ಉಪ ಚುನಾವಣೆ ನಿರ್ಣಾಯಕ ಘಟ್ಟಕ್ಕೆ, ತಾರಕಕ್ಕೇರಿದ ಪ್ರಚಾರ, ಆರೋಪಗಳ ಸುರಿಮಳೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.29- ಮುಂಬರುವ 2023ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ರಾಜ್ಯದ ಎರಡು ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನಕ್ಕೆ ದಿನಗಣನೆ ಆರಂಭವಾಗಿರುವಂತೆ ಅಬ್ಬರದ ಪ್ರಚಾರ ಮುಗಿಲುಮುಟ್ಟಿದೆ. ಬಹಿರಂಗ ಪ್ರಚಾರ ಭಾನುವಾರ ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್  ಹಾಗೂ ಜೆಡಿಎಸ್ ಸೇರಿದಂತೆ ಅಭ್ಯರ್ಥಿಗಳ ಪರವಾಗಿ ಪ್ರಮುಖರು ಇಂದು ಬಿರುಸಿನ ಪ್ರಚಾರ ನಡೆಸಿ, ಮತಬೇಟೆ ನಡೆಸಿದರು.

ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ಪಕ್ಷಗಳಲ್ಲಿ ಪ್ರಚಾರದ ಭರಾಟೆ ಜೋರಾಗಿದೆ.  ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಅಳಿವು-ಉಳಿವಿನ ಪ್ರಶ್ನೆಯಾಗಿದ್ದು, ಪ್ರತಿಪಕ್ಷದ ಕಾಂಗ್ರೆಸ್, ಜೆಡಿಎಸ್‍ಗೆ ಈ ಉಪಚುನಾವಣೆ ಪ್ರತಿಷ್ಠೆಯ ಕಣವಾಗಿರುವುದರಿಂದ ಜಿದ್ದಾಜಿದ್ದಿನಿಂದ ಪ್ರಚಾರ ನಡೆಸುತ್ತಿವೆ.

ನಾಳೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ ಪರವಾಗಿ ಪ್ರಚಾರಕ್ಕೆ ಧುಮುಕಿ ರಣಕಹಳೆ ಮೊಳಗಿಸುವರು. ಇದಕ್ಕೆ ಪ್ರತಿಯಾಗಿ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿ.ಎಂ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ.

ಡಾ. ಸಿ.ಎನ್ ಅಶ್ವಥ್‍ನಾರಾಯಣ, ಸಚಿವರಾದ ಆರ್.ಆಶೋಕ್. ಡಾ. ಕೆ.ಸುಧಾಕರ್, ಎಸ್.ಟಿ.ಸೋಮಶೇಖರ್, ಕೆ.ಗೋಪಾಲಯ್ಯಸೇರಿದಂತೆ ಮತ್ತಿತರರು ಪ್ರಚಾರ ನಡೆಸಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದು ಮತದಾರರಿಗೆ ಮನವಿ ಮಾಡಿದರು. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಭರ್ಜರಿ ಪ್ರಚಾರ ನಡೆಸಿದ್ದಾರೆ. ಬಿರು ಬಿಸಿಲಿನಲ್ಲೂ ದಣಿವಾರಿಸಿಕೊಳ್ಳದೆ ಹಳ್ಳಿ ಹಳ್ಳಿಗಳನ್ನು ಸುತ್ತಿ ಮತಯಾಚಿಸಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವಿನ ಜಿದ್ದಾಜಿದ್ದಿನ ಕುರುಕ್ಷೇತ್ರವಾಗಿರುವ ಈ ಎರಡು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ರಾಜ್ಯರಾಜಕಾರಣದಲ್ಲಿ ಭಾರೀ ಬದಲಾವಣೆಗೆ ಮುನ್ನುಡಿ ಬರೆಯಲಿದೆ. ಹೀಗಾಗಿಯೇ ರಾಜ್ಯದ ಇತಿಹಾಸದಲ್ಲಿಯೇ ಹಿಂದೆಂದೂ ಕಾಣದ ರೀತಿ ತಮ್ಮ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಹರ ಸಾಹಸ ನಡೆಸುತ್ತಿದ್ದಾರೆ.

