ಓಲೈಕೆಯ ರಾಜಕಾರಣಕ್ಕೆ ಮುಂದಾದರೇ ಸಿಎಂ ಬಿಎಸ್‍ವೈ..? ವಿಜಯೇಂದ್ರ ನಡೆ ನಿಗೂಢ…!

ಈ ಸುದ್ದಿಯನ್ನು ಶೇರ್ ಮಾಡಿ

ರಾಷ್ಟ್ರ ವಾದ, ಬಲ ಪಂಥೀಯ ಸಿಸಿದ್ದಂತದ ಬಗ್ಗೆ ಮಾತನಾಡುವ ಭಾರತೀಯ ಜನತಾ ಪಕ್ಷ ಈಗ ನಡೆದಿದ್ದಾ ದಾರಿ ಎನ್ನುವಂತಾಗಿದೆ. ಕಳೆದ 60 ವರ್ಷಗಳಿಂದ ಕಾಂಗ್ರೆಸ್ ಪಕ್ಷ ಓಲೈಕೆ ರಾಜಕಾರಣ ಮಾಡಿಕೊಂಡು ಬಂದಿದೆ ಆದ್ದರಿಂದಲೇ ನೆಹರು ವಂಶ ದಾಖಲೆಯ ಮಟ್ಟದಲ್ಲಿ ಪ್ರಧಾನ ಮಂತ್ರಿ ಕುರ್ಚಿಯಲ್ಲಿ ಕುಳಿತುಕೊಂಡು ದೇಶವನ್ನಾಳಿದ್ದು ಎಂದು ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಹಿಗ್ಗಾ-ಮುಗ್ಗಾ ಟೀಕಿಸುತ್ತಲೆ ಬಂದಿದೆ.

ಭಾಜಪದ ಕ್ರಾಂತಿಕಾರಿ ಮಾತುಗಳಿಗೆ ಮಾರು ಹೋದ ಕ್ರಾಂತಿಕಾರಿ ಯುವ ಜನತೆ ಸಾಮಾಜಿಕ ಜಾಲತಾಣದಲ್ಲಿ ಇದರ ಬಗ್ಗೆಯೇ ದೊಡ್ಡ ದೊಡ್ಡ ಅಭಿಯಾನ ಶುರುಮಾಡಿ ಪ್ರತಿ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗುವಂತೆ ಮಾಡುತ್ತಿರುವುದು ಪ್ರಧಾನ ಮಂತ್ರಿ ಕನಸು ಕಾಣುತ್ತಿರುವ ರಾಹುಲ್ ಗಾಂಧಿಯವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಆದ್ದರಿಂದಲೇ 125 ವರ್ಷಗಳ ಇತಿಹಾಸ ಇರುವ ಕಾಂಗ್ರೆಸ್ ಪಕ್ಷ ದೇಶದಾದ್ಯಂತ ಈ ಮಟ್ಟಿಗೆ ನೆಲ ಕಚ್ಚಿದೆ ಎಂದರೆ ಸುಳ್ಳಲ್ಲ. ರಾಜ್ಯ ಸಭೆ ಮತ್ತು ಲೋಕ ಸಭೆಯ ಕಾಂಗ್ರೆಸ್ ಸೀಟುಗಳನ್ನು ಒಟ್ಟುಗೂಡಿಸಿದರೂ ನೂರರ ಸಂಖ್ಯೆ ದಾಟುವುದಿಲ್ಲ ಎಂದು ಪ್ರಧಾನಿ ಮೋದಿ ಇತ್ತೀಚೆಗಷ್ಟೇ ಲೇವಡಿ ಮಾಡಿದ್ದನ್ನು ಕಾಂಗ್ರೆಸ್ ಪಕ್ಷ ಅರಗಿಸಿಕೊಳ್ಳಲಾಗುತ್ತಿಲ್ಲ.

ಓಲೈಕೆ ರಾಜಕಾರಣ ಮಾಡಿದವರ ಪರಿಸ್ಥಿತಿ ಏನಾಗುತ್ತದೆ ಎಂಬುದಕ್ಕೆ ಇದೊಂದು ತಾಜಾ ಉದಾಹರಣೆ ಎಂಬುದು ಪದೇ ಪದೇ ಭಾಜಪ ಮುಖಂಡರು ಹೇಳುವ ನಿಶ್ಚಿತ ಮಾತು. ಇತ್ತೀಚೆಗಷ್ಟೇ ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪ ಚುನಾವಣೆಗಳಲ್ಲಿ ಭಾಜಪ ಭರ್ಜರಿ ಗೆಲುವನ್ನು ಸಾಧಿಸಿ ಸಂಭ್ರಮದ ಅಲೆಯಲ್ಲಿ ತೇಲುತ್ತಿದೆ.

