ಉಪಚುನಾವಣೆ ಫಲಿತಾಂಶದಲ್ಲಡಗಿದೆ ಬಿಎಸ್ವೈ, ಎಚ್‌ಡಿಕೆ, ಡಿಕೆಶಿ ರಾಜಕೀಯ ಭವಿಷ್ಯ…?

ಈ ಸುದ್ದಿಯನ್ನು ಶೇರ್ ಮಾಡಿ

– ರವೀಂದ್ರ.ವೈ.ಎಸ್
ಬೆಂಗಳೂರು,ಅ.20- ರಾಜ್ಯದ ಎರಡು ವಿಧಾನಸಭಾ ಕ್ಷೇತ್ರ ಹಾಗೂ ವಿಧಾನಪರಿಷತ್‍ನ ನಾಲ್ಕು ಕ್ಷೇತ್ರಗಳ ಚುನಾವಣೆಯು ಪ್ರಮುಖ ರಾಜಕೀಯ ಪಕ್ಷಗಳಿಗೆ ಸವಾಲಾಗಿದ್ದರೆ, ಮೂವರು ಪ್ರತಿಷ್ಠಿತರ ರಾಜಕೀಯ ಹಣೆಬರಹ ತೀರ್ಮಾನಿಸುವ ಫಲಿತಾಂಶ ಇದಾಗಲಿದೆ. ಅಧಿಕಾರ ಸ್ವೀಕರಿಸಿದ ದಿನದಂದಲೂ ಅಸ್ಥಿರತೆಯ ಭೀತಿ ಎದುರಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗೆದ್ದು ಕುರ್ಚಿ ಭದ್ರಪಡಿಸಿಕೊಳ್ಳುವ ಅನಿವಾರ್ಯತೆ ಇದೆ.

ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ ಮಹಾಸಮರ ಇದಾಗಿರುವುದರಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಚುನಾವಣೆ ಗೆದ್ದು ತಮ್ಮ ಸಾಮಥ್ರ್ಯ ಸಾಬೀತುಪಡಿಸಬೇಕಾದ ಸವಾಲು ಎದುರಾಗಿದೆ.  ಇನ್ನು ಸಾಲು ಸಾಲು ನಾಯಕರ ಗುಳೆಯಿಂದ ಗೊಂದಲಕ್ಕೆ ಸಿಲುಕಿರುವ ಮಾಜಿ ಸಿ.ಎಂ ಹೆಚ್.ಡಿ.ಕುಮಾರಸ್ವಾಮಿಗೆ ಮುಂದಿನ ಚುನಾವಣೆಗೆ ಪಕ್ಷವನ್ನು ಉಳಿಸಿಕೊಳ್ಳುವ ಸಂದಿಗ್ಧ ಸ್ಥಿತಿ ಬಂದಿದೆ.

ಹೀಗೆ ಈ ಉಪಚುನಾವಣೆಯೂ ಕೇವಲ ರಾಜಕೀಯ ಪಕ್ಷಗಳಿಗೆ ಮಾತ್ರ ಪ್ರತಿಷ್ಠೆಯಾಗಿರದೆ, ರಾಜ್ಯದ ಎರಡು ಸಮುದಾಯದ ಮೂವರು ನಾಯಕರ ರಾಜಕೀಯ ಭವಿಷ್ಯವನ್ನು ತೀರ್ಮಾನಿಸುವ ಫಲಿತಾಂಶವಾಗಲಿದೆ. ಇಲ್ಲಿ ಯಾರೇ ಗೆದ್ದರೂ ,ಇಲ್ಲವೇ ಸೋತರೂ ಮುಂದಿನ ದಿನಗಳಲ್ಲಿ ರಾಜಕೀಯ ಏರಿಳಿತಗಳು ಉಂಟಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ಹಾಗೆ ನೋಡಿದರೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಾಂತರಿಗಳ ನೆರವಿನಿಂದ ಕಳೆದ ವರ್ಷ ಅಧಿಕಾರದ ಗದ್ದುಗೆ ಏರಿದ್ದ ಬಿಜೆಪಿಗೆ ಈ ಉಪ ಚುನಾವಣೆಯಿಂದ ಕಳೆದುಕೊಳ್ಳುವುದೇನೂ ಇದ್ದಂತಿಲ್ಲ. ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿಗೆ ಕಾಂಗ್ರೆಸ್ ಠಕ್ಕರ್ ಕೊಡುತ್ತಿದ್ದರೆ, ಶಿರಾದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಹಣಾಹಣಿಯಲ್ಲಿ ತನ್ನ ಅದೃಷ್ಟದ ಪರೀಕ್ಷೆಗೆ ಬಿಜೆಪಿ ಮುಂದಾಗಿದೆ.

