ಉಪಚುನಾವಣೆ : 1 ಗಂಟೆ ವೇಳೆಗೆ ಶೇಕಡಾ 32 ರಷ್ಟು ಮತದಾನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.5-ರಾಜ್ಯ ಬಿಜೆಪಿ ಸರ್ಕಾರಕ್ಕೆ ಅಗ್ನಿಪರೀಕ್ಷೆಯಾಗಿರುವ, ಪ್ರತಿಪಕ್ಷ ಕಾಂಗ್ರೆಸ್, ಜೆಡಿಎಸ್‍ಗೆ ಪ್ರತಿಷ್ಠೆಯ ಕಣವಾಗಿರುವ ಉಪಚುನಾವಣೆಯ 15 ಕ್ಷೇತ್ರಗಳಿಗೆ ಇಂದು ನಡೆದ ಮತದಾನ ಬಹುತೇಕ ಶಾಂತಿಯುತವಾಗಿತ್ತು. ಮಧ್ಯಾಹ್ನದ ವೇಳೆಗೆ ಶೇ.32ರಷ್ಟು ಮತದಾನವಾಗಿತ್ತು.

ಅಲ್ಲಲ್ಲಿ ಕೈಕೊಟ್ಟ ಮತಯಂತ್ರಗಳು, ಕೆಲ ಕಾಲ ಮತದಾನ ಸ್ಥಗಿತ, ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ, ಹಲವೆಡೆ ಮತದಾನ ಬಹಿಷ್ಕಾರ, ಪ್ರವಾಹ ಸಂತ್ರಸ್ತರು ನೋವಿನಿಂದಲೇ ಮಾಡಿದ ಮತದಾನ, ಸಣ್ಣಪುಟ್ಟ ಘಟನೆ, ಹಲವೆಡೆ ಮತದಾರರ ಪಟ್ಟಿಯಲ್ಲಿ ಹೆಸರು ನಾಪತ್ತೆ, ನಕಲಿ ಮತದಾನ ಆರೋಪ ಹೊರತುಪಡಿಸಿದರೆ 15 ಕ್ಷೇತ್ರಗಳಲ್ಲೂ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.

ಬೆಳಗ್ಗೆ 7 ಗಂಟೆಯಿಂದಲೇ ಮತಗಟ್ಟೆಗಳ ಮುಂದೆ ಮಹಿಳೆಯರು, ವೃದ್ಧರು, ಯುವಕರು, ಯುವತಿಯರು, ಹೊಸ ಮತದಾರರು ಸರತಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಮತ ಚಲಾಯಿಸಿದರು. ಮಹಾಲಕ್ಷ್ಮೀ ಲೇಔಟ್, ಯಶವಂತಪುರ, ಕೆ.ಆರ್.ಪುರ, ಶಿವಾಜಿನಗರ, ಹೊಸಕೋಟೆ, ಚಿಕ್ಕಬಳ್ಳಾಪುರ, ಕೆ.ಆರ್.ಪೇಟೆ, ಹುಣಸೂರು, ರಾಣೆಬೆನ್ನೂರು, ಯಲ್ಲಾಪುರ, ಅಥಣಿ, ಗೋಕಾಕ್, ಕಾಗವಾಡ, ವಿಜಯನಗರದ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಹುತೇಕ ಮತಗಟ್ಟೆಗಳಲ್ಲಿ ಬೆಳಗ್ಗೆಯಿಂದ ಮಂದಗತಿಯಲ್ಲಿ ಸಾಗಿದ್ದ ಮತದಾನ ಮಧ್ಯಾಹ್ನದ ವೇಳೆಗೆ ಚುರುಕುಪಡೆದುಕೊಂಡಿತ್ತು. ಸಂಜೆ ವೇಳೆಗೆ ಮತ್ತಷ್ಟು ಬಿರುಸಿನಿಂದ ಕೂಡಿತ್ತು.

