ಉಪಚುನಾವಣೆ : ಬಹಿರಂಗ ಪ್ರಚಾರಕ್ಕೆ ತೆರೆ, ಇನ್ನೇನಿದ್ದರೂ ಮನೆಮನೆ ಮತಬೇಟೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.1- ಮಿನಿ ಕುರುಕ್ಷೇತ್ರ ಎಂದೇ ಭಾವಿಸಲಾಗಿರುವ ಶಿರಾ ಮತ್ತು ಆರ್.ಆರ್.ನಗರ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಇಂದು ಸಂಜೆ 6 ಗಂಟೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಮತದಾರರ ಮನವೊಲಿಕೆಗೆ ಪ್ರಮುಖ ರಾಜಕೀಯ ಪಕ್ಷಗಳು ಕೊನೆ ಕ್ಷಣದ ಕಸರತ್ತು ನಡೆಸುತ್ತಿವೆ.  ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿಗಳಾದ ಅಶ್ವತ್ಥನಾರಾಯಣ, ಗೋವಿಂದ್‍ಕಾರಜೋಳ, ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಘಟಾನುಘಟಿ ನಾಯಕರು ಉಪ ಚುನಾವಣೆಯ ಪ್ರಚಾರದಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ರೋಡ್ ಶೋ ನಡೆಸುವ ಮೂಲಕ ಮತದಾರರ ಮನವೊಲಿಸುವ ಪ್ರಯತ್ನ ಮಾಡಿದರು. ಕಳೆದ ಚುನಾವಣೆಯಲ್ಲಿ ಶಿರಾ ಜನತೆ ಜೆಡಿಎಸ್‍ನ ಬಿ.ಸತ್ಯನಾರಾಯಣ ಅವರನ್ನು ಗೆಲ್ಲಿಸಿದ್ದರು.

ಅವರ ಅಕಾಲಿಕ ನಿಧನದಿಂದಾಗಿ ಚುನಾವಣೆ ಎದುರಾಗಿದೆ. ಅವರ ಅನುಪಸ್ಥಿತಿಯಲ್ಲಿ ಸತ್ಯನಾರಾಯಣ ಅವರ ಪತ್ನಿ ಅಮ್ಮಾಜಮ್ಮ ಅವರನ್ನು ಕಣಕ್ಕಿಳಿಸಿದ್ದೇವೆ. ಕ್ಷೇತ್ರದ ಜನ ಜೆಡಿಎಸ್‍ಗೆ ಮತ ನೀಡಿ ಗೆಲ್ಲಿಸಿದರೆ ರಾಜ್ಯಸಭಾ ಸದಸ್ಯರಾಗಿ ಮುಂದಿನ ಐದು ವರ್ಷ ಕಾಲ ಶಿರಾವನ್ನು ದತ್ತು ಪಡೆದು ಸಮಗ್ರ ಅಭಿವೃದ್ಧಿ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಪರವಾಗಿ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಮಾಜಿ ಶಾಸಕ ಕೆ.ಎನ್.ರಾಜಣ್ಣ ಹಾಗೂ ಇತರ ನಾಯಕರು ಭರ್ಜರಿ ಪ್ರಚಾರ ನಡೆಸಿ ಮತ ಯಾಚನೆ ಮಾಡಿದರು. ಬಿಜೆಪಿ ಅಭ್ಯರ್ಥಿ ರಾಜೇಶ್‍ಗೌಡ ಪರವಾಗಿ ಉಪ ಮುಖ್ಯಮಂತ್ರಿ ಗೋವಿಂದಕಾರಜೋಳ, ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಇತರೆ ನಾಯಕರು ಪ್ರಚಾರ ನಡೆಸಿದರು.

ಹೈವೋಲ್ಟೇಜ್ ಕ್ಷೇತ್ರ ಎಂದೇ ಪರಿಗಣಿಸಲಾಗಿರುವ ರಾಜರಾಜೇಶ್ವರಿನಗರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಪರವಾಗಿ ಪ್ರಚಾರ ನಡೆಸಿದರು. ಮತ್ತೀಕೆರೆ, ಯಶವಂತಪುರ ಹಾಗೂ ವಿವಿಧ ಭಾಗಗಳಲ್ಲಿರುವ ಮಸೀದಿಗಳಿಗೆ ತೆರಳಿದ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ಇನ್ನು ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣ, ಸಚಿವರಾದ ಆರ್.ಅಶೋಕ್, ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯ ಸೇರಿದಂತೆ ಮತ್ತಿತರರು ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಬಿರುಸಿನ ಪ್ರಚಾರ ನಡೆಸಿದರು. ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಪರವಾಗಿ ಪಕ್ಷದ ಮುಖಂಡರು ಪ್ರಚಾರ ನಡೆಸಿದರು. ಇಂದು ಸಂಜೆ 6 ಗಂಟೆ ವೇಳೆಗೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ.