ಮಸ್ಕಿ ಮತ್ತು ಬಸವ ಕಲ್ಯಾಣ ವಿಧಾನಸಭಾ ಮತ್ತು ಬೆಳಗಾವಿಯ ಲೋಕಸಭಾ ಚುನಾವಣೆಯ ದಿನಾಂಕ ಸದ್ಯದಲ್ಲಿಯೇ ಹೊರ ಬೀಳಲಿದೆ. ಈಗಾಗಲೇ ಇದಕ್ಕೆ ಪೂರಕವಾಗಿ ಭಾಜಪ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿ ಕುಮಾರ್ ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಸುತ್ತಿನ ಸಭೆಯನ್ನು ನಡೆಸಿ ಉಪ ಚುನಾವಣೆ ತಯಾರಿಗೆ ಕಾರ್ಯಕರ್ತರನ್ನು ಹುರಿದುಂಬಿಸಿದರೆ ಭಾಜಪ ಉಪಾಧ್ಯಕ್ಷ ವಿಕ್ಟರಿ ವಿಜಯೇಂದ್ರ ಮುಖ್ಯಮಂತ್ರಿ ಯಡಿಯೂರಪ್ಪನವರ ಪುತ್ರ ಕಳೆದ ವಾರ ದಿನಾಂಕ 13 ರಂದು ಬಸವ ಕಲ್ಯಾಣಕ್ಕೆ ಪ್ರವಾಸ ಕೈಗೊಂಡರು.

ಅಲ್ಲಿನ ಮರಾಠಿ ಸಮಾಜದವರ ಜೊತೆ ಸಭೆ ಮಾಡಿ ನಿಮ್ಮ ಸಮಾಜಕ್ಕೆ ಶಕ್ತಿ ತುಂಬುವ ದೃಷ್ಟಿಯಿಂದ ನಮ್ಮ ಸರ್ಕಾರ ಮುಂದಿನ ಇಪ್ಪತ್ತನಾಲ್ಕು ಗಂಟೆ ಒಳಗೆ ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುತ್ತದೆ.ನೀವೆಲ್ಲರು ಮುಂದಿನ ಉಪ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಆಶೀರ್ವಾದ ಮಾಡಬೇಕು ಭಾಜಪ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದಿಗೂ ಕೊಟ್ಟ ಮಾತು ತಪ್ಪುವವನಲ್ಲ ಈ ವಿಜಯೇಂದ್ರ ಎಂದಿದ್ದರು..!

ವೇದಿಕೆಯಲ್ಲೇ ಕುಳಿತುಕೊಂಡು ಇವರ ಮಾತುಗಳನ್ನು ಕೇಳಿಸಿಕೊಂಡ ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್ ಮತ್ತು ಬೀದರ್ ಸಂಸದ ಭಗವಂತ ಖೂಬಾರವರು 24 ಗಂಟೆ ಒಳಗೆ ಒಂದು ಸಮಾಜದ ಅಭಿವೃದ್ಧಿ ಪ್ರಾಧಿಕಾರದ ರಚನೆ ಮಾಡಲು ಸಾಧ್ಯವೇ…? ಎಂದು ಮನಸ್ಸಿನಲ್ಲೇ ಪ್ರಶ್ನೆ ಹಾಕಿಕೊಂಡು ಮೈಕ್ ಮುಂದೆ ನಿಂತಾಗ ರಾಜಕಾರಣಿಗಳು ಉದ್ವೇಗದಲ್ಲಿ ಇಂತಹ ವೀರ ಪರಾಕ್ರಮದ ಆಶ್ವಾಸನೆಗಳು ಮಾಮೂಲಿ ಎಂದು ಭಾವಿಸಿ ಅಲ್ಲಿಂದ ವಿಜಯೇಂದ್ರರವರನ್ನು ಬೆಂಗಳೂರಿಗೆ ಬೀಳ್ಕೊಟ್ಟಿದ್ದಾರೆ.

