ಬೈಎಲೆಕ್ಷನ್ ರಿಸಲ್ಟ್, ಅಭ್ಯರ್ಥಿಗಳಎದೆಯಲ್ಲಿ ಢವ ಢವ, ಎಲ್ಲೆಲ್ಲೂ ಸೋಲು-ಗೆಲುವಿನದ್ದೇ ಲೆಕ್ಕಾಚಾರ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.7- ತೀವ್ರ ಕುತೂಹಲ ಕೆರಳಿಸಿದ್ದ 15 ಕ್ಷೇತ್ರಗಳ ಉಪಚುನಾವಣೆ ಫಲಿತಾಂಶಕ್ಕೆ ಇನ್ನೆರಡು ದಿನಗಳು ಬಾಕಿ ಇದ್ದು, ಎಲ್ಲ ಕ್ಷೇತ್ರಗಳಲ್ಲೂ ಸೋಲು-ಗೆಲುವಿನದ್ದೇ ಲೆಕ್ಕಾಚಾರ ನಡೆಯುತ್ತಿರುವುದರ ನಡುವೆ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ಜಾತಿವಾರು ಮತಗಳಿಕೆ ಪ್ರಮಾಣ, ಅಭ್ಯರ್ಥಿಗಳ ಪ್ರಭಾವ, ವರ್ಚಸ್ಸು ಚುನಾವಣೆಯಲ್ಲಿ ಪ್ರಚಾರ ಮಾಡಿದ ವೈಖರಿ ಇತ್ಯಾದಿಗಳನ್ನು ಗಮನದಲ್ಲಿರಿಸಿಕೊಂಡು ಸೋಲು-ಗೆಲುವಿನ ಲೆಕ್ಕಾಚಾರ ಹಾಕಲಾಗಿದೆ.

ಪ್ರತಿ ಬೂತ್‍ಗಳಲ್ಲೂ ಆಗಿರುವ ಮತದಾನದ ಪ್ರಮಾಣ, ಅಲ್ಲಿರುವ ಜಾತಿ-ಜನಾಂಗಗಳಿಂದ ನಮ್ಮ ಅಭ್ಯರ್ಥಿಗಳಿಗೆ ಎಷ್ಟು ಮತಗಳು ಬಂದಿರಬಹುದು ಎಂಬ ಹಿನ್ನೆಲೆಯಲ್ಲಿಯೇ ಜಯ-ಅಪಜಯದ ಲೆಕ್ಕಾಚಾರ ನಡೆಯುತ್ತಿದೆ. ಅರಳಿಕಟ್ಟೆ, ಹೊಟೇಲ್, ಟೀ ಸ್ಟಾಲ್, ಬಸ್ ನಿಲ್ದಾಣ ಎಲ್ಲಿ ನೋಡಿದರೂ ಚುನಾವಣೆ ಫಲಿತಾಂಶದ್ದೇ ಮಾತು. ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ಬಗ್ಗೆಯೇ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಇಷ್ಟಲ್ಲದೆ ಹಲವು ಕ್ಷೇತ್ರಗಳಲ್ಲಿ ಬಾಜಿ ಕಟ್ಟುವುದು ಹೆಚ್ಚಾಗಿದೆ. ಕೆಆರ್ ಪೇಟೆ, ಹೊಸಕೋಟೆ, ಗೋಕಾಕ್, ವಿಜಯನಗರ, ಹುಣಸೂರು, ಯಶವಂತಪುರ, ಅಥಣಿ, ಕಾಗವಾಡ ಮುಂತಾದ ಕ್ಷೇತ್ರಗಳಲ್ಲಿ ಚುನಾವಣಾ ಫಲಿತಾಂಶದ ಮೇಲೆ ಹಣ, ಕಾರು, ಟ್ರ್ಯಾಕ್ಟರ್, ಹಸು, ಕುರಿ, ಎಮ್ಮೆ, ಬೈಕ್ ಸೇರಿದಂತೆ ಹಲವು ವಸ್ತುಗಳನ್ನು ಜನ ಪಣಕ್ಕಿಟ್ಟಿರುವುದು ಕಂಡುಬಂದಿದೆ.