ಬಿ.ಎಸ್.ವೈಗೆ ಕುರ್ಚಿ ಉಳಿಸಿಕೊಳ್ಳುವ ಅನಿವಾರ್ಯತೆ: ಮತ್ತೊಂದೆಡೆ ಬಿಎಸ್‍ವೈ ಪುತ್ರ ವಿಜಯೇಂದ್ರ ಅವರಿಗೂ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಎದುರಿಸುತ್ತಿರುವ ಮೊದಲ ಚುನಾವಣೆ ಇದಾಗಿದ್ದು, ತಮ್ಮದೇ ಸರ್ಕಾರ, ತಮ್ಮ ತಂದೆಯೇ ಸಿಎಂ ಆಗಿರುವಾಗ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ಹೈಕಮಾಂಡ್‍ನಿಂದ ಶಹಭಾಷ್‍ಗಿರಿ ಪಡೆದುಕೊಳ್ಳಬೇಕೆಂಬ ಹುಮ್ಮಸ್ಸಿನಲ್ಲಿದ್ದಾರೆ.

ಆರ್‍ಆರ್‍ನಗರ ಉಪಚುನಾವಣೆಯಲ್ಲಿ ಪಕ್ಷ ಗೆಲ್ಲುವುದು ಎಂಬ ವಿಶ್ವಾಸದಿಂದ ಒಕ್ಕಲಿಗ ನಾಯಕ/ಮಂತ್ರಿಗಳನ್ನು ನಿಯುಕ್ತಿಗೊಳಿಸಿದೆ. ಶಿರಾದಲ್ಲಿ ಸ್ವಲ್ಪ ಕಷ್ಟವಿದೆ, ಹಾಗಾಗಿ ಅಲ್ಲಿ ಬರುವ ಎಲ್ಲ ತೊಡಕನ್ನು ಎದುರಿಸಿ, ರಾಜೇಶ್ ಗೌಡ ಅವರನ್ನು ಗೆಲ್ಲಿಸಲು ವಿಜಯೇಂದ್ರ ಸ್ವತಃ ತಾವೇ ಮುಂದಾಗಿದ್ದಾರೆ.

ಈ ಹಿಂದೆ,ಮಂಡ್ಯ ಜಿಲ್ಲೆ ಕೆ ಆರ್ ಪೇಟೆ ಉಪಚುನಾವಣೆಯ ಸಂದರ್ಭದಲ್ಲಿ ಅಲ್ಲಿಯೇ ಮೊಕ್ಕಾಂ ಹೂಡಿದ್ದ ವಿಜಯೇಂದ್ರ ಪಕ್ಷದ ಅಭ್ಯರ್ಥಿ ನಾರಾಯಣ ಗೌಡ ಅವರನ್ನು ಗೆಲ್ಲಿಸಿಕೊಂಡು ಬಂದಿದ್ದು ಪಕ್ಷದ ವಲಯದಲ್ಲಿ ಸಂಚಲನ ಮೂಡಿಸಿತ್ತು. ಇದನ್ನು ಗುರುತಿಸಿ, ಅಂದಿನ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ವಿಜಯೇಂದ್ರರನ್ನು ದೆಹಲಿಗೆ ಕರೆಸಿ ಬೆನ್ನುತಟ್ಟಿ ಕಳುಹಿಸಿದ್ದರು.

