ಬಹಿರಂಗ ಪ್ರಚಾರಕ್ಕೆ ನಾಳೆ ಕೊನೆ ದಿನ, ಇಂದು ತಾರಕಕ್ಕೇರಿದ ಪ್ರಚಾರದ ರಂಗು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.30- ರಾಜರಾಜೇಶ್ವರಿ ನಗರ, ಶಿರಾ ಉಪಚುನಾವಣೆಯ ಬಹಿರಂಗ ಪ್ರಚಾರ ನಾಳೆ ಅಂತ್ಯಗೊಳ್ಳಲಿದ್ದು, ಪ್ರಚಾರದ ಭರಾಟೆ ತಾರಕಕ್ಕೇರಿದೆ. ಮತದಾರರ ಮನವೊಲಿಕೆಗೆ ಘಟಾನು ಘಟಿಗಳು ಅಂತಿಮ ಕಸರತ್ತು ನಡೆಸುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರು ಪಕ್ಷಗಳ ನಾಯಕರು ಎರಡೂ ಕ್ಷೇತ್ರಗಳಲ್ಲಿ ತಮ್ಮ ಪಕ್ಷಗಳ ಅಭ್ಯರ್ಥಿಗಳ ಗೆಲುವಿಗೆ ಪ್ರಚಾರ ಕಣದಲ್ಲಿ ಬೆವರಿಳಿಸುತ್ತಿದ್ದಾರೆ.

ಇತ್ತ ರಾಜರಾಜೇಶ್ವರಿ ನಗರದಲ್ಲಿ ಚುನಾವಣಾ ಪ್ರಚಾರದ ಕಣಕ್ಕಿಳಿದ ಚಿತ್ರನಟ ದರ್ಶನ್, ತಾರ ಮೆರಗು ತಂದುಕೊಟ್ಟರೆ ಅತ್ತ ಶಿರಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರೇ ದಿನವಿಡೀ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿ ಮತದಾರರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡಿದರು. ಎರಡೂ ಕ್ಷೇತ್ರಗಳಲ್ಲಿ ನಾಯಕರುಗಳು ಆರೋಪ ಪ್ರತ್ಯಾರೋಪಗಳ ಸುರಿಮಳೆ ಪರಸ್ಪರ ಕೆಸರೆರೆಚಾಟ ಕೇಳಿ ಬಂದವು. ಭಾರೀ ಮೆರವಣಿಗೆ ರೋಡ್‍ಷೋ ಗಳು ನಡೆದವು. ಕಾರ್ಯಕರ್ತರು, ಬೆಂಬಲಿಗರನ್ನು ನಿಭಾಯಿಸಲು ಪೊಲೀಸರು ಹೈರಾಣಾದರು.