ಶತಯಗತಾಯ ಶಿರಾ ಕ್ಷೇತ್ರದಲ್ಲಿ ಗೆದ್ದು ಕಾಂಗ್ರೆಸ್ ಜೆಡಿಎಸ್ ಗೆ ಠಕ್ಕರ್ ಕೊಡಲು ಹವಣಿಸುತ್ತಿರುವ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜೇಯೇಂದ್ರ ಶಿರಾ ಪಟ್ಟಣದಲ್ಲಿ ಭರ್ಜರಿ ಬೈಕ್ ರ್ಯಾಲಿ ನಡೆಸಿದರು. ಸಿದ್ದರಾಮಯ್ಯ ಕೂಡ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಪರವಾಗಿ ಪ್ರಚಾರ ನಡೆಸಿದರೆ, ಜೆಡಿಎಸ್ ವರಿಷ್ಠರು ಅಮ್ಮಾಜಮ್ಮ ಪರ ಪ್ರಚಾರ ಮಾಡಿದ್ದಾರೆ.

ಉಪಚುನಾವಣೆ ಗೆಲ್ಲಲು ಮೂರೂ ಪಕ್ಷಗಳು ಕಾರ್ಯತಂತ್ರ ರೂಪಿಸಿವೆ. ಜÁತಿವಾರು ಸಭೆಗಳ ಮೂಲಕ ಸಮುದಾಯದವರನ್ನು ಸೆಳೆಯುವ ಪ್ರಯತ್ನ ನಡೆಸುತ್ತಿವೆ. ಪಕ್ಷದ ಮುಖಂಡರು, ಸಮುದಾಯದ ನಾಯಕರೊಂದಿಗೆ ಚರ್ಚಿಸಿ ತಮಗೆ ಬೆಂಬಲ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ದೇವಾಲಯ, ಕಲ್ಯಾಣಮಂಟಪಗಳಲ್ಲಿ ರಾಜಕೀಯ ಸಭೆಗಳನ್ನು ಆಯೋಜಿಸಲಾಗುತ್ತಿದೆ. ಸ್ತ್ರೀ ಸಂಘಟನೆಗಳ ಕಾರ್ಯಕರ್ತರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರತ್ತ ಅಭ್ಯರ್ಥಿಗಳು ಎಡತಾಕುತ್ತಿದ್ದಾರೆ. ಮತದಾರರ ಮನವೊಲಿಕೆಗೆ ನಾನಾ ಕಸರತ್ತುಗಳನ್ನು ಅಭ್ಯರ್ಥಿಗಳು ಮಾಡುತ್ತಿದ್ದಾರೆ.

ಚುನಾವಣಾ ನೀತಿ ಸಂಹಿತೆ ಬಿಗಿಯಾಗಿರುವ ಹಿನ್ನೆಲೆಯಲ್ಲಿ ಕಟೌಟ್, ಬ್ಯಾನರ್‍ಗಳು, ಮೈಕಾಸುರನ ಹಾವಳಿ ತಗ್ಗಿದ್ದು, ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ಗಲ್ಲಿಗಲ್ಲಿಗಳಲ್ಲಿ ಹೋಗಿ ಮತ ಯಾಚಿಸುತ್ತಿದ್ದಾರೆ. ಅಭ್ಯರ್ಥಿಗಳ ಪರವಾಗಿ ನಾಯಕರು ರೋಡ್ ಶೋ ಮೂಲಕ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.  ರಾಜಕೀಯ ನೇತರಾರು ಮತದಾರರನ್ನು ಓಲೈಸಿಕೊಳ್ಳುವ ಭರದಲ್ಲಿ ಕನಿಷ್ಠ ಸೌಜನ್ಯವನ್ನೂ ಮರೆತು ಪರಸ್ಪರ ಆರೋಪ- ಪ್ರತ್ಯರೋಪ ಮಾಡಿ, ಜನತೆಯ ಮುಂದೆ ಬೆತ್ತಲಾಗಿದ್ದು ಈ ಚುನಾವಣೆಯ ಮತ್ತೊಂದು ವಿಶೇಷ.

ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ಮುಖಂಡರು ತಮ್ಮನ್ನು ಸಮರ್ಥಿಸಿಕೊಳ್ಳುವ ಭರದಲ್ಲಿ ತಾವು ಏನು ಮಾತನಾಡುತ್ತೇವೆ ಎನ್ನುವುದನ್ನು ಮೆರೆತು ಟೀಕೆ ಮಾಡುವುದರ ಮೂಲಕ ಗೌರವಸ್ಥರು ರಾಜಕಾರಣಕ್ಕೆ ಬರಬೇಕೇ ಬೇಡವೇ ಎಂಬ ಮೂಲಭೂತ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

# ಕ್ಷೇತ್ರ ಬಿಟ್ಟು ಹೊರಡಲು ಸೂಚನೆ :
ಉಪಚುನಾವಣೆಗೆ ಸಂಬಂಧಿಸಿದಂತೆ ಕ್ಷೇತ್ರ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳ ಪರ ಮತ ಯಾಚಿಸುವ ಕ್ಷೇತ್ರದ ಮತದಾರರಲ್ಲದ ಏಜೆಂಟರು, ರಾಜಕೀಯ ಪಕ್ಷಗಳ ಮುಖಂಡರು, ತಾರಾ ಪ್ರಚಾರಕರು ಹಾಗೂ ಕ್ಷೇತ್ರದ ಮತದಾರರಲ್ಲದವರು ಶನಿವಾರ ಕ್ಷೇತ್ರ ಬಿಟ್ಟು ಹೊರಡಬೇಕು. ಉಪಚುನಾವಣೆ ಮತದಾನಕ್ಕೂ ಹಿಂದಿನ 48 ಗಂಟೆಗಳ ಅವಧಿಯಲ್ಲಿ ಚುನಾವಣಾ ಸಂಬಂಧ ಯಾವುದೇ ಕಾರ್ಯಕ್ರಮ ನಡೆಸುವುದನ್ನು ನಿಷೇಧಿಸಲಿದೆ.

ಈ ಹಿನ್ನಲೆಯಲ್ಲಿ ಮತದಾನ ಮುಕ್ತಾಯದ ಅವಧಿಯ ಹಿಂದಿನ 48 ಗಂಟೆಗಳಲ್ಲಿ ಯಾವುದೇ ವ್ಯಕ್ತಿ, ರಾಜಕೀಯ ಪಕ್ಷ, ಉಮೇದುವಾರರು ಚುನಾವಣಾ ಸಂಬಂಧ ಯಾವುದೇ ಸಭೆ ಸಮಾರಂಭ ನಡೆಸುವಂತಿಲ್ಲ. ಮೆರವಣಿಗೆ ಮಾಡುವಂತಿಲ್ಲ. ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡುವಂತಿಲ್ಲ.

ಮತದಾನ ಪೂರ್ಣಗೊಳ್ಳುವ ಸಮಯಕ್ಕಿಂತ ಮುಂಚಿನ 48 ಗಂಟೆಗಳ ಅವಧಿಯಲ್ಲಿ ಯಾವುದೇ ಬಗೆಯ ಅಭಿಪ್ರಾಯ ಸರ್ವೇ (ಒಪಿನಿಯನ್ ಪೋಲ್) ಅಥವಾ ಇತರ ಯಾವುದೇ ಪೋಲ್ ಸರ್ವೇ ಸೇರಿದಂತೆ ಚುನಾವಣಾ ವಿಚಾರಗಳನ್ನು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರದರ್ಶಿಸುವುದನ್ನು ಸಹ ನಿಷೇಧಿಸಲಾಗುತ್ತದೆ.

ಪರಸ್ಪರ ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ.ಈ ಎಲ್ಲಾ ಬೆಳವಣಿಗೆಗಳಿಂದ ಉಪಚುನಾವಣಾ ಕಣ ತೀವ್ರ ಕುತೂಹಲ ಕೆರಳಿಸಿದೆ.ನವೆಂಬರ್ 3 ರಂದು ನಡೆಯಲಿರುವ ಚುನಾವಣೆಯಲ್ಲಿಮತದಾರ ಯಾರ ಕೈ ಹಿಡಿಯಲಿದ್ದಾರೆ ಎಂಬುದನ್ನು ಕಾದುನೋಡಬೇಕು.

Facebook Comments