ವಿಧಾನಸೌಧ ಪ್ರವೇಶಿಸಲು ವಿಜಯೇಂದ್ರ ಹೊಸ ತಂತ್ರ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.31- ಮುಖ್ಯಮಂತ್ರಿ ಸ್ಥಾನಕ್ಕೆ ಯಡಿಯೂರಪ್ಪ ರಾಜಿನಾಮೆ ನೀಡಿದ ಬೆನ್ನಲ್ಲೇ ಅವರ ಪರಮಾಪ್ತರೆಲ್ಲ ಸೇರಿ ವಿಜಯೇಂದ್ರ ಅವರನ್ನು ಚೊಚ್ಚಲ ಚುನಾವಣೆಯಲ್ಲಿ ಕಣಕ್ಕಿಳಿಸಲು ತಯಾರಿ ಆರಂಭಿಸಿದ್ದಾರೆ.  ಬಸವ ಕಲ್ಯಾಣ ವಿಧಾನ ಸಭಾ ಕ್ಷೇತ್ರದ ಉಪಚುನಾವಣೆಗೆ ವಿಜಯೇಂದ್ರ ಹೆಸರು ಕೇಳಿ ಬರುತ್ತಿದೆ. ಆದರೆ ಚುನಾವಣಾ ಕಣದಿಂದ ದೂರ ಉಳಿದು ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುವುದಾಗಿ ವಿಜಯೇಂದ್ರ ಹೇಳುತ್ತಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಯಾಗಿದ್ದ ಶಿರಾ ಮತ್ತು ಕೆಆರ್ ಪೇಟೆ ವಿಧಾನಸಭೆಉಪ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದಾಗ ಪಕ್ಷದ ಹೈಕಮಾಂಡ್ ವಿಜಯೇಂದ್ರ ಅವರ ಕಾರ್ಯವನ್ನು ಶ್ಲಾಘಿಸಿತ್ತು. ಸದ್ಯ ಸಿಂಧಗಿ ಮತ್ತು ಹಾನಗಲ್ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಾಗಿದೆ, ಯಡಿಯೂರಪ್ಪ ಆಪ್ತ ಸಿ.ಎಂ.ಉದಾಸಿ ನಿಧನದಿಂದ ತೆರವಾಗಿರುವ ಹಾನಗಲ್ ಕ್ಷೇತ್ರದಲ್ಲಿ ವಿಜಯೇಂದ್ರರನ್ನು ಕಣಕ್ಕಿಳಿಸುವಂತೆ ಹೇಳಲಾಗುತ್ತಿದೆ. ಜೆಡಿಎಸ್ ಶಾಸಕ ಎಂ.ಸಿ.ಮನಗೂಳಿ ಅವರ ನಿಧನದಿಂದ ತೆರವಾಗಿರುವ ಸಿಂಧಗಿ ಕ್ಷೇತ್ರಕ್ಕೆ ಜನವರಿಯಲ್ಲಿ ಚುನಾವಣೆ ನಡೆಯುವ ಸಾಧ್ಯತೆಯಿದೆ.

ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದರೊಂದಿಗೆ ಬಿಎಸ್‍ವೈ ನಿಷ್ಠರು ವಿಜಯೇಂದ್ರ ವಿಧಾನಸೌಧವನ್ನು ಪ್ರವೇಶಿಸಲು ಬಯಸುತ್ತಾರೆ, ಶಾಸಕರಾದರೆ ರಾಜ್ಯ ರಾಜಕೀಯಕ್ಕೆ ಹೊಸ ಆಯಾಮ ತರುತ್ತದೆ ಎಂದು ಆಶಿಸಿದ್ದಾರೆ. ಶಾಸಕರಾಗಿ ಆಯ್ಕೆಯಾದರೆ ಸದನದ ಒಳಗೆ ಮತ್ತು ಹೊರಗೆ ಶಾಸಕರೊಂದಿಗೆ ಬಾಂಧವ್ಯ ವೃದ್ಧಿಸಿಕೊಳ್ಳಲು ಸಹಾಯವಾಗುತ್ತದೆ ಮತ್ತು ಸರ್ಕಾರದಲ್ಲಿ ಯಾವುದೇ ಜವಾಬ್ದಾರಿ ತೆಗೆದುಕೊಳ್ಳಲು ಭವಿಷ್ಯದಲ್ಲಿ ಅವರಿಗೆ ಬಲವಾದ ಆಧಾರ ಒದಗಿಸಿದಂತಾಗುತ್ತದೆ ಎಂಬುದು ಅವರ ವಾದವಾಗಿದೆ.

