ಕೊರೊನಾ ಆರ್ಭಟದ ನಡುವೆಯೂ ಕಾವೇರಿದ ಉಪಸಮರದ ಕಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.11- ಬೆಳಗಾವಿ ಲೋಕಸಭಾ ಕ್ಷೇತ್ರ ಸೇರಿ ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಸಮರದ ಪ್ರಚಾರ ಕಾವೇರಿದೆ. ಕೋವಿಡ್-19 ಎರಡನೇ ಅಲೆಯ ಮಧ್ಯೆಯೂ ಈ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುತ್ತಿದೆ. ಆದರೆ ಕೋವಿಡ್ ಮುಂಜಾಗ್ರತಾ ಕ್ರಮದೊಂದಿಗೆ ನಡೆಯಲಿರುವ ಉಪಸಮರಕ್ಕಾಗಿ ಸರ್ಕಾರದ ಮೇಲೆ ಹೆಚ್ಚು ಹೊರೆ ಬೀಳಲಿದೆ.

ಜಿದ್ದಾಜಿದ್ದಿನಿಂದ ಕೂಡಿದ ಈ ಮೂರು ಕ್ಷೇತ್ರಗಳ ಉಪಸಮರಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಏಪ್ರಿಲ್ 17ರಂದು ಉಪಚುನಾವಣೆಗೆ ಮತದಾನ ನಡೆಯಲಿದೆ. ಕೊರೊನಾ ಎರಡನೇ ಅಲೆಯ ಅಟ್ಟಹಾಸದ ಮಧ್ಯೆ ಈ ಚುನಾವಣೆ ನಡೆಯುತ್ತಿದೆ. ಹೀಗಾಗಿ, ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯ. ಅದರಂತೆ ಕೋವಿಡ್ ಸುರಕ್ಷತಾ ಕ್ರಮಗಳನ್ನು ಕೈಗೊಂಡೇ ಈ ಬಾರಿ ಚುನಾವಣೆ ನಡೆಸ ಲಾಗುತ್ತಿದೆ.

ಮತದಾರರು ಮತ್ತು ಮತಗಟ್ಟೆ ಸಿಬ್ಬಂದಿ ಸುರಕ್ಷತೆಗೆ ಆದ್ಯತೆ ನೀಡಿ ಕೋವಿಡ್ ಮಾರ್ಗಸೂಚಿ ಅನ್ವಯ ಚುನಾವಣೆ ನಡೆಸಲಾಗುತ್ತಿದೆ. ಆ ನಿಟ್ಟಿನಲ್ಲಿ ಚುನಾವಣಾ ಆಯೋಗ ಎಲ್ಲಾ ಕೋವಿಡ್ ಸುರಕ್ಷತಾ ಮಾರ್ಗಸೂಚಿ ಅನುಸರಿಸಿ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಸುತ್ತಿದೆ. ಕೋವಿಡ್ ಮುಂಜಾಗ್ರತಾ ಕ್ರಮದೊಂದಿಗೆ ನಡೆಯುತ್ತಿರುವ ಉಪಸಮರಕ್ಕಾಗಿ ಚುನಾವಣಾ ಆಯೋಗ ಹೆಚ್ಚುವರಿ ವೆಚ್ಚವನ್ನೂ ಭರಿಸುತ್ತಿದೆ.

# ಉಪಚುನಾವಣೆ ಇನ್ನೂ ದುಬಾರಿ:
ಎರಡನೇ ಅಲೆ ಮಧ್ಯೆ ಸುರಕ್ಷಿತವಾಗಿ ಉಪಸಮರ ನಡೆಸುವುದು ಚುನಾವಣಾ ಆಯೋಗದ ಮುಂದಿರುವ ದೊಡ್ಡ ಸವಾಲು. ಉಪಸಮರದ ಖರ್ಚು ಇನ್ನಷ್ಟು ದುಬಾರಿಯಾಗಿದೆ. ಚುನಾವಣೆ ನಡೆಸಲು ಭದ್ರತೆ, ಮತಗಟ್ಟೆಗಳ ಸ್ಥಾಪನೆ, ಮತಗಟ್ಟೆ ಸಿಬ್ಬಂದಿಗೆ ಸಾರಿಗೆ ವ್ಯವಸ್ಥೆ ಸೇರಿದಂತೆ ಚುನಾವಣಾ ಆಯೋಗ ಕೋಟ್ಯಂತರ ರೂ. ವ್ಯಯ ಮಾಡುತ್ತಿದೆ.

ಇದಕ್ಕಾಗಿಯೇ ಆಯೋಗ ಎಲ್ಲಾ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಹೀಗಾಗಿ, ಸಾಮಾನ್ಯ ಚುನಾವಣಾ ಖರ್ಚಿನ ಜೊತೆಗೆ ಸುಮಾರು 30-40% ಹೆಚ್ಚುವರಿ ಖರ್ಚು ತಗುಲಲಿದೆ ಎಂದು ಚುನಾವಣಾಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ ಸರಾಸರಿ 2 ಕೋಟಿ ರೂ. ವೆಚ್ಚ ತಗುಲಲಿದೆ. ಈ ಬಾರಿ ನಡೆಯುವ ಎರಡು ವಿಧಾನಸಭಾ ಉಪಚುನಾವಣಾ ವೆಚ್ಚ ತಲಾ ಎರಡು ಕೋಟಿ ರೂ. ಆಗುವ ಸಾಧ್ಯತೆ ಇದೆ.ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಸಮರದ ಖರ್ಚು ಸುಮಾರು 10 ಕೋಟಿ ರೂ. ಆಗಲಿದೆ. ಇದರ ಜೊತೆಗೆ ಕೋವಿಡ್ ಮುಂಜಾಗ್ರತಾ ಕ್ರಮಕ್ಕಾಗಿ ಹೆಚ್ಚುವರಿ ಒಂದು ಕೋಟಿ ರೂ. ತಗಲುತ್ತದೆ.

