ಸಿಎಎ ವಿರೋಧಿಸಿ ಮಂಗಳೂರಲ್ಲಿ ಇಂದು ಮತ್ತೆ ಪ್ರತಿಭಟನೆ, ಭಾರಿ ಬಿಗಿ ಭದ್ರತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜ.15- ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಪ್ರತಿಭಟನೆಗೆ ಬಿಗಿ ಭದ್ರತೆ ನೀಡಲು ಹತ್ತು ಜಿಲ್ಲೆಗಳಿಂದಲೂ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿತ್ತು. ಈ ಹಿಂದೆ ಮಂಗಳೂರಿನಲ್ಲಿ ದಿಢೀರ್ ಪ್ರತಿಭಟನೆ ವೇಳೆ ಗಲಭೆಗಳಾಗಿದ್ದು, ಗೋಲಿಬಾರ್ ನಡೆದು ಇಬ್ಬರು ಸಾವನ್ನಪ್ಪಿ ಏಳೆಂಟು ಮಂದಿ ಗಾಯಗೊಂಡಿದ್ದರು.

ಹೀಗಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವ ಮಂಗಳೂರು ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ. ಕಳೆದ 15 ದಿನಗಳಿಂದಲೂ ಪ್ರತಿಭಟನೆಗೆ ಅನುಮತಿ ನೀಡುವಂತೆ ಮುಸ್ಲಿಂ ಸಂಘಟನೆಗಳು ಮನವಿ ಸಲ್ಲಿಸುತ್ತಲೇ ಇದ್ದವು. ಆದರೆ ಭದ್ರತೆಯ ಕಾರಣಕ್ಕಾಗಿ ಅನುಮತಿ ನಿರಾಕರಿಸಲಾಗಿತ್ತು.

ಇತ್ತೀಚೆಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಪ್ರತ್ಯೇಕ ಸಭೆ ನಡೆಸಿ ಪರಿಶೀಲನೆ ನಡೆಸಿದ್ದರು. ಸಚಿವರ ಸೂಚನೆ ಮೇರೆಗೆ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ ನಗರ ಪೊಲೀಸ್ ಆಯುಕ್ತ ಪಿ.ಎಸ್.ಹರ್ಷ ಅವರು ಇಂದು ಮಧ್ಯಾಹ್ನ 2.30 ರಿಂದ ಸಂಜೆ 6ಗಂಟೆಯವರೆಗೆ ಪ್ರತಿಭಟನೆ ನಡೆಸಲು ಅನುಮತಿ ನೀಡಿದ್ದಾರೆ. ನಗರದ ಅಡಿಯಾರ್ ಕಣ್ಣೂರಿನಲ್ಲಿ ಪ್ರತಿಭಟನೆ ನಡೆಯಿತು.

ಸುಮಾರು 28ಕ್ಕೂ ಹೆಚ್ಚು ಮುಸ್ಲಿಂ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದು, ಅಲ್ ಹಜ್ ತಕ್ವಾ ಅಹ್ಮ್ಮದ್ ಮುಸ್ಲಿಯಾರ್, ಅಲ್ ಹಜ್ ಪಿಎಂ ಇಬ್ರಾಹಿಂ ಮುಸ್ಲಿಯಾರ್ ಬೇಕಲ್, ಸೈಯ್ಯದ್ ಕೋರತ್ ತಂಗಲ್, ಮೈಸೂರಿನ ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಮಂಗಳೂರಿನ ಬಿಷಫ್ ಡಾ.ಪೀಟರ್ ಪಾವಲ್ ಸಲ್ಡಾನಾ, ಸುಪ್ರೀಂಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ, ನಿವೃತ್ತ ಐಎಎಸ್ ಅಧಿಕಾರಿ ಕಣ್ಣನ್ ಗೋಪಿನಾಥನ್, ಹೋರಾಟಗಾರರಾದ ಶಿವಸುಂದರದಾಸ್, ಹರ್ಷ ಮಹೇಂದರ್, ಸುಧೀರ್‍ಕುಮಾರ್ ಮರಳ್ಳಿ ಮತ್ತಿತರರು ಭಾಗವಹಿಸಿದ್ದರು.

ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಸಾವಿರಾರು ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಮಂಗಳೂರು ಪೊಲೀಸರ ಜೊತೆಗೆ ಅಕ್ಕಪಕ್ಕದ 10 ಜಿಲ್ಲೆಗಳಿಂದ ಹೆಚ್ಚುವರಿ ಪೊಲೀಸ್ ಹಾಗೂ ಅಧಿಕಾರಿಗಳನ್ನು ಕರೆಸಲಾಗಿದ್ದು, ಖುದ್ದು ನಗರ ಪೊಲೀಸ್ ಆಯುಕ್ತ ಹರ್ಷ ಅವರೇ ನೇತೃತ್ವ ವಹಿಸಿದ್ದರು.

Facebook Comments

Sri Raghav

Admin