ತು ಅಂತ್ಯ : ಅಖಾಡಕ್ಕಿಳಿದ ನಾಯಕರು, ಕಳೆ ಕಟ್ಟಿದ ಉಪ ಚುನಾವಣೆ ಸಮರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.21- ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗೆ ನಾಮಪತ್ರ ಹಿಂಪಡೆಯುವ ಅವಧಿ ಇಂದಿಗೆ ಮುಕ್ತಾಯವಾಗಿದ್ದು, ಬಂಡಾಯ ಗಾರರ ಮನವೊಲಿಸಲು ನಾಯಕರು ಕೊನೆ ಕ್ಷಣದವರೆಗೆ ಕಸರತ್ತು ನಡೆಸಿದರು. ಕಣದಲ್ಲಿರುವ ಅಭ್ಯರ್ಥಿಗಳು ಈಗಾಗಲೇ ಪ್ರಚಾರ ತೀವ್ರಗೊಳಿಸಿದ್ದು, ಇಂದಿನಿಂದ ಚುನಾವಣಾ ಕಣ ಮತ್ತಷ್ಟು ರಂಗೇರಲಿದೆ. ಪ್ರಚಾರದ ಭರಾಟೆ ತೀವ್ರಗೊಳ್ಳಲಿದೆ.

ಸರ್ಕಾರಕ್ಕೆ ಅಳಿವು-ಉಳಿವಿನ ಪ್ರಶ್ನೆಯಾಗಿರುವ, ಪ್ರತಿಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ಉಪಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಪಣ ತೊಟ್ಟಿರುವ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮುಖಂಡರು ಅಖಾಡದಲ್ಲಿದ್ದು, ತಮ್ಮ ಅಭ್ಯರ್ಥಿಗಳ ಪರ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಸುರೇಶ್ ಅಂಗಡಿ, ಪ್ರಹ್ಲಾದ್ ಜೋಷಿ ಸೇರಿದಂತೆ ಹಲವು ಮುಖಂಡರು ಚುನಾವಣಾ ಅಖಾಡದಲ್ಲಿದ್ದು, ತಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಅಲ್ಲದೆ, ಪರಸ್ಪರ ಆರೋಪ-ಪ್ರತ್ಯಾರೋಪಗಳು ಸುರಿಮಳೆಯಾಗುತ್ತಿವೆ. ಇತ್ತ ಮತದಾರರ ಮನವೊಲಿಕೆಗೆ ಅಭ್ಯರ್ಥಿಗಳು, ಅವರ ಬೆಂಬಲಿಗರು ವಿವಿಧ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಮಂಡ್ಯದಲ್ಲಿ ಔತಣಕ್ಕಾಗಿ ಕೂಪನ್ ವ್ಯವಸ್ಥೆ ಬಳಸಲಾಗುತ್ತಿದೆ.

ವಿವಿಧ ಸಂಘಟನೆಗಳು, ಸಮುದಾಯಗಳು, ಸಂಘ-ಸಂಸ್ಥೆಗಳನ್ನು ಭೇಟಿ ಮಾಡುತ್ತಿರುವ ಅಭ್ಯರ್ಥಿಗಳು ತಮಗೆ ಬೆಂಬಲ ನೀಡಬೇಕೆಂದು ಮನವಿ ಮಾಡುತ್ತಿದ್ದಾರೆ. ಪ್ರತಿದಿನ ಬೆಳಗ್ಗೆಯಿಂದ ಯಿಂದ ರಾತ್ರಿವರೆಗೂ ಪ್ರಚಾರದಲ್ಲಿ ಪಕ್ಷಗಳ ಕಾರ್ಯಕರ್ತರು ತೊಡಗಿಸಿಕೊಂಡಿದ್ದಾರೆ. ಕೆಲವೆಡೆ ರೋಡ್ ಶೋ, ಬಹಿರಂಗ ಸಭೆಗಳ ಮೂಲಕವೂ ಮತಯಾಚನೆ ಮಾಡಲಾಗುತ್ತಿದೆ.

