ಮೇಲ್ಮನೆ ಚುನಾವಣೆ : ವಿಜಯೇಂದ್ರ ಕಣಕ್ಕೆ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಮೇ14- ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆಯಲಿರುವ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ಅಭ್ಯರ್ಥಿ ಮಾಡಬೇಕೆಂಬ ಅಭಿಪ್ರಾಯ ಕೋರ್ ಕಮಿಟಿ ಸಭೆಯಲ್ಲಿ ವ್ಯಕ್ತವಾಗಿದೆ.

ಮಲ್ಲೇಶ್ವರಂನ ಜಗನ್ನಾಥ ಭವನದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಮೇಲ್ಮನೆಗೆ ವಿಜಯೇಂದ್ರ ಕಣಕ್ಕಿಳಿಸುವ ಬಗ್ಗೆ ಸಭೆಯಲ್ಲಿ ಭಾಗವಹಿಸಿದ್ದ ನಾಯಕರು ಗಂಭೀರ ಚಿಂತನೆ ನಡೆಸಿದ್ದಾರೆ. ಅಂತಿಮವಾಗಿ ಅವರ ಹೆಸರನ್ನು ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಿಕೊಡಬೇಕು. ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ದರಾಗಿರಬೇಕೆಂಬ ಒಂದು ಸಾಲಿನ ನಿರ್ಣಯವನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸಂಪುಟ ಪುನಾರಚನೆಯಾದರೆ ವಿಜಯೇಂದ್ರ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕು ಆರು ತಿಂಗಳೊಳಗೆ ಅವರು ಯಾವುದಾದರೊಂದು ಸದನದ ಸದಸ್ಯರಾಗಬೇಕು. ಹೀಗಾಗಿ ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆಯಲಿರುವ ಚುನಾವಣೆಯಲ್ಲಿ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕೆಂಬ ಅಭಿಪ್ರಾಯ ವ್ಯಕ್ತವಾಗಿದೆ.

ವಿಜಯೇಂದ್ರ ಸಂಪುಟಕ್ಕೆ ಬಂದರೆ ಹಳೇ ಮೈಸೂರು ಸೇರಿದಂತೆ ಲಿಂಗಾಯಿತರ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲಿ ಪಕ್ಷದ ಸಂಘಟನೆಗೆ ಅವರನ್ನು ಬಳಕೆ ಮಾಡಿಕೊಳ್ಳಬೇಕು. ಈ ಹಿಂದೆ ರಾಜ್ಯದ ವಿವಿಧೆಡೆ ನಡೆದ ಉಪಚುನಾವಣೆಯಲ್ಲಿ ಕೆಲವು ಕಡೆ ಅವರ ವರ್ಚಿಸ್ಸಿನಿಂದಲೇ ಗೆಲ್ಲಬೇಕು ಎಂಬ ಮಾತು ಕೇಳಿಬಂದಿದೆ.

ಸಂಘಟನೆಯೇ ಇಲ್ಲದ ಕೆ.ಆರ್.ಪೇಟೆ, ಶಿರಾ ಸೇರಿದಂತೆ ಮತ್ತಿತರ ಕಡೆ ಬಿಜೆಪಿ ಗೆಲ್ಲಲು ವಿಜಯೇಂದ್ರ ಅವರ ವರ್ಚಸ್ಸೇ ಕಾರಣ. ಯಡಿಯೂರಪ್ಪ ಅವರನ್ನು ಅಕಾರದಿಂದ ಕೆಳಗಿಳಿಸಿರುವ ಕಾರಣ ಪಕ್ಷದ ಬೆನ್ನೆಲುಬಾಗಿ ನಿಂತಿರುವ ವೀರಶೈವ ಲಿಂಗಾಯಿತ ಸಮುದಾಯ ಕೈಬಿಟ್ಟು ಹೋಗದಂತೆ ವಿಜಯೇಂದ್ರ ಅವರಿಗೆ ಮಣೆ ಹಾಕಲು ಬಿಜೆಪಿ ವರಿಷ್ಠರು ಲೆಕ್ಕ ಹಾಕಿದ್ದಾರೆ.

ಪಕ್ಷದ ವಲಯದಲ್ಲಿ ತಮ್ಮದೇ ಆದ ವರ್ಚಸ್ಸು ಬೆಳೆಸಿಕೊಂಡಿರುವ ಅವರನ್ನು ಸಂಘಟನೆಗೆ ಬಳಕೆ ಮಾಡಿಕೊಳ್ಳಬೇಕು. ವಿಶೇಷವಾಗಿ ಮೈಸೂರು ಕರ್ನಾಟಕ ಗಮನದಲ್ಲಿಟ್ಟುಕೊಂಡು ವಿಧಾನಪರಿಷತ್‍ಗೆ ಆಯ್ಕೆ ಮಾಡಲು ಚಿಂತನೆ ನಡೆದಿದೆ.

ಅಂತಿಮವಾಗಿ ಯಾರೊಬ್ಬರ ವಿರೋಧ ಇಲ್ಲದಿದ್ದರೆ ವಿಜಯೇಂದ್ರ ಮೇಲ್ಮನೆಗೆ ಆಯ್ಕೆ ಆಗುವುದು ನಿಶ್ಚಿತ. ಆದರೆ ಈ ಹಿಂದೆ ಕೋರ್ ಕಮಿಟಿ ಸಭೆಯು ದೆಹಲಿಗೆ ಕಳುಹಿಸಿದ್ದ ಪಟ್ಟಿಯನ್ನೇ ಸಂಪೂರ್ಣವಾಗಿ ತಿರಸ್ಕರಿಸಿ ಕೊನೆ ಕ್ಷಣದಲ್ಲಿ ಅಚ್ಚರಿಯ ಅಭ್ಯರ್ಥಿಗಳನ್ನು ವರಿಷ್ಠರು ಆಯ್ಕೆ ಮಾಡಿದ್ದರು.

ರಾಜ್ಯವನ್ನು ಪ್ರತಿನಿಸುವ ದೆಹಲಿಯ ಪ್ರಭಾವಿ ನಾಯಕರೊಬ್ಬರ ಕೈಚಳಕ ಇಲ್ಲವೇ ಹಸ್ತಕ್ಷೇಪವಿಲ್ಲದಿದ್ದರೆ ವಿಜಯೇಂದ್ರ ಹಾದಿ ಸುಗಮ ಎನ್ನಲಾಗುತ್ತಿದೆ.

Facebook Comments