ಸಂಸದೀಯ ಮಂಡಳಿ ಸಭೆ ನಂತರ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸ- ರಾಜ್ಯದ 15 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿರುವ ಜೆಡಿಎಸ್ ಗುರುವಾರ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವ ಸಾಧ್ಯತೆ ಇದೆ. ಅಂದು ಜೆಪಿ ಭವನದಲ್ಲಿ ಪಕ್ಷದ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ಆ ಸಭೆಯಲ್ಲಿ 15 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಂಡು ಸರ್ಕಾರ ನಡೆಸಿದ್ದಲ್ಲದೆ ಕಳೆದ ಲೋಕಸಭೆ ಚುನಾವಣೆಯಲ್ಲೂ ಕಾಂಗ್ರೆಸ್‍ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾಗಿತ್ತು. ಚುನಾವಣೆಯಲ್ಲಿ ಭಾರೀ ಹಿನ್ನಡೆ ಉಂಟಾದ ನಂತರ ಸರ್ಕಾರವೂ ಪತನವಾಯಿತು. ಈಗ ಕಾಂಗ್ರೆಸ್ ಸಹವಾಸವೇ ಬೇಡ ಎಂಬ ನಿರ್ಧಾರಕ್ಕೆ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಬಂದಿದ್ದು, ಮಿನಿ ಮಹಾಸಮರವೆಂದೇ ಪರಿಗಣಿತವಾಗಿರುವ ವಿಧಾನಸಭೆ ಉಪಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ನಿರ್ಧರಿಸಲಾಗಿದೆ.

ನಿನ್ನೆ ಯಶವಂತಪುರ, ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರಗಳ ಮುಖಂಡರ ಸಭೆಯನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದಿಂದ ಕಳೆದ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಜವರಾಯಿಗೌಡ ಅವರನ್ನೇ ಈ ಬಾರಿಯೂ ಕಣಕ್ಕಿಳಿಸಲು ನಿರ್ಧರಿಸಲಾಗಿದ್ದು, ಬಹುತೇಕ ಅವರೇ ಅಭ್ಯರ್ಥಿಯಾಗಲಿದ್ದಾರೆ ಎಂದು ಪಕ್ಷದ ಮೂಲಗಳು ಸ್ಪಷ್ಟಪಡಿಸಿವೆ.

ಇಂದು ಕೆಆರ್ ಪುರ ಹಾಗೂ ಶಿವಾಜಿನಗರ ವಿಧಾನಸಭಾ ಕ್ಷೇತ್ರಗಳ ಸಭೆಯನ್ನು ಎಚ್.ಡಿ.ಕುಮಾರಸ್ವಾಮಿ ಹಾಗೂ ಪಕ್ಷದ ಮುಖಂಡರು ನಡೆಸಿದ್ದು, ಸ್ಥಳೀಯ ಮುಖಂಡರ ಅಭಿಪ್ರಾಯ ಪಡೆದಿದ್ದಾರೆ. ಶಿವಾಜಿನಗರ ಕ್ಷೇತ್ರದಿಂದ ಸ್ಪರ್ಧಿಸಲು ತನ್ವೀರ್ ಅಹಮ್ಮದ್, ಇಮ್ರಾನ್ ಪಾಷ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಆಕಾಂಕ್ಷಿಗಳಾಗಿದ್ದಾರೆ.

ಕೆಆರ್ ಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಚೇನಹಳ್ಳಿ ಕೃಷ್ಣಮೂರ್ತಿ ಸೇರಿದಂತೆ ಹಲವರು ಸ್ಪರ್ಧಾಕಾಂಕ್ಷಿಗಳಾಗಿದ್ದಾರೆ. ಈಗಾಗಲೇ ಪಕ್ಷದ ವರಿಷ್ಠರು ಘೋಷಿಸಿರುವಂತೆ ಉಪಚುನಾವಣೆಯಲ್ಲಿ ಸ್ಥಳೀಯರಿಗೆ ಟಿಕೆಟ್ ನೀಡುವ ಸಾಧ್ಯತೆಗಳೇ ಹೆಚ್ಚಾಗಿವೆ.

ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಕಳೆದ ಮೂರು ತಿಂಗಳಿನಿಂದಲೂ ವಿವಿಧ ಘಟಕಗಳು, ಜಿಲ್ಲಾವಾರು ಹಾಗೂ ವಿಧಾನಸಭಾ ಕ್ಷೇತ್ರವಾರು ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ, ಪಕ್ಷ ಸಂಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಅದರ ಆಧಾರದ ಮೇಲೆ ಉಪಚುನಾವಣೆ ಘೋಷಣೆಯಾಗಿರುವ 15 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

Facebook Comments