ಉಪಚುನಾವಣೆ ಗೆಲ್ಲಲು ಮೂರು ಪಕ್ಷಗಳಿಂದ ಕೊನೆ ಕ್ಷಣದ ಕಸರತ್ತು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.28- ಹಿಂದೆಂದೂ ಕಾಣದ ವೈಯಕ್ತಿಕ ಆರೋಪ, ಪ್ರತ್ಯಾರೋಪಗಳಿಗೆ ಸಾಕ್ಷಿಯಾಗಿರುವ ಹಾನಗಲ್ ಮತ್ತು ಸಿಂಧಗಿ ವಿಧಾನಸಭೆ ಉಪ ಚುನಾವಣೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದ ಬೆನ್ನಲ್ಲೇ ತಂತ್ರ-ಪ್ರತಿತಂತ್ರ ರೂಪಿಸುವಲ್ಲಿ ನಾಯಕರು ಮಗ್ನರಾಗಿದ್ದಾರೆ. ಮತದಾನಕ್ಕೆ ಇನ್ನು 72 ಗಂಟೆ ಬಾಕಿ ಇರುವುದರಿಂದ ದೂರದಲ್ಲೇ ಕುಳಿತಿರುವ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ಪ್ರಮುಖ ಪಕ್ಷಗಳ ನಾಯಕರು ಮತದಾರರ ಓಲೈಕೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.

ಕ್ಷೇತ್ರದಲ್ಲಿ ಮತದಾನದ ಹಕ್ಕು ಹೊಂದಿಲ್ಲದವರು ನಿನ್ನೆಯೇ ಕ್ಷೇತ್ರ ಬಿಟ್ಟು ಹೊರಡಬೇಕೆಂದು ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ಕೊಟ್ಟಿತ್ತು. ಇದೀಗ ರಹಸ್ಯ ಸ್ಥಳದಲ್ಲಿ ಕುಳಿತಿರುವ ಮುಖಂಡರು ತಮ್ಮ ತಮ್ಮ ಅಭ್ಯರ್ಥಿಗಳ ಗೆಲುವಿಗೆ ಕತ್ತಲ ಕಾರ್ಯಾರಣೆಯನ್ನು ಹೇಗೆ ನಡೆಸಬೇಕು ಎಂಬುದರ ಬಗ್ಗೆ ತೊಡಗಿದ್ದಾರೆ.

ಈ ಮೂರು ದಿನಗಳಲ್ಲಿ ನಡೆಯುವ ಕಾರ್ಯಾಚರಣೆಯು ಅಭ್ಯರ್ಥಿಯ ಸೋಲು-ಗೆಲುವಿನ ಭವಿಷ್ಯವನ್ನು ನಿರ್ಧರಿಸುವುದರಿಂದ ನಂಬಿಕಸ್ಥ ಮುಖಂಡರು ಯಾರಿಗೂ ಗೊತ್ತಾಗದಂತೆ ಗುಪ್ತ ಸ್ಥಳದಲ್ಲಿ ಕುಳಿತು ತಮ್ಮ ತಮ್ಮ ಬೆಂಬಲಿಗರ ಮೂಲಕ ಮತದಾರರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡುತ್ತಿದ್ದಾರೆ.

ಚುನಾವಣಾ ಆಯೋಗ ಚಾಪೆ ಕೆಳಗೆ ನುಸುಳಿದರೆ ರಂಗೋಲಿ ಕೆಳಗೆ ನುಸುಳುವ ಕರಗತವು ರಾಜಕೀಯ ನೇತಾರರಿಗೆ ಗೊತ್ತಿಲ್ಲದಿದ್ದೇನಲ್ಲ. ಹೋಟೆಲ್, ರೆಸಾರ್ಟ್, ಲಾಡ್ಜ್ ಮತ್ತಿತರ ಕಡೆ ಅಕಾರಿಗಳು ದಾಳಿ ನಡೆಸಬಹುದೆಂಬ ಭೀತಿಯಿಂದಾಗಿ ಪ್ರಮುಖರು ತೋಟದ ಮನೆಗಳಲ್ಲಿ ವಾಸ್ತವ್ಯ ಹೂಡಿ ಚುನಾವಣೆ ನಿಭಾಯಿಸುತ್ತಿದ್ದಾರೆ.

