ರಾಜ್ಯದಲ್ಲಿ ಮತ್ತೊಂದು ಮಿನಿಮಹಾಸಮರಕ್ಕೆ ಸಜ್ಜಾಗುತ್ತಿದೆ ವೇದಿಕೆ..!

ಈ ಸುದ್ದಿಯನ್ನು ಶೇರ್ ಮಾಡಿ

– ರವೀಂದ್ರ.ವೈ.ಎಸ್
ಬೆಂಗಳೂರು,ಆ.5- ತುಮಕೂರು ಜಿಲ್ಲೆ , ಶಿರಾ ವಿಧಾಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಬಿ.ಸತ್ಯನಾರಾಯಣ ಅವರ ನಿಧನದಿಂದಾಗಿ ಉಪಚುನಾವಣೆ ಎದುರಾಗಲಿದ್ದು, ರಾಜ್ಯದಲ್ಲಿ ಮತ್ತೊಂದು ಮಿನಿಮಹಾಸಮರ ನಡೆಯಲಿದೆ.

ಕೆಲವು ತಾಂತ್ರಿಕ ಕಾರಣಗಳಿಂದ ಮುಂದೂಡಿಕೆಯಾಗಿರುವ ಬೆಂಗಳೂರಿನ ರಾಜರಾಜೇಶ್ವರಿ ನಗರ, ರಾಯಚೂರು ಜಿಲ್ಲೆಯ ಮಸ್ಕಿ ಹಾಗೂ ಶಿರಾ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಜರುಗಲಿದೆ.

ಸಮ್ಮಿಶ್ರ ಸರ್ಕಾರ ಪತನವಾಗಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಡೆಯಲಿರುವ ಎರಡನೇ ಮಿನಿಮಹಾಸಮರ ಇದಾಗಿದೆ. ಹೀಗಾಗಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಜಿದ್ದಾಜಿದ್ದಿಗೂ ಕಾರಣವಾಗಲಿದೆ.

ಈ ಹಿಂದೆ ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ರಾಜೀನಾಮೆ ಕೆಲವು ಶಾಸಕರು ನೀಡಿದ್ದರಿಂದ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಇದರಲ್ಲಿ ಬಿಜೆಪಿ 12 , ಕಾಂಗ್ರೆಸ್ 2 ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಶರತ್ ಬಚ್ಚೇಗೌಡ ವಿಜೇತರಾಗಿದ್ದರು.

ಜೆಡಿಎಸ್ ಒಂದೇ ಒಂದು ಕ್ಷೇತ್ರದಲ್ಲೂ ಗೆಲ್ಲದೆ, ಭಾರೀ ಮುಖಭಂಗ ಅನುಭವಿಸಿತ್ತು. ಇದೀಗ ನಡೆಯಲಿರುವ ಮೂರು ಕ್ಷೇತ್ರಗಳ ಉಪಚುನಾವಣೆಯು ಆಡಳಿತಾರೂಢ ಬಿಜೆಪಿ, ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಸ್‍ಗೆ ನಿರ್ಣಾಯಕವಾಗಲಿದೆ.

ಅದರಲ್ಲೂ ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವದ ವಿರುದ್ಧ ಪದೇ ಪದೇ ಗೊಂದಲ ಸೃಷ್ಟಿ ಮಾಡುತ್ತಿರುವವರಿಗೆ ಈ ಉಪಸಮರದಲ್ಲಿ ಗೆದ್ದು , ತಮ್ಮ ಸಾಮಥ್ರ್ಯವನ್ನು ಮತ್ತೊಮ್ಮೆ ತೋರಿಸಬೇಕಾದ ಅನಿವಾರ್ಯತೆ ಇದೆ.

ಈ ಹಿಂದೆಯೇ15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಲಿಗೆ ಚಕ್ರಕಟ್ಟಿಕೊಂಡು ರಾಜ್ಯಾದ್ಯಂತ ಬಿರುಸಿನ ಪ್ರಚಾರ ನಡೆಸಿದ್ದ ಪರಿಣಾಮ 12 ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಗಿತ್ತು. ಅದರಲ್ಲೂ ರಾಜರಾಜೇಶ್ವರಿ ನಗರ ಮತ್ತು ಮಸ್ಕಿ ಕ್ಷೇತ್ರಗಳನ್ನು ಗೆಲ್ಲಿಸಿ ಇಬ್ಬರಿಗೂ ಸಚಿವ ಸ್ಥಾನ ನೀಡುವ ಹೊಣೆಗಾರಿಕೆ ಯಡಿಯೂರಪ್ಪ ಅವರ ಮೇಲಿದೆ.

