ರಾಜ್ಯದಲ್ಲಿ ಮರಳು ನೀತಿ ಜಾರಿಗೆ ತರಲು ರೂಪುರೇಷೆ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮಾ.20- ರಾಜ್ಯದಲ್ಲಿ ಮರಳು ನೀತಿ ಜಾರಿಗೆ ತರಲು ರೂಪುರೇಷೆಗಳನ್ನು ಸರ್ಕಾರ ಸಿದ್ಧಪಡಿಸುತ್ತಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿ.ಸಿ.ಪಾಟೀಲ್ ವಿಧಾನಸಭೆಗೆ ತಿಳಿಸಿದರು. ಪ್ರಶ್ನೋತರ ವೇಳೆಯಲ್ಲಿ ಸಂಜೀವ ಮಟಂದೂರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು,

ಸುಸ್ಥಿರ ಮರಳು ಗಣಿಗಾರಿಕೆ ನಿರ್ವಹಣೆ, ಮಾರ್ಗಸೂಚಿಯಲ್ಲಿ ಪ್ರವಾಹದಿಂದ ಜಮೀನುಗಳಲ್ಲಿ ಸಂಗ್ರಹವಾಗಿರುವ ಮರಳನ್ನು ತೆರವುಗೊಳಿಸಲು, ಜಲಾಶಯ, ಅಣೆಕಟ್ಟು,ಬ್ಯಾರೇಜ್, ಕಿಂಡಿ ಅಣೆಕಟ್ಟಿನ ಹಿನ್ನೀರಿನ ಪ್ರದೇಶಗಳಲ್ಲಿ ಹೂಳಿನೊಂದಿಗೆ ಸಂಗ್ರಹವಾಗಿರುವ ಮರಳನ್ನು ತೆರವುಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಪ್ರಕೃತಿ ವಿಕೋಪದಿಂದ ಸಂಗ್ರಹವಾಗಿರುವ ಮರಳನ್ನು ತೆರವುಗೊಳಿಸಿ ಉಪಯೋಗಿಸಲು ಸರ್ಕಾರಕ್ಕೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಅದೇ ರೀತಿ ಪ್ರವಾಹದಿಂದ ನದಿಗಳ ಪಕ್ಕದ ಕೃಷಿ ಜಮೀನಿನಲ್ಲಿ ಸಂಗ್ರಹವಾಗುವ ಮರಳನ್ನು ತೆರವುಗೊಳಿಸಿ ಸ್ಥಳೀಯ ಕಾಮಗಾರಿಗಳಿಗೆ ಬಳಸಲು ಸರ್ಕಾರ ಅವಕಾಶ ಕಲ್ಪಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ 22 ಕಡೆಗಳಲ್ಲಿ ಪ್ರವಾಹದಿಂದ ಕೃಷಿ ಜಮೀನಿನಲ್ಲಿ ಸಂಗ್ರಹವಾಗಿರುವ ಮರಳನ್ನು ತೆಗೆಯುವ ಪ್ರಸ್ತಾವನೆಗೆ ಜಿಲ್ಲಾ ಮರಳು ಸಮಿತಿಗಳಿಂದ ಅವಕಾಶ ಕಲ್ಪಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕರಾದ ಯು.ಟಿ.ಖಾದರ್, ಅಮರೇಗೌಡ ಬಯ್ಯಾಪುರ ಅವರು ಉಪ ಪ್ರಶ್ನೆ ಕೇಳಿ ಚರ್ಚೆ ಮಾಡಲು ಅವಕಾಶ ನೀಡಲು ಒತ್ತಾಯಿಸಿದರು. ಆಗ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಶಾಸಕರು ಕರಾವಳಿಗೆ ಸೀಮಿತವಾದ ಪ್ರಶ್ನೆ ಕೇಳಿದ್ದಾರೆ. ರಾಜ್ಯಕ್ಕೆ ಸಂಬಂಧಪಟ್ಟಂತೆ ಚರ್ಚಿಸಲು ಅವಕಾಶ ಇಲ್ಲಾ ಎಂದಾಗ ಆ ಇಬ್ಬರೂ ಶಾಸಕರು ಧರಣಿ ನಡೆಸಲು ಮುಂದಾದರು. ಆಗ ಸಚಿವರು ಮರಳು ನೀತಿಗೆ ಸಂಬಂಧಿಸಿದಂತೆ ಅರ್ಧ ಗಂಟೆ ಚರ್ಚೆಗೆ ಅವಕಾಶ ಕೊಡಿ ಎಂದಾಗ ಸ್ಪೀಕರ್ ಸಹಮತ ವ್ಯಕ್ತಪಡಿಸಿದರು. ಆಗ ಖಾದರ್, ಬಯ್ಯಾಪುರ ಅವರು ಧರಣಿ ಕೈ ಬಿಟ್ಟು ತಮ್ಮ ಸ್ಥಾನಗಳಿಗೆ ಮರಳಿದರು.

Facebook Comments