‘ಎಂಟಿಬಿ ನನ್ನ ತಂದೆ ಸಮಾನ, ಅವರ ಜೊತೆ ನಾವಿದ್ದೇವೆ’

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.10-ಎಂ.ಟಿ.ಬಿ.ನಾಗರಾಜ್ ಮತ್ತು ವಿಶ್ವನಾಥ್ ಅವರ ಸೋಲು ನೋವು ತರಿಸಿದೆ. ಅವರ ಪರ ನಾವಿದ್ದೇವೆ ಎಂದು ಕೆ.ಆರ್.ಪುರ ಶಾಸಕ ಭೈರತಿ ಬಸವರಾಜ್ ಹೇಳಿದರು. ಶಾಸಕ ಎಸ್.ಟಿ.ಸೋಮಶೇಖರ್ ಅವರೊಂದಿಗೆ ವಿಜಯನಗರದ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಟಿಬಿ ನಾಗರಾಜ್ ಅವರು ನನ್ನ ತಂದೆ ಸಮಾನರು. ಅವರ ಸೋಲು ನನಗೆ ಬೇಸರ ತರಿಸಿದೆ ಎಂದರು.

ಸಚಿವ ಸಂಪುಟದಲ್ಲಿ ನಗರಾಭಿವೃದ್ಧಿ ಖಾತೆ ನೀಡುವಂತೆ ಕೇಳಿದ್ದೇನೆ. ಅಂತಿಮ ನಿರ್ಧಾರ ಮುಖ್ಯಮಂತ್ರಿ ಯಡಿಯೂರಪ್ಪನವರ ವಿವೇಚನೆಗೆ ಬಿಡಲಾಗಿದೆ ಎಂದು ಹೇಳಿದರು. ಎಸ್.ಟಿ.ಸೋಮಶೇಖರ್ ಮಾತನಾಡಿ, ಮುಖ್ಯಮಂತ್ರಿ ಯಡಿಯೂರಪ್ಪ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಾರೆ. ಮುನಿರತ್ನ ಅವರ ವಿಚಾರದಲ್ಲೂ ಮುಖ್ಯಮಂತ್ರಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೇವೆ. ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ.

ಎಲ್ಲಾ 15 ಶಾಸಕರು ಒಟ್ಟಾಗಿದ್ದೇವೆ. ಎಂಟಿಬಿ ನಾಗರಾಜ್ ಹಾಗೂ ವಿಶ್ವನಾಥ್ ಅವರನ್ನು ಕರೆಸಿ ಮಾತುಕತೆ ನಡೆಸುತ್ತೇವೆ ಎಂದು ಹೇಳಿದರು. ಬೆಂಗಳೂರು ಅಭಿವೃದ್ಧಿಗೆ ಶ್ರಮಿಸುವಂತೆ ಶ್ರೀಗಳು ಸಲಹೆ ನೀಡಿದ್ದಾರೆ. ಟ್ರಾಫಿಕ್ ಸೇರಿದಂತೆ ಪ್ರಮುಖ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ಸೂಚಿಸಿದ್ದಾರೆ ಎಂದರು.

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರ ರಾಜೀನಾಮೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅದು ಅವರ ಪಕ್ಷದ ಆಂತರಿಕ ವಿಷಯ ಎಂದು ಹೇಳಿದರು. ಎಲ್ಲಾ 15 ಶಾಸಕರು ನಾಳೆ ಸಭೆ ಸೇರಲಿದ್ದೇವೆ ಅವರು ತಿಳಿಸಿದರು.

Facebook Comments