ಹೈವೋಲ್ಟೇಜ್ ಕ್ಷೇತ್ರಗಳಾದ ಹೊಸಕೋಟೆ,ಅಥಣಿ, ಗೋಕಾಕ್, ಹುಣಸೂರು, ಕೆ.ಆರ್.ಪೇಟೆ ಕ್ಷೇತ್ರಗಳಲ್ಲಿ ಹೆಚ್ಚಿನ ಮತದಾನವಾಗಿತ್ತು. ಮಹಾಲಕ್ಷ್ಮಿ ಲೇಔಟ್‍ನಲ್ಲಿ ಬೆಳಗ್ಗೆ 11 ಗಂಟೆ ವೇಳೆಗೆ ಶೇ.10ರಷ್ಟು ಮತದಾನವಾಗಿದ್ದರೆ, ಹೊಸಕೋಟೆಯಲ್ಲಿ ಶೇ.9ರಷ್ಟು ಮತದಾನವಾಗಿತ್ತು. ಶಿವಾಜಿನಗರದಲ್ಲಿ ಮತದಾರರ ಹುಮ್ಮಸ್ಸು ಕಂಡುಬರಲಿಲ್ಲ. ಬೆಳಗ್ಗೆ 10 ಗಂಟೆಯಾದರೂ ಮತದಾರರು ಹೆಚ್ಚಾಗಿ ಮತಗಟ್ಟೆ ಕಡೆ ಆಗಮಿಸಿರಲಿಲ್ಲ. 11 ಗಂಟೆ ನಂತರ ಮತದಾನ ಸ್ವಲ್ಪ ಚುರುಕು ಪಡೆದುಕೊಂಡಿತು.

ಹಿರೇಕೆರೂರು, ಕಾಗವಾಡ, ಹುಣಸೂರು, ಯಲ್ಲಾಪುರ, ವಿಜಯನಗರ, ರಾಣೆಬೆನ್ನೂರು, ಯಶವಂತಪುರ ವಿಧಾನಸಭಾಕ್ಷೇತ್ರಗಳಲ್ಲಿ ಮತದಾನ ಬಿರುಸಿನಿಂದ ಸಾಗಿತ್ತು. ಹೊಸಕೋಟೆಯ ಬೆಂಡಗಾನಹಳ್ಳಿ ಮತಗಟ್ಟೆಯಲ್ಲಿ ಪಕ್ಷದ ಏಜೆಂಟ್ ಮತ್ತು ಮತಗಟ್ಟೆ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು. ಭುವನಹಳ್ಳಿ ಮತಗಟ್ಟೆಯಲ್ಲಿ ಮತಯಂತ್ರ ದೋಷದಿಂದ ಒಂದು ಗಂಟೆ ತಡವಾಗಿ ಮತದಾನ ಪ್ರಾರಂಭಿಸಲಾಯಿತು.

ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹಾಗೂ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತ ತಲುಪಿತ್ತು. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಭಾಯಿಸಿದರು. ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಹೊಸಪೇಟೆ ತಾಲ್ಲೂಕು ಬುದ್ನಾಪುರ ಗ್ರಾಮಸ್ಥರು ಮತದಾನವನ್ನು ಬಹಿಷ್ಕರಿಸಿದ್ದರು. ಸ್ಥಳಕ್ಕೆ ಆಗಮಿಸಿದ ರಾಜಕೀಯ ಮುಖಂಡರು ಮತದಾನ ಮಾಡುವಂತೆ ಮನವೊಲಿಸುವಲ್ಲಿ ಯಶಸ್ವಿಯಾದರು.

ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮೊದಲು ಮತದಾನ ಮಾಡಲು ಆಗಮಿಸಿದ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿಗೆ ಮತಯಂತ್ರ ಕೈಕೊಟ್ಟಿದ್ದರಿಂದ ಅರ್ಧಗಂಟೆ ತಡವಾಗಿ ಮತದಾನ ಮಾಡಬೇಕಾಯಿತು.ಕೆ.ಆರ್.ಪೇಟೆ ಜೆಡಿಎಸ್ ಅಭ್ಯರ್ಥಿ ಬಿ.ಎಲ್.ದೇವರಾಜ್ ಅವರು ವಾಸ್ತುಪ್ರಕಾರ ಮತಯಂತ್ರ ತಿರುಗಿಸಿಟ್ಟು ವೋಟ್ ಮಾಡಿದ್ದು ವಿಶೇಷವಾಗಿತ್ತು.