ಹೀಗಾಗಿ ಈ ಚುನಾವಣೆ ಬಿಎಸ್‍ವೈ ಪಾಲಿಗೂ ಒಂದು ರೀತಿ ಅಗ್ನಿ ಪರೀಕ್ಷೆ ಎಂದೇ ಹೇಳಬಹುದು.
ಇನ್ನು ಕೆಪಿಸಿಸಿ ಅಧ್ಯಕ್ಷರಾದ ನಂತರ ಭರ್ಜರಿ ಹವಾ ಎಬ್ಬಿಸಿರುವ ಡಿ.ಕೆ.ಶಿವಕುಮಾರ್‍ಗೂ ಈ ಉಪಸಮರ ಮತ್ತೊಂದು ಸವಾಲಾಗಿ ಪರಿಣಮಿಸಲಿದೆ.

ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಸಮಾರಂಭವನ್ನು ಅದ್ದೂರಿಯಾಗಿ ನಡೆಸಿದ್ದ ಶಿವಕುಮಾರ್ ಇದೀಗ ರಾಜ್ಯಾದ್ಯಂತ ಪ್ರವಾಸ ಮಾಡುತ್ತಾ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದ್ದಾರೆ. ಜೊತೆಗೆ ರಾಜರಾಜೇಶ್ವರಿ ನಗರ ಹಾಗೂ ಮಸ್ಕಿ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದರು. ಈ ಎರಡೂ ಕ್ಷೇತ್ರಗಳನ್ನು ಗೆಲ್ಲಿಸಲೇಬೇಕಾದ ಹೊಣೆಗಾರಿಕೆ ಅವರ ಮೇಲಿದೆ.

ಒಂದು ವೇಳೆ ಕಾಂಗ್ರೆಸ್ ಮೂರು ಕ್ಷೇತ್ರಗಳ ಪೈಕಿ ಕನಿಷ್ಟ ಎರಡು ಕ್ಷೇತ್ರಗಳಲ್ಲಿ ಗೆದ್ದರೆ, ಶಿವಕುಮಾರ್ ನಾಯಕತ್ವಕ್ಕೆ ಜನಮನ್ನಣೆ ಇದೆ ಎಂಬುದು ಸಾಬೀತಾಗಲಿದೆ.ಹಿನ್ನಡೆಯಾದರೆ, ಮತ್ತೊಮ್ಮೆ ಆತ್ಮವಲೋಕನ ಮಾಡಿಕೊಂಡು , ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸಬೇಕಾದ ಅನಿವಾರ್ಯತೆಗೆ ಕಾಂಗ್ರೆಸ್ ಸಿಲುಕಲಿದೆ.

ಸಾಲು ಸಾಲು ಸೋಲು, ಪಕ್ಷದಿಂದ ದೂರವಾಗುತ್ತಿರುವ ನಾಯಕರು, ಸಂಘಟನೆಯ ಕೊರತೆ,ಕಾರ್ಯಕರ್ತರ ಕಡೆಗಣನೆ ಸೇರಿದಂತೆ ಹಲವು ಕಾರಣಗಳಿಂದ ಸೊರಗಿರುವ ಜೆಡಿಸ್ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕಾದ ಇಕ್ಕಟ್ಟಿಗೆ ಸಿಲುಕಿದೆ. ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ಮೇಲೆ, ಜೆಡಿಎಸ್ ನಲ್ಲಿ ಹೇಳಿಕೊಳ್ಳುವಂತಹ ಚಟುವಟಿಕೆಗಳು ನಡೆದಿಲ್ಲ.

ಪಕ್ಷ ಅಧಿಕಾರದಲ್ಲಿ ಇದ್ದ ವೇಳೆ ನಿಷ್ಠಾವಂತ ಕಾರ್ಯಕರ್ತರನ್ನು ನಿರ್ಲಕ್ಷ್ಯ ಮಾಡಲಾಗಿದೆ ಎಂದು ಮುಗಿಸಿಕೊಂಡ ಅನೇಕರು ದೂರ ಉಳಿದಿದ್ದಾರೆ. ಇದೀಗ ಅವರೆಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೊಸ ಹುರುಪಿನಲ್ಲಿ ಉಪಚುನಾವಣೆಗೆ ಸಜ್ಜಾಗಬೇಕು. ಕನಿಷ್ಠ ಪಕ್ಷ ತನ್ನ ತೆಕ್ಕೆಯಲ್ಲಿ ಇದ್ದ ಶಿರಾ ಕ್ಷೇತ್ರವನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆ ದಳಪತಿಗಳ ಮೇಲಿದೆ.

