ಸಿಎಎ ವಿರೋಧಿಸಿ ಪ್ರತಿಭಟನೆಯ ಕ್ಷಣ ಕ್ಷಣದ ಮಾಹಿತಿ ಕೇಂದ್ರ ಗೃಹ ಇಲಾಖೆಗೆ ರವಾನೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.20-ಕೇಂದ್ರ ಸರ್ಕಾರದ ಉದ್ದೇಶಿತ ಪೌರತ್ವ ವಿಧೇಯಕ ಮಸೂದೆ ವಿರೋಧಿಸಿ ರಾಜ್ಯದಲ್ಲಿ ನಡೆದಿರುವ ಬೆಳವಣಿಗೆಗಳ ಬಗ್ಗೆ ರಾಜ್ಯ ಸರ್ಕಾರ ಕೇಂದ್ರ ಗೃಹ ಇಲಾಖೆಗೆ ಮಾಹಿತಿ ರವಾನಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು ಮೃತಪಟ್ಟಿರುವುದು ಹಾಗೂ ರಾಜ್ಯದ ನಾನಾ ಕಡೆ ಮಸೂದೆ ವಿರೋಧಿಸಿ ಪ್ರತಿಭಟನೆಯ ಕಾವು ತೀವ್ರವಾಗಿರುವ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಕುರಿತಂತೆ ಸಮಗ್ರ ವರದಿ ನೀಡುವಂತೆ ಕೇಂದ್ರ ಗೃಹ ಇಲಾಖೆ ರಾಜ್ಯ ಸರ್ಕಾರಕ್ಕೆ ಸೂಚನೆ ಕೊಟ್ಟಿತ್ತು.

ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಗಳೇ ವರದಿ ನೀಡುವಂತೆ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿಗೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಬಗ್ಗೆ ಇಂಚಿಂಚು ಮಾಹಿತಿಯುಳ್ಳ ವರದಿಯನ್ನು ರಾಜ್ಯ ಸರ್ಕಾರ ಸಲ್ಲಿಕೆ ಮಾಡಿದೆ. ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಇಬ್ಬರು ಯುವಕರು ಪ್ರತಿಭಟನೆ ಹೆಚ್ಚಾಗಲು ಕಾರಣ ಹೊರರಾಜ್ಯಗಳಿಂದ ಕೆಲವು ಕಿಡಿಗೇಡಿಗಳು ಆಗಮಿಸಿರುವುದು, ಪೊಲೀಸ್ ಠಾಣೆಗೆ ನುಗ್ಗಿ ಬೆಂಕಿ ಹಚ್ಚಲು ಯತ್ನಿಸಿರುವುದು ಸೇರಿದಂತೆ ಮುಂಜಾಗ್ರತಾ ಕ್ರಮವಾಗಿ ತೆಗೆದುಕೊಳ್ಳಲಾಗಿರುವ ಕ್ರಮಗಳ ಬಗ್ಗೆ ವರದಿ ಸಲ್ಲಿಕೆಯಾಗಿದೆ.

ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸಲು ಮುಂದಾದಾಗ ಮುಂಜಾಗ್ರತಾ ಕ್ರಮವಾಗಿ ಪೊಲೀಸರು 144 ಸೆಕ್ಷನ್ ಜಾರಿ ಮಾಡಿದ್ದರು. ಬುಧವಾರ ಸಂಜೆಯೇ ನಗರ ಪೆÇಲೀಸ್ ಆಯುಕ್ತ ಭಾಸ್ಕರರಾವ್ ಎಲ್ಲಿಯೂ ಪ್ರತಿಭಟನೆ ನಡೆಸದಂತೆ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಅದೇ ರೀತಿ ಕೆಲವು ಅತಿಸೂಕ್ಷ್ಮ ಮತ್ತು ಸೂಕ್ಷ್ಮ ಪ್ರದೇಶಗಳೆನಿಸಿದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಮಡಿಕೇರಿ, ಮೈಸೂರು, ಶಿವಮೊಗ್ಗ, ದಾವಣಗೆರೆ, ಕಲಬುರಗಿ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಸೇರಿದಂತೆ ಮತ್ತಿತರ ಕಡೆ ನಿಷೇಧಾಜ್ಞೆ ಹೇರಲಾಗಿತ್ತು. ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಕೆಲವು ನಿರ್ದಿಷ್ಟ ಸಂಘಟನೆಗಳು ಹೊರರಾಜ್ಯದಿಂದ ಪ್ರತಿಭಟನಾಕಾರರನ್ನು ಕರೆಸಿಕೊಂಡು ಕಾನೂನು ಸುವ್ಯವಸ್ಥೆಗೆ ಭಂಗ ತರುವ ಕೆಲಸ ಮಾಡಿದ್ದಾರೆ. ಸಕಾಲದಲ್ಲಿ ಎಚ್ಚರ ವಹಿಸಿದ ಪರಿಣಾಮ ಸಂಭವಿಸಬಹುದಾದ ಹಾನಿಯನ್ನು ತಡೆಗಟ್ಟಿದ್ದಾರೆ.

ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸರ್ಕಾರ ಹಲವು ಬಿಗಿ ಕ್ರಮಗಳನ್ನು ಕೈಗೊಂಡಿದೆ. ಸಾರ್ವಜನಿಕರಲ್ಲಿ ಮಸೂದೆ ಬಗ್ಗೆ ಗೊಂದಲ ಉಂಟಾಗಬಾರದು ಎಂದು ಪತ್ರಿಕೆಗಳು ಮತ್ತು ಮಾಧ್ಯಮಗಳ ಮೂಲಕ ಜಾಹೀರಾತು ನೀಡಿದ್ದೇವೆ. ಅಲ್ಲದೆ, ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಐಜಿಪಿ ಸೇರಿದಂಎವಿವಿಧ ಧಾರ್ಮಿಕ ಮುಖಂಡರು, ಸಂಘ ಸಂಸ್ಥೆಗಳು, ಸಂಘಟನೆಗಳ ಜೊತೆ ನಿರಂತರ ಸಭೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಒಟ್ಟಾರೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಗೃಹ ಇಲಾಖೆ ಅಧಿಕಾರಿಗಳು ಕೇಂದ್ರಕ್ಕೆ ವರದಿ ಸಲ್ಲಿಸಿದ್ದಾರೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

Facebook Comments