ಉಪಚುನಾಣೆಗೆ ಸಮರ್ಥ ಅಭ್ಯರ್ಥಿಗಳ ಹುಡುಕಾಟದಲ್ಲಿ ಬಿಜೆಪಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಫೆ.27- ಯಾವುದೇ ಸಂದರ್ಭದಲ್ಲೂ ಕೇಂದ್ರ ಚುನಾವಣಾ ಆಯೋಗ ನಾಲ್ಕು ಕ್ಷೇತ್ರಗಳ ಉಪಚುನಾಣೆಗೆ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ಇರುವುದರಿಂದ ಬಿಜೆಪಿ ಅಭ್ಯರ್ಥಿಗಳ ಹುಡುಕಾಟಕ್ಕೆ ಮುಂದಾಗಿದೆ. ಕರ್ನಾಟಕದ ಈ ನಾಲ್ಕು ಕ್ಷೇತ್ರಗಳ ಉಪಚುನಾವಣೆಗೆ ಪ್ರತ್ಯೇಕವಾಗಿ ಅಧಿಸೂಚನೆ ಹೊರಡಿಸುವುದಾಗಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಸುನೀಲ್ ಅರೋರಾ ಹೇಳಿದ್ದಾರೆ.

ಹೀಗಾಗಿ ಯಾವುದೇ ಕ್ಷಣದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ, ಬಸವಕಲ್ಯಾಣ ಹಾಗೂ ಸಿಂಧಗಿ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ದಿನಾಂಕ ಘೋಷಣೆಯಾಗುವುದು ನಿಚ್ಚಳವಾಗಿದೆ. ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಗೆಲ್ಲುವ ಕುದುರೆಗಳನ್ನೇ ಕಣಕ್ಕಿಳಿಸಲು ಮುಂದಾಗಿದ್ದು, ಸಾಕಷ್ಟು ಅಳೆದುತೂಗಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುವತ್ತ ಮುಖಂಡರು ಕಾರ್ಯೋನ್ಮುಖರಾಗಿದ್ದಾರೆ.

ನಾಲ್ಕು ಕ್ಷೇತ್ರಗಳೂ ಕೂಡ ಜಿದ್ದಾಜಿದ್ದಿನಿಂದ ಕೂಡಿರುವ ಕಾರಣ ಯಾರಿಗೆ ಟಿಕೆಟ್ ನೀಡಬೇಕು ಎಂಬುದೇ ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ. ಒಂದೊಂದು ಕ್ಷೇತ್ರಕ್ಕೂ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಿರುವುದರಿಂದ ಟಿಕೆಟ್ ವಂಚಿತರ ಬಂಡಾಯ ತಣಿಸುವುದೇ ಕಗ್ಗಂಟಾಗಿದೆ.

ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಒಂದು ಡಜನ್ ಆಕಾಂಕ್ಷಿಗಳಿದ್ದಾರೆ. ಸುರೇಶ್ ಅಂಗಡಿಯವರ ಪುತ್ರಿ, ಸಹೋದರ, ವಿಧಾನಪರಿಷತ್ ಮುಖ್ಯ ಸಚೇತಕ ಮಹಾಂತೇಶ್ ಕವಟಗಿಮಠ, ಮಾಜಿ ಶಾಸಕ ಸಂಜಯ್ ಪಾಟೀಲ್ ಸೇರಿದಂತೆ ಅನೇಕರು ಕಣ್ಣಿಟ್ಟಿದ್ದಾರೆ. ಇದರ ನಡುವೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೆಸರು ಕೂಡ ಕೇಳಿಬರುತ್ತಿದೆ.

ಜಿಲ್ಲೆಯಲ್ಲಿ ಲಿಂಗಾಯಿತ ಮತಗಳೇ ನಿರ್ಣಾಯಕವಾಗಿದ್ದು, ಅದೇ ಸಮುದಾಯವನ್ನು ಪ್ರತಿನಿಧಿಸುವ ಶೆಟ್ಟರ್ ಅವರನ್ನು ಕಣಕ್ಕಿಳಿಸಬೇಕೆಂಬ ಮಾತುಗಳು ಕೇಳಿಬರುತ್ತಿವೆ. ಈಗಾಗಲೇ ಒಂದು ಬಾರಿ ಅವರು ಮುಖ್ಯಮಂತ್ರಿಯಾಗಿರುವುದರಿಂದ ಕೇಂದ್ರದಲ್ಲಿ ಸಂಪುಟ ದರ್ಜೆಯ ಸಚಿವ ಸ್ಥಾನ ಸಿಗಬಹುದೆಂಬ ಲೆಕ್ಕಾಚಾರವಿದೆ. ಆದರೆ ಇದಕ್ಕೆ ಶೆಟ್ಟರ್ ಸುತಾರಾಂ ಒಪ್ಪುತ್ತಿಲ್ಲ.
ಒಂದು ವೇಳೆ ಅನುಕಂಪ ಕೈ ಹಿಡಿಯಲಿ ಎಂದು ವರಿಷ್ಠರು ಲೆಕ್ಕಾಚಾರ ಹಾಕಿದರೆ ಸುರೇಶ್ ಅಂಗಡಿ ಪುತ್ರಿ ಕಣಕ್ಕಿಳಿಯಬಹುದು.