ಒಂದು ಕ್ಷೇತ್ರದಲ್ಲಿ ಗೆದ್ದರೆ, ಜೆಡಿಎಸ್ ಗೂ ಮುಂದಿನ ದಿನಗಳಲ್ಲಿ ಭವಿಷ್ಯ ಇದೆ ಎಂಬ ಹೊಸ ಸಂದೇಶ ಕಾರ್ಯಕರ್ತರಿಗೆ ರವಾನೆಯಾಗಲಿದೆ. ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸಿಕೊಡುವ ಜವಬ್ದಾರಿ ಕುಮಾರಸ್ವಾಮಿ ಮೇಲಿದೆ.

ಕಾಂಗ್ರೆಸ್ ಹಾಗೂ ಬಿಜೆಪಿ ಗೆ ಹೋಲಿಸಿದರೆ, ಜೆಡಿಎಸ್ ಸಂಪನ್ಮೂಲಗಳ ಕೊರತೆಯನ್ನು ಎದುರಿಸುತ್ತಿದೆ. ಕೊನೆ ಕ್ಷಣದಲ್ಲಿ ಕೈ ಕೊಡಲಿದ್ದಾರೆ ಎಂಬ ಆರೋಪ ಆ ಪಕ್ಷದ ಮೇಲಿದೆ.ಇನ್ನು ಉಪಚುನಾವಣೆಯಲ್ಲಿ ಈ ಭಾರಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ- ಪ್ರತ್ಯಾರೋಪ ಜೋರಾಗಿಯೇ ನಡೆಯಲಿದೆ. ಅಧಿಕಾರಕ್ಕೆ ಬಂದು ಒಂದು ವರ್ಷ ಪೂರ್ಣಗೊಳಿಸಿರುವ ಬಿಜೆಪಿ ತನ್ನ ಸಾಧನೆಗಳ ಆಧಾರದ ಮೇಲೆ ಚುನಾವಣಾ ಪ್ರಚಾರಕ್ಕೆ ಧುಮುಕಲಿದೆ.

ಪ್ರವಾಹ ಪರಿಸ್ಥಿತಿ ನಿಭಾಯಿಸಿರುವುದು, ಕೋವಿಡ್- 19 ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮಗಳು, ಆರ್ಥಿಕ ಸಂಕಷ್ಟದ ನಡುವೆಯೂ ರೈತರು ಸೇರಿದಂತೆ ಶ್ರಮಿಕ ವರ್ಗಕ್ಕೆ ನೀಡಿರುವ ವಿಶೇಷ ಪ್ಯಾಕೇಜ್ , ಬಜೆಟ್ ನಲ್ಲಿ ಘೋಷಣೆ ಮಾಡಿರುವ ಯೋಜನೆ ಹಾಗೂ ಅನುಷ್ಠಾನ ಸೇರಿದಂತೆ ಸರ್ಕಾರದ ಸಾಧನೆಗಳ ಮೇಲೆ ಮತಯಾಚನೆ ಮಾಡಲಿದೆ.

ಇದಕ್ಕೆ ವ್ಯತಿರಿಕ್ತ ಎನ್ನುವಂತೆ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ವೈಪಲ್ಯಗಳನ್ನು ಮುಂದಿಟ್ಟು ಸಮರ ಘೋಷಣೆ ಮಾಡಲಿದೆ.

# ಮೈತ್ರಿ ಇಲ್ಲ:
ಉಪಚುನಾವಣೆ ನಡೆಯಲಿರುವ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ವಿರುದ್ದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಬಹುತೇಕ ಕ್ಷೀಣಿಸಿದೆ. ಕಳೆದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೂರು ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದವು.

