ಸಿಂಧಗಿ ಮತ್ತು ಹಾನಗಲ್ ನಲ್ಲಿ ಮತ ಸೆಳೆಯಲು ಬಿಜೆಪಿ ರಣತಂತ್ರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.9- ಶತಾಯಗತಾಯ ಸಿಂಧಗಿ ಮತ್ತು ಹಾನಗಲ್ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯನ್ನು ಗೆದ್ದು ಸರ್ಕಾರ ಮತ್ತು ಪಕ್ಷದ ವರ್ಚಸ್ಸು ಹೆಚ್ಚಿಸಿಕೊಳ್ಳಲು ಮುಂದಾಗಿರುವ ಬಿಜೆಪಿ ಮತಗಳನ್ನು ಸೆಳೆಯಲು ರಣತಂತ್ರ ರೂಪಿಸಿದೆ. ಎರಡು ಕ್ಷೇತ್ರಗಳಲ್ಲಿ ನಿರ್ಣಾಯಕವಾಗಿರುವ ಸಮುದಾಯದ ಮತಗಳನ್ನು ಸೆಳೆಯಲು ಆಯಾ ಜಾತಿಯ ಸಚಿವರು ಹಾಗೂ ಶಾಸಕರು ಮತ್ತು ಪಕ್ಷದ ಮುಖಂಡರನ್ನು ಮತ ಬೇಟೆಗೆ ನಿಯೋಜಿಸಲಿದೆ.

ಈ ಹಿಂದಿನ ಉಪಚುನಾವಣೆಯಲ್ಲಿ ಅನುಸರಿಸಿದ ತಂತ್ರವನ್ನೇ ಈ ಚುನಾವಣೆಯಲ್ಲೂ ಹೆಣೆಯಲು ಮುಂದಾಗಿರುವ ಕಮಲಪಡೆ ಒಂದೊಂದು ಸಮುದಾಯಕ್ಕೆ ಇಬ್ಬರಿಂದ ಮೂವರು ಸಚಿವರ ನೇತೃತ್ವದಲ್ಲಿ ಜಾತಿ ಮತಗಳನ್ನು ಸೆಳೆಯಲು ರಣತಂತ್ರ ಹೆಣೆದಿದೆ ಎಂದು ಗೊತ್ತಾಗಿದೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತವರು ಜಿಲ್ಲೆ ಹಾವೇರಿಯ ಹಾನಗಲ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಕ್ಷರಶಃ ಬಿಜೆಪಿಗೆ ಪ್ರತಿಷ್ಠೆಯಾಗಿದೆ. ಅದರಲ್ಲೂ ಸಿಎಂ ತವರು ಜಿಲ್ಲೆಯಾಗಿರುವುದರಿಂದ ಇಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಬಿಜೆಪಿಗಿದೆ.

ಕ್ಷೇತ್ರದಲ್ಲಿ ಲಿಂಗಾಯಿತ ಸಮುದಾಯದ ಮತಗಳೇ ನಿರ್ಣಾಯಕವಾಗಿವೆ. ಅದರಲ್ಲೂ ಲಿಂಗಾಯಿತ ಸಮುದಾಯದ ಉಪಪಂಗಡವಾದ ಪಂಚಮಸಾಲಿ ಮತಗಳೇ ಅಭ್ಯರ್ಥಿಯ ಸೋಲು-ಗೆಲುವಿನ ಭವಿಷ್ಯವನ್ನು ತೀರ್ಮಾನಿಸಲಿದೆ. ಹಾನಗಲ್‍ನಲ್ಲಿ ಅಂದಾಜು 85 ಸಾವಿರ ಲಿಂಗಾಯಿತ ಮತಗಳಿವೆ. ಇದರಲ್ಲಿ 58 ಸಾವಿರ ಪಂಚಮಸಾಲಿ, ನೊಣಬ ಲಿಂಗಾಯಿತ ಮತಗಳು ನಿರ್ಣಾಯಕವಾಗಿವೆ.

ಈಗಾಗಲೇ ಹಾನಗಲ್ ಉಸ್ತುವಾರಿಯನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಸೇರಿದಂತೆ ಮತ್ತಿತರರಿಗೆ ನೀಡಲಾಗಿದೆ.

ನಿರಾಣಿ ಹೆಗಲಿಗೆ ಪಂಚಮಸಾಲಿ:
ಹಾನಗಲ್‍ನಲ್ಲಿ ನಿರ್ಣಾಯಕವಾಗಿರುವ ಪಂಚಮಸಾಲಿ ಸಮುದಾಯವನ್ನು ಸೆಳೆಯುವ ಹೊಣೆಗಾರಿಕೆಯನ್ನು ಸಚಿವ ನಿರಾಣಿ ಹೆಗಲಿಗೆ ಪಕ್ಷ ನೀಡಿದೆ. ಜತೆಗೆ ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಕೂಡ ಪಕ್ಕದ ಗದಗ ಜಿಲ್ಲೆಯವರಾದರೂ ಇದೇ ಭಾಗಕ್ಕೆ ಸೇರುತ್ತಾರೆ. ಹೀಗಾಗಿ ಈ ಎರಡು ಜೋಡೆತ್ತಗಳು ಪಂಚಮಸಾಲಿ ಸಮುದಾಯದ ಹೊಣೆಗಾರಿಕೆಯನ್ನು ಹೊರಲಿದ್ದಾರೆ.