ಆದರೆ ಮರುದಿನ ದಿನ ಪತ್ರಿಕೆ ನೋಡಿದಾಗ ಇವರಿಬ್ಬರಿಗೆ ಆಶ್ಚರ್ಯ ಕಾದಿರುತ್ತದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಆದೇಶ ಮಾಡಿ 50 ಕೋಟಿ ರೂಪಾಯಿಗಳನ್ನು ಮೀಸಲಿಟ್ಟಿರುತ್ತಾರೆ. ವಿಜಯೇಂದ್ರರವರು ಮುಂಚಿತವಾಗಿ ಯಡಿಯೂರಪ್ಪ ನವರ ಜೊತೆ ಚರ್ಚೆ ಮಾಡಿ ಮರಾಠಿಗರಿಗೆ ಈ ಭರವಸೆ ಕೊಟ್ಟರೋ ಅಥವ ಮೈಕ್ ಮುಂದೆ ನಿಂತಾಗ ಭಾವೋದ್ವೇಗದಲ್ಲಿ ಭರವಸೆ ಕೊಟ್ಟು ಬಿ.ಎಸ್.ವೈ ಮೇಲೆ ಒತ್ತಡ ಹೇರಿ ಮರಾಠಿ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಆದೇಶ ಮಾಡಿಸಿದರೋ ಇದು ಈಗಲೂ ಭಾಜಪದ ಕೆಲವು ನಾಯಕರಿಗೆ ಮಿಲಿಯನ್ ಡಾಲರ್ ಪ್ರಶ್ನೆ.

ಯಡಿಯೂರಪ್ಪ ಸರ್ಕಾರಕ್ಕೆ ಕೇಳುತ್ತಿರುವ ಏಕೈಕ ಪ್ರಶ್ನೆ ಎಂದರೆ, ನಮ್ಮ ಕನ್ನಡವನ್ನೇ ಮಾತೃ ಭಾಷೆಯಾಗಿಸಿಕೊಂಡಿರುವ ಇನ್ನು ಅದೆಷ್ಟೋ ಸಮಾಜಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ, ಅಭಿವೃದ್ಧಿ ಪ್ರಾಧಿಕಾರ ರಚನೆಯ ಬಗ್ಗೆ ದಶಕಗಳಿಂದ ಹಗಲು ರಾತ್ರಿ ಚಳಿ ಗಾಳಿ ಮಳೆಯೆನ್ನದೇ ಬೀದಿಯಲ್ಲಿ ನಿಂತು ನಿರಂತರ ಹೋರಾಟ ಮಾಡುತ್ತಿವೆ,

ಆದರೂ ಕನ್ನಡಿಗರ ಸಮುದಾಯದ ಹೋರಾಟಗಳಿಗೆ ಅವರ ಭಾವನೆಗಳಿಗೆ ಬಿ.ಎಸ್.ವೈ ಸರ್ಕಾರ ಬೆಲೆ ಕೊಡದಿರುವುದು ಬೇಸರದ ಸಂಗತಿ, ಮತ್ತೊಂದು ಅಚ್ಚರಿಯ ಸಂಗತಿಯೆಂದರೆ ಇದುವರೆಗು ಯಾವೊಬ್ಬ ಮರಾಠಿಗರು ಪ್ರಾಧಿಕಾರದ ರಚನೆಯ ಬಗ್ಗೆ ಬೀದಿಗಿಳಿದು ಒಂದು ಸಣ್ಣ ಹೋರಾಟ ಮಾಡದಿದ್ದರು ಸಹ ಮರಾಠಿಗರ ಪರವಾಗಿ ವಿಜಯೇಂದ್ರರವರು ಹೇಳಿಕೆ ಕೊಟ್ಟ ಕೇವಲ 24 ಗಂಟೆಯೊಳಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ನೀಡಿದ ಈ ಆದೇಶದಿಂದ ಕನ್ನಡಿಗರು ಸಿಡಿದೆದ್ದಿರುವದಂತು ಸುಳ್ಳಲ್ಲ.