ಇತ್ತೀಚೆಗೆ ಆಡಳಿತಾರೂಢ ಬಿಜೆಪಿ ವಿರುದ್ಧ ಜೆಡಿಎಸ್ ಟೀಕೆಗಿಂತ ಕಾಂಗ್ರೆಸ್ ಮೇಲೆ ಹೆಚ್ಚು ಮುಗಿಬಿದ್ದಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಿಎಂ ಯಡಿಯೂರಪ್ಪನವರಿಗಿಂತಲೂ ಹೆಚ್ಚಾಗಿ ತಮ್ಮ ರಾಜಕೀಯ ಎದುರಾಳಿ ಸಿದ್ದರಾಮಯ್ಯನವರ ಮೇಲೆಯೇ ಟೀಕಾ ಪ್ರಹಾರ ನಡೆಸುತ್ತಿದ್ದಾರೆ. ಹೀಗಾಗಿ ಮೂರು ಕ್ಷೇತ್ರಗಳ ಉಪಚುನಾವಣೆಗೆ ಮೈತ್ರಿ ಬಹುತೇಕ ದೂರದ ಮಾತು ಎನ್ನಲಾಗುತ್ತಿದೆ.

# ಅಭ್ಯರ್ಥಿಗಳಾರು?:
ರಾಜರಾಜೇಶ್ವರಿನಗರ , ಮಸ್ಕಿ ಮತ್ತು ಶಿರಾ ಕ್ಷೇತ್ರಗಳಿಗೆ ಬಿಜೆಪಿ ಬಹುತೇಕ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿರುವ ಮುನಿರತ್ನ ಅವರಿಗೆ ಆರ್.ಆರ್.ನಗರದಿಂದ ಟಿಕೆಟ್ ಬಹುತೇಕ ಖಾತ್ರಿಯಾಗಿದೆ.

ಮಸ್ಕಿಯಿಂದ ಮಾಜಿ ಶಾಸಕ ಪ್ರತಾಪ್‍ಗೌಡ ಪಾಟೀಲ್ ಕಣಕ್ಕಿಳಿದರೆ, ಶಿರಾದಿಂದ ಮಾಜಿ ಶಾಸಕ ಕಿರಣ್‍ಕುಮಾರ್ ಇಲ್ಲವೇ ಹೊಸ ಮುಖಗಳಿಗೆ ಮಣೆ ಹಾಕಿದರೂ ಅಚ್ಚರಿ ಇಲ್ಲ. ಆದರೆ ಆರ್‍ಆರ್‍ನಗರ ಮತ್ತು ಮಸ್ಕಿ ಕ್ಷೇತ್ರಗಳ ಚುನಾವಣಾ ತಕರಾರು ಅರ್ಜಿ ನ್ಯಾಯಾಲಯದಲ್ಲಿ ಇತ್ಯರ್ಥವಾಗಿಲ್ಲ. ಹೀಗಾಗಿ ಆಯೋಗ ಕೂಡ ದಿನಾಂಕವನ್ನು ಘೋಷಣೆ ಮಾಡಿಲ್ಲ. ಈ ನಡುವೆ ಕೊರೊನಾ ಅಬ್ಬರಿಸುತ್ತಿರುವುದರಿಂದ ಗ್ರಾಮ ಪಂಚಾಯ್ತಿ ಚುನಾವಣೆಯನ್ನೇ ಮುಂದೂಡಲಾಗಿದೆ.

ಇಂಥ ಸಂದರ್ಭದಲ್ಲಿ ಚುನಾವಣೆಯನ್ನು ಆಯೋಗ ನಡೆಸಲಿದೆಯೇ ಎಂಬ ಪ್ರಶ್ನೆಯೂ ಎದ್ದಿದೆ. ಶಿರಾದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಸಚಿವ ಟಿ.ಬಿ.ಜಯಚಂದ್ರ ಕಣಕ್ಕಿಳಿದರೆ, ಜೆಡಿಎಸ್‍ನಿಂದ ಮಾಜಿ ಶಾಸಕ ಸತ್ಯನಾರಾಯಣ ಅವರ ಪುತ್ರ ಸ್ಪರ್ಧಿಸುವ ಸಾದ್ಯತೆ ಇದೆ. ಅನುಕಂಪ ಗಿಟ್ಟಿಸಿಕೊಳ್ಳುವ ಲೆಕ್ಕಾಚಾರದಲ್ಲಿ ಜೆಡಿಎಸ್ ಚಿಂತನೆ ನಡೆಸಿದೆ.

Facebook Comments

Sri Raghav

Admin