ವಿಜಯದಶಮಿ ನಂತರ ಉಪಚುನಾವಣೆ ಅಖಾಡಕ್ಕಿಳಿಯಲಿದ್ದಾರೆ ಸಿಎಂ ಬಿಎಸ್‍ವೈ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.24- ವಿಜಯದಶಮಿ ಹಬ್ಬ ಮುಗಿದ ನಂತರ ಸೋಮವಾರದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚುನಾವಣಾ ಅಖಾಡಕ್ಕೆ ಧುಮುಕಲಿದ್ದಾರೆ. ಎರಡು ವಿಧಾನಸಭೆ ಹಾಗೂ ನಾಲ್ಕು ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಅಭ್ಯರ್ಥಿಗಳ ಪರ ಬಿಎಸ್‍ವೈ ಅವರು ಬಿರುಸಿನ ಪ್ರಚಾರ ನಡೆಸಿ ಮತಯಾಚನೆ ಮಾಡಲಿದ್ದಾರೆ.

ಇಂದು ತುಮಕೂರಿನಲ್ಲಿ ಮಾತ್ರ ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿದಾನಂದ ಅವರ ಪರ ಮತಯಾಚನೆ ಮಾಡುವರು. ನಾಳೆ ವಿಶ್ರಾಂತಿ ಪಡೆಯಲಿದ್ದು, ಸೋಮವಾರದಿಂದ ಚುನಾವಣಾ ಅಖಾಡದಲ್ಲಿ ಪಾಲ್ಗೊಳ್ಳುವರು.

ಪ್ರತಿಷ್ಠೆಯ ಕಣವಾಗಿರುವ ತುಮಕೂರು ಜಿಲ್ಲೆ ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್‍ಗೌಡ ಪರ ಯಡಿಯೂರಪ್ಪನವರು ಒಟ್ಟು ನಾಲ್ಕು ಬಾರಿ ಕ್ಷೇತ್ರದಲ್ಲಿ ಮತಯಾಚನೆ ಮಾಡುವರೆಂದು ತಿಳಿದುಬಂದಿದೆ. ಬಹಿರಂಗ ಸಮಾವೇಶ, ಹೋಬಳಿ, ತಾಲ್ಲೂಕು ಮಟ್ಟ ಸೇರಿದಂತೆ ಮತ್ತಿತರ ಕಡೆ ಅಭ್ಯರ್ಥಿ ಪರ ಮತ ಯಾಚಿಸಿ ಬಿಜೆಪಿ ಗೆಲ್ಲಿಸುವಂತೆ ಮತದಾರರಿಗೆ ಮನವರಿಕೆ ಮಾಡಲಿದ್ದಾರೆ.

ಶಿರಾ, ಬೆಂಗಳೂರಿನ ಆರ್‍ಆರ್ ನಗರ, ಎರಡು ಶಿಕ್ಷಕರ ಕ್ಷೇತ್ರ ಹಾಗೂ ಎರಡು ಪದವೀಧರ ಕ್ಷೇತ್ರಗಳ ಪರಿಷತ್ ಚುನಾವಣೆಯಲ್ಲೂ ಪಕ್ಷದ ಪರ ಪ್ರಚಾರ ನಡೆಸುವರು. ಈಗಾಗಲೇ ಪಕ್ಷದ ವತಿಯಿಂದ ಯಡಿಯೂರಪ್ಪನವರು ಮತ್ತು ಸಚಿವರು ಎಲ್ಲೆಲ್ಲಿ, ಯಾವ ದಿನಾಂಕದಂದು, ಯಾವ ಸಮಯದಲ್ಲಿ ಪ್ರಚಾರ ನಡೆಸಬೇಕು ಎಂಬುದರ ವೇಳಾಪಟ್ಟಿಯನ್ನು ಸಹ ಸಿದ್ಧಪಡಿಸಲಾಗಿದೆ.

ಬಿಎಸ್‍ವೈ ಪ್ರಚಾರಕ್ಕೆ ಧುಮುಕುತ್ತಿರುವುದರಿಂದ ಚುನಾವಣಾ ಕಾವು ಇನ್ನಷ್ಟು ರಂಗೇರುವುದರಲ್ಲಿ ಅನುಮಾನವೇ ಇಲ್ಲ. ಪ್ರಚಾರಕ್ಕೆ ಧುಮುಕಿದ ಸಚಿವರು: ಇನ್ನು ಮುಂದಿನ ತಿಂಗಳು ನಡೆಯಲಿರುವ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳನ್ನು ಗೆಲ್ಲಲೇಬೇಕು ಎಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆ ಬಳಿಕ ಸಚಿವರ ದಂಡು ಪ್ರಚಾರ ಕ್ಷೇತ್ರಕ್ಕೆ ಧುಮುಕಿದೆ.

