ಬಹಿರಂಗ ಪ್ರಚಾರಕ್ಕೆ ಮೂರೇ ದಿನ ಬಾಕಿ, ಆರೋಪ-ಪ್ರತ್ಯಾರೋಪ ನಡುವೆ ಅಬ್ಬರದ ಪ್ರಚಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.30- ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮೂರು ದಿನಗಳು ಮಾತ್ರ ಬಾಕಿ ಉಳಿದಿವೆ. ಅಭ್ಯರ್ಥಿಗಳ ಗೆಲುವಿಗಾಗಿ ನಾಯಕರು ಬೆವರಿಳಿಸುತ್ತಿದ್ದಾರೆ. ಪ್ರಚಾರದ ಅಬ್ಬರ ಮುಗಿಲು ಮುಟ್ಟಿದ್ದು, ನಾಯಕರ ಪರಸ್ಪರ ಆರೋಪ-ಪ್ರತ್ಯಾರೋಪಗಳು ವೈಯಕ್ತಿಕ ನಿಂದನೆ ಮಟ್ಟಕ್ಕೆ ಇಳಿದಿವೆ. ಜಾತಿವಾರು ಮತ ಸೆಳೆಯಲು ಸಮುದಾಯದ ಮಠಾಧೀಶರ ಮೊರೆ ಹೋಗುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ತಮ್ಮ ನಾಯಕರು ಹಾಗೂ ಆಪ್ತರೊಂದಿಗೆ ವಿವಿಧ ಮಠಾಧೀಶರನ್ನು ಭೇಟಿ ಮಾಡಿ ಚುನಾವಣೆಯಲ್ಲಿ ನಮಗೆ ನೆರವು ನೀಡಬೇಕೆಂದು ಮನವಿ ಮಾಡುತ್ತಿದ್ದಾರೆ.

ಚುನಾವಣಾ ದಿನಾಂಕ ಹತ್ತಿರವಾಗುತ್ತಿದ್ದಂತೆ ಸ್ಥಳೀಯ ಮಟ್ಟದ ಮುಖಂಡರನ್ನು ಸೆಳೆಯುವ ಕಾರ್ಯ ಜೋರಾಗಿದೆ. ಗ್ರಾಪಂ, ಜಿಪಂ, ತಾಪಂ, ನಗರಸಭೆ ಸದಸ್ಯರು ಬೇರೆ ಬೇರೆ ಪಕ್ಷಗಳ ಜತೆ ಗುರುತಿಸಿಕೊಂಡವರನ್ನು ತಮ್ಮತ್ತ ಸೆಳೆಯುವ ಪ್ರಯತ್ನವನ್ನು ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಮಾಡುತ್ತಿದ್ದಾರೆ. ಚುನಾವಣೆಯಲ್ಲಿ ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದಿರುವ ಅಭ್ಯರ್ಥಿಗಳು ನಾನಾ ಕಸರತ್ತುಗಳಲ್ಲಿ ತೊಡಗಿದ್ದಾರೆ.

ನಾಯಕರು ಭಾರೀ ಬಹಿರಂಗ ಸಭೆ, ರೋಡ್ ಶೋ, ರ್ಯಾಲಿಗಳ ಮೂಲಕ ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸುತ್ತಿದ್ದಾರೆ. ಬೆಂಬಲಿಗರು ಮನೆ ಮನೆಗೆ ತೆರಳಿ ಕರಪತ್ರಗಳನ್ನು ನೀಡಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡುತ್ತಿದ್ದಾರೆ. ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಹೊಸಕೋಟೆ, ಕೆಆರ್ ಪುರ, ಕೆಆರ್ ಪೇಟೆ, ಹುಣಸೂರು, ವಿಜಯನಗರ, ಗೋಕಾಕ್, ಅಥಣಿ, ಕಾಗವಾಡ, ಚಿಕ್ಕಬಳ್ಳಾಪುರ, ಶಿವಾಜಿನಗರ, ರಾಣೆಬೆನ್ನೂರು, ಹಿರೇಕೆರೂರು, ಯಲ್ಲಾಪುರ ಕ್ಷೇತ್ರಗಳ ಉಪಚುನಾವಣೆಗೆ ಭಾರೀ ಅಬ್ಬರದ ಪ್ರಚಾರ ನಡೆದಿದ್ದು, ಅನರ್ಹ ಶಾಸಕರಿಗೆ ವಿವಿಧೆಡೆ ಗ್ರಾಮಸ್ಥರಿಂದ ಬಹಿಷ್ಕಾರದ ಕಹಿ ಅನುಭವ ಕಂಡುಬಂತು.

ಬೆಳಗಾವಿಯ ಗೋಕಾಕ್, ಅಥಣಿ, ಕಾಗವಾಡದಲ್ಲಿ ಬಿಜೆಪಿ ಅಭ್ಯರ್ಥಿಗಳ ವಿರುದ್ಧ ಪ್ರವಾಹಪೀಡಿತ ಸಂತ್ರಸ್ತರು ಪ್ರಚಾರ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಯಶವಂತಪುರ, ಶಿವಾಜಿನಗರ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ರೋಡ್ ಶೋ ಮೂಲಕ ಮತಪ್ರಚಾರ ನಡೆಸಿದರೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥಣಿ, ಕಾಗವಾಡದಲ್ಲಿ ಪ್ರಚಾರದಲ್ಲಿ ಬ್ಯುಜಿಯಾಗಿದ್ದರು.

ಮಾಜಿ ಪ್ರಧಾನಿ ದೇವೇಗೌಡರು ಚಿಕ್ಕಬಳ್ಳಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಪರವಾಗಿ ಭಾರೀ ಪ್ರಚಾರ ನಡೆಸಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕಾಗವಾಡ, ಗೋಕಾಕ್ ಕ್ಷೇತ್ರದಲ್ಲಿ ಸಂಚರಿಸಿ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು. ಹಿರೇಕೆರೂರಿನಲ್ಲಿ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಕೈಗೊಂಡರು.

ಬಿಜೆಪಿ ಪಕ್ಷಕ್ಕೆ ಅಳಿವು-ಉಳಿವಿನ ಪ್ರಶ್ನೆಯಾಗಿರುವ ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್‍ಗೆ ಪ್ರತಿಷ್ಠೆಯ ಕಣವಾಗಿರುವ ಉಪಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಜಿದ್ದಿಗೆ ಬಿದ್ದಿರುವ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ಮುಖಂಡರ ಆರೋಪ-ಪ್ರತ್ಯಾರೋಪಗಳು ಮುಗಿಲು ಮುಟ್ಟಿವೆ. ಅಭಿವೃದ್ಧಿ ಕಾರ್ಯ, ಸಿದ್ಧಾಂತಗಳಿಗಿಂತ ವೈಯಕ್ತಿಕ ನಿಂದನೆಗಳೇ ಹೆಚ್ಚಾಗಿ ಕೇಳಿಬರುತ್ತಿವೆ.
ಡಿಸೆಂಬರ್ 5ರಂದು ಉಪಚುನಾವಣೆ ನಡೆಯಲಿದ್ದು, ಮತದಾರ ಯಾರ ಪರ ಒಲವು ವ್ಯಕ್ತಪಡಿಸಿದ್ದಾನೆ ಎಂಬುದು ಡಿ.9ರ ಫಲಿತಾಂಶದಲ್ಲಿ ಗೊತ್ತಾಗಲಿದೆ.

 

Facebook Comments