ಸಚಿವಾಕಾಂಕ್ಷಿಗಳಿಗೆ ನಿದ್ದೆ ಕೆಡಿಸಿದ ಸಿಎಂ ಪುತ್ರ ವಿಜಯೇಂದ್ರ ದಿಡೀರ್ ದೆಹಲಿ ಪ್ರವಾಸ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.22- ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ತೂಗುಯ್ಯಾಲೆಯಾಗಿರುವಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ದಿಢೀರನೆ ನವದೆಹಲಿಗೆ ತೆರಳಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ರಾತ್ರಿ ಏಕಾಏಕಿ ನವದೆಹಲಿಗೆ ತೆರಳಿರುವ ವಿಜಯೇಂದ್ರ ಇಂದು ಪಕ್ಷದ ಕೆಲವು ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

ಭೇಟಿ ಮಾಡಿ ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎ.ಪಿ.ನಡ್ಡಾ , ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿದಂತೆ ಮತ್ತಿತರ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ತಮಿಳುನಾಡು ಪ್ರವಾಸದಲ್ಲಿರುವುದರಿಂದ ಅವರನ್ನು ಭೇಟಿಯಾಗುವ ಸಾಧ್ಯತೆಗಳು ಕ್ಷೀಣಿಸಿದ್ದು , ವಿಜಯೇಂದ್ರ ಯಾವ ಕಾರಣಕ್ಕೆ ನವದೆಹಲಿಗೆ ತೆರಳಿದ್ದಾರೆ ಎಂಬುದು ಬಿಜೆಪಿ ವಲಯದಲ್ಲಿ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸೂಚನೆ ಮೇರೆಗೆ ವರಿಷ್ಠರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಇಲ್ಲವೇ ಪುನರ್ ರಚನೆಗೆ ಹಸಿರು ನಿಶಾನೆ ಪಡೆಯಲು ತೆರಳಿದ್ದಾರೆಯೇ ಎಂಬ ಪ್ರಶ್ನೆಯೂ ಇದರಲ್ಲಿದೆ. ಇತ್ತೀಚೆಗೆ ವಿಜಯೇಂದ್ರ ರಾಷ್ಟ್ರೀಯ ನಾಯಕರನ್ನು ನೇರವಾಗಿಯೇ ಭೇಟಿಯಾಗಿ ಮಾತುಕತೆ ನಡೆಸುವ ಸಂಪರ್ಕ ಇಟ್ಟುಕೊಂಡಿರುವುದರಿಂದ ತಂದೆಯ ಸೂಚನೆಯ ಮೇರೆಗೆ ದೆಹಲಿಗೆ ತೆರಳಿರಬಹುದೆಂಬ ಪುಕಾರುಗಳು ಕೇಳಿ ಬರುತ್ತಿವೆ.

ಕಳೆದ ಬುಧವಾರ ನವದೆಹಲಿಗೆ ತೆರಳಿದ್ದ ಬಿಎಸ್‍ವೈ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನು ಭೇಟಿಯಾಗಿ ಸಂಪುಟ ವಿಸ್ತರಣೆ ಕುರಿತಂತೆ ಮಾತುಕತೆ ನಡೆಸಿದ್ದರು. ಮೂರು ದಿನದೊಳಗೆ ಪಕ್ಷದ ನಾಯಕರ ಜತೆ ಸಂಪುಟ ಪುನರ್‍ರಚನೆ ಅಥವಾ ವಿಸ್ತರಣೆ ಕುರಿತಂತೆ ಮಾತುಕತೆ ನಡೆಸಿ ಅಂತಿಮ ನಿರ್ಧಾರ ತಿಳಿಸುವುದಾಗಿ ಹೇಳಿದ್ದರು.

ಆದರೆ ಬಿಎಸ್‍ವೈ ಅವರು ದೆಹಲಿಯಿಂದ ಹಿಂತಿರುಗಿ ನಾಲ್ಕು ದಿನವಾದರೂ ವರಿಷ್ಠರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಇನ್ನೊಂದೆಡೆ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ಸಂಪುಟ ರಚನೆಯೋ ಅಥವಾ ವಿಸ್ತರಣೆಯೋ ಎಂದು ಯಾವುದಾದರೊಂದು ಮಾಡಬೇಕೆಂದು ಪಟ್ಟು ಹಿಡಿದಿದ್ದಾರೆ.

ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಕೆಲವು ಶಾಸಕರು , ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಪ್ರತ್ಯೇಕವಾಗಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಸಂಪುಟದಲ್ಲಿ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದೆ ಇರುವ ಅಲಕ್ಷ್ಯ ಸಚಿವರನ್ನು ಸಂಪುಟದಿಂದ ಕೈ ಬಿಟ್ಟು ನಮಗೊಂದು ಅವಕಾಶ ನೀಡಬೇಕೆಂದು ಆಕಾಂಕ್ಷಿಗಳು ಹೇಳಿಕೆ ನೀಡಿದ್ದಾರೆ.

ಹೀಗೆ ಒತ್ತಡಕ್ಕೆ ಸಿಲುಕಿರುವ ಯಡಿಯೂರಪ್ಪ ವರಿಷ್ಠರಿಂದ ಯಾವುದೇ ಸ್ಪಷ್ಟ ಸೂಚನೆ ಸಿಗದಿರುವ ಕಾರಣ ಇಕ್ಕಟ್ಟಿಗೆ ಸಿಲುಕಿಸಿದ್ದು, ಪುತ್ರನನ್ನು ವರಿಷ್ಠರ ಬಳಿ ಸಂಧಾನಕ್ಕಾಗಿ ಇಲ್ಲವೇ ರಾಯಭಾರಿಯಾಗಿ ಕಳುಹಿಸಿರಬಹುದು ಎಂಬ ಮಾತು ಕೇಳಿ ಬರುತ್ತವೆ.

Facebook Comments