15 ಕ್ಷೇತ್ರಗಳ ಉಪಚುನಾವಣೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಅಳಿವು-ಉಳಿವಿನ ಪ್ರಶ್ನೆಯಾದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ಹಿನ್ನೆಲೆಯಲ್ಲಿ ತೀವ್ರ ಜಿದ್ದಾಜಿದ್ದಿಗೆ ಬಿದ್ದು ಚುನಾವಣೆ ಪ್ರಚಾರ ನಡೆಸಲಾಗಿತ್ತು. ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಚುನಾವಣೋತ್ತರ ಸಮೀಕ್ಷೆ ತಿಳಿಸಿದೆಯಾದರೂ ಬಹುತೇಕ ಕ್ಷೇತ್ರಗಳಲ್ಲಿ ಸಮೀಕ್ಷೆಗಳನ್ನು ನಂಬುವ ಸ್ಥಿತಿಯಲ್ಲಿಲ್ಲ. ಜನರು ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ. ಹಾಗಾಗಿ ಹಲವು ಕ್ಷೇತ್ರಗಳಲ್ಲಿ ಬೆಟ್ಟಿಂಗ್ ಕಟ್ಟುವುದು ಜೋರಾಗಿದೆ.

ಅದರಲ್ಲೂ ಕೆಆರ್ ಪೇಟೆ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವೆ ಭಾರೀ ಬೆಟ್ಟಿಂಗ್ ಕಟ್ಟಲಾಗಿದೆ. ಬಿಜೆಪಿ ಅಭ್ಯರ್ಥಿ ಕೆ.ಆರ್.ನಾರಾಯಣಗೌಡ, ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜು ನಡುವೆ ಭಾರೀ ಹಣ, ವಸ್ತುಗಳನ್ನು ಪಣಕ್ಕಿಡಲಾಗಿದೆ. ಸದ್ಯ ಚುನಾವಣೆ ಮುಗಿಯಿತು ಎಂದು ರಿಲ್ಯಾಕ್ಸ್ ಮೂಡ್‍ನಲ್ಲಿದ್ದ ಅಭ್ಯರ್ಥಿಗಳ ಎದೆಯಲ್ಲಿ ಫಲಿತಾಂಶದ ಬಗ್ಗೆ ಢವ ಢವ ಶುರುವಾಗಿದೆ. ಬೆಂಬಲಿಗರು, ಆಪ್ತರು ಗೆಲುವಿನ ವಿಶ್ವಾಸ ವ್ಯಕ್ತಪಡಿಸುತ್ತಿದ್ದರಾದರೂ ಒಳಗೊಳಗೇ ಆತಂಕ ಶುರುವಾಗಿದೆ.

ಪ್ರಸ್ತುತ ನಡೆದ ಉಪಚುನಾವಣೆ ಅಷ್ಟು ಸಲೀಸಾಗಿರಲಿಲ್ಲ. ತೀವ್ರ ಪೈಪೋಟಿ ಎದುರಿಸಿ ಚುನಾವಣೆ ನಡೆಸಬೇಕಾಯಿತು. ಹಾಗಾಗಿ ಅಭ್ಯರ್ಥಿಗಳು, ಆಪ್ತರು ಫಲಿತಾಂಶವನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾಸದಲ್ಲಿರುವವರು ಬಾಜಿ ಕಟ್ಟುವುದರಲ್ಲಿ ತೊಡಗಿದ್ದಾರೆ.

ಕೆಆರ್ ಪೇಟೆಯಲ್ಲಂತೂ ಜೆಡಿಎಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ನಡುವೆ ಒಂದಕ್ಕೆ ಹತ್ತರಷ್ಟು ಬಾಜಿ ಕಟ್ಟುತ್ತಿರುವುದು ಕಂಡುಬರುತ್ತಿದೆ. ಬಿಜೆಪಿ ಅಭ್ಯರ್ಥಿ ಗೆಲ್ಲುತ್ತಾರೆಂದು ವಿಶ್ವಾಸದಿಂದ ಇಲ್ಲಿನ ಬಹುತೇಕ ಜನ ಹಣ, ವಸ್ತುಗಳನ್ನು ಪಣಕ್ಕಿಡುತ್ತಿದ್ದಾರೆ. ಅಷ್ಟೇ ವಿಶ್ವಾಸದಲ್ಲಿ ಜೆಡಿಎಸ್‍ನವರೂ ಕೂಡ ಬಾಜಿ ಕಟ್ಟುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಪರವಾಗಿಯೂ ಕೆಲವರು ಬಾಜಿ ಕಟ್ಟಲು ಮುಂದಾಗಿದ್ದಾರೆ.