ರಾಜರಾಜೇಶ್ವರಿ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಪರವಾಗಿ ಚಿತ್ರನಟ ದರ್ಶನ್ ಇಂದು ಭಾರೀ ಪ್ರಚಾರ ನಡೆಸಿದರು. ಬೆಳಗ್ಗೆ 9 ಗಂಟೆಯಿಂದ ಯಶವಂತಪುರ ರೈಲ್ವೆ ನಿಲ್ದಾಣದಿಂದ ಕ್ಷೇತ್ರದ ವಿವಿಧೆಡೆ ಸಂಜೆ 7 ಗಂಟೆಯವರೆಗೂ ಮೆರವಣಿಗೆಯಲ್ಲಿ ಪಾಲ್ಗೊಂಡು ಪ್ರಚಾರ ನಡೆಸಿ ಮುನಿರತ್ನ ಅವರಿಗೆ ಮತ ನೀಡುವಂತೆ ಮನವಿ ಮಾಡಿದರು. ದರ್ಶನ್ ಜೊತೆ ರಾಕ್ ಲೈನ್ ವೆಂಕಟೇಶ್, ತೆಜಸ್ವಿನಿ ಗೌಡ, ಸ್ಥಳೀಯ ಬಿಜೆಪಿ ಮುಖಂಡರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ಜನ ಸೇರಿದ್ದರು. ದರ್ಶನ್ ಹೋದಡೆ- ಬಂದೆಡೆಯಲ್ಲೆಲ್ಲ ಅವರ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ನೆರೆದಿದ್ದು, ಅಭಿಮಾನಿಗಳತ್ತ ಕೈಬೀಸಿ ಮುನಿರತ್ನಗೆ ಮತ ನೀಡುವಂತೆ ಮನವಿ ಮಾಡಿದರು. ಇನ್ನೂ ಆರ್. ಆಶೋಕ್, ಆಶ್ವಥ್ ನಾರಾಯಣ್, ಅರವಿಂದ ಲಿಂಬಾವಳಿ ಸೇರಿದಂತೆ ಅನೇಕ ಮುಖಂಡರು ಕ್ಷೇತ್ರದ ವಿವಿಧೆಡೆ ಪ್ರಚಾರ ನಡೆಸಿದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಆಧ್ಯಕ್ಷ ಡಿಕೆ ಶಿವಕುಮಾರ್ ಅವರು ಕೂಡ ಇಂದು ಆರ್‍ಆರ್ ನಗರ ವಿಧಾನ ಸಭಾ ಕ್ಷೇತ್ರದ ಜಾಲಹಳ್ಳಿ ವಾರ್ಡ್‍ನಲ್ಲಿ ಭಾರಿ ಪ್ರಚಾರ ನಡೆಸಿದರು.

ಅತ್ತ ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮದಲೂರು ಮುಂತಾದೆಡೆ ಆಬ್ಬರದ ಪ್ರಚಾರ ನಡೆಸಿ ಪಕ್ಷದ ಆಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು. ಹಲವಾರು ಗ್ರಾಮಗಳಿಂದ ಅಪಾರ ಸಂಖ್ಯೆಯಲ್ಲಿ ಹರಿದು ಬಂದ ಜನ ಸಾಗರ ನೋಡಿ ಹರ್ಷ ವ್ಯಕ್ತಪಡಿಸಿದ ಯಡಿಯೂರಪ್ಪ ಬಿಜೆಪಿ ಗೆಲುವು ನಿಶ್ಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮದಲೂರು ಕೆರೆಗೆ ನೀರು ಹರಿಸುವ ಸಂಬಂಧ ಎದ್ದಿರುವ ವಿವಾದ ಬಗೆಹರಿಸಲು ಸಂಬಂಧ ಈ ಗ್ರಾಮಕ್ಕೆ ಆಗಮಿಸಿ ವಿಜಯ ಸಂಕಲ್ಪ ಸಮಾವೇಶಕ್ಕೆ ಚಾಲನೆ ನೀಡಿದ್ದೇನೆ. ಬಿಜೆಪಿ ಆಭ್ಯರ್ಥಿ ರಾಜೇಶ್ ಗೌಡ ಅವರನ್ನು ಗೆಲ್ಲಿಸುವ ಮೂಲಕ ನಿಮ್ಮ ಕ್ಷೇತ್ರದ ಆಶೀರ್ವಾದ ಬಹು ಮುಖ್ಯವಾಗಿದೆ ಎಂದು ಹೇಳಿದರು.

ಬಿ. ವೈ. ವಿಜೇಯಂದ್ರ, ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಕೇಂದ್ರ ಸಚಿವರಾದ ಸದಾನಂದ ಗೌಡ, ಸಂಸದ ನಾರಾಯಣ ಸ್ವಾಮಿ, ಜಿ.ಎಸ್. ಬಸವರಾಜ್, ಶ್ರೀರಾಮಲು, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ರೇಣುಕಾಚಾರ್ಯ, ಮಾಜಿ ಸಚಿವ ಸುರೇಶ್‍ಗೌಡ ಮುಂತಾದವರು ಈ ಸಂದರ್ಭದಲ್ಲಿದ್ದರು.

Facebook Comments