ಮತದಾನಕ್ಕೆ ಇನ್ನೆರಡು ದಿನ ಬಾಕಿ, ಗುಟ್ಟು ಬಿಟ್ಟುಕೊಡದ ಮತದಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.2- ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ನಾಳೆ ಕಡೆಯ ದಿನ. ಭಾರೀ ಬಹಿರಂಗ ಸಭೆಗಳು, ರೋಡ್ ಶೋ, ರ್ಯಾಲಿಗಳ ಮೂಲಕ ಮತದಾರರನ್ನು ಸೆಳೆಯುವ ಕಸರತ್ತು ನಿರಂತರ 12 ದಿನಗಳಿಂದ ನಡೆಯುತ್ತಿದ್ದರೂ ಮತದಾರರ ಒಲವು-ನಿಲುವು ಏನೆಂಬುದು ಗೊತ್ತಾಗುತ್ತಿಲ್ಲ.  ಮತದಾರರ ಮನಗೆಲ್ಲಲು 15 ಕ್ಷೇತ್ರಗಳ ಉಪ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ನಾನಾ ಕಸರತ್ತುಗಳನ್ನು ನಡೆಸುತ್ತಿದ್ದಾರೆ.

ಡಿ.5ರಂದು ನಡೆಯಲಿರುವ ಉಪಚುನಾವಣೆಗೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ನಾಯಕರು ತಮ್ಮ ಅಭ್ಯರ್ಥಿಗಳ ಪರ ಭಾರೀ ಬಹಿರಂಗ ಸಭೆ, ರೋಡ್ ಶೋಗಳ ಮೂಲಕ ಶಕ್ತಿ ಪ್ರದರ್ಶನದಲ್ಲಿ ತೊಡಗಿದ್ದಾರೆ.  ಬಿಜೆಪಿ ಸರ್ಕಾರದ ಅಳಿವು, ಉಳಿವಿನ ಪ್ರಶ್ನೆಯಾಗಿರುವ ಉಪಚುನಾವಣೆಗೆ ಎಲ್ಲಿಲ್ಲದ ಮಹತ್ವ ಬಂದಿದೆ. ಹೀಗಾಗಿ ಪ್ರತಿಪಕ್ಷ ಕಾಂಗ್ರೆಸ್-ಜೆಡಿಎಸ್ ಕೂಡ ಬಿಜೆಪಿ ಸೋತರೆ ಮತ್ತೊಂದು ಮೈತ್ರಿ ದಾಳ ಉರುಳಿಸಬಹುದು ಎಂಬ ಹಿನ್ನೆಲೆಯಲ್ಲಿ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಅಬ್ಬರದ ಪ್ರಚಾರದಲ್ಲಿ ತೊಡಗಿದೆ.

ಕಾಂಗ್ರೆಸ್-ಜೆಡಿಎಸ್‍ನ ದಿಗ್ಗಜರು ಮೈ ಕೊಡವಿ ಎದ್ದು ನಿಂತಿದ್ದಾರೆ. ಕಳೆದೆರಡು ದಿನಗಳಿಂದ ಭಾರೀ ಪ್ರಚಾರದಲ್ಲಿ ತೊಡಗಿದ್ದು, ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಅಖಾಡಕಿದಿದ್ದಾರೆ. ಹಲವು ಅಭ್ಯರ್ಥಿಗಳು ಹಾಗೂ ಅವರ ಆಪ್ತರು, ಮಠಮಂದಿರ, ಮಸೀದಿಗಳಿಗೆ ಭೇಟಿ ನೀಡುತ್ತಿದ್ದಾರೆ. ಜ್ಯೋತಿಷಿಗಳ ಮೊರೆ ಹೋಗುತ್ತಿದ್ದಾರೆ. ಲಿಂಗಾಯಿತ, ಒಕ್ಕಲಿಗ, ಕುರುಬ ಸೇರಿದಂತೆ ಪ್ರಮುಖ ಸಮುದಾಯದ ಮತಗಳನ್ನು ಸೆಳೆಯಲು ವಿವಿಧ ಪ್ರಭಾವಿ ಮುಖಂಡರು ಚುನಾವಣಾ ಕಣದಲ್ಲಿ ಅಹರ್ನಿಷಿ ಕೆಲಸ ಮಾಡುತ್ತಿದ್ದಾರೆ. ಆಯಾ ಕ್ಷೇತ್ರಗಳಲ್ಲಿ ಇರುವ ಸಮುದಾಯದ ಮುಖಂಡರನ್ನು ಅವರ ನಿವಾಸಗಳಲ್ಲಿ ಭೇಟಿ ಮಾಡಿ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ಬಿಜೆಪಿ ಪಕ್ಷದ ನಾಯಕರು ಶತಾಯಗತಾಯವಾಗಿ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲೇಬೇಕೆಂದು ಹಠಕ್ಕೆ ಬಿದ್ದು ದಿನಕ್ಕೊಂದು ಕಾರ್ಯತಂತ್ರಗಳನ್ನು ರೂಪಿಸಿ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದ್ದಾರೆ. ಯಶವಂತಪುರ, ಕೆ.ಆರ್.ಪುರ, ಶಿವಾಜಿನಗರ, ಹೊಸಕೋಟೆ, ಚಿಕ್ಕಬಳ್ಳಾಪುರ, ಹುಣಸೂರು, ರಾಣೆಬೆನ್ನೂರು, ಹಿರೇಕೆರೂರು, ಯಲ್ಲಾಪುರ, ಅಥಣಿ, ಗೋಕಾಕ್, ಕಾಗವಾಡ, ವಿಜಯನಗರ ಕ್ಷೇತ್ರಗಳಲ್ಲಿ ಭರ್ಜರಿ ಮತ ಪ್ರಚಾರ ನಡೆದಿದೆ.