ಉಪಚುನಾವಣೆ ಗೊಡವೆ ನಮಗೇಕೆ ಎಂದು ತಟಸ್ಥರಾಗಿದ್ದ ಸಚಿವರಿಗೆ ಯಡಿಯೂರಪ್ಪ ಅವರು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಈ ಬದಲಾವಣೆ ಕಂಡುಬಂದಿದೆ. ಶಿರಾದಲ್ಲಿ ವಿಜಯೇಂದ್ರಗೆ ಹೊಣೆ ನೀಡಿರುವುದನ್ನೇ ನೆಪವಾಗಿಸಿಕೊಂಡು ಹಲವಾರು ಸಚಿವರು ಅತ್ತ ಸುಳಿದಿರಲಿಲ್ಲ. ಇನ್ನೂ ಆರ್‍ಆರ್ ನಗರದಲ್ಲಿಯೂ ಅಭ್ಯರ್ಥಿ ಮುನಿರತ್ನ ಅವರೇ ಕರೆಯಲಿ ಎಂದು ಕೆಲ ಸಚಿವರು ಮುಗುಮ್ಮಾಗಿ ಉಳಿದಿದ್ದರು.

ಆದರೆ, ಗುರುವಾರದ ಸಂಪುಟ ಸಭೆಯಲ್ಲಿ ಬಿಎಸ್‍ವೈ ಈ ಎರಡೂ ಕ್ಷೇತ್ರಗಳ ಚುನಾವಣೆಯನ್ನು ಗಂಭಿರವಾಗಿ ಪರಿಗಣಿಸಿ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡುವಂತೆ ಸಚಿವರಿಗೆ ಸೂಚಿಸಿದ್ದರು. ಸಿಎಂ ಕೆಂಗಣ್ಣಿಗೆ ಗುರಿಯಾಗುವುದೇಕೆ ಎಂದು ಶಿರಾ ಮತ್ತು ಆರ್‍ಆರ್ ನಗರಕ್ಕೆ ಸಚಿವರು ಒಬ್ಬರ ಮೇಲೊಬ್ಬರಂತೆ ಧಾವಿಸಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಡಿಸಿಎಂ ಸವದಿ, ಸಮಾಜ ಕಲ್ಯಾಣ ಮಂತ್ರಿ ಶ್ರೀರಾಮುಲು, ಸೋಮಣ್ಣ ಮುಂತಾದವರು ಸಕ್ರಿಯವಾಗಿ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದಕ್ಕೆ ಹಿಂದೆ ಬಿಎಸ್‍ವೈ ಅವರ ಸೂಚನೆಯೇ ಕಾರಣ ಎನ್ನಲಾಗಿದೆ.

ಇನ್ನು ಕೆಲ ಪ್ರಭಾವಿ ಸಚಿವರು ಶಿರಾ ಗೊಡವೆಗೆ ಹೋಗದೆ ಆರ್‍ಆರ್ ನಗರಕ್ಕೆ ಮಾತ್ರ ತಮ್ಮನ್ನು ಸೀಮಿತ ಮಾಡಿಕೊಂಡಿದ್ದಾರೆ. ಇದಕ್ಕೆ ಮುಖ್ಯ ಕಾರಣ ಶಿರಾದಲ್ಲಿ ವಿಜಯೇಂದ್ರ ದರ್ಬಾರ್ ಎಂಬ ಮಾತುಗಳು ಕೇಳಿಬಂದಿವೆ. ಇದನ್ನರಿತಿರುವ ಸಿಎಂ ಯಡಿಯೂರಪ್ಪ ಹೇಗಾದರೂ ಮಾಡಿ ಈ ಸಚಿವರ ಮನವೊಲಿಸಿ ಅವರನ್ನು ವಿಜಯೇಂದ್ರ ಜತೆ ಒಟ್ಟುಗೂಡಿಸಿ ಪ್ರಚಾರಕ್ಕೆ ಅಣಿ ಮಾಡುವ ಪ್ರಯತ್ನಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Facebook Comments