ಜೊತೆಗೆ ಸಚಿವರಾದ ಬಿ.ಸಿ.ಪಾಟೀಲ್, ಶಂಕರ್ ಪಾಟೀಲ್ ಮುನೇನಕೊಪ್ಪ, ಸಂಸದ ಶಿವಕುಮಾರ್ ಉದಾಸಿ, ಶಾಸಕರಾದ ಅರುಣ್ ಪೂಜಾರ್, ಅರವಿಂದ್ ಬೆಲ್ಲದ್, ವಿರೂಪಾಕ್ಷಪ್ಪ ಬಳ್ಳಾರಿ ಸೇರಿದಂತೆ ಪಂಚಮಸಾಲಿ ಸಮುದಾಯದ ಎಲ್ಲ ಶಾಸಕರು, ಪಕ್ಷದ ಮುಖಂಡರು, ಅಭ್ಯರ್ಥಿ ಶಿವರಾಜ್ ಸಜ್ಜನವರ್ ಪರವಾಗಿ ಮತಯಾಚನೆ ಮಾಡಲಿದ್ದಾರೆ.

ಇನ್ನು ನೊಣಬ ಸಮುದಾಯದ ಮತಗಳು ಕೂಡ ನಿರ್ಣಾಯಕವಾಗಿರುವುದರಿಂದ ಆ ಸಮುದಾಯದ ಜೆ.ಸಿ.ಮಾಧುಸ್ವಾಮಿ ಕೂಡ ಅಖಾಡಕ್ಕೆ ಇಳಿಯಲಿದ್ದಾರೆ. ಪರಿಶಿಷ್ಟ ಜಾತಿ ಮತಗಳನ್ನು ಸೆಳೆಯಲು ನೀರಾವರಿ ಸಚಿವ ಗೋವಿಂದ ಕಾರಜೋಳ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಪ್ರಭು ಚವ್ಹಾಣ್ ಹಾಗೂ ಪರಿಶಿಷ್ಟ ಪಂಗಡದ ಮತಗಳ ಸೆಳೆಯಲು ಸಾರಿಗೆ ಸಚಿವ ಶ್ರೀರಾಮುಲು ಪ್ರಚಾರ ನಡೆಸುವರು.

ಅಲ್ಲದೆ ಆಯಾಯ ಸಮುದಾಯಗಳನ್ನು ಪ್ರತಿನಿಸುವ ಶಾಸಕರು, ಜಿಲ್ಲಾಧ್ಯಕ್ಷರು, ಮುಖಂಡರನ್ನು ಕರೆತಂದು ಗೆಲ್ಲಲು ಬಿಜೆಪಿ ಕಾರ್ಯತಂತ್ರ ರೂಪಿಸಿದೆ.

ಸಿಂಧಗಿಯಲ್ಲೂ ಇದೇ ತಂತ್ರ:
ಬಿಜೆಪಿಗೆ ಮತ್ತೊಂದು ಅಗ್ನಿಪರೀಕ್ಷೆಯಾಗಿರುವ ಸಿಂಧಗಿಯಲ್ಲೂ ಬಿಜೆಪಿ ಜಾತಿ ಲೆಕ್ಕಾಚಾರದ ಮೇಲೆಯೇ ಮತ ಸೆಳೆಯಲು ಮುಂದಾಗಿದೆ.
ಕ್ಷೇತ್ರದ ಉಸ್ತುವಾರಿಯನ್ನು ನೀರಾವರಿ ಸಚಿವ ಗೋವಿಂದ ಕಾರಜೋಳಗೆ ನೀಡಲಾಗಿದ್ದು, ಜೊತೆಗೆ ಪಂಚಮಸಾಲಿ, ಗಾಣಿಗ ಸಮುದಾಯದ ಮತಗಳಿಗಾಗಿ ಸಚಿವರನ್ನು ನಿಯೋಜನೆ ಮಾಡಲಿದೆ.

ಬಿಜೆಪಿಯ ಫೈರ್ ಬ್ರಾಂಡ್ ಎಂದೇ ಖ್ಯಾತಿಯಾಗಿರುವ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಸೇರಿದಂತೆ ಇಡೀ ಬಿಜೆಪಿ ತಂಡವೇ ಕ್ಷೇತ್ರದಲ್ಲಿ ಲಗ್ಗೆ ಇಡಲಿದೆ.

ಏನೇ ಭಿನ್ನಾಭಿಪ್ರಾಯಗಳು, ಅಪಸ್ವರ ಇದ್ದರೂ ಕೂಡ ಎಲ್ಲವನ್ನೂ ಬದಿಗೊತ್ತಿ ಅಭ್ಯರ್ಥಿ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಿಸಬೇಕೆಂದು ಬಿಜೆಪಿ ನಾಯಕರು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ಇದರ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಕ್ಷದ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಮತ್ತಿತರರು ಎರಡೂ ಕ್ಷೇತ್ರಗಳಲ್ಲೂ ಬಿರುಸಿನ ಪ್ರಚಾರ ನಡೆಸಲಿದ್ದಾರೆ.

Facebook Comments