ಶಿರಾದಲ್ಲಿ ಬಿಜೆಪಿ ಗೆಲುವಿನ ಕೇಕೆ, ಮತ್ತಷ್ಟು ‘ಸ್ಟ್ರಾಂಗ್’ ವಿಜಯೇಂದ್ರ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.10-ಈವರೆಗೂ ಠೇವಣಿ ಪಡೆಯುವಲ್ಲಿ ವಿಫಲವಾಗಿದ್ದ ಬಿಜೆಪಿ ಶಿರಾ ಉಪಚುನಾವಣೆಯಲ್ಲಿ ಮೊದಲ ಬಾರಿಗೆ ಗೆಲುವಿನ ರಣಕೇಕೆ ಹಾಕಿರುವುದರಿಂದ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದಾರೆ.  ಬಿಜೆಪಿ ಎಲ್ಲೆಲ್ಲಿ ಯಾವ ರಾಜ್ಯಗಳಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ಇತ್ತೋ ಅಂತಹ ಕಡೆ ರಣತಂತ್ರ ರೂಪಿಸಿ ಗೆಲುವು ಸಾಧಿಸಿ ತೋರಿಸಿದ್ದು ಹಾಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ.

ಹೀಗಾಗಿ ಪಕ್ಷದಲ್ಲಿ ಅಮಿತ್ ಷಾ ಅವರನ್ನು ಕಾರ್ಯಕರ್ತರು ಅಭಿಮಾನದಿಂದ ಚುನಾವಣಾ ಚಾಣುಕ್ಯ ಎಂದು ಕರೆಯುವುದುಂಟು. ಈಗ ಬಿ.ವೈ.ವಿಜಯೇಂದ್ರ ಕೂಡ ಬಿಜೆಪಿ ಖಾತೆಯನ್ನೇ ತೆರೆಯದ ಕಡೆ ಕಮಲ ಅರಳುವಂತೆ ಮಾಡಿದ್ದಾರೆ.  ಜೆಡಿಎಸ್‍ನ ಭದ್ರಕೋಟೆ ಎನ್ನಿಸಿದ್ದ ಮಂಡ್ಯ ಜಿಲ್ಲೆ ಕೆ.ಆರ್.ಪೇಟೆಯಲ್ಲಿ ಮೊದಲ ಬಾರಿಗೆ ಪಕ್ಷದ ಉಸ್ತುವಾರಿ ವಹಿಸಿ ಹಾಲಿ ತೋಟಗಾರಿಕಾ ಸಚಿವ ನಾರಾಯಣಗೌಡ ಅವರನ್ನು ಗೆಲ್ಲಿಸಿದ ಶ್ರೇಯಸ್ಸು ವಿಜಯೇಂದ್ರ ಅವರಿಗೆ ಸಲ್ಲುತ್ತದೆ.

ಇದೇ ಮಾದರಿಯನ್ನು ಮುಂದಿಟ್ಟುಕೊಂಡು ಕೇವಲ 20 ದಿನದಲ್ಲೇ ಇಡೀ ಕ್ಷೇತ್ರದ ಚಿತ್ರಣವನ್ನೇ ಬದಲಾಯಿಸಿದರು. ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್.ಅಶ್ವಥ್ ನಾರಾಯಣ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಶಾಸಕ ಪ್ರೀತಂ ಗೌಡ, ಮಾಜಿ ಶಾಸಕ ಸುರೇಶ್‍ಗೌಡ, ಮುಖಂಡರಾದ ಸುರೇಶ್‍ಗೌಡ, ಸೊಗಡು ಶಿವಣ್ಣ ಸೇರಿದಂತೆ ಮತ್ತಿತರ ತಂಡವನ್ನು ಕಟ್ಟಿಕೊಂಡು ಬೂತ್ ಮಟ್ಟದಲ್ಲಿ ಸಂಘಟನೆಗೆ ಒತ್ತು ಕೊಟ್ಟರು.

ಪ್ರಬಲ ಸಮುದಾಯಗಳ ಬದಲಿಗೆ ಸಣ್ಣ ಸಣ್ಣ ಸಮುದಾಯಗಳನ್ನೇ ಗುರಿಯಾಗಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಮತ್ತು ರಾಜ್ಯಸರ್ಕಾರದ ಸಾಧನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು.  ಹೊಸ ಮತದಾರರನ್ನು ಪಕ್ಷಕ್ಕೆ ಸೆಳೆಯುವಲ್ಲಿ ಯಶಸ್ವಿಯಾದರು. ಕಠಿಣವಾಗಿದ್ದ ಶಿರಾದಲ್ಲಿ ಬಿಜೆಪಿ ಗೆದ್ದಿರುವುದರಿಂದ ಸಹಜವಾಗಿ ಬ ವಿಜಯೇಂದ್ರರ ಹೆಸರು ಮುನ್ನೆಲೆಗೆ ಬಂದಿದ್ದಾರೆ.

ಪಕ್ಷದ ಕಾರ್ಯಕರ್ತರು ಅವರನ್ನು ಬೀದರ್ ಜಿಲ್ಲೆ, ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಒತ್ತಡ ಹಾಕುತ್ತಿದ್ದಾರೆ. ವಾಸ್ತವವಾಗಿ ಶಿರಾದಿಂದಲೇ ಸ್ಪರ್ಧಿಸಬೇಕೆಂಬ ಬೇಡಿಕೆ ಇತ್ತಾದರೂ ಒಲವು ತೋರಿರಲಿಲ್ಲ.  ಈಗಾಗಲೇ ಹಿರಿಯ ಪುತ್ರ ರಾಘವೇಂದ್ರ ಶಿವಮೊಗ್ಗ ಸಂಸದರಾಗಿರುವ ಕಾರಣ ತಮ್ಮ ಅವಧಿಯಲ್ಲಿ ಕಿರಿಯ ಪುತ್ರ ವಿಜಯೇಂದ್ರರಿಗೂ ಸೂಕ್ತ ಸ್ಥಾನಮಾನ ಕಲ್ಪಿಸುವುದು ಯಡಿಯೂರಪ್ಪನವರ ಮಹದಾಸೆಯಾಗಿದೆ.

ಬಸವ ಕಲ್ಯಾಣದಿಂದ ಸ್ಪರ್ಧೆ ಮಾಡದಿದ್ದರೆ 2023ರ ವಿಧಾನಸಭೆ ಚುನಾವಣೆಗೆ ಮೈಸೂರು ಭಾಗದ ಪ್ರಮುಖ ಕ್ಷೇತ್ರದಿಂದ ವಿಜಯೇಂದ್ರ ಅಖಾಡಕ್ಕಿಳಿಯುವ ಸಾಧ್ಯತೆ ಇದೆ.

Facebook Comments