ಸಿಎಎ ಪ್ರತಿಭಟನೆ ವಿರುದ್ಧ ದಾಖಲಾದ ಪ್ರಕರಣಗಳ ಕುರಿತು ನ್ಯಾಯಾಂಗ ತನಿಖೆಗೆ ಆಗ್ರಹ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.19-ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ಪ್ರತಿಭಟನೆ ನಡೆಸಿದವರ ಮೇಲೆ ದಾಖಲಿಸಿರುವ ಮೊಕದ್ದಮೆಗಳು, ಬೀದರ್, ಮಂಗಳೂರು, ಕಲಬುರಗಿ ಸೇರಿದಂತೆ ಮತ್ತಿತರ ಕಡೆ ನಡೆದಿರುವ ಘಟನೆಗಳ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಸದಸ್ಯ ಆರ್.ಬಿ.ತಿಮ್ಮಾಪುರ ಪರಿಷತ್‍ನಲ್ಲಿಂದು ಆಗ್ರಹಿಸಿದರು.

ನಿಯಮ 68ರಡಿ ಸಾರ್ವಜನಿಕ ಮಹತ್ವದ ವಿಷಯದ ಮೇಲೆ ಮಾತನಾಡಿದ ಅವರು, ರಾಜ್ಯದಲ್ಲಿ ಇಂದು ಸಂಘ ಸಂಸ್ಥೆಗಳು ಪೊಲೀಸ್ ಇಲಾಖೆಯನ್ನು ನಿಯಂತ್ರಣ ಮಾಡುವ ಪರಿಸ್ಥಿತಿ ಬಂದೊದಗಿದೆ.ಕರ್ನಾಟಕ ಪೊಲೀಸರಿಗೆ ದೇಶದಲ್ಲೇ ಅತ್ಯಂತ ದೊಡ್ಡ ಗೌರವವಿತ್ತು. ಆದರೆ ಸಂಘಸಂಸ್ಥೆಗಳ ಮುಖಂಡರು ಹೇಳಿದರೆ ಅಂತಹವರ ಮೇಲೆ ದೂರು ದಾಖಲಾಗುತ್ತದೆ.

ಸರ್ಕಾರ ಪೊಲೀಸ್ ಇಲಾಖೆಯನ್ನು ನಿಯಂತ್ರಿಸಬೇಕಿತ್ತು. ಆದರೆ ದುರ್ದೈವ ಇಂದು ಪೊಲೀಸ್ ಇಲಾಖೆಯನ್ನು ಒಂದು ಸಂಘ ಸಂಸ್ಥೆ ನಿಯಂತ್ರಿಸುವಂತಹ ಪರಿಸ್ಥಿತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಪ್ರಕರಣ, ಹುಬ್ಬಳ್ಳಿಯ ಕೆಎಲ್‍ಇ ಶಿಕ್ಷಣ ಸಂಸ್ಥೆಯಲ್ಲಿ ಪಾಕಿಸ್ತಾನ ಪರ ಜಿಂದಾಬಾದ್ ಘೋಷಣೆ ಪ್ರಕರಣ, ಕಲಬುರಗಿ ಸೇರಿದಂತೆ ಮತ್ತಿತರ ಕಡೆ ನಡೆದಿರುವ ಪ್ರಕರಣಗಳ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರಿಂದ
ಸರ್ಕಾರ ತನಿಖೆ ನಡೆಸಬೇಕೆಂದು ಮನವಿ ಮಾಡಿದರು.

ಬೀದರ್‍ನ ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ಸಿಎಎ ಕಾಯ್ದೆ ವಿರೋಧಿಸಿ ಆಡಳಿತ ಮಂಡಳಿಯವರು ನಾಟಕ ಪ್ರದರ್ಶನ ಮಾಡಿದರೆ ತಾಯಿ-ಮಗಳ ಮೇಲೆ ದೇಶದ್ರೋಹ ಪ್ರಕರಣ ದಾಖಲಿಸುತ್ತಾರೆ.
ಹುಬ್ಬಳ್ಳಿ ಕೆಎಲ್‍ಇ ಶಿಕ್ಷಣ ಸಂಸ್ಥೆಯಲ್ಲಿ ಪಾಕಿಸ್ತಾನಪರ ಜಿಂದಾಬಾದ್ ಎಂದು ಘೋಷಿಸುವ ವಿದ್ಯಾರ್ಥಿಗಳ ಮೇಲೆ ಮೃದು ಧೋರಣೆ ತೋರುತ್ತೀರಿ ಇಂತಹ ದ್ವಂದ್ವ ನೀತಿ ಏಕೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಪಾಕಿಸ್ತಾನ ಜಿಂದಾಬಾದ್ ಎಂಬ ವಿದ್ಯಾರ್ಥಿಗಳನ್ನು ಮೊದಲು ಬಂಧಿಸುತ್ತೀರಿ. ಅವರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಾಗುತ್ತದೆ. ನಿಮ್ಮ ಪಕ್ಷದವರೇ ಒತ್ತಡ ಹಾಕುತ್ತಿದ್ದಂತೆ ರಾತ್ರೋರಾತ್ರಿ ಅವರನ್ನು ಬಿಡುಗಡೆ ಮಾಡುತ್ತೀರಿ. ನಿಮ್ಮ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದರು ಎಂಬ ಕಾರಣಕ್ಕೆ ಮತ್ತೆ ಬಂಧಿಸುತ್ತೀರಿ. ಇದನ್ನು ಪೆÇಲೀಸ್ ಇಲಾಖೆ ಎನ್ನಬೇಕೇ? ಎಂದು ಪ್ರಶ್ನಿಸಿದರು.