ಕಾಂಗ್ರೆಸ್‍ಗೆ ರಾಜೀನಾಮೆ ನೀಡಿದ್ದರಿಂದ ತೆರವಾಗಿರುವ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಪ್ರತಾಪ್‍ಗೌಡ ಪಾಟೀಲ್ ಅಭ್ಯರ್ಥಿಯಾಗುವುದು ಖಚಿತ. ಕೊಟ್ಟ ಮಾತಿನಂತೆ ಅವರಿಗೆ ಟಿಕೆಟ್ ನೀಡಬೇಕಾಗಿರುವುದರಿಂದ ಈ ಕ್ಷೇತ್ರದಲ್ಲಿ ಯಾವುದೇ ಬಿಕ್ಕಟ್ಟು ಇಲ್ಲ. ಶಾಸಕ ಎಂ.ಸಿ.ಮನಗೂಳಿ ನಿಧನದಿಂದ ತೆರವಾಗಿರುವ ಸಿಂಧಗಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಲ್ಲಿ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಮಾಜಿ ಶಾಸಕ ರಮೇಶ್ ಬೂಸನೂರು ಕಣ್ಣಿಟ್ಟಿದ್ದಾರೆ.

ಎಲ್ಲಾ ಕ್ಷೇತ್ರಗಳಿಗಿಂತಲೂ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಭಾರೀ ಜಿದ್ದಾಜಿದ್ದಿ ಏರ್ಪಟ್ಟಿದೆ. ಮಾಜಿ ಶಾಸಕ ಮಲ್ಲಿಕಾರ್ಜುನ ಕೂಬಾ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಈ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ, ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಹೆಸರುಗಳು ಕೂಡ ಕೇಳಿಬರುತ್ತಿದೆ.

ಶಾಸಕ ನಾರಾಯಣರಾವ್ ಅವರಿಂದ ತೆರವಾಗಿರುವ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲೂ ಬಿಜೆಪಿಯ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಈಗಾಗಲೇ ಸ್ವತಃ ಸಿಎಂ ಅವರೇ ಸ್ಪಷ್ಟಪಡಿಸಿರುವಂತೆ ತಮ್ಮ ಪುತ್ರ ವಿಜಯೇಂದ್ರ ಬಸವ ಕಲ್ಯಾಣದಿಂದ ಕಣಕ್ಕಿಳಿಯುವುದಿಲ್ಲ ಎಂದು ಹೇಳುವ ಮೂಲಕ ವದಂತಿಗಳಿಗೆ ತೆರೆ ಎಳೆದಿದ್ದಾರೆ. ರಾಜ್ಯದಲ್ಲಿ ಹೊತ್ತಿಕೊಂಡಿರುವ ಪಂಚಮಸಾಲಿ ಮೀಸಲಾತಿ ವಿವಾದವನ್ನು ಹತ್ತಿಕ್ಕಲು ಬಸವಕಲ್ಯಾಣ ಇಲ್ಲವೇ ಸಿಂಧಗಿಯಿಂದ ಲಕ್ಷ್ಮಣ್ ಸವದಿಯನ್ನು ಕಣಕ್ಕಿಳಿಸುವ ಲೆಕ್ಕಾಚಾರವೂ ಬಿಜೆಪಿಯಲ್ಲಿದೆ.

ಅಂತಿಮವಾಗಿ ಚುನಾವಣಾ ಆಯೋಗ ದಿನಾಂಕವನ್ನು ಘೋಷಣೆ ಮಾಡಿದ ನಂತರ ಅಭ್ಯರ್ಥಿಗಳ ಆಯ್ಕೆ ಕಸರತ್ತಿಗೆ ಚಾಲನೆ ದೊರಕಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Facebook Comments