ಏರುತ್ತಿದೆ ಚುನಾವಣೆ ಕಾವು, ಪ್ರತಿದಿನ ಬದಲಾಗುತ್ತಿವೆ ರಾಜಕೀಯ ಪಕ್ಷಗಳ ಗೇಮ್ ಪ್ಲಾನ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.26- ರಾಜ್ಯದ 15 ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣಾ ಪ್ರಚಾರದ ಕಣ ತೀವ್ರ ಕುತೂಹಲ ಕೆರಳಿಸಿದ್ದು, ಗೆಲುವಿಗಾಗಿ ರಾಜಕೀಯ ಪಕ್ಷಗಳು ದಿನೇ ದಿನೇ ತಮ್ಮ ತಂತ್ರಗಾರಿಕೆ ಬದಲಿಸುತ್ತಿವೆ. ಬಹಿರಂಗ ಪ್ರಚಾಕ್ಕೆ ಕೇವಲ ಆರು ದಿನಗಳು ಬಾಕಿ ಇದ್ದು, ಮೊದಲ ಹಂತದ ಪ್ರಚಾರ ಮುಗಿಸಿರುವ ರಾಜಕೀಯ ಪಕ್ಷಗಳ ಮುಖಂಡರು ಈಗ ಎರಡನೆ ಹಂತದ ಪ್ರಚಾರಕ್ಕೆ ಕಾಲಿಟ್ಟಿದ್ದಾರೆ.

15 ಕ್ಷೇತ್ರಗಳಲ್ಲೂ ಚುನಾವಣೆ ಯದ್ದೇ ಮಾತುಕತೆ. ಜಾತಿವಾರು ಸಭೆಗಳು,ಸೋಲು-ಗೆಲುವಿನ ಲೆಕ್ಕಾಚಾರಗಳು ನಡೆಯುತ್ತಿವೆ. ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ನಾಯಕರು ಅಬ್ಬರದ ಪ್ರಚಾರ, ಬಹಿರಂಗ ಸಭೆ, ಬೃಹತ್ ರ್ಯಾಲಿಗಳ ಮೂಲಕ ಮತದಾರರನ್ನು ಸೆಳೆ ಯುವ ಪ್ರಯತ್ನ ಮಾಡುತ್ತಿದ್ದಾರೆ.  ಪಕ್ಷದ ಕಾರ್ಯಕರ್ತರು ಮನೆಮನೆಗೆ ತೆರಳಿ ಮತದಾರರನ್ನು ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಮಹಾಲಕ್ಷ್ಮಿ ಲೇಔಟ್, ಯಶವಂತಪುರ, ಹೊಸಕೋಟೆ, ಕೆಆರ್ ಪುರ, ಕೆಆರ್ ಪೇಟೆ, ಹುಣಸೂರು, ರಾಣೆಬೆನ್ನೂರು, ಹಿರೇಕೆರೂರು, ಅಥಣಿ, ಗೋಕಾಕ್, ಕಾಗವಾಡ, ಯಲ್ಲಾಪುರ, ಶಿವಾಜಿನಗರ, ವಿಜಯನಗರ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರವಾಗಿ ನಾಯಕರು ಇಂದು ಮಿಂಚಿನ ಸಂಚಾರ ನಡೆಸಿ ಅಬ್ಬರದ ಪ್ರಚಾರ ಮಾಡಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಚಿಕ್ಕಬಳ್ಳಾಪುರ, ಯಶವಂತಪುರ, ಶಿವಾಜಿನಗರ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಪರವಾಗಿ ರೋಡ್‍ಶೋ, ಬಹಿರಂಗ ಸಭೆಗಳ ಮೂಲಕ ಮತಯಾಚನೆ ಮಾಡಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿದರೆ, ಮಾಜಿ ಪ್ರಧಾನಿ ದೇವೇಗೌಡರು ಯಶವಂತಪುರದಲ್ಲಿ ರೋಡ್‍ಶೋ ಮೂಲಕ ತಮ್ಮ ಪಕ್ಷದ ಅಭ್ಯರ್ಥಿ ಪರ ಮತ ಯಾಚಿಸಿದರು.

ಸಿದ್ದರಾಮಯ್ಯನವರು ಇಡೀ ದಿನ ರಾಣೆಬೆನ್ನೂರಿನ ವಿವಿಧೆಡೆ ಸಂಚರಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಕೆ.ಬಿ.ಕೋಳಿವಾಡ ಪರ ಪ್ರಚಾರ ನಡೆಸಿದರು. 15 ಕ್ಷೇತ್ರಗಳ ಉಪಚುನಾವಣೆ, ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಅಳಿವು-ಉಳಿವಿನ ಪ್ರಶ್ನೆಯಾಗಿದ್ದರೆ, ಪ್ರತಿಪಕ್ಷ ಜೆಡಿಎಸ್-ಕಾಂಗ್ರೆಸ್‍ಗೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ.

ಜಿದ್ದಾಜಿದ್ದಿಗೆ ಬಿದ್ದಿರುವ ಮೂರೂ ಪಕ್ಷಗಳು ಉಪಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ದಿನಕ್ಕೊಂದು ಕಾರ್ಯತಂತ್ರ ರೂಪಿಸುತ್ತಿವೆ. ಆರೋಪ-ಪ್ರತ್ಯಾರೋಪಗಳ ಸುರಿ ಮಳೆಯಾಗುತ್ತಿದೆ. ಹೇಗಾದರೂ ಮಾಡಿ ಚುನಾವಣೆಯನ್ನು ಗೆಲ್ಲಲೇ ಬೇಕು ಎಂದು ಹಠಕ್ಕೆ ಬಿದ್ದಿರುವ ನಾಯಕರು ತಮ್ಮ ಸಮುದಾಯಗಳ ಮುಖಂಡರ ಮೂಲಕ ಆಯಾ ಸಮುದಾಯಗಳ ಮತ ಸೆಳೆಯುವ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

ಜಾತಿವಾರು ಮುಖಂಡರ ಸಭೆ, ಸ್ತ್ರೀ ಶಕ್ತಿ ಸಂಘಟನೆಗಳೊಂದಿಗೆ ಸಮಾಲೋಚನೆ, ವಿವಿಧ ಕನ್ನಡ ಪರ ಸಂಘಟನೆಗಳು, ವಿವಿಧ ಸಂಘ-ಸಂಸ್ಥೆಗಳ ಮುಖಂಡ ರೊಂದಿಗೆ ಸಭೆ ನಡೆಸಿರುವ ಅಭ್ಯರ್ಥಿಗಳು ಮತದಾರರ ಮ£ ವೊಲಿಸುವ ಪ್ರಯತ್ನದಲ್ಲಿದ್ದಾರೆ. ಒಟ್ಟಾರೆ ದಿನದಿಂದ ದಿನಕ್ಕೆ ಉಪಚುನಾವಣಾ ಪ್ರಚಾರದ ಕಣ ರಂಗೇರುತ್ತಿದೆ.

Facebook Comments