ಹೊರಗಿನಿಂದ ಹೋಗಿ ಚುನಾವಣಾ ಪ್ರಚಾರದಲ್ಲಿ ತೊಡಗಿರುವವರನ್ನು ಸಂಜೆಯ ಬಳಿಕ ಕ್ಷೇತ್ರದಿಂದ ಹೊರ ಹಾಕಲಾಗುತ್ತದೆ. ಅನಂತರ ನಾಳೆ ಸಂಜೆ ವರೆಗೂ ಅಭ್ಯರ್ಥಿಗಳು ಮನೆ ಮನೆಗೆ ತೆರಳಿ ಮತಯಾಚನೆ ಮಾಡಲು ಅವಕಾಶವಿದೆ. ಬಹಿರಂಗ ಪ್ರಚಾರ ಅಂತ್ಯಗೊಂಡ ಬಳಿಕ ರೋಡ್ ಶೋ ನಡೆಸಲು, ಸಾರ್ವಜನಿಕ ಸಮಾರಂಭ ಮಾಡಲು ಅವಕಾಶವಿಲ್ಲ.

ಧ್ವನಿವಧರ್ಕದ ಮೂಲಕ ಮತಯಾಚನೆ ಕೂಡ ನಿಷೇಧಗೊಳ್ಳಲಿದೆ. ಅಭ್ಯರ್ಥಿಗಳು ಹಾಗೂ ಸ್ಥಳೀಯ ಕಾರ್ಯಕರ್ತರು ಮಾತ್ರ ಮನೆ ಮನೆಗೆ ಹೋಗಿ ಕರಪತ್ರಗಳನ್ನು ಕೊಟ್ಟು ಮತಯಾಚನೆ ಮಾಡಬಹುದಾಗಿದೆ. ಈ ಸಂದರ್ಭದಲ್ಲಿ ಯಾವುದೇ ಚುನಾವಣಾ ಅಕ್ರಮಗಳು ನಡೆಯದಂತೆ ಪೊಲೀಸರು ಮತ್ತು ಚುನಾವಣಾಧಿಕಾರಿಗಳು ಬಿಗಿ ಕ್ರಮ ಕೈಗೊಂಡಿದ್ದಾರೆ.

ಸೆ.29ರಂದು ಚುನಾವಣೆ ಘೋಷಣೆ ಮಾಡಿದ್ದು, ಅ.9ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿತು. ಅಂದಿನಿಂದಲೂ ವಿವಿಧ ಪಕ್ಷಗಳ ಕಾರ್ಯಕರ್ತರು ಹಾಗೂ ಮುಖಂಡರು ಚುನಾವಣಾ ಪ್ರಚಾರ ಆರಂಭಿಸಿದರು. ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಅ.20ರಿಂದ ಅಬ್ಬರದ ಪ್ರಚಾರ ಶುರುವಾಗಿದೆ. ಮತದಾರರ ಮನವೊಲಿಸಲು ವಿವಿಧ ಪಕ್ಷಗಳು ನಾನಾ ರೀತಿಯ ಕಸರತ್ತು ನಡೆಸಿವೆ.

ಶಿರಾ ಕ್ಷೇತ್ರದಲ್ಲಿ ಹಣ ಹಂಚಿಕೆಯ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿದ್ದವು, ಶಿರಾ ಕ್ಷೇತ್ರದ ಕೆರೆಗಳಿಗೆ ನೀರು ಹರಿಸುವುದು ಚುನಾವಣೆಯ ಪ್ರಮುಖ ಚರ್ಚೆಯ ವಿಷಯವಾಗಿತ್ತು. ರಾಜರಾಜೇಶ್ವರಿನಗರದಲ್ಲಿ ಕಾನೂನು ಸುವ್ಯವಸ್ಥೆಯದ್ದೇ ದೊಡ್ಡ ಸವಾಲಾಗಿದೆ. ಮತದಾರರ ಗುರುತಿನ ಚೀಟಿಗಳನ್ನು ಪಡೆದು ಮತ ಹಾಕದಂತೆ ಆಮಿಷ ಒಡ್ಡುವ ಪ್ರಯತ್ನ ನಡೆಯುತ್ತಿದೆ ಎಂದು ಕಾಂಗ್ರೆಸ್-ಬಿಜೆಪಿ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡಿವೆ.

ಕಾಂಗ್ರೆಸ್‍ನ ಪ್ರಚಾರಕ್ಕೆ ಅಡ್ಡಿಪಡಿಸಲಾಗಿದೆ ಎಂದು ಎರಡು ಬಾರಿ ಪೊಲೀಸ್ ಠಾಣೆ ಎದುರು ಪ್ರತಿಭಟನೆಗಳಾಗಿವೆ. ಮುಂದಿನ ದಿನಗಳಲ್ಲಿ ಕಾನೂನು ಸುವ್ಯವಸ್ಥೆ ಎದುರಾಗಬಹುದೆಂಬ ಆತಂಕದಿಂದ ಕೇಂದ್ರ ಸಶಸ್ತ್ರ ಪಡೆಗಳನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಕಳೆದ 20 ದಿನಗಳಿಂದ ಬಿಡುವಿಲ್ಲದಂತೆ ಬೆವರರಿಸಿ ಪ್ರಚಾರ ಮಾಡಿದ ನಾಯಕರು ಇಂದು ಸಂಜೆಯ ನಂತರ ವಿಶ್ರಾಂತಿ ಪಡೆದು ಕೊನೆ ಕ್ಷಣದ ತಂತ್ರಗಾರಿಕೆಗಳ ಜಾರಿಗೆ ತೆರೆ ಮರೆಯ ಪ್ರಯತ್ನ ನಡೆಸಲಿದ್ದಾರೆ.

Facebook Comments