ಶಿರಾ ಕ್ಷೇತ್ರವನ್ನು ಗೆದ್ದರೆ, ಮತ್ತೆ ಹೈಕಮಾಂಡ್ ತನ್ನನ್ನು ಕರ್ನಾಟಕದ ಚಾಣಕ್ಯ ಎಂದು ಗುರುತಿಸಿ ತನ್ನ ಮೇಲಿರುವ ಆರೋಪವನ್ನು ನಿರ್ಲಕ್ಷಿಸಿ ತನಗೆ ಇನ್ನೂ ಹೆಚ್ಚಿನ ಅಧಿಕಾರ ನೀಡಬಹುದು ಎಂಬುದು ವಿಜಯೇಂದ್ರ ಅವರ ಲೆಕ್ಕಾಚಾರ.  ಎರಡೂ ಕ್ಷೇತ್ರಗಳನ್ನು ಗೆದ್ದರೆ ತಮ್ಮ ನಾಯಕತ್ವದ ವಿರುದ್ಧ ಗುಟುರು ಹಾಕುತ್ತಿರುವ ವಿರೋಧಿಗಳ ಬಾಯಿಗೆ ಬೀಗ ಹಾಕಿಸಬಹುದೆಂಬುದು ಯಡಿಯೂರಪ್ಪನವರ ತಂತ್ರಗಾರಿಕೆಯಾಗಿದೆ.

ಜೆಡಿಎಸ್‍ಗೆ ಅಸ್ತಿತ್ವದ ಭೀತಿ: ಉಪ ಚುನಾವಣೆ ಜೆಡಿಎಸ್ ಪಾಲಿಗೆ ಅಗ್ನಿಪರೀಕ್ಷೆಯ ಜೊತೆಗೆ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಹೋರಾಟವೂ ಆಗಿದೆ. ಶಿರಾದಲ್ಲಿ ತನ್ನ ಬಳಿ ಇದ್ದ ಸ್ಥಾನವನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಜೆಡಿಎಸ್ ಆರ್‍ಆರ್‍ನಗರದಲ್ಲಿ ಗುರುತರ ಸವಾಲನ್ನೇ ಎದುರಿಸುತ್ತಿದೆ. ಸ್ಥಾನ ಗೆಲ್ಲುವುದಕ್ಕಿಂತ ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿಯ ಆಪರೇಷನ್ ತಡೆಯುವುದೇ ಜೆಡಿಎಸ್‍ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ನಾಯಕರು ಹೋದರೂ ಕಾರ್ಯಕರ್ತರು ನಮ್ಮ ಬಳಿ ಇದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸಾರಿ ಸಾರಿ ಹೇಳಿದರೂ ವಾಸ್ತವದಲ್ಲಿ ಸಂಘಟನೆಯನ್ನು ಉಳಿಸಿಕೊಳ್ಳಲು ಅವರೂ ಸಹ ಭಗೀರಥ ಪ್ರಯತ್ನವನ್ನೇ ನಡೆಸಿದ್ದಾರೆ. ಶಿರಾದಲ್ಲಿ ಸತ್ಯನಾರಾಯಣ ಅವರ ಪತ್ನಿಗೆ ಟಿಕೆಟ್ ನೀಡಿದ್ದರೂ ಅನುಕಂಪದ ಮತಗಳ ಮೇಲೆ ಅವಲಂಬಿತರಾಗಿರುವುದರಿಂದ ಗೆಲುವು ಕಟ್ಟಿಟ್ಟ ಬುತ್ತಿ ಎಂಬ ಪರಿಸ್ಥಿತಿ ಇಲ್ಲ. ಕಾರಣ ಸರತಿ ಸಾಲಿನಲ್ಲಿ ಸ್ಥಳೀಯ ಮುಖಂಡರು ಕಾಂಗ್ರೆಸ್ ಮತ್ತು ಬಿಜೆಪಿಗೆ ವಲಸೆ ಹೋಗುತ್ತಿದ್ದಾರೆ.