ಕೆ.ಆರ್.ಪೇಟೆ ತಾಲೂಕಿನ ಬಂಡಿಹೊಳೆ ಮತಗಟ್ಟೆ ಸಂಖ್ಯೆ 151 ರಲ್ಲಿ ಮತದಾನ ಮಾಡಿದ ದೇವರಾಜ್ ಚುನಾವಣಾ ಸಿಬ್ಬಂದಿ ಮತಯಂತ್ರ ಇಟ್ಟಿರುವ ವಾಸ್ತು ಸರಿ ಇಲ್ಲವೆಂದು ಇವಿಎಂ ಯಂತ್ರ ತಿರುಗಿಸಿಟ್ಟು ಮತದಾನ ಮಾಡಿದರು. ಇತ್ತ ಬಿಜೆಪಿ ಅಭ್ಯರ್ಥಿ ನಾರಾಯಣಗೌಡ ಕೆ.ಆರ್.ಪೇಟೆಯ ಕರ್ನಾಟಕ ಪಬ್ಲಿಕ್ ಸ್ಕೂಲ್‍ನ ಮತಗಟ್ಟೆಯಲ್ಲಿ ತಮ್ಮ ಕುಟುಂಬ ಸಮೇತ ಆಗಮಿಸಿ ಮತ ಚಲಾಯಿಸಿದರು. ಮತಯಂತ್ರದ ಬಳಿ ಬಂದು ಚಪ್ಪಲಿ ಬಿಟ್ಟು ಮತ ಚಲಾಯಿಸಿದ್ದು ಗಮನಸೆಳೆಯಿತು.

ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಅವರು ತಮ್ಮ ಕುಟುಂಬದವರೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿ ಶಿವರಾಜ್ ಅವರು, ತಮ್ಮ ಬೆಂಬಲಿಗರು ಹಾಗೂ ಕುಟುಂಬದವರೊಂದಿಗೆ ಆಗಮಿಸಿ ಹಕ್ಕು ಚಲಾಯಿಸಿದರು.

ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್, ನಾಗದೇವನಹಳ್ಳಿಯ ರೋಟರಿ ವಿದ್ಯಾಸಂಸ್ಥೆಯಲ್ಲಿ ತಮ್ಮ ಪತ್ನಿ ಹಾಗೂ ಪುತ್ರನೊಂದಿಗೆ ಆಗಮಿಸಿ ಮತ ಚಲಾಯಿಸಿದರು.
ಚಿಕ್ಕಬಳ್ಳಾಪುರದ ರೆಡ್ಡಿಗೊಲ್ಲವರಹಳ್ಳಿಯಲ್ಲಿ ಬೂತ್ ಏಜೆಂಟ್ ಮತ್ತು ಚುನಾವಣಾಧಿಕಾರಿ ನಡುವೆ ಮಾತಿನ ಚಕಮಕಿ ನಡೆದು ಮತದಾನ ಅರ್ಧಗಂಟೆ ತಡವಾಗಿ ಆರಂಭವಾಯಿತು.

ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ಮತದಾನದ ಆರೋಪ ಕೇಳಿ ಬಂದಿದೆ. ನಾಗದೇವನಹಳ್ಳಿಯ ರೋಟರಿ ವಿದ್ಯಾಲಯ ಮತಗಟ್ಟೆಯಲ್ಲಿ ತಮ್ಮ ಮತವನ್ನು ಬೇರೆ ಯಾರೋ ಚಲಾಯಿಸಿದ್ದಾರೆ ಎಂದು ಆರೋಪಿಸಿ ಮತದಾರರು ಚಾಲೆಂಜ್ ವೋಟ್ ಮಾಡಲು ಮುಂದಾಗಿರುವ ಘಟನೆ ನಡೆದಿದೆ.

ವಿಜಯನಗರ ಕ್ಷೇತ್ರದಲ್ಲಿ ಆನಂದ್‍ಸಿಂಗ್ ತನ್ನ ಪತ್ನಿ ಲಕ್ಷ್ಮಿ ಹಾಗೂ ಇತ್ತೀಚೆಗಷ್ಟೇ ವಿವಾಹವಾದ ಮಗ ಮತ್ತು ಸೊಸೆಯೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಅಥಣಿ ಮತ್ತು ಶಿವಾಜಿನಗರದ ವಿವಿಧ ಮತಗಟ್ಟೆಗಳಲ್ಲಿ ಮತದಾನ ಮಾಡುವ ದೃಶ್ಯವನ್ನು ಮೊಬೈಲ್‍ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿರುವ ಸಂಬಂಧ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಶಿವಾಜಿನಗರದಲ್ಲಿ ಅಬ್ದುಲ್ ರೆಹಮಾನ್ ಕುಟುಂಬದವರ ಹೆಸರೇ ನಾಪತ್ತೆಯಾಗಿದೆ. ಮತದಾನ ಮಾಡಲು ಬಂದ ಕುಟುಂಬದವರು ತಮ್ಮ ಹೆಸರಿಲ್ಲದಿರುವುದನ್ನು ಕಂಡು ನಿರಾಸೆಯಿಂದ ವಾಪಸ್ ತೆರಳಿದ್ದಾರೆ.

 

 

Facebook Comments

Sri Raghav

Admin