ಅಂದರೆ ಹೆಚ್ಚುವರಿ ಶೇ30-40ರಷ್ಟು ವೆಚ್ಚ ತಗಲುವುದರೊಂದಿಗೆ, ಪ್ರತಿ ಕ್ಷೇತ್ರದ ಸಾಮಾನ್ಯ ಚುನಾವಣಾ ವೆಚ್ಚಕ್ಕೆ ಸುಮಾರು ಒಂದು ಕೋಟಿ ರೂ. ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ ಎಂದು ಚುನಾವಣಾಕಾರಿಗಳು ತಿಳಿಸಿದ್ದಾರೆ. ಈ ಮೂರು ಕ್ಷೇತ್ರಗಳ ಉಪಸಮರಕ್ಕಾಗಿ ಒಟ್ಟಾರೆ 16-20 ಕೋಟಿ ರೂ. ಚುನಾವಣಾ ವೆಚ್ಚ ತಗುಲುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

# ಕೋವಿಡ್ ಸುರಕ್ಷತಾ ಕ್ರಮಗಳೇನು? :
ಪ್ರತಿ ಮತಗಟ್ಟೆಗಳಲ್ಲಿ ಥರ್ಮಲ್ ಸ್ಕ್ಯಾನರ್ಗಳು, ಸ್ಯಾನಿಟೈಸರ್ ಹಾಗೂ ಪ್ರತಿ ಮತದಾರರಿಗೆ ಹ್ಯಾಂಡ್ ಗ್ಲೌಸ್ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ಮತಗಟ್ಟೆಗಳನ್ನು ಸ್ಯಾನಿಟೈಸ್ ಮಾಡಲಾಗುತ್ತದೆ. ಇವಿಎಂ ಹಾಗೂ ವಿವಿಪ್ಯಾಟ್ಗಳನ್ನೂ ಸ್ಯಾನಿಟೈಸ್ ಮಾಡಲಾಗುವುದು.

ಈ ಬಾರಿ ಗಾಳಿ ಬೆಳಕು ಇರುವ ಹಿರಿದಾದ ಮತಗಟ್ಟೆ ಕೊಠಡಿಗಳನ್ನು ಆಯ್ಕೆ ಮಾಡಲಾಗುತ್ತದೆ. ಮತಗಟ್ಟೆಗಳಲ್ಲಿ ಹೆಚ್ಚಿನ ಜನ ಜಮಾವಣೆ ಆಗದಂತೆ ಪ್ರತಿ ಮತ ಕೇಂದ್ರಗಳಲ್ಲಿ ಮತದಾರರ ಸಂಖ್ಯೆಯನ್ನು 1,500 ರಿಂದ 1,000ಕ್ಕೆ ಕಡಿತಗೊಳಿಸಲಾಗುವುದು.

ಹೀಗಾಗಿ, ಅದಕ್ಕನುಗುಣವಾಗಿ ಮೂರು ಕ್ಷೇತ್ರಗಳಲ್ಲಿ ಈ ಬಾರಿ ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುತ್ತದೆ. ಕೋವಿಡ್ ಸೋಂಕಿತರಿಗೆ ಮತದಾನದ ವ್ಯವಸ್ಥೆಗೆ ವಿಶೇಷ ಸಿದ್ಧತೆ ಮಾಡಲಾಗುವುದು. ಕೊನೆಯ ಒಂದು ಗಂಟೆಗಳ ಕಾಲ ಕೋವಿಡ್ ಸೋಂಕಿತರಿಗೆ ಮತಚಲಾಯಿಸಲು ಅವಕಾಶ ಕಲ್ಪಿಸಲಾಗುತ್ತೆ. ಅದಕ್ಕಾಗಿ ಆ ಮತ ಕೇಂದ್ರದ ಸಿಬ್ಬಂದಿಗೆ ಪಿಪಿಇ ಕಿಟ್ ನೀಡಲಾಗುವುದು.

ಹೆಚ್ಚಿನ ವಾಹನಗಳು, ಹೆಚ್ಚುವರಿ ಪಿಪಿಇ ಕಿಟ್, ಕೋವಿಡ್ ಸುರಕ್ಷಾ ಕ್ರಮಗಳಿಗಾಗಿ ವೆಚ್ಚ ತಗುಲುವುದರಿಂದ ಈ ಬಾರಿ ಉಪಸಮರದ ಚುನಾವಣಾ ವೆಚ್ಚ ಶೇ.30-40ರಷ್ಟು ಹೆಚ್ಚುವರಿಯಾಗಲಿದೆ.

Facebook Comments

Sri Raghav

Admin