ಅಖಾಡಕ್ಕಿಳಿಯಲಿದ್ದಾರೆ ಘಟಾನುಘಟಿಗಳು, ಮತ್ತಷ್ಟು ರಂಗೇರಲಿದೆ ಉಪಚುನಾವಣೆ ಕಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.26- ಆಡಳಿತ ಮತ್ತು ಪ್ರತಿಪಕ್ಷಗಳಿಗೆ ಅಳಿವು – ಉಳಿವಿನ ಪ್ರಶ್ನೆ ಎಂದೇ ಹೇಳಲಾಗುತ್ತಿರುವ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಅಖಾಡ ರಂಗೇರಿದೆ.ಮತದಾನಕ್ಕೆ ಕೆಲವೇ ದಿನಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಮತದಾರರನ್ನು ಓಲೈಸಿಕೊಳ್ಳಲು ಪ್ರಮುಖವಾಗಿ ಮೂರು ಪಕ್ಷಗಳಿಂದ ನಾನಾ ಕಸರತ್ತು ಆರಂಭವಾಗಿದೆ.ಇದೀಗ ದಸರಾ ಹಬ್ಬ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಈ ವರೆಗೂ ಪ್ರಚಾರದ ಕಡೆ ಮುಖ ಮಾಡದವರು ಕೂಡ ಮತಭೇಟೆಗೆ ದುಮುಕಿದ್ದಾರೆ.

ಹಬ್ಬವನ್ನು ಲೆಕ್ಕಿಸದೇ ಅಭ್ಯರ್ಥಿಗಳ ಗೆಲುವಿಗೆ ಟೊಂಕಕಟ್ಟಿ ನಿಂತಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ಎರಡು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.ರಾಜಧಾನಿ ಬೆಂಗಳೂರಿನ ಹೈವೋಲ್ಟೇಜ್ ಕ್ಷೇತ್ರವೇಂದೇ ಹೇಳಲಾಗುತ್ತಿರುವ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಜಿದ್ದಿಗೆ ಬಿದ್ದವರಂತೆ ಪ್ರಚಾರ ನಡೆಸುತ್ತಿದ್ದಾರೆ.

ಎರಡು ಪಕ್ಷಗಳಿಗೆ ಹೋಲಿಸಿದರೆ ಜೆಡಿಎಸ್ ಅಬ್ಬರ ಅಷ್ಟೇನು ಜೋರಾಗಿ ಕಂಡು ಬರುತ್ತಿಲ್ಲ.ಪಕ್ಷದ ಪರಮೋಚ್ಚ ನಾಯಕರಾದ ಹೆಚ್.ಡಿ.ದೇವೇಗೌಡರು ಹಾಗೂ ಮಾಜಿ ಸಿ.ಎಂ.ಹೆಚ್.ಡಿ ಕುಮಾರಸ್ವಾಮಿ ಪ್ರಚಾರಕ್ಕೆ ಧುಮುಕಿದ ಮೇಲೆ ತೆನೆಹೊತ್ತ ಮಹಿಳೆಯ ಅರ್ಭಟವೂ ಹೆಚ್ಚಾಗಲಿದೆ ಎನ್ನುವ ಆಶಾಭಾವನೆ ಕಾರ್ಯಕರ್ತರಲ್ಲಿದೆ.

ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ ಎಚ್, ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ ಹಾಗೂ ಜೆಡಿಎಸ್‍ನಿಂದ ವಿ. ಕೃಷ್ಣಮೂರ್ತಿ ಕಣದಲ್ಲಿದ್ದಾರೆ. ಮೂವರು ಅಭ್ಯರ್ಥಿಗಳು ಕೊನೆಯ ಹಂತದ ಪ್ರಚಾರ ನಡೆಸುತ್ತಿದ್ದಾರೆ.ಆರ್ ಆರ್ ನಗರ ಅತ್ಯಂತ ಸೂಕ್ಷ್ಮ ವಲಯವಾಗಿ ಮಾರ್ಪಟ್ಟಿದ್ದು ಸಾಕಷ್ಟು ಕುತೂಹಲದ ಕಣವಾಗಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಡಿಸಿಎಂ ಡಾ. ಅಶ್ವತ್ಥ ನಾರಾಯಣ ಹಾಗೂ ಸಚಿವ ಆರ್. ಅಶೋಕ್ ಪ್ರಚಾರ ನಡೆಸುತ್ತಿದ್ದಾರೆ.