ಮಂಗಳೂರಿನಲ್ಲಿ ಪೊಲೀಸರ ಗೋಲಿಬಾರ್‍ನಲ್ಲಿ ಇಬ್ಬರು ಮೃತಪಟ್ಟರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮೃತಪಟ್ಟ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದರು. ಎರಡು ದಿನಗಳ ನಂತರ ಅವರ ಮೇಲೆ ಒತ್ತಡ ಹೇರಿದರೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಪರಿಹಾರ ವಾಪಸ್ ಪಡೆದರು. ಬಡ ಮೀನುಗಾರರ ಕುಟುಂಬಕ್ಕೆ ಪರಿಹಾರ ಕೊಡುವಲ್ಲೂ ತಾರತಮ್ಯ ಏಕೆ ಎಂದು ಹರಿಹಾಯ್ದರು.

ಸಿಎಎ ಕಾಯ್ದೆ ವಿರೋಧಿಸುವ ಖಾದರ್ ವಿರುದ್ಧ ನಿಮ್ಮ ಸರ್ಕಾರ ದೇಶದ್ರೋಹ ಪ್ರಕರಣ ದಾಖಲಿಸುತ್ತದೆ. ಆದರೆ ನಿಮ್ಮದೇ ಪಕ್ಷದ ಅನೇಕ ಶಾಸಕರು ಇದಕ್ಕಿಂತಲೂ ಗಂಭೀರವಾದ ಆರೋಪಗಳನ್ನು ಮಾಡುತ್ತಾರೆ. ಅವರ ಮೇಲೆ ಒಂದೇ ಒಂದು ದೂರು ದಾಖಲಾಗುವುದಿಲ್ಲ. ಪೊಲೀಸರು ಸರ್ಕಾರದ ಅಣತಿಯಂತೆ ನಡೆಯುತ್ತಾರೋ ಇಲ್ಲವೇ ಯಾವುದಾದರೂ ಸಂಘ ಸಂಸ್ಥೆಯ ನಿರ್ದೇಶನದಂತೆ ಕೆಲಸ ಮಾಡುತ್ತಾರೋ ಎಂಬುದೇ ತಿಳಿಯುತ್ತಿಲ್ಲ.

ಈ ಹಿಂದೆ ರಾಜ್ಯದಲ್ಲಿ ಗೋಲಿಬಾರ್ ನಡೆಸಿದ ಸರ್ಕಾರಗಳು ಏನಾಗಿವೆ ಎಂಬುದು ನಮಗೆ ಗೊತ್ತು. ನರಗುಂದ, ಹಾವೇರಿ ಸೇರಿದಂತೆ ಅನೇಕ ಕಡೆ ಗೋಲಿಬಾರ್ ನಡೆದಾಗ ಸರ್ಕಾರಗಳೇ ಉರುಳಿ ಬಿದ್ದಿವೆ. ಶಾಂತಿಯುತ ಪ್ರತಿಭಟನೆ ನಡೆಸುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ಒಂದು ಭಾಗ. ಅದನ್ನು ವಿರೋಧಿಸಿದರು ಎಂಬ ಒಂದೇ ಕಾರಣಕ್ಕಾಗಿ ದೇಶದ್ರೋಹ ಪ್ರಕರಣ ದಾಖಲಿಸುವುದು ಸರಿಯೇ ಎಂದು ತಿಮ್ಮಾಪುರ ಸರ್ಕಾರವನ್ನು ಪ್ರಶ್ನಿಸಿದರು.

Facebook Comments

Sri Raghav

Admin