ಡಿಕೆಶಿ, ಎಚ್‍ಡಿಕೆ ಆಟ ಆರ್‍ಆರ್ ನಗರದಲ್ಲಿ ನಡೆಯೋಲ್ಲ: ಡಿಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.18- ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು, ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿ.ಕೆ.ಶಿವಕುಮಾರ್ ಅವರಿಂದ ಕ್ಷೇತ್ರದ ಜನರ ಆಶೋತ್ತರಗಳನ್ನು ಈಡೇರಿಸಲು ಸಾಧ್ಯವಿಲ್ಲ. ಇಲ್ಲಿ ಅವರ ಆಟ ನಡೆಯಲ್ಲ ಎಂದು ಹೇಳಿದರು.

ಕ್ಷೇತ್ರದಲ್ಲಿ ಇಂದು ಪಕ್ಷದ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ಮಾಡಿದ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಜೆಡಿಎಸ್ ಅಭ್ಯರ್ಥಿಗಳಿಗಿಂತ ಬಿಜೆಪಿ ಅಭ್ಯರ್ಥಿ ಹೆಚ್ಚು ಸಮರ್ಥರಿದ್ದಾರೆ. ಆಡಳಿತ ಪಕ್ಷದ ಅಭ್ಯರ್ಥಿಗೆ ಮತ ಹಾಕುವುದರಿಂದ ಕ್ಷೇತ್ರಕ್ಕೆ ಒಳ್ಳೆಯದಾಗುತ್ತದೆ. ಈ ವಿಚಾರ ಕ್ಷೇತ್ರದ ಜನರಿಗೆ ತುಂಬಾ ಚೆನ್ನಾಗಿ ಗೊತ್ತಿದೆ ಎಂದರು.

ಬೆಂಗಳೂರು, ನಾಡಪ್ರಭು ಕೆಂಪೇಗೌಡರು ಕಟ್ಟಿದ ಮಹಾನಗರ. ಮುನಿರತ್ನ ಮುಂದಿನ ದಿನಗಳಲ್ಲಿ ನಾಡಪ್ರಭುಗಳ ಪ್ರೇರಣೆಯೊಂದಿಗೆ, ಅವರ ಕನಸು-ದೂರದೃಷ್ಟಿಗೆ ಯಾವುದೇ ಮುಕ್ಕಾಗದಂತೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಲಿದ್ದಾರೆ. ಅವರಿಗೆ ಬೇಕಾದ ಎಲ್ಲ ಸಹಕಾರ ಸರಕಾರದಿಂದ ಸಿಗಲಿದೆ. ಕೇವಲ ಒಣ ರಾಜಕೀಯ ಮಾಡುವುದರಿಂದ, ಟೀಕೆಗಳನ್ನು ಮಾಡುತ್ತ ಕೂರುವುದರಿಂದ ಪ್ರಯೋಜನವಿಲ್ಲ. ಅಭಿವೃದ್ಧಿಯಷ್ಟೇ ಚರ್ಚೆಯ ವಿಷಯ ಎಂದು ಡಿಸಿಎಂ ಹೇಳಿದರು.

ಯಾರ ಪ್ರಭಾವವೂ ಇಲ್ಲ: ಎಚ್.ಡಿ.ಕುಮಾಸ್ವಾಮಿ ಇರಬಹುದು, ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಇರಬಹುದು ಬಂದು ಹೋಗಬಹುದು. ಆದರೆ ಈ ಕ್ಷೇತ್ರದಲ್ಲಿ ಏನು ಮಾಡಲು ಸಾಧ್ಯ ಅವರಿಂದ. ದಿನ ಬೆಳಗಾದರೆ ಜನರ ಜತೆ ನಿಂತು ಕೆಲಸ ಮಾಡುವ ಸಮರ್ಥ ಪ್ರತಿನಿಧಿ ಬೇಕು. ಮುನಿರತ್ನ ಅಂತಹ ವ್ಯಕ್ತಿ. ಚುನಾವಣೆ ಸಮಯದಲ್ಲಿ ಬಂದು ಹೋಗುವ ನಾಯಕರಿಂದ ಜನರಿಗಾಗಲಿ, ಕ್ಷೇತ್ರಕ್ಕಾಗಲಿ ಯಾವುದೇ ಪ್ರಯೋಜನವಿಲ್ಲ. ಹೀಗಾಗಿ ಯಾವ ನಾಯಕರ ಪ್ರಭಾವವೂ ಇಲ್ಲಿ ಇಲ್ಲ. ಅಭಿವೃದ್ಧಿ ಅಂತ ಬಂದಾಗ ಬಿಜೆಪಿಯೊಂದೇ ಪರಿಹಾರ ಎಂದು ಡಾ.ಅಶ್ವತ್ಥನಾರಾಯಣ ಒತ್ತಿ ಹೇಳಿದರು.

Facebook Comments