ಸಿ.ಎಂ.ಉದಾಸಿ ಜಾರಿಗೆ ತಂದಿರುವ ಅಭಿವೃದ್ಧಿ ಕಾರ್ಯಗಳನ್ನು ಆಧರಿಸಿ ಉಪಚುನಾವಣೆಯನ್ನು ಎದುರಿಸಲು ಸಜ್ಜಾಗಿದ್ದೇವೆ ಎಂದು ಹಾವೇರಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದರಾಜು ಕಲ್ಕೋಟಿ ಹೇಳಿದ್ದಾರೆ. ವಿಜಯೇಂದ್ರ ಅವರ ಹೆಸರು ಇಲ್ಲಿಯವರೆಗೆ ಪ್ರಸ್ತಾಪವಾಗಿಲ್ಲ. ಬಿಜೆಪಿ ಟಿಕೆಟ್‍ನಲ್ಲಿ ಯಾರು ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಾರೋ ಅವರು ಗೆಲ್ಲುತ್ತಾರೆ.
ಉಪಚುನಾವಣೆ ಸಂಬಂಧ ಪಕ್ಷದೊಳಗೆ ಚರ್ಚೆಗಳು ಆರಂಭವಾಗಬೇಕಿದೆ, ಅಭ್ಯರ್ಥಿಗಳನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸ್ಪಷ್ಟಪಡಿಸಿದರು.

ಮುಂಬರುವ ತಿಂಗಳುಗಳಲ್ಲಿ ರಾಜ್ಯ ರಾಜಕೀಯ ಸನ್ನಿವೇಶ ಹೇಗೆ ಬದಲಾವಣೆಯಾಗುತ್ತವೆ ಎಂಬುದರ ಮೇಲೆ ಎಲ್ಲವೂ ಅವಲಂಬಿತವಾಗಿರುವುದರಿಂದ ವಿಜಯೇಂದ್ರ ಅವರು ಉಪಚುನಾವಣಾ ರಾಜಕೀಯಕ್ಕೆ ಧುಮುಕುವುದಿಲ್ಲ ಎಂದು ಬಿಜೆಪಿಯ ಕೆಲವು ಮೂಲಗಳು ತಿಳಿಸಿವೆ. ತಮ್ಮ ತಂದೆ ಯಡಿಯೂರಪ್ಪನವರನ್ನು ರಾಜ್ಯಪಾಲರನ್ನಾಗಿ ಮಾಡಿದರೆ ಅಥವಾ ಬಿಜೆಪಿ ಹೈಕಮಾಂಡ್ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಹುದ್ದೆ ನೀಡುವ ಸಾಧ್ಯತೆಯಿದೆ. ಆ ವೇಳೆ ವಿಜಯೇಂದ್ರ ತನ್ನ ತಂದೆಯ ಕ್ಷೇತ್ರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರವನ್ನು ಆರಿಸಿಕೊಳ್ಳುತ್ತಾರೆ.

ವಿಜಯೇಂದ್ರ ಅವರನ್ನು ರಾಜ್ಯ ಘಟಕದ ಕಾರ್ಯಾಧ್ಯಕ್ಷರನ್ನಾಗಿ ಮಾಡಬೇಕು ಮತ್ತು 2023ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸಬೇಕು, ಇದರಿಂದ ಮುಂದೆ ಅವರು ಉನ್ನತ ಹುದ್ದೆಗೆ ಅವಕಾಶ ಪಡೆಯುತ್ತಾರೆ ಎಂಬ ಚರ್ಚೆಗಳು ಕೇಳಿಬರುತ್ತಿವೆ. ಏತನ್ಮಧ್ಯೆ, ಮೈಸೂರು ಬಿಜೆಪಿ ಘಟಕವು 2023ರ ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರ ಅವರು, ಮಾಜಿ ಸಿಎಂ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಪ್ರತಿನಿಧಿಸುತ್ತಿರುವ ವರುಣಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಮಾತುಗಳು ಚರ್ಚೆಯಾಗುತ್ತಿವೆ.

Facebook Comments