ಇನ್ನು ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಮುನಿರಾಜುಗೌಡ ಕೂಡಾ ಮನಸ್ಸಿಲ್ಲದಿದ್ದರೂ ಪ್ರಚಾರ ಕಾರ್ಯದಲ್ಲಿ ಅನಿವಾರ್ಯವಾಗಿ ತೊಡಗಿಕೊಂಡಿದ್ದಾರೆ.ಅದೇ ರೀತಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರವಾಗಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಮತಯಾಚನೆ ಮಾಡುತ್ತಿದ್ದಾರೆ. ರೋಡ್ ಶೋ, ಸಭೆಗಳನ್ನು ನಡೆಸುವ ಮೂಲಕ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಇನ್ನು ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಪರವಾಗಿಯೂ ಜೆಡಿಎಸ್ ಮುಖಂಡರು ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ.ಅದೇ ರೀತಿ ಶಿರಾದಲ್ಲೂ ಪ್ರಚಾರ ಕಾರ್ಯ ಬಿರುಸುಕೊಂಡಿದೆ.

ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ ಜಯಚಂದ್ರ ಪರವಾಗಿ ಸಿದ್ದರಾಮಯ್ಯ ಪ್ರಚಾರ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ಈ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದಾರೆ. ಅದೇ ರೀತಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಪರವಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಕ್ಟೋಬರ್ 30 ರಂದು ಪ್ರಚಾರ ನಡೆಸಲಿದ್ದಾರೆ. ಇನ್ನು ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಪರವಾಗಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪ್ರಚಾರ ನಡೆಸುತ್ತಿದ್ದಾರೆ.

# ಗೊಲ್ಲ ಸಮೂದಾಯಕ್ಕೆ ಬಿಜೆಪಿ ಗಾಳ :
ಶಿರಾ ವಿಧಾನಸಭಾ ಕ್ಷೇತ್ರದಲ್ಲಿ ಇನ್ನೂ ಈವರೆಗೂ ಖಾತೆಯೇ ತೆರೆಯದ ಬಿಜೆಪಿ ಈ ಬಾರಿ ಮಾಸ್ಟರ್ ಪ್ಲಾನ್ ಮಾಡಿಕೊಂಡಿದೆ.. ಶತಾಯಗತಾಯ ಕ್ಷೇತ್ರ ಗೆಲ್ಲಲು ಹೊರಟಿರುವ ಬಿಜೆಪಿ ಎಲ್ಲಾ ಆ್ಯಂಗಲ್‍ನಲ್ಲೂ ಚಿಂತಿಸುತ್ತಿದೆ. ಇದರ ಭಾಗವಾಗಿ ಕ್ಷೇತ್ರದಲ್ಲಿ ಎರಡನೇ ದೊಡ್ಡ ಸಮುದಾಯವಾದ ಗೊಲ್ಲರ ಮತಬೇಟೆಗೆ ಮಾಸ್ಟರ್ ಪ್ಲಾನ್ ಮಾಡಿದೆ.

ಆಂಧ್ರದ ಯಾದವ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ನ ಮಾಜಿ ಸಚಿವರಿಗೆ ಬಿಜೆಪಿ ಗಾಳ ಹಾಕಿದೆ.. ಬಿಜೆಪಿಯ ಮಾಸ್ಟರ್ ಪ್ಲಾನ್ ಅರಿತ ಕಾಂಗ್ರೆಸ್ ಅವ್ರನ್ನೇ ಭೇಟಿಯಾಗಿ ಬಿಜೆಪಿಗೆ ಠಕ್ಕರ್ ನೀಡಿದೆ.ಆಂಧ್ರಪ್ರದೇಶದ ಕಾಂಗ್ರೆಸ್‍ನ ಮಾಜಿ ಸಚಿವ ರಘುವೀರಾ ರೆಡ್ಡಿ ಅವರ ಬೆಂಬಲವನ್ನ ಬಿಜೆಪಿ ಕೋರಿದೆ. ಶಿರಾ-ಮಧುಗಿರಿಯ ಆಂಧ್ರದ ಗಡಿಭಾಗವಾದ ನೀಲಕಂಠಾಪುರದ ರಘುವೀರಾ ರೆಡ್ಡಿ ಮನೆಗೆ ಡಿಸಿಎಂ ಅಶ್ವಥ್ ನಾರಾಯಣ್ ಭೇಟಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.