ಹಾನಗಲ್‍ನಲ್ಲಿ ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನವರ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ನಂಬಿಕಸ್ಥ ಇಬ್ಬರು ಹಾಗೂ ಬೆಂಗಳೂರಿಗೆ ಹೊಂದಿಕೊಂಡಿರುವ ಮತ್ತೊಬ್ಬ ಪ್ರಬಾವಿ ಸಚಿವರಿಗೆ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಳೆದ ಹತ್ತು ದಿನಗಳಿಂದ ಹಾನಗಲ್‍ನಲ್ಲೇ ಠಿಕಾಣಿ ಹೂಡಿರುವ ಈ ಸಚಿವರು, ಬೆಂಗಳೂರಿನಿಂದ ಅತ್ಯಂತ ನಂಬಿಕಸ್ಥ 500 ಮಂದಿಯನ್ನು ಸಹ ಕರೆದೊಯ್ದಿದ್ದಾರೆ. ಈಗಾಗಲೇ ಮತದಾರರಿಗೆ ಒಂದು ಸುತ್ತಿನಲ್ಲಿ ಏನೇನು ತಲುಪಿಸಬೇಕೋ ಅವೆಲ್ಲವನ್ನೂ ಸಹ ತಲುಪಿಸಲಾಗಿದೆ. ನಾಳೆ ರಾತ್ರಿ ವೇಳೆಗೆ ಎರಡು ಸುತ್ತಿನ ವ್ಯವಸ್ಥೆ ಮಾಡಲು ಹಾನಗಲ್ ಸಮೀಪಕ್ಕೆ ಹೊಂದಿಕೊಂಡಿರುವ ಅಕ್ಕಪಕ್ಕದ ಊರುಗಳಲ್ಲೇ ಉಳಿದುಕೊಂಡಿದ್ದಾರೆ.

ಬಿಜೆಪಿಗೆ ಸಡ್ಡು ಹೊಡೆಯುತ್ತಿರುವ ಕಾಂಗ್ರೆಸ್ ಕತ್ತಲ ಕಾರ್ಯಚರಣೆಯಿಂದ ಹಿಂದೆ ಸರಿದಿಲ್ಲ. ಅವರು ದೊಡ್ಡ ಮಟ್ಟದಲ್ಲಿ ಹಂಚಿದರೆ ನಾವು ಸಣ್ಣ ಪ್ರಮಾಣದಲ್ಲಾದರೂ ಮತದಾರರಿಗೆ ತಲುಪಿಸಬೇಕೆಂದು ಹಠಕ್ಕೆ ಬಿದ್ದಿದ್ದು, ಪ್ರಮುಖ 100 ಮಂದಿಯನ್ನು ಕಾರ್ಯಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಒಂದು ಮೂಲದ ಪ್ರಕಾರ ಖಾಸಗಿ ವಾಹನದಲ್ಲಿ ಹಣ ತೆಗೆದುಕೊಂಡು ಹೋಗುವುದು ತಾಪತ್ರಯ ಎಂಬ ಕಾರಣಕ್ಕಾಗಿ ಆಡಳಿತಾರೂಢ ಬಿಜೆಪಿ ಸರ್ಕಾರಿ ವಾಹನಗಳಲ್ಲೇ ಮತದಾರರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡುತ್ತದೆ ಎಂಬ ಆರೋಪಗಳು ಕೇಳಿ ಬಂದಿವೆ. ಬಿಜೆಪಿ, ಕಾಂಗ್ರೆಸ್‍ಗೆ ಹೋಲಿಸಿದರೆ ಜೆಡಿಎಸ್ ಪ್ರಚಾರದಲ್ಲೂ ಹಿಂದೆ ಬಿದ್ದಿದ್ದು, ಮತದಾರರ ಓಲೈಕೆಯಲ್ಲೂ ಅಂತಹ ಅಬ್ಬರ ಕಾಣಿಸಿಕೊಂಡಿಲ್ಲ. ಇತ್ತ ಸಿಂಧಗಿಯಲ್ಲೂ ಕೂಡ ಬಿಜೆಪಿ ಇದೇ ತಂತ್ರವನ್ನು ಅನುಸರಿಸುತ್ತಿದೆ.