ಬಸವ ಕಲ್ಯಾಣದಲ್ಲಿ ಮರಾಠಿಗರು ಗಮನಾರ್ಹ ಸಂಖ್ಯೆಯಲ್ಲಿ ಇದ್ದು ಅವರೇ ಇಲ್ಲಿ ಗೆಲುವಿನ ಷರಾ ಬರೆಯುವ ನಿರ್ಣಾಯಕ ಮತದಾರರು. ವಿಷಯ ಅದೇನೆ ಇರಲಿ, ಇವೆಲ್ಲವು ಮತದಾರರನ್ನು ಓಲೈಕೆ ಮಾಡುವ ತಂತ್ರಗಾರಿಕೆಯ ಒಂದು ಭಾಗ ಎಂದುಕೊಳ್ಳೋಣ. ಇದರ ಮುಂದುವರಿದ ಭಾಗವಾಗಿ ವೀರಶೈವ ಲಿಂಗಾಯಿತ ಅಭಿವೃದ್ಧಿ ನಿಗಮ ಪ್ರಾಧಿಕಾರ ರಚನೆಗೆ ನಿನ್ನೆ ಬಿ.ಎಸ್.ವೈ.ಆದೇಶ ಮಾಡಿದ್ದಾರೆ.

ಈಗ ಒಕ್ಕಲಿಗರು ನಮಗೂ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿ ನಾವು ಆರ್ಥಿಕವಾಗಿ ಹಿಂದುಳಿದಿದ್ದೇವೆ ಎಂಬ ಕೂಗು ಶುರು ಮಾಡಿದ್ದಾರೆ, ಹಾಗಾದರೆ ಇದಕ್ಕೆ ಕೊನೆ ಎಲ್ಲಿ…? ಒಂದು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿದ ಕ್ಷಣವೇ ಆ ಸಮಾಜ ಎಲ್ಲ ರೀತಿಯಿಂದಲು ಸುಧಾರಣೆ ಯಾಗುತ್ತದೆ ಎಂದಾದರೆ ಲಕ್ಷಾಂತರ ರೂಪಾಯಿಗಳ ಲೆಕ್ಕದಲ್ಲಿ ಕರ್ನಾಟಕ ಸರ್ಕಾರ ವಾರ್ಷಿಕ ಬಜೆಟ್ ಮಂಡಿಸುವ ಅಗತ್ಯವೇ ಇರುವುದಿಲ್ಲವಲ್ಲ ನೀವೆ ಒಮ್ಮೆ ಆಲೋಚಿಸಿ..!

ಕೊರೋನ ಸಂಕಷ್ಟಕ್ಕೆ ಸಿಲುಕಿ ನಮ್ಮ ಸರ್ಕಾರದ ಖಜಾನೆ ಖಾಲಿಯಾಗಿ ಆರ್ಥಿಕ ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ,ಇದರ ಪರಿಣಾಮ ಕಳೆದ ಮೂರು ತಿಂಗಳಿಂದ ಸಾರಿಗೆ ನೌಕರರಿಗೆ, ಶಿಕ್ಷಕರಿಗೆ, ಬೇರೆ ಬೇರೆ ಕ್ಷೇತ್ರದ ಸರ್ಕಾರಿ ನೌಕರರಿಗೆ ಸರ್ಕಾರ ವೇತನ ಪಾವತಿಸಿಲ್ಲ.ಶತಶತಮಾನಗಳ ಐತಿಹಾಸಿಕ ಹಿನ್ನೆಲೆಯುಳ್ಳ ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾವನ್ನು ಈ ಬಾರಿ ತುಂಬಾ ಸರಳವಾಗಿ ಆಚರಿಸಲಾಯಿತು.

ಮತ್ತೊಂದು ಕಡೆ ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಗೆ ಸಿಲುಕಿ ಮನೆ ಮಠ ಕಳೆದುಕೊಂಡು ಬೀದಿ ಪಾಲಾಗಿರುವ ಸಂತ್ರಸ್ತರಿಗೆ ಗಂಜಿ ಕೇಂದ್ರ ತೆರಿದಿದ್ದು ಬಿಟ್ಟರೆ ಸರ್ಕಾರದಿಂದ ಅವರಿಗೆ ಯಾವುದೇ ಪರಿಹಾರ ಮುಟ್ಟಿಲ್ಲ.ಕ್ಯಾನ್ಸರ್, ಕಿಡ್ನಿ ಹೃದಯ, ಹೆಚ್.ಐ.ವಿ, ಬ್ರೈನ್ ಟ್ಯೂಮರ್ ಹೀಗೆ ಮಾರಣಾಂತಿಕ ಗಂಭೀರ ಕಾಯಿಲೆಗಳಿಂದ ನರಳುತ್ತಿರುವ ರೋಗಿಗಳ ಚಿಕಿತ್ಸೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಇದುವರೆಗು ಮೆಡಿಕಲ್ ಫಂಡ್ ಹಣ ಬಿಡುಗಡೆಯಾಗಿಲ್ಲ.