ರಘುವೀರಾ ರೆಡ್ಡಿ ಆಂಧ್ರದ ಯಾದವ ಸಮುದಾಯದ ವರ್ಚಸ್ವಿ ನಾಯಕರು. ಶಿರಾ ಮತ್ತು ಮಧುಗಿರಿಯಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ. ಹಾಗಾಗಿ ಡಿಸಿಎಂ ಅಶ್ವಥ್ ನಾರಾಯಣ ರಘುವೀರಾ ರೆಡ್ಡಿ ಬೆಂಬಲ ಕೋರಿದ್ದಾರೆ.

ಶಿರಾ ಕ್ಷೇತ್ರದಲ್ಲಿ ಸುಮಾರು 47 ಸಾವಿರ ಯಾದವ ಸಮುದಾಯದವರ ಮತ ಇದೆ. ಕುಂಚಿಟಿಗರನ್ನೂ ಹೊರತುಪಡಿಸಿದರೇ ಯಾದವರ ಮತಬ್ಯಾಂಕ್ ದೊಡ್ಡದಿದೆ. ಈ ಸಮುದಾಯವನ್ನು ಸೆಳೆಯಲು ಈಗಾಗಲೇ ಬಿಜೆಪಿ ಕಾಡುಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಿದೆ. ಇದರ ನಡುವೆ ಯಾದವ ಸಮುದಾಯದ ಪ್ರಭಾವಿ ನಾಯಕರಿಗೆ ಗಾಳ ಹಾಕುತ್ತಿದೆ ಬಿಜೆಪಿ. ತಮಗೆ ಬೆಂಬಲ ನೀಡುವಂತೆ ರಘುವೀರಾ ರೆಡ್ಡಿಬಳಿ ಡಿಸಿಎಂ ಅಶ್ವಥ್ ನಾರಾಯಣ ಮನವಿ ಮಾಡಿದ್ದಾರೆ.

ನಗು ನಗುತ್ತಲೆ ರಘುವೀರಾ ರೆಡ್ಡಿ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಬಿಜೆಪಿ ಮಾಸ್ಟರ್ ಸ್ಟ್ರೋಕ್ ಗೆ ಎಚ್ಚೆತ್ತ ಕಾಂಗ್ರೆಸ್ ನಾಯಕರು ರಘುವೀರಾ ರೆಡ್ಡಿ ಮನೆಗೆ ದೌಡಾಯಿಸಿದ್ದಾರೆ. ಪರಮೇಶ್ವರ್ ಹಾಗೂ ಕೆ.ಎನ್.ರಾಜಣ್ಣ ಅವರ ಆಪ್ತೇಷ್ಟರಾಗಿರುವ ರಘುವೀರ ರೆಡ್ಡಿ ಅವ್ರನ್ನ ಭೇಟಿ ಮಾಡಿ, ಟಿ.ಬಿ.ಜಯಚಂದ್ರ ಅವರಿಗೆ ಬೆಂಬಲಿಸುವಂತೆ ಕೋರಿದ್ದಾರೆ.

ಯಾದವ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ನಾಯಕರಿಗೆ ಗಾಳ ಹಾಕಿ ಬಿಜೆಪಿ ಮೊದಲು ಕಾಂಗ್ರೆಸ್ ಗೆ ದೊಡ್ಡ ಆಘಾತ ಕೊಟ್ಟಿತ್ತು.
ಆದರೆ ಕಾಂಗ್ರೆಸ್ ನಾಯಕರಾದ ರಘುವೀರಾ ರೆಡ್ಡಿ ಯಾರ ಪರ ಮತಯಾಚನೆ ಮಾಡುತ್ತಾರೆ ಎನ್ನುವುದು ಕುತೂಹಲ ಕೆರಳಿಸಿದೆ.

ಒಟ್ಟಿನಲ್ಲಿ ಮೂರು ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿಕೊಂಡಿದ್ದು ಚುನಾವಣಾ ಕಣ ರಂಗೇರಿದೆ. ಆದರೆ ಮತದಾರರು ಅಂತಿಮವಾಗಿ ಯಾರ ಕೈಹಿಡಿಯುತ್ತಾರೆ ಯಾರಿಗೆ ಕೈಕೊಡುತ್ತಾರೆ ಎಂಬುವುದು ನವೆಂಬರ್ 10 ರಂದು ಫಲಿತಾಂಶ ಪ್ರಕಟವಾದಾಗ ಗೊತ್ತಾಗಲಿದೆ.

Facebook Comments

Sri Raghav

Admin