ಹುಣಸೂರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಕಣಕ್ಕೆ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.12- ಮೂರೂ ರಾಜಕೀಯ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸಿ.ಪಿ.ಯೋಗೇಶ್ವರ್ ಅವರನ್ನು ಕಣಕ್ಕಿಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಒಲವು ವ್ಯಕ್ತಪಡಿಸಿದ್ದಾರೆ.

ಉನ್ನತ ಮೂಲಗಳು ಈ ವಿಷಯ ತಿಳಿಸಿದ್ದು ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಅಭ್ಯರ್ಥಿ ಯಾಗಲು ಹೆಚ್. ವಿಶ್ವನಾಥ್ ಆಸಕ್ತಿ ತೋರದಿರುವುದು ಮತ್ತು ತಮ್ಮ ಮಗನ ಸ್ಪರ್ಧೆಗೂ ಆಸಕ್ತಿ ತೋರದಿರುವುದು ಇದಕ್ಕೆ ಕಾರಣವೆಂದಿವೆ.ಸಿ.ಪಿ.ಯೋಗೇಶ್ವರ್ ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸಿದರೆ ಒಕ್ಕಲಿಗ ಸಮುದಾಯದ ಗಣನೀಯ ಪ್ರಮಾಣದ ಮತಗಳು ಸಿಗುವುದಲ್ಲದೆ ಲಿಂಗಾಯತ ಸಮುದಾಯದ ಮತಗಳೂ ದಕ್ಕುತ್ತವೆ.

ಅದೇ ರೀತಿ ವಿವಿಧ ಸಮುದಾಯಗಳ ಮತ ಗಣನೀಯ ಪ್ರಮಾಣದಲ್ಲಿ ಸಿಕ್ಕರೆ ಬಿಜೆಪಿ ಗೆಲುವು ಸುಲಭ ಎಂಬುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಲೆಕ್ಕಾಚಾರ ಎಂದು ಇವೇ ಮೂಲಗಳು ವಿವರ ನೀಡಿವೆ. ಈ ಮಧ್ಯೆ ಬಿಜೆಪಿಗೆ ಹತ್ತಿರವಾಗಿರುವ ಜೆಡಿಎಸ್‍ನ ಹಿರಿಯ ನಾಯಕ ಜಿ.ಟಿ.ದೇವೇಗೌಡ ಅವರು ಸಿಎಂ ಯಡಿಯೂರಪ್ಪ ಅವರ ಜತೆ ಸಂಪರ್ಕದಲ್ಲಿದ್ದು, ಅವರು ಮಾತ್ರ ಹುಣಸೂರು ವಿಧಾನಸಭಾ ಕ್ಷೇತ್ರದ ಕಣದಿಂದ ವಿಶ್ವ ನಾಥ್ ಅವರನ್ನೇ ಕಣಕ್ಕಿಳಿಸುವಂತೆ ಹೇಳಿದ್ದಾರೆ.

ವಿಶ್ವನಾಥ್ ಅವರು ಆಸಕ್ತಿ ತೋರದಿದ್ದರೂ ಅವರೇ ಗೆಲ್ಲುವ ಕ್ಯಾಂಡಿಡೇಟ್.ಲಿಂಗಾಯತ, ಕುರುಬ ಸೇರಿದಂತೆ ಹಲ ಸಮುದಾಯಗಳ ಮತಗಳನ್ನು ಅವರು ಪಡೆಯುವುದು ನಿಶ್ಚಿತವಾಗಿದ್ದು, ಒಕ್ಕಲಿಗ ಸಮುದಾಯದ ಗಣನೀಯ ಪ್ರಮಾಣದ ಮತಗಳು ಅವರಿಗೆ ದಕ್ಕುವಂತೆ ಮಾಡುವುದಾಗಿ ಜಿಟಿಡಿ ಅವರು ಯಡಿಯೂರಪ್ಪ ಅವರಿಗೆ ವಿವರಿಸಿದ್ದಾರೆ.

ಈ ಉಪಚುನಾವಣೆಯನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಸವಾಲಿನ ಪ್ರಶ್ನೆಯಾಗಿ ತೆಗೆದುಕೊಳ್ಳಲಿದ್ದು ಇದನ್ನು ಗಮನ ದಲ್ಲಿಟ್ಟುಕೊಂಡು ಹೆಚ್.ವಿಶ್ವನಾಥ್ ಅವರನ್ನೇ ಕಣಕ್ಕಿಳಿಸಬೇಕು.ಇಲ್ಲದಿದ್ದರೆ ಕಷ್ಟದ ಪರಿಸ್ಥಿತಿ ಎದುರಾಗುತ್ತದೆ ಎಂದು ಜಿಟಿಡಿ ಹೇಳಿದ್ದಾರೆ. ಕಾಂಗ್ರೆಸ್ ಪಕ್ಷ ಈಗಾಗಲೇ ಮಂಜುನಾಥ್ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಿದೆ. ಸಧ್ಯದ ಎಲ್ಲ ಬೆಳವಣಿಗೆಗಳನ್ನು ಕೂಲಂಕುಷವಾಗಿ ಪರಿಶೀಲಿಸುತ್ತಿರುವ ಜೆಡಿಎಸ್ ಮಾತ್ರ ತನ್ನ ಕ್ಯಾಂಡಿಡೇಟ್ ಯಾರು? ಎಂಬುದನ್ನು ಇದುವರೆಗೂ ನಿಗೂಢವಾಗಿಟ್ಟಿದೆ.

ಈ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬ ವಿಷಯದಲ್ಲಿ ಯಡಿಯೂರಪ್ಪ ಒಂದು ರೀತಿಯ ಒಲವು ವ್ಯಕ್ತಪಡಿಸಿದ್ದರೆ ಜಿಟಿಡಿ ಇನ್ನೊಂದು ಬಗೆಯ ಸೂಚನೆ ನೀಡಿದ್ದಾರೆ. ಈ ಮಧ್ಯೆ ನಿಮ್ಮ ಮಗನನ್ನೇ ಕ್ಯಾಂಡಿಡೇಟ್ ಮಾಡೋಣ. ಗೆಲ್ಲಿಸಿಕೊಂಡು ಬನ್ನಿ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಈಗಾಗಲೇ ಜಿ.ಟಿ.ದೇವೇಗೌಡರಿಗೆ ಹೇಳಿದ್ದರೂ ಜಿಟಿಡಿ ಈ ಪ್ರಸ್ತಾವಕ್ಕೆ ಒಪ್ಪಿಲ್ಲ ಎನ್ನಲಾಗಿದೆ.

Facebook Comments