ಇನ್ನು ಆರ್‍ಆರ್ ನಗರದಲ್ಲಿ ಸಹ ಪರಿಸ್ಥಿತಿ ಭಿನ್ನವಾಗಿಲ್ಲ. ಟಿಕೆಟ್ ಹಂಚಿಕೆ ನಂತರ ಸ್ವತಃ ಕ್ಷೇತ್ರದ ಜೆಡಿಎಸ್ ಘಟಕಾಧ್ಯಕ್ಷರೇ ಪಕ್ಷ ತೊರೆದು ಡಿಕೆಶಿ ಸಖ್ಯ ಬೆಳೆಸಿದ್ದಾರೆ. ಜೊತೆಗೆ ತಮ್ಮ ಬೆಂಬಲಿಗರನ್ನೂ ಗುಳೆ ಎಬ್ಬಿಸಿದ್ದಾರೆ. ಅತ್ತ ಬಿಜೆಪಿ ಕಡೆಗೂ ವಾಲದೇ ಇತ್ತ ಕಾಂಗ್ರೆಸ್ ಸಹವಾಸಕ್ಕೂ ಹೋಗದೇ ಸ್ವತಂತ್ರವಾಗಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್ ಈಗ ಹೋರಾಟ ನಡೆಸಬೇಕಾದ ಅನಿವಾರ್ಯ ಪರಿಸ್ಥಿತಿಯನ್ನು ಎದುರಿಸುತ್ತಿದೆ.

ಉಪಚುನಾವಣೆಯಿಂದ ಜೆಡಿಎಸ್‍ಗೆ ಯಾವುದೇ ಲಾಭವಿಲ್ಲ ಎಂಬುದು ಗೊತ್ತೇ ಇದೆ. ಹೀಗಿರುವಾಗ ಬಿಜೆಪಿ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರು ಮೃದುಧೋರಣೆ ತೋರಿದಂತೆ ಭಾಸವಾಗುತ್ತಿದೆ. ಅದರಲ್ಲೂ ರಾಮನಗರವನ್ನೇ ಟಾರ್ಗೆಟ್ ಮಾಡಿರುವುದನ್ನು ನೋಡಿದರೆ ಕನಕಪುರ ಬಂಡೆ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ಕೊಡುವಂತೆ ಕಾಣುತ್ತಿದೆ.

ಡಿಕೆಶಿಗೆ ಅಗ್ನಿ ಪರೀಕ್ಷೆ : ಕೆಪಿಸಿಸಿ ಸಾರಥ್ಯ ವಹಿಸಿಕೊಂಡ ನಂತರದ ಎದುರಾಗಿರುವ ಮೊದಲ ಚುನಾವಣೆ ಇದಾಗಿರುವುದರಿಂದ ಶತಾಯಗತಾಯ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಿ ತನ್ನ ಸಾಮಥ್ರ್ಯ ಪ್ರದರ್ಶಿಸಬೇಕಾದ ಅನಿವಾರ್ಯತೆ ಇದೆ.  ಏಕೆಂದರೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ (ಈಗ ಡಿ.ಕೆ. ಸುರೇಶ್ ಸಂಸದ) ವ್ಯಾಪ್ತಿಯಲ್ಲಿ ಈ ಕ್ಷೇತ್ರ ಇದೆ. ಹಿಂದೆ ಕನಕಪುರ ಲೋಕಸಭಾ ಕ್ಷೇತ್ರದಿಂದ ಕುಮಾರಸ್ವಾಮಿ ಆಯ್ಕೆಯಾಗಿದ್ದರು.

ಆದರೆ, ಆಗಿನ್ನೂ ಆರ್.ಆರ್.ನಗರ ಕ್ಷೇತ್ರ ಇರಲಿಲ್ಲ. ಆದರೆ, ಇಲ್ಲಿನ ಬಹುತೇಕ ಮತದಾರರು ಕನಕಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇದ್ದರು. ಹೀಗಾಗಿ ತಮ್ಮ ಪ್ರಭಾ ವಲಯವನ್ನು ಉಳಿಸಿಕೊಳ್ಳಲು ಕುಮಾರಸ್ವಾಮಿ ಯತ್ನ ಮುಂದುವರಿಸಿದ್ದಾರೆ.  ಇರುವ ಅಸ್ತಿತ್ವವನ್ನು ಶತಾಯಗತಾಯ ಕಾಪಿಟ್ಟುಕೊಳ್ಳಬೇಕೆಂದು ಡಿ.ಕೆ. ಶಿವಕುಮಾರ್ ಹಟ ತೊಟ್ಟಿದ್ದಾರೆ.

