ಬಹಿರಂಗ ಪ್ರಚಾರ ಅಂತ್ಯ, ಕ್ಷೇತ್ರದಿಂದ ಹೊರನಡೆದ ಘಟಾನುಘಟಿಗಳು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.2- ಬಹಿರಂಗ ಪ್ರಚಾರ ಅಂತ್ಯಗೊಂಡ ಹಿನ್ನೆಲೆಯಲ್ಲಿ ಘಟಾನುಘಟಿ ನಾಯಕರು ಉಪಚುನಾವಣೆ ನಡೆಯುವ ಕ್ಷೇತ್ರಗಳಿಂದ ಹೊರಗುಳಿದು ನೆರೆಯ ತಾಲ್ಲೂಕುಗಳಲ್ಲಿ ಕುಳಿತು ಕೊನೆ ಕ್ಷಣದ ತಂತ್ರಗಾರಿಕೆ ಹೆಣೆಯುವುದರಲ್ಲಿ ತೊಡಗಿದರು.  ಹೈವೋಲ್ಟೇಜ್ ಕ್ಷೇತ್ರವಾಗಿರುವ ರಾಜರಾಜೇಶ್ವರಿನಗರದಲ್ಲಿ ಕಳೆದ 20 ದಿನಗಳಿಂದ ಠಿಕಾಣಿ ಹೂಡಿ ಸಂಸದ ಡಿ.ಕೆ.ಸುರೇಶ್, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣಭೈರೇಗೌಡ, ಬಿಜೆಪಿಯ ಸಚಿವರಾದ ಅಶ್ವಥ್ ನಾರಾಯಣ, ಜೆಡಿಎಸ್‍ನ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಅನೇಕರು ಇಂದು ಕ್ಷೇತ್ರದಿಂದ ಹೊರಗುಳಿದು ತಮ್ಮ ಕಾರ್ಯಕರ್ತರ ಜೊತೆ ನಿರಂತರ ಸಂಪರ್ಕದಲ್ಲಿದ್ದು, ಅಂತಿಮ ಕ್ಷಣದ ಸಿದ್ದತೆಗಳ ಮೇಲೆ ನಿಗಾ ಇಟ್ಟಿದ್ದರು.

ಇನ್ನು ಶಿರಾ ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಠಿಕಾಣಿ ಹೂಡಿದ್ದ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ನಿನ್ನೆ ಸಂಜೆಯೇ ಕ್ಷೇತ್ರದಿಂದ ಹೊರಬಂದು ಬೆಳ್ಳಾವಿ ಕ್ರಾಸ್‍ನಲ್ಲಿ ತಂಗುವ ಮೂಲಕ ದೂರವಾಣಿಯಲ್ಲಿ ಕ್ಷೇತ್ರದ ಕಾರ್ಯಕರ್ತರಿಗೆ ಸೂಚನೆಗಳನ್ನು ನೀಡುತ್ತಿದ್ದರು.  ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಮಧುಗಿರಿಯಲ್ಲಿ ತಂಗಿದ್ದರು.

ಕಾಂಗ್ರೆಸ್ ನಾಯಕರಾದ ಕೆ.ಎನ್.ರಾಜಣ್ಣ ಕೂಡ ಮಧುಗಿರಿಯಲ್ಲಿದ್ದು ಮಾಜಿ ಉಪಮುಖ್ಯಮಂತ್ರಿ ಪರಮೇಶ್ವರ್ ದೊಡ್ಡಕೆರೆ ಕ್ಷೇತ್ರದಲ್ಲಿ ಉಳಿದುಕೊಂಡಿದ್ದರು. ಅಲ್ಲಿಂದಲೇ ಚುನಾವಣಾ ಕಾರ್ಯಗಳತ್ತ ನಿಗಾ ವಹಿಸಿದ್ದರು. ಈ ಮಧ್ಯೆ ಮೂರು ಕ್ಷೇತ್ರಗಳ ಅಭ್ಯರ್ಥಿಗಳು ಬೆಂಬಲಿಗರೊಂದಿಗೆ ಮನೆ ಮನೆಗೆ ತೆರಳಿ ಮಾತಯಾಚನೆ ಮಾಡಿದರು.

ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಆಯಾ ಪಕ್ಷದ ನಾಯಕರು ಕಾರ್ಯಕರ್ತರ ಮೂಲಕ ಅಂತಿಮ ಹಂತದ ಪ್ರಯತ್ನ ನಡೆಸಿದರು. ಶಿರಾದ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ, ಬಿಜೆಪಿಯ ರಾಜೇಶ್ ಗೌಡ ಹಾಗೂ ಜೆಡಿಎಸ್ ನ ಅಮ್ಮಾಜಮ್ಮ ಮನೆ ಮನೆಗೆ ತೆರಳಿ ಮತಯಾಚಿಸಿದರು.

ಆರ್.ಆರ್ ನಗರದಲ್ಲೂ ಇಂದು ಅಭ್ಯರ್ಥಿಗಳಿಂದ ಕೊನೆಯ ಕ್ಷಣದ ಮತ ಬೇಟೆಗೆ ಕಸರತ್ತು ನಡೆಸಿದ್ದು, ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಇಂದು ಬೆಳಗ್ಗೆಯಿಂದಲೇ ಜ್ಞಾನಭಾರತಿ ವಾರ್ಡ್ ಹಾಗೂ ಲಗ್ಗೆರೆ ವಾರ್ಡ್‍ಗಳಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸಿದರೆ, ಆರ್‍ಆರ್‍ನಗರ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಕೂಡ ಇಂದು ಮನೆ ಮನೆಗೆ ತೆರಳಿ ಮತ ಯಾಚಿಸಿದರೆ, ಹಾಗೇ, ಬಿಜೆಪಿ ಅಭ್ಯರ್ಥಿ ಮುನಿರತ್ನ ಕೂಡ ಇಂದು ಮನೆಗಳಿಗೆ ತೆರಳಿ ತಮಗೆ ಮತ ಹಾಕುವಂತೆ ಮನವಿ ಮಾಡಿದರು.

ಚುನಾವಣಾ ನೀತಿಸಂಹಿತೆ ಪ್ರಕಾರ ಇಂದು ಬಹಿರಂಗ ಪ್ರಚಾರ ನಡೆಸುವಂತಿಲ್ಲ. ಆರ್.ಆರ್ ನಗರ ವ್ಯಾಪ್ತಿಯ ಪ್ರದೇಶಗಳಲ್ಲಿ ಮದ್ಯ ಅಥವಾ ಯಾವುದೇ ಮಾದಕವಸ್ತುಗಳ ಮಾರಾಟ ಮತ್ತು ಸಂಗ್ರಹ ಮಾಡುವುದನ್ನು ನಿಷೇಧಿಸಲಾಗಿದೆ. ನ. 3ರ ಮಧ್ಯರಾತ್ರಿಯವರೆಗೆ ಆರ್‍ಆರ್ ನಗರದಲ್ಲಿ ಮದ್ಯ ಮಾರಾಟ ಮಾಡುವಂತಿಲ್ಲ.

Facebook Comments