ಉಪಚುನಾವಣೆ ಪ್ರಚಾರ ಅಬ್ಬರ, ನಾಯಕರಿಂದ ದಣಿವರಿಯದೆ ಮತದಾರರ ಓಲೈಕೆಗೆ ಕಸರತ್ತು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.22- ರಾಜ್ಯದ ಹದಿನೈದು ಕ್ಷೇತ್ರಗಳ ಉಪಚುನಾವಣೆಯ ಮತ ಪ್ರಚಾರದ ಅಬ್ಬರ ಜೋರಾಗಿದೆ. ಚುನಾವಣಾ ನೀತಿ ಸಂಹಿತೆ ಬಿಗಿಯಾಗಿರುವ ಹಿನ್ನೆಲೆಯಲ್ಲಿ ಕಟೌಟ್, ಬ್ಯಾನರ್‍ಗಳು, ಮೈಕಾಸುರನ ಹಾವಳಿ ತಗ್ಗಿದ್ದು, ಮನೆ ಮನೆಗೆ ತೆರಳಿ ಮತದಾರರ ಮನವೊಲಿಸುವ ಕಾರ್ಯ ಜೋರಾಗಿದೆ. ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಹಳ್ಳಿಹಳ್ಳಿಗಳಲ್ಲಿ, ಗಲ್ಲಿ ಗಲ್ಲಿಗಳಲ್ಲಿ ಮತ ಯಾಚನೆ ಮಾಡುತ್ತಿದ್ದಾರೆ. ಅಭ್ಯರ್ಥಿಗಳ ಪರವಾಗಿ ನಾಯಕರು ರೋಡ್‍ಶೋ ಮೆರವಣಿಗೆ ಮೂಲಕ ಅಬ್ಬರದ ಪ್ರಚಾರ ಶುರುವಿಟ್ಟುಕೊಂಡಿದ್ದಾರೆ.

ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ಪಕ್ಷಗಳಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆಯಾಗಿದ್ದು, ಪ್ರತಿಪಕ್ಷದ ಕಾಂಗ್ರೆಸ್, ಜೆಡಿಎಸ್‍ಗೆ ಈ ಉಪಚುನಾವಣೆ ಪ್ರತಿಷ್ಠೆಯ ಕಣವಾಗಿರುವ ಹಿನ್ನೆಲೆಯಲ್ಲಿ ಮೂರೂ ಪಕ್ಷಗಳು ಜಿದ್ದಾಜಿದ್ದಿನಿಂದ ಪ್ರಚಾರ ನಡೆಸುತ್ತಿವೆ. ಪ್ರಚಾರದ ಕಣ ದಿನದಿಂದ ದಿನಕ್ಕೆ ರಂಗೇರತೊಡಗಿದೆ.

ಮಹಾಲಕ್ಷ್ಮಿಲೇಔಟ್, ಯಶವಂತಪುರ, ಕೆ.ಆರ್.ಪುರ, ಶಿವಾಜಿನಗರ, ಚಿಕ್ಕಬಳ್ಳಾಪುರ, ಕೆ.ಆರ್.ಪೇಟೆ, ಹುಣಸೂರು, ರಾಣೆಬೆನ್ನೂರು, ಹೊಸಕೋಟೆ, ಹಿರೇಕೆರೂರು, ಯಲ್ಲಾಪುರ, ಅಥಣಿ, ಕಾಗವಾಡ, ವಿಜಯನಗರ ಕ್ಷೇತ್ರಗಳಲ್ಲಿ ಉಪಚುನಾವಣೆ ಗೆಲ್ಲಲು ಮೂರೂ ಪಕ್ಷಗಳು ಕಾರ್ಯತಂತ್ರ ರೂಪಿಸಿವೆ. ಜಾತಿವಾರು ಸಭೆಗಳ ಮೂಲಕ ಸಮುದಾಯದವರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿವೆ. ಪಕ್ಷದ ಮುಖಂಡರು, ಸಮುದಾಯದ ನಾಯಕರೊಂದಿಗೆ ಚರ್ಚಿಸಿ ತಮಗೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ದೇವಾಲಯ, ಕಲ್ಯಾಣ ಮಂಟಪಗಳಲ್ಲಿ ರಾಜಕೀಯ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಸ್ತ್ರೀ ಸಂಘಟನೆಗಳ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು ಮುಂತಾದವರ ಬಳಿ ಅಭ್ಯರ್ಥಿಗಳು ಎಡತಾಕುತ್ತಿದ್ದಾರೆ. ಮತದಾರರ ಮನವೊಲಿಕೆಗೆ ನಾನಾ ಕಸರತ್ತುಗಳನ್ನು ಅಭ್ಯರ್ಥಿಗಳು ಮಾಡುತ್ತಿದ್ದು, ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಚುನಾವಣಾ ಪ್ರಚಾರದ ಕಣ ರಂಗೇರುತ್ತಿದೆ.

ನಾಳೆ ಅಥಣಿ ಮತ್ತು ಕಾಗವಾಡದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಚಾರ ಕಾರ್ಯ ನಡೆಸಲಿದ್ದಾರೆ. ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರು ಕೆ.ಆರ್.ಪೇಟೆ ಹುಣಸೂರಿನಲ್ಲಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕೇಂದ್ರ ಸಚಿವರಾದ ಡಿ.ವಿ.ಸದಾನಂದಗೌಡ, ಸುರೇಶ್ ಅಂಗಡಿ, ಪ್ರಹ್ಲಾದ್‍ಜೋಷಿ ಸೇರಿದಂತೆ ಅನೇಕ ಮುಖಂಡರು ಚುನಾವಣಾ ಪ್ರಚಾರದ ಅಖಾಡದಲ್ಲಿದ್ದು, ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.

ಪರಸ್ಪರ ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ. ಪ್ರಸ್ತುತ ಉಪಚುನಾವಣೆಯಲ್ಲಿ ಅನರ್ಹಗೊಂಡವರು ಬಿಜೆಪಿಯಿಂದ ಸ್ಪರ್ಧಿಸಿರುವುದರಿಂದ , ಬಿಜೆಪಿಯಲ್ಲಿದ್ದ ಹಲವರು ಕಾಂಗ್ರೆಸ್‍ಹಾಗೂ ಜೆಡಿಎಸ್‍ನಿಂದ ಸ್ಪರ್ಧಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳಿಂದ ಉಪಚುನಾವಣಾ ಕಣ ತೀವ್ರ ಕುತೂಹಲ ಕೆರಳಿಸಿದೆ.
ಡಿ.5ರಂದು ನಡೆಯಲಿರುವ ಚುನಾವಣೆಯಲ್ಲಿಮತದಾರ ಯಾರ ಕೈ ಹಿಡಿಯಲಿದ್ದಾರೆ ಎಂಬುದನ್ನು ಕಾದುನೋಡಬೇಕು.

Facebook Comments