ಈ ಕ್ಷೇತ್ರದ ಒಕ್ಕಲಿಗ ನಾಯಕರನ್ನು ಕಾಂಗ್ರೆಸ್‍ಗೆ ಸೆಳೆಯುತ್ತ, ತಾವೇ ಒಕ್ಕಲಿಗ ನಾಯಕರು ಎಂದು ಬಿಂಬಿಸಿಕೊಳ್ಳಲು ಕೆಪಿಸಿಸಿ ಅಧ್ಯಕ್ಷರು ಯತ್ನಿಸುತ್ತಿದ್ದಾರೆ ಎಂದು ಡಿಕೆಶಿ ಹೆಸರು ಹೇಳದೇ ಕುಮಾರಸ್ವಾಮಿ ಪ್ರತಿನಿತ್ಯ ಆಪಾದನೆ ಮಾಡುತ್ತಿದ್ದಾರೆ.  ಸಮುದಾಯ ಕಷ್ಟಕ್ಕೆ ಸಿಲುಕಿದ್ದ ಸನ್ನಿವೇಶದಲ್ಲಿ ಏನು ಮಾಡಿದ್ದರೆ ಎಂದು ಕುಟುಕುತ್ತಿದ್ದಾರೆ. ಇಲ್ಲಿನ ಫಲಿತಾಂಶ ಇಬ್ಬರಿಗೂ ಪ್ರತಿಷ್ಠೆಯಾಗುವ ಜತೆಗೆ ಭವಿಷ್ಯದ ಲೆಕ್ಕಾಚಾರವೂ ಇದರ ಹಿಂದೆ ಇದೆ.

ತಮ್ಮ ಕೈಯಿಂದ ತಪ್ಪಿ ಹೋಗುತ್ತಿರುವ ಒಕ್ಕಲಿಗ ಸಮುದಾಯದ ಮತಗಳನ್ನು ಡಿ.ಕೆ. ಶಿವಕುಮಾರ್ ಕೈವಶ ಮಾಡಿಕೊಳ್ಳುತ್ತಿದ್ದಾರೆ ಎಂಬ ಭಯ ಕುಮಾರಸ್ವಾಮಿ ಅವರಿಗೆ ಇದ್ದಂತೆ ತೋರುತ್ತಿದೆ. ಎಲ್ಲಿಯೂ ಅದನ್ನು ಹೇಳಿಕೊಳ್ಳದೇ ಚಾಣಾಕ್ಷತೆಯಿಂದ ಅದನ್ನೇ ಮಾಡುತ್ತಿರುವ ಶಿವಕುಮಾರ್, ತಮ್ಮ ಮುಂದಿನ ಹಾದಿಯನ್ನು ಸಲೀಸು ಮಾಡಿಕೊಳ್ಳುತ್ತಿದ್ದಾರೆ.

ಈ ಚುನಾವಣೆಯಲ್ಲಿ ಗೆದ್ದ ಮಾತ್ರಕ್ಕೆ ಇನ್ನೂ ಎರಡೂ ವರ್ಷದ ಬಳಿಕ ನಡೆಯಬೇಕಾದ ವಿಧಾನಸಭೆ ಚುನಾವಣೆಗೆ ಇದೇನೂ ದಿಕ್ಸೂಚಿಯಾಗಲಾರದು. ಆ ಹೊತ್ತಿಗೆ ಇನ್ನೂ ಏನೇನೂ ಬದಲಾವಣೆ ರಾಜ್ಯದಲ್ಲಿ ಆಗಲಿಕ್ಕಿದೆಯೋ ಗೊತ್ತಿಲ್ಲ.

ಪ್ರತಿ ಚುನಾವಣೆಯೂ ರಾಜಕಾರಣಿಗಳಿಗೆ ಮೆಟ್ಟಿಲು ಆಗಿರುವುದರಿಂದ ಅದನ್ನು ಹತ್ತುತ್ತೇವೋ ಅಥವಾ ಒಂದು ಹೆಜ್ಜೆ ಇಳಿಯುತ್ತೇವೋ ಎಂಬುದಷ್ಟೇ ಮುಖ್ಯ. ಈ ಕಾರಣಕ್ಕಾಗಿಯೇ ಒಕ್ಕಲಿಗ ನಾಯಕತ್ವಕ್ಕಾಗಿ ಡಿಕೆ?ಎಚ್ಡಿಕೆ ಜಿದ್ದಿಗೆ ಬಿದ್ದಿರುವುದು ಸತ್ಯ

Facebook Comments