ಮತ್ತೊಂದು ಹಾಸ್ಯಾಸ್ಪದ ಸಂಗತಿ ಎಂದರೆ ಯಡಿಯೂರಪ್ಪ ಸರ್ಕಾರದಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಐದು ಕೋಟಿ ಮೀಸಲು, ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ಐವತ್ತು ಕೋಟಿ ಮೀಸಲು. ಇದು ಓಲೈಕೆ ರಾಜಕಾರಣವಲ್ಲದೇ ಮತ್ತೇನು..? ಎಂಬುದು ಅಲ್ಲಿನ ಕನ್ನಡಿಗರ ಪ್ರಶ್ನೆ.

ಯಡಿಯೂರಪ್ಪನವರು ಬಹಳ ಪ್ರಬುದ್ಧ ಮನಸ್ಥಿತಿಯ ರಾಜಕಾರಣಿ, ಅವರು ಯಾವುದೇ ತೀರ್ಮಾನ ಮಾಡುವ ಮೊದಲು ಅದರ ಸಾಧಕ-ಭಾದಕಗಳನ್ನು ಚರ್ಚೆ ಮಾಡಿ ಆಮೇಲೆ ಆದೇಶ ಹೊರಡಿಸುತ್ತಿದ್ದರು. ಆದರೆ ಈಗ ಆ ಗಟ್ಟಿತನದ ಕಸುವು ಅವರ ಆದೇಶದಲ್ಲಿ ಕಾಣಿಸುತ್ತಿಲ್ಲ. ವಯೋ ಸಹಜ ದೌರ್ಬಲ್ಯವೋ ಅಥವಾ ಬೇರೆ ಬೇರೆ ಒತ್ತಡವೊ ಇದನ್ನು ತಾಯಿ ಭಾರತ ಮಾತೆಯೇ ಹೇಳಬೇಕು.

ಕೊರೋನ ಇರುವುದರಿಂದ ದೀಪಾವಳಿ ಹಬ್ಬಕ್ಕೆ ಯಾರು ಸಹ ಪಟಾಕಿ ಹೊಡೆಯಬಾರದು ಆದರೆ ಹಸಿರು ಪಟಾಕಿ ಮಾತ್ರ ಹೊಡೆಯಬಹುದು ಎಂಬ ಆದೇಶ ಹೊರಡಿಸಿದರು. ಈ ಆದೇಶಕ್ಕೆ ಎಳ್ಳಷ್ಟು ತಲೆ ಕೆಡಿಸಿಕೊಳ್ಳದೇ ಪ್ರತಿ ವರ್ಷದಂತೆ ರಾಜ್ಯಾದ್ಯಂತ ಪಟಾಕಿಗಳ ಸದ್ದು ಮುಗಿಲು ಮುಟ್ಟಿತು.

ಅದೇನೆ ಇರಲಿ ಈಗ ಬಸವ ಕಲ್ಯಾಣದ ಸುದ್ದಿಗೆ ಬರೋಣ ಉಪ ಚುನಾವಣೆಯ ತಯಾರಿ ಭರ್ಜರಿಯಾಗಿ ಶುರುವಾಗಿದೆ. ಮತ್ತೊಂದು ಮೂಲಗಳ ಪ್ರಕಾರ ಬಿ.ವೈ.ವಿಜಯೇಂದ್ರರವರೇ ಬಸವ ಕಲ್ಯಾಣದ ಭಾಜಪ ಅಭ್ಯರ್ಥಿ ಎಂಬ ಮಾತುಗಳು ಕೇಳಿ ಬರುತ್ತಿವೆ ಎಲ್ಲದಕ್ಕೂ ಕಾಲವೇ ಉತ್ತರ ನೀಡಬೇಕು.
# ಮಹಾಂತೇಶ್ ಬ್ರಹ್ಮ
E-mail:-MahantheshBrahma@gmail.com

Facebook Comments