ಇಂದು ಕೂಡ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಕೇಂದ್ರ ಸಚಿವರಾದ ಸದಾನಂದಗೌಡ, ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ, ಸಚಿವರಾದ ಸುರೇಶ್‍ಕುಮಾರ್, ಸೋಮಣ್ಣ, ಆರ್.ಅಶೋಕ್, ಬಸವರಾಜ್ ಬೊಮ್ಮಾಯಿ, ಶ್ರೀರಾಮುಲು ಸೇರಿದಂತೆ ಘಟಾನುಘಟಿಗಳು ಚುನಾವಣಾ ಅಖಾಡದಲ್ಲಿ ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರು.

ಇತ್ತ ಅಭ್ಯರ್ಥಿಗಳ ಬೆಂಬಲಿಗರು ಎಂದಿನಂತೆ ಗಲ್ಲಿಗಲ್ಲಿಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಮತಯಾಚನೆ ಮಾಡಿದರು. ಮನೆ ಮನೆಗೆ ತೆರಳಿ ತಮ್ಮ ಅಭ್ಯರ್ಥಿಗಳನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದದು ಕಂಡುಬಂತು.  ಬೆಳಗ್ಗೆ 6ಕ್ಕೆ ಸಿದ್ದರಾಗುವಾಗ ಅಭ್ಯರ್ಥಿಗಳು, ಪಾರ್ಕ್, ಹೋಟೆಲ್‍ಗಳು ಬಸ್ ನಿಲ್ದಾಣಗಳು, ಆಟೋ ಸ್ಟ್ಯಾಂಡ್, ಹಲವು ಪ್ರದೇಶಗಳಲ್ಲಿ ತೆರಳಿ ಮತಯಾಚನೆ ಮಾಡುತ್ತಿದ್ದಾರೆ.

ಈಗಾಗಲೇ ಬಹುತೇಕ ಕ್ಷೇತ್ರಗಳಲ್ಲಿ ಭಾರೀ ಬಹಿರಂಗ ಸಭೆ, ರೋಡ್ ಶೋ ಕಾರ್ಯಕ್ರಮಗಳನ್ನು ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ಮುಗಿಸಿವೆ. ಹೈವೋಲ್ಟೇಜ್ ಕ್ಷೇತ್ರಗಳಾದ ಹೊಸಕೋಟೆ, ಯಶವಂತಪುರ, ಮಹಾಲಕ್ಷ್ಮಿಲೇಔಟ್, ಕೆ.ಆರ್.ಪುರಂ, ವಿಜಯನಗರ, ಗೋಕಾಕ್, ಹುಣಸೂರು, ಕೆ.ಆರ್.ಪೇಟೆ ಮುಂತಾದ ಕಡೆ ಇಂದು ಮತ್ತು ನಾಳೆ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ದಿಗ್ಗಜರು ಭಾರೀ ಪ್ರಚಾರ ನಡೆಸಲಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಕಾಗವಾಡ, ಅಥಣಿ ಕ್ಷೇತ್ರದಲ್ಲಿ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರೆ, ಮಾಜಿ ಪ್ರಧಾನಿ ದೇವೇಗೌಡರು ಗೋಕಾಕ್‍ನಲ್ಲಿ ಜೆಡಿಎಸ್ ಪರ ಪ್ರಚಾರ ಕೈಗೊಂಡರು.  ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿದರು. ನಂತರ ಕೆ.ಆರ್.ಪೇಟೆಯಲ್ಲಿ ತಮ್ಮ ಅಭ್ಯರ್ಥಿ ಪರ ಮತಯಾಚನೆ ನಡೆಸಿದರು. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೂಡ ಚಿಕ್ಕಬಳ್ಳಾಪುರದಲ್ಲಿ ಭಾರೀ ರ್ಯಾಲಿ, ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.

Facebook Comments