# ಆರದ ಬಂಡಾಯ:
ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಬಂಡಾಯ ಅಭ್ಯರ್ಥಿಯಾಗಿರುವ ಶರತ್ ಬಚ್ಚೇಗೌಡ ಅವರ ಮನವೊಲಿಕೆ ಯತ್ನ ವಿಫಲವಾಗಿದೆ. ಕೊನೆ ಕ್ಷಣದವರೆಗೆ ಬಿಜೆಪಿ ಮುಖಂಡರು ನಡೆಸಿದ ಕಸರತ್ತು ಫಲ ನೀಡಿಲ್ಲ. ಗೋಕಾಕ್‍ನಲ್ಲಿ ಬಿಜೆಪಿ ತೊರೆದು ಜೆಡಿಎಸ್ ಟಿಕೆಟ್ ಪಡೆದು ಕಣಕ್ಕಿಳಿದಿರುವ ಅಶೋಕ್ ಪೂಜಾರಿ ಕಣದಿಂದ ಹಿಂದೆ ಸರಿಯಲು ಸುತಾರಾಂ ಒಪ್ಪಿಲ್ಲ.

ಬಾಲಚಂದ್ರ ಜಾರಕಿಹೊಳಿ, ಸತೀಶ್ ಜಾರಕಿಹೊಳಿ ಮತ್ತಿತರ ಬಿಜೆಪಿ ನಾಯಕರು ಇಂದು ಪೂಜಾರಿ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರಾದರೂ ಫಲ ನೀಡಿಲ್ಲ. ನಾನು ಚುನಾವಣೆಗೆ ಸ್ಪರ್ಧಿಸಲು ಸಿದ್ಧ. ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವುದಿಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಅತ್ತ ಹಿರೇಕೆರೂರಿನಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಕಬ್ಬಿಣ ಕಂತಿನಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಹಾಗಾಗಿ ಅಲ್ಲಿ ಸ್ವತಂತ್ರ ಅಭ್ಯರ್ಥಿ ಅಜನಪ್ಪ ಜಟ್ಟಪ್ಪ ಜೋಡಿಹಳ್ಳಿ ಅವರನ್ನು ಬೆಂಬಲಿಸಲು ಜೆಡಿಎಸ್ ನಿರ್ಧರಿಸಿದೆ.

ಅಥಣಿ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ದಾಶ್ಯಾಳ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ದಾಶ್ಯಾಳ ಅವರು ಡಿಸಿಎಂ ಲಕ್ಷ್ಮಣ ಸವದಿ ಅವರ ಆಪ್ತರಾಗಿದ್ದು, ಅವರೊಂದಿಗೆ ಬಿಜೆಪಿ ನಾಯಕರು ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ಅವರೂ ಕಣದಿಂದ ಹಿಂದೆ ಸರಿಯಲಿದ್ದಾರೆ.  ಜೆಡಿಎಸ್ ಅಭ್ಯರ್ಥಿಗಳು ಹಿಂದೆ ಸರಿದಿರುವುದರಿಂದ ಅಥಣಿಯಲ್ಲಿ ಮಹೇಶ್ ಕುಮಟಳ್ಳಿಗೆ, ಹಿರೇಕೆರೂರಿನಲ್ಲಿ ಬಿ.ಸಿ.ಪಾಟೀಲ್‍ಗೆ ಅನುಕೂಲವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮನವೊಲಿಕೆಗೆ ಬಗ್ಗದ ಪಕ್ಷದ ಬಂಡಾಯಗಾರರನ್ನು ಉಚ್ಛಾಟಿಸಲು ಆಯಾ ಪಕ್ಷಗಳ ನಾಯಕರು ನಿರ್ಧರಿಸಿದ್ದಾರೆ. ಇಂದು ಮಧ್ಯಾಹ್ನದೊಳಗೆ ನಾಮಪತ್ರ ಹಿಂಪಡೆದು ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡದಿದ್ದರೆ ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಆದರೆ, ಇವ್ಯಾವುದಕ್ಕೂ ಕ್ಯಾರೆ ಎನ್ನದೆ ಹಲವೆಡೆ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ರಣಕಹಳೆ ಮೊಳಗಿಸಿದ್ದಾರೆ.

Facebook Comments