ನನಗೆ ಡಿಸಿಎಂ ಕೊಡಿ ಎಂದು ನಮ್ಮ ತಂದೆ ಎಲ್ಲೂ ಕೇಳಿಲ್ಲ : ವಿಜಯೇಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.5-ಮೇಕೆದಾಟು ಕುಡಿಯುವ ನದಿನೀರು ಯೋಜನೆ ಬಗ್ಗೆ ತಮಿಳುನಾಡು ಸರ್ಕಾರ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ನಮ್ಮ ಹಕ್ಕಾಗಿರುವುದರಿಂದ ಯೋಜನೆಯನ್ನು ನಮ್ಮ ಸರ್ಕಾರ ಅನುಷ್ಠಾನ ಮಾಡಿಯೇ ತೀರುತ್ತದೆ. ಇದನ್ನು ರಾಜಕಾರಣಕ್ಕಾಗಿಯೇ ವಿರೋಧಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಯೋಜನೆ ಕುರಿತಂತೆ ಸ್ಪಷ್ಟವಾಗಿ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಯೋಜನೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ತಮಿಳುನಾಡಿನಲ್ಲಿ ಅಣ್ಣಾಮಲೈ ಯಾವ ಕಾರಣಕ್ಕಾಗಿ ವಿರೋಧಿಸುತ್ತಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದರು. ಯೋಜನೆ ಕುರಿತಾಗಿ ಸುಪ್ರೀಂಕೋರ್ಟ್‍ನಿಂದ ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ಕೇಂದ್ರ ಸರ್ಕಾರವು ಸಹ ನಮಗೆ ಸಂಪೂರ್ಣವಾದ ಸಹಕಾರ ನೀಡುತ್ತಿದೆ. ಶೀಘ್ರದಲ್ಲೇ ಯೋಜನೆ ಕಾರ್ಯಾರಂಭ ಮಾಡಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ಇಬ್ಬರು ವಲಸಿಗರಿಗೆ ಸಚಿವ ಸ್ಥಾನ ಸಿಗದ ವಿಚಾರ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ. ಅದು ಹೈಕಮಾಂಡ್ ನಿರ್ಧಾರ ಎಂದು ಅದರ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ತಮಗೆ ಸಚಿವ ಸ್ಥಾನ ಮಿಸ್ ವಿಚಾರ ಕುರಿತಂತೆ ಮಾತನಾಡಿದ ಅವರು, ಸಂಪುಟದಲ್ಲಿ ಅವಕಾಶ ಸಿಕ್ಕಿಲ್ಲವೆಂಬ ನೋವಿಲ್ಲ. ನನಗೆ ಕೊಡಿ ಎಂದು ಯಡಿಯೂರಪ್ಪ ಒತ್ತಡ ಹೇರಿಲ್ಲ. ಯಡಿಯೂರಪ್ಪ ಷರತ್ತು ಹಾಕಿದ್ದರು ಎಂಬುದು ಸುಳ್ಳು ಎಂದರು.

ನನಗೆ ಡಿಸಿಎಂ ಕೊಡಬೇಕು ಎಂದು ನಮ್ಮ ತಂದೆ ಯಡಿಯೂರಪ್ಪ ಅವರು ಎಲ್ಲೂ ಕೇಳಿರಲಿಲ್ಲ. ನಮ್ಮದು ರಾಷ್ಟ್ರೀಯ ಪಕ್ಷ. ಪಕ್ಷದಲ್ಲಿ ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಅವರು ಪಕ್ಷವನ್ನು ಈ ಹಂತಕ್ಕೆ ತಂದಿದ್ದಾರೆ. ನನಗೆ ಸಂಪುಟದಲ್ಲಿ ಅವಕಾಶ ಸಿಗಲಿಲ್ಲವೆಂಬ ಅಸಮಾಧಾನವಿಲ್ಲ. ಪಕ್ಷ ಸಂಘಟನೆಗೆ ಅವಕಾಶ ಕೊಟ್ಟಿದೆ. ನಾನು ಮುಂದುವರಿಸುತ್ತೇನೆ ಎಂದು ಹೇಳಿದರು.

ಬಿಜೆಪಿ ಹೈಕಮಾಂಡ್ ಲಿಂಗಾಯತರನ್ನು ಒಡೆದಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗಬೇಕು. ಅದನ್ನೇ ಯಡಿಯೂರಪ್ಪನವರು ಮಾಡಿದ್ದು. ಬಿಜೆಪಿ ಒಂದೇ ಪಕ್ಷಕ್ಕೆ ಸೀಮಿತವಾಗಿದ್ದರೆ ಇಷ್ಟು ದೊಡ್ಡಮಟ್ಟದಲ್ಲಿ ಪಕ್ಷ ಬೆಳೆಯಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದರು.

ಇವತ್ತು ಮಹೇಶ್ ಕೂಡ ಪಕ್ಷಕ್ಕೆ ಬರುತ್ತಿದ್ದಾರೆ. ಎಲ್ಲ ಜಾತಿ, ವರ್ಗಗಳನ್ನು ಕಟ್ಟಿಕೊಂಡು ಹೋಗಬೇಕು. ಅನಂತ್,ಆಚಾರ್ಯ ಎಲ್ಲರೂ ಪಕ್ಷ ಕಟ್ಟಿದ್ದರು. ಪಕ್ಷದ ಆದೇಶವನ್ನು ಯಡಿಯೂರಪ್ಪ ಪಾಲಿಸಿದ್ದಾರೆ. ಅವರನ್ನೇ ಕೆಳಗಿಳಿಸಿದ್ದಾರೆ ಎಂಬುದು ಸರಿಯಲ್ಲ ಎಂದು ಹೇಳಿದರು. ಲಿಂಗಾಯತ ಸಮುದಾಯ ಒಗ್ಗೂಡಿಸುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾಕೆ ಮಾಡಬಾರದು, ಮಾಡುತ್ತೇನೆ. ಆದರೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗಬೇಕಿದೆ ಎಂದರು.

Facebook Comments