ಬಿಜೆಪಿ ಅಭ್ಯರ್ಥಿ ರಮೇಶ್‍ಭೂಸನೂರ ಪರವಾಗಿ ಕಳೆದ 15 ದಿನಗಳಿಂದ ಕ್ಷೇತ್ರದಲ್ಲೇ ಠಿಕಾಣಿ ಹೂಡಿರುವ ಬೆಂಗಳೂರು ಮೂಲದ ಮತ್ತೋರ್ವ ಸಚಿವರು ಹಾಗೂ ಉತ್ತರ ಕರ್ನಾಟಕ ಮೂದಲ ಇನ್ನೊಬ್ಬ ಸಚಿವರ ಜತೆಗೆ ಶಾಸಕರು ಎರಡು ದಿನಗಳ ಕಾರ್ಯಾಚರಣೆಯನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸುತ್ತಿದ್ದಾರೆ.

ಇಲ್ಲಿಯೂ ಕೂಡ ಬಿಜೆಪಿಗೆ ಪಕ್ಷ ನಿಷ್ಠೆಯ ಕಾರ್ಯಕರ್ತರು ಮತದಾರರ ಮನೆ ಮನೆಗೆ ಏನೇನು ಅಗತ್ಯವಿದೆಯೋ ಅವೆಲ್ಲವನ್ನು ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲೂ ಪ್ರತಿತಂತ್ರ ರೂಪಿಸಲಾಗುತ್ತಿದೆ.

# ಎಲ್ಲರಲ್ಲೂ ಗೆಲ್ಲುವ ವಿಶ್ವಾಸ:
ಪ್ರತಿಷ್ಠಿತ ಹಾನಗಲ್-ಸಿಂಧಗಿ ಉಪ ಚುನಾವಣೆ ಬಹಿರಂಗ ಪ್ರಚಾರ ಅಂತ್ಯಗೊಂಡಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತ ಪಡಿಸಿದ್ದಾರೆ. ಸಿಂಧಗಿ ಸುತ್ತ ಮುತ್ತಲಿನ ಇತ್ತೀಚಿನ ಟ್ರೆಂಡ್ ನೋಡಿದರೇ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಸಂಭವನೀಯ ಮತಗಳ ವಿಭಜನೆಯಿಂದ ಕೇಸರಿ ಪಕ್ಷ ಲಾಭ ಪಡೆಯುವ ಸಾಧ್ಯತೆಯಿದೆ.

ಪೆಟ್ರೋಲ್, ಡೀಸೆಲ್, ಎಲ್‍ಪಿಜಿ ಅಡುಗೆ ಅನಿಲ ಮತ್ತು ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿರುವ ಕಾಂಗ್ರೆಸ್ ನಾಯಕತ್ವವು ಸಿಂದಗಿಯಲ್ಲಿ ಕನಿಷ್ಠ 15,000 ಮತಗಳಿಂದ ಜಯಗಳಿಸಲಿದ್ದೇವೆ ಎಂಬ ಆತ್ಮ ವಿಶ್ವಾಸದಲ್ಲಿದೆ.

ಸಿಂಧÀಗಿ ಮತ್ತು ಹಾನಗಲ್‍ನಲ್ಲಿ ಪ್ರಚಾರಕ್ಕೆ ಬೊಮ್ಮಾಯಿ ಮತ್ತು ಯಡಿಯೂರಪ್ಪ ನೇತೃತ್ವದ ಹೆಚ್ಚಿನ ನಾಯಕರು ಮತ್ತು ಮಂತ್ರಿಗಳ ಪ್ರಚಾರದಿಂದಾಗಿ ಬಿಜೆಪಿ, ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಸುವ ವಿಶ್ವಾಸದಲ್ಲಿದೆ. ರಾಜ್ಯದಲ್ಲಿ ಬಿಜೆಪಿ ಸುನಾಮಿ ಎದ್ದಿದೆ ಎಂದು ಬೊಮ್ಮಾಯಿ ಹೇಳಿದರೆ, ತಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಬೇಸತ್ತಿರುವುದರಿಂದ ಬಿಜೆಪಿಗೆ ಸೋಲು ಖಚಿತ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಭವಿಷ್ಯ ನುಡಿದಿದ್ದರೂ, ಬಿಜೆಪಿ ನಾಯಕರು ಪಕ್ಷಕ್ಕೆ ಸ್ಪಷ್ಟವಾದ ಗೆಲುವು ಸಿಗಲಿದೆ ಎಂಬ ವಿಶ್ವಾಸದಲ್ಲಿದ್ದಾರೆ.

Facebook Comments