ಪ್ರತಿ ಬೂತ್‍ಗಳಲ್ಲೂ ಮತದಾನದ ಪ್ರಮಾಣವನ್ನು ಲೆಕ್ಕ ಹಾಕುತ್ತಿರುವ ಕಾರ್ಯಕರ್ತರು ಜಾತಿವಾರು ನಮಗಿಷ್ಟು ಮತಗಳು ಬಂದಿವೆ. ಹೀಗಾಗಿ ಗೆಲುವು ನಮ್ಮದಾಗುವ ಸಾಧ್ಯತೆ ಹೆಚ್ಚಾಗಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಈ ನಿಟ್ಟಿನಲ್ಲಿಯೇ ಬಾಜಿಗೆ ಮುಂದಾಗಿದ್ದಾರೆ. ಅತ್ತ ಗೋಕಾಕ್, ಅಥಣಿ, ಕಾಗವಾಡದಲ್ಲೂ ಕೂಡ ಬೆಟ್ಟಿಂಗ್ ಕಟ್ಟುವುದು ಕಡಿಮೆಯೇನಿಲ್ಲ.

ಇನ್ನೆರಡು ದಿನಗಳಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ಗೋಕಾಕ್‍ನಲ್ಲಿ ಸಹೋದರರ ನಡುವೆ ಬೆಟ್ಟಿಂಗ್‍ಗಿಂತ ಬಿಜೆಪಿ-ಜೆಡಿಎಸ್ ನಡುವೆ ಬೆಟ್ಟಿಂಗ್ ಹೆಚ್ಚಾಗಿದೆ. ಅಥಣಿಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಬೆಟ್ಟಿಂಗ್ ಕಟ್ಟುವವರು ಹೆಚ್ಚಾಗಿದ್ದಾರೆ. ಕಾಗವಾಡದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ಬೆಟ್ಟಿಂಗ್ ನಡೆಯುತ್ತಿದೆ. ಇತ್ತ ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿ ನಡುವೆ ಸೋಲು-ಗೆಲುವಿನ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಬಾಜಿ ಕಟ್ಟಲಾಗುತ್ತಿದೆ.

ಅದೇ ರೀತಿ ಯಶವಂತಪುರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಸೋಲು-ಗೆಲುವಿನ ಮೇಲೆ ಬೆಟ್ಟಿಂಗ್ ನಡೆಯುತ್ತಿದ್ದರೆ, ಹುಣಸೂರಿನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ಕಂಡುಬಂದಿದ್ದು, ಹಲವರು ಬೆಟ್ಟಿಂಗ್ ಕಟ್ಟುತ್ತಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆಯಿಂದ ಹಿಡಿದು ಲೋಕಸಭೆ ಚುನಾವಣೆವರೆಗೂ ಪೊಲೀಸರ ಕಣ್ತಪ್ಪಿಸಿ ಬೆಟ್ಟಿಂಗ್ ಕಟ್ಟುವುದು ಸಾಮಾನ್ಯವಾಗಿದೆ. ಅದರಲ್ಲೂ ಈ ಸರ್ಕಾರ ಉರುಳುತ್ತದೆ, ಉಳಿಯುತ್ತದೆ ಎಂಬುದರ ಮೇಲೆಯೂ ಕೂಡ ಬಾಜಿ ಜೋರಾಗಿದೆ. ಒಟ್ಟಾರೆ ಡಿ.9ರ ಫಲಿತಾಂಶ ಯಾರಿಗೆ ಲಾಭವಾಗಲಿದೆ, ಯಾರಿಗೆ ನಷ್ಟವಾಗಲಿದೆ ಎಂಬುದನ್ನು ಕಾದು ನೋಡಬೇಕು.

Facebook Comments

Sri Raghav

Admin