ಉಪಚುನಾವಣೆ : ನಾಳೆ 3 ಕ್ಷೇತ್ರಗಳಲ್ಲಿ ಮತದಾನಕ್ಕೆ ಸಕಲ ಸಿದ್ಧತೆ, ವೆಬ್ ಕಾಸ್ಟಿಂಗ್ ಸೌಲಭ್ಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಏ.16- ನಾಳೆ ರಾಜ್ಯದ ಮೂರು ಜಿಲ್ಲೆಗಳಲ್ಲಿ ಉಪ ಚುನಾವಣೆ ನಡೆಯಲಿದೆ. ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯ, ಸೂಕ್ಷ್ಮ ನಿಗಾವಣೆ ಮತ್ತು ವಿಡಿಯೊಗ್ರಾಫಿಗಳನ್ನು ಒದಗಿಸಲಾಗಿದೆ. ಬೆಳಗಾವಿ ಲೋಕಸಭಾ ಉಪ ಚುನಾವಣೆ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ನಿನ್ನೆ ಪ್ರಚಾರ ಅಂತ್ಯಗೊಂಡಿದ್ದು, ಮನೆಮನೆಗೆ ಹೋಗಿ ಮತಯಾಚನೆ ಮಾಡಿದವರನ್ನು, ಅಕ ಸಂಖ್ಯೆಯಲ್ಲಿ ಜನದಟ್ಟಣೆ ಪ್ರದೇಶದಲ್ಲಿ ಭಾಗಿಯಾದವರನ್ನು, ರೋಡ್ ಶೋಗಳಲ್ಲಿ ಭಾಗಿಯಾದವರನ್ನು ತಪಾಸಣೆಗೆ ಒಳಪಡಿಸಲಾಗಿದೆ.

ಬೆಳಗಾವಿ, ಮಸ್ಕಿ ಮತ್ತು ಬೀದರ್ ನ ಬಸವಕಲ್ಯಾಣ ಕ್ಷೇತ್ರದಲ್ಲಿ ನಾಳೆ ಮತದಾನ ನಡೆದ ನಂತರ ರಾಜ್ಯ ಆರೋಗ್ಯ ಇಲಾಖೆ ಕೊರೋನಾ ತಪಾಸಣೆ ನಡೆಸಲಿದೆ. ಮತದಾನ ಮುಗಿದ ಮೇಲೆ ಪರಿಸ್ಥಿತಿ ನೋಡಿಕೊಂಡು ತೀವ್ರ ಮಟ್ಟದಲ್ಲಿ ಕೊರೋನಾ ತಪಾಸಣೆ ಮಾಡುತ್ತೇವೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಭರ್ಜರಿ ಪ್ರಚಾರ ಕಾರ್ಯ ನಡೆಸಲು ಮುಂದಾಗಿದ್ದ ಮಸ್ಕಿ ಬಿಜೆಪಿ ಅಭ್ಯರ್ಥಿ ಪ್ರತಾಪ ಗೌಡ ಪಾಟೀಲ್ ಅವರಿಗೆ ಕೆಲ ದಿನಗಳ ಹಿಂದಷ್ಟೇ ಕೊರೋನಾ ಪಾಸಿಟಿವ್ ಬಂದಿತ್ತು. ತಮ್ಮ ಕಾರ್ಯಕರ್ತರಿಗೆ ವಿಡಿಯೋ ಸಂದೇಶ ರವಾನಿಸಿದ್ದ ಪಾಟೀಲ್ ಅವರು, ಕೊರೋನಾ ಪಾಸಿಟಿವ್ ಬಂದಿದ್ದು, ನನ್ನೊಂದಿಗೆ ಸಂಪರ್ಕದಲ್ಲಿದ್ದವರು ಪರೀಕ್ಷೆಗೊಳಗಾಗುವಂತೆ ಮನವಿ ಮಾಡಿಕೊಂಡಿದ್ದರು. ಅಲ್ಲದೆ, ತಾವು ಐಸೋಲೇಷನ್ ನಲ್ಲಿರುವುದರಿಂದ ಚುನಾವಣಾ ಪ್ರಚಾರಕ್ಕೆ ಆಗಮಿಸಲು ಸಾಧ್ಯವಿಲ್ಲ. ಚುನಾವಣಾ ದಿನದಂದೂ ಕೂಡ ತಾವು ಐಸೋಲೇಷನ್ ನಲ್ಲಿಯೇ ಇರುವುದಾಗಿ ಹೇಳಿದ್ದಾರೆ.

ಇನ್ನು ಮಸ್ಕಿಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಸ್ಕಿಯಲ್ಲಿ ಪ್ರಚಾರಕ್ಕಿಳಿದಿದ್ದ ಸುರಪುರ ಶಾಸಕ ಜಿ. ರಾಜುಗೌಡ ಅವರಿಗೂ ಕೊರೋನಾ ಸೋಂಕು ತಗುಲಿದೆ.

ನಾಯಕರಲ್ಲಿ ಕೊರೋನಾ ಸೋಂಕು ಹೆಚ್ಚಾಗಿ ಕಾಣಿಸಿಕೊಂಡ ಬಳಿಕ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಸಿಎಂ ಯಡಿಯೂರಪ್ಪ ಬಸವಕಲ್ಯಾಣ ಹಾಗೂ ಮಸ್ಕಿಯಲ್ಲಿ ಪ್ರಚಾರ ಕಾರ್ಯ ನಡೆಸಿದರು.
ಬಸವಕಲ್ಯಾಣ ಕ್ಷೇತ್ರದಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದ ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಈಶ್ವರ ಖಂಡ್ರೆಯವರಿಗೆ ಕೊರೋನಾ ಸೋಂಕು ತಗುಲಿತ್ತು. ನಾಯಕರಲ್ಲಿ ಕೊರೋನಾ ಸೋಂಕು ದೃಢಪಟ್ಟ ಬಳಿಕ ಅವರ ಕಾರ್ಯಕರ್ತರಲ್ಲಿಯೂ ಕೊರೋನಾ ಸೋಂಕು ತಗುಲಿದ್ದು ಕಂಡು ಬಂದಿತು.

ಕೊರೋನಾ ಆತಂಕದ ನಡುವಲ್ಲೂ ಚುನಾವಣೆಯನ್ನು ಪ್ರತಿಷ್ಟೆಯಾಗಿ ತೆಗೆದುಕೊಂಡಿರುವ ಮೂರು ಪಕ್ಷಗಳ ನಾಯಕರು ಭರ್ಜರಿ ಪ್ರಚಾರ ನಡೆಸಿದ್ದರು. ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಚಿವರಾದ ಸಚಿವ ಶ್ರೀರಾಮುಲು, ಬಸವರಾಜ ಬೊಮ್ಮಾಯಿ, ಸೋಮಣ್ಣ, ಸಾರಿಗೆ ಸಚಿವ ಲಕ್ಷ್ಮಣ ಸವದಿ, ಬಸವಕಲ್ಯಾಣದಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಮಿ ಹಾಗೂ ಜೆಡಿಎಸ್ ಹಿರಿಯ ನಾಯಕ ಬಂಡೆಪ್ಪ ಕಾಶೆಂಪುರ್ ಸುದೀರ್ಘವಾಗಿ ಪ್ರಚಾರ ಕಾರ್ಯ ಮಾಡಿದ್ದಾರೆ.

ಕಾಂಗ್ರೆಸ್ ಹಿರಿಯ ಮುಖಂಡರು ಮತ್ತು ಕೆಲ ಶಾಸಕರು ಬಸವಕಲ್ಯಾಣದ 38-40 ಹಳ್ಳಿಗಳಲ್ಲಿ ಗುಂಪುಗಳ ಮೂಲಕ ಪ್ರಚಾರ ನಡೆಸಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೇವಾಲಾ, ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಇತರರು ಬಸವಕಲ್ಯಾಣದ ತಮ್ಮ ಅಭ್ಯರ್ಥಿಮಾಲಾ ಬಿ.ನಾರಾಯಣ ರಾವ್ ಮತ್ತು ಮಸ್ಕಿಯಲ್ಲಿ ಬಸವನ ಗೌಡ ಅವರ ಪರ ಪ್ರಚಾರ ನಡೆಸಿದರು.

ಈ ನಡುವೆ ಮಸ್ಕಿಯಲ್ಲಿ ಹಣ ಹಂಚಿಕೆ ವಿಚಾರ ಭಾರೀ ಕೋಲಾಹಲವನ್ನೇ ಸೃಷ್ಟಿಸಿದೆ. ಈ ಅಕ್ರಮ ಚಟುವಟಿಕೆಗಳ ವಿರುದ್ಧ ಈ ವರೆಗೂ 14 ಪ್ರಕರಣಗಳು ದಾಖಲಾಗಿದ್ದು, ನಾಲ್ವರು ಬಿಜೆಪಿ ಕಾರ್ಯಕರ್ತರನ್ನೂ ಬಂಧನಕ್ಕೊಳಪಡಿಸಲಾಗಿದೆ ಎಂದು ತಿಳಿದುಬಂದಿದೆ. ಮೂರು ಕ್ಷೇತ್ರಗಳ ಉಪಚುನಾವಣೆಗೆ ಶನಿವಾರ ಮತದಾನ ನಡೆಯಲಿದ್ದು, ಮೇ.2 ರಂದು ಫಲಿತಾಂಶ ಹೊರಬೀಳಲಿದೆ.

Facebook